ADVERTISEMENT

ತೊಡೆಗೂ ಏರಿತು ಚಂದದ ಚೈನೊಂದು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2014, 19:30 IST
Last Updated 12 ಅಕ್ಟೋಬರ್ 2014, 19:30 IST

ಪಾದದ ಮೇಲೆ ಪುಟ್ಟ–ಪುಟ್ಟ ಪಾಯಲ್ ಧರಿಸಿ ಘಲ್ ಘಲ್ ಎನಿಸುತ್ತ ಓಡಾಡುವ ಹಳ್ಳಿ ಹುಡುಗಿಯ ನೋಟ ಎಲ್ಲರಿಗೂ ಅಪ್ಯಾಯಮಾನ. ಆದರೆ ಕೊರಳಿಗೆ ಹಾಕುವ ನೆಕ್ಲೆಸ್ ಮಾದರಿಯ ಅಂದದ ಆಭರಣವನ್ನು ತೊಡೆಯ ಮೇಲೆ ಅಥವಾ ಸೊಂಟಕ್ಕೆ ಧರಿಸಿ ಓಡಾಡುವ ನಗರ ಸುಂದರಿಯನ್ನು ಕಾಣುವುದು ಅಪರೂಪ.

ಇಂಥದ್ದೊಂದು ವಿಚಿತ್ರ ಸಂಸ್ಕೃತಿಗೆ ಮೆಟ್ರೊ ನಗರದ ಯುವತಿಯರು ನಾಂದಿ ಹಾಡಿದ್ದಾರೆ. ಹೊಸ ರೂಪ ಪಡೆದು ಮಾರುಕಟ್ಟೆಗೆ ಬಂದಿರುವ ಥಾಯ್ (ತೊಡೆಯ) ಚೈನ್, ಫ್ಯಾಷನ್  ಪ್ರಿಯರ ಮನ ಗೆದ್ದು ಕಾಲಿನ ಮೇಲೆ ಮೋಡಿ ಮಾಡುತ್ತಿದೆ.

ಮೊಳಕಾಲ್ಮೇಲಿನ ಶಾರ್ಟ್ ಬಟ್ಟೆ ತೊಡುವ ಲತಾಂಗಿಯರು ತಮ್ಮ ಬರಿ ತೊಡೆಯನ್ನು ಈ ಚೈನುಗಳಿಂದ ಅಲಂಕರಿಸಬಹುದು. ಅಲ್ಲದೇ, ಜೀನ್ಸ್ ಅಥವಾ ಟೈಟ್ಸ್‌ನಂತಹ ಬಿಗಿಯುಡುಪುಗಳ ಮೇಲೂ ಇದು ತನ್ನದೇ ಆದ ಝಲಕ್‌ ನೀಡಬಹುದು. ಮಿನಿ, ಸ್ಕಲ್ಟ್ ಗಳು, ಶಾರ್ಟ್‌ಗಳಂತಹ ಉಡುಪಿನೊಂದಿಗೂ ಮಾದಕ ಲುಕ್ ನೀಡುತ್ತವೆ ಈ ಚೈನ್. ಜೊತೆಗೆ ಜೀನ್ಸ್‌ಗೆ ಬೆಲ್ಟ್‌ ತರಹ ಕೂಡ ಬಳಸಬಹುದು. ಕಿವಿಯೋಲೆ, ಇಯರ್ ಕಫ್, ನೆಕ್ಲೆಸ್ ರೂಪದಲ್ಲಿ ಫ್ಯಾಷನ್ ಪ್ರಿಯರ್ ಕಬೋರ್ಡ್ ಸೇರಿದ್ದ ಈ ಕ್ವಿರ್ಕಿ ಡಿಸೈನ್‌ ಆಭರಣವೀಗ ತೊಡೆಯ ಅಲಂಕಾರಕ್ಕೆ ಪಣ ತೊಟ್ಟು ನಿಂತಂತಿದೆ.

ಮೊದ ಮೊದಲು ಇಂಗ್ಲಂಡ್, ಪ್ಯಾರಿಸ್, ಅಮೆರಿಕದಂತಹ ಮಹಾನಗರಗಳಲ್ಲಿ ನಡೆಯುವ ರ್‍್ಯಾಂಪ್‌ ಷೋಗಳಲ್ಲಿ ಮಾತ್ರ ಮಿಂಚುತ್ತಿದ್ದ ಈ ಆಭರಣ ನಂತರ ಹಾಲಿವುಡ್‌ ನಟಿಯರ್ ಕ್ಯಾಶುವಲ್ ಆದವು. ಅಲ್ಲಿಂದ ಬಾಲಿವುಡ್ ಮಂದಿಯ ಕಾಲೇರಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಇದೀಗ ಬೆಂಗಳೂರಿನ ಕಾಲೇಜು ಕನ್ಯೆಯರ ಮೆಚ್ಚುಗೆಗೂ ಪಾತ್ರವಾಗಿವೆ ಈ ಚೈನ್.
ಲೆಗ್ ಚೈನ್ ವಿಶೇಷ ಗುಣವೆಂದರೆ ಅದನ್ನು ನೀವು ಯಾವುದರ ಮೇಲಾದರೂ, ಹೇಗಾದರೂ, ಯಾವ ಆಕಾರದಲ್ಲಾದರೂ ಧರಿಸಬಹುದು ಎನ್ನುವುದು.

ಬೆಳ್ಳಿ ಮತ್ತು ಚಿನ್ನದ ಬಣ್ಣದ ಹಾಗೂ ಸ್ಟೀಲ್ ಮೆಟಲ್‌ನಲ್ಲಿ ಬರುವ ಈ ಕಾಲಿನ ಚೈನುಗಳು,  ಕೆಂಪು, ಕಪ್ಪು ತರಹದ ಮೋಹಕ ಬಣ್ಣಗಳಲ್ಲಿಯೂ ಬರುತ್ತವೆ. ಫುಲ್ ಲೆಂಥ್ ಅಥವಾ ಹಾಫ್ ಲೆಂಥ್‌ನಲ್ಲಿ ಬರುವ ಚೈನು ನಿಮ್ಮ ಸೊಬಗು ಹಾಗೂ ಶೈಲಿಗೆ ವಿಶೇಷ ಮತ್ತು ಗಂಭೀರ ಲುಕ್ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ.

ಕೇವಲ ವಿದೇಶಿ ಉಡುಪುಗಳೊಂದಿಗೆ ಮಾತ್ರವಲ್ಲ, ಭಾರತೀಯ ಹಬ್ಬ–ಹರಿದಿನ, ಸಭೆ–ಸಮಾರಂಭ, ಪಾರ್ಟಿಗಳಲ್ಲಿ ತೊಡಬಹುದಾದ ಉಡುಗೆಗಳೊಂದಿಗೆ ಸಹ ಇವು ಹೊಂದಿಕೊಳ್ಳಬಲ್ಲವು. ಗಾಢ ಬಣ್ಣದ ಲೆಹೆಂಗಾ ಇರಲಿ, ಡಿಸೈನರ್ ಸೀರೆ ಆಗಲಿ, ಈ ಲೆಗ್ ಚೈನ್ ಅನ್ನು ಸೊಂಟದಿಂದ ಇಳಿಬಿಟ್ಟರೆ ಆ ಅಂದಕ್ಕೆ ಸಾಟಿ ಮತ್ತೊಂದಿರಲಿಕ್ಕಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.