ADVERTISEMENT

ದಪ್ಪಗಾಗಬೇಕೇ? ಹೀಗೆ ಮಾಡಿ

ಪ್ರಜಾವಾಣಿ ವಿಶೇಷ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಹಲವರು ಸಣ್ಣಗಾಗಬೇಕು ಎಂದು ಏನೆಲ್ಲಾ ಸರ್ಕಸ್‌ ಮಾಡುತ್ತಿದ್ದರೆ, ದಪ್ಪಗಾಗುತ್ತಿಲ್ಲ ಎಂದು ಕೊರಗುವವರೂ ಇದ್ದಾರೆ. ದಪ್ಪಗಾಗಬಯಸುವವರಿಗೆ ಇಲ್ಲಿವೆ ಕೆಲವು ಟಿಪ್ಸ್‌ ಅನ್ನದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕ ಕೂಡ ಹೆಚ್ಚಾಗುವುದು. ಆರೋಗ್ಯದ ದೃಷ್ಟಿಯಿಂದ ಕೆಂಪಕ್ಕಿ ಅನ್ನ ತಿಂದರೆ ಮತ್ತಷ್ಟು ಒಳ್ಳೆಯದು.

ಅಕ್ಕಿ ಬಳಸಿ ಮಾಡುವ ಇಡ್ಲಿ ಆರೋಗ್ಯಕರವಾಗಿದೆ. ಇದನ್ನು ಮಾಡುವಾಗ ತರಕಾರಿ ಹಾಕಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ. ಪನ್ನೀರ್, ಚೀಸ್ , ಚಿಕನ್ , ಮೀನು, ಹಾಲಿನ ಉತ್ಪನ್ನಗಳು, ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ದಪ್ಪಗಾಗಲು ಪ್ರಯತ್ನಿಸುವವರು ಪ್ರತಿದಿನ ಚೀಸ್ ತಿಂದರೆ ಬೇಗನೆ ಫಲಿತಾಂಶ ದೊರೆಯುತ್ತದೆ.

ಕೊಬ್ಬಿನಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಮೊಸರನ್ನ ತಿನ್ನುತ್ತಾ ಬಂದರೆ ದೇಹಕ್ಕೂ ಒಳ್ಳೆಯದು, ತೂಕವೂ ಹೆಚ್ಚುವುದು.

ಸಣ್ಣಗಾಗಲು ಪ್ರಯತ್ನಿಸುವವರು ಗೋಧಿ ಬ್ರೆಡ್ ತಿನ್ನಬೇಕು. ದಪ್ಪಗಾಗಲು ಪ್ರಯತ್ನಿಸುವವರು ಬಿಳಿ ಬ್ರೆಡ್ ತಿನ್ನುವುದು ಒಳ್ಳೆಯದು. ಬಾಳೆ ಹಣ್ಣಿನಲ್ಲಿ ಕ್ಯಾಲೋರಿ ಅಧಿಕವಿರುವುದರಿಂದ ದೇಹದ ತೂಕ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಪ್ರತೀದಿನ ಸ್ವಲ್ಪ ದ್ರಾಕ್ಷಿಯನ್ನು ನೆನೆ ಹಾಕಿ. ನಂತರ ಬೆಳಗ್ಗೆ ತಿನ್ನಿ. ಹೀಗೆ ಮಾಡಿದರೆ ತೂಕ ಹೆಚ್ಚಾಗುವಿರಿ. ದ್ರಾಕ್ಷಿ ಜೊತೆ ಸ್ವಲ್ಪ ಬಾದಾಮಿ ಕೂಡ ನೆನೆ ಹಾಕಿದರೆ ಒಳ್ಳೆಯದು. ದಿನಕ್ಕೆ ಎರಡು ಬಾಳೆಹಣ್ಣು ಅವಶ್ಯ. ಇದನ್ನು ನೇರವಾಗಿ ಅಥವಾ ಹಾಲಿನಲ್ಲಿ ಬೆರೆಸಿ ಸೇವಿಸಿರಿ.

ತಿಂಡಿಗಾಗಿ ಹಣ್ಣುರಸ ಮಿಶ್ರಿತ ಹಾಲು, ಮೊಸರು ಹಾಗೂ ಕೆನೆ ಉತ್ತಮ. ಶಕ್ತಿ ನೀಡುವ ಆಹಾರ(ಆಲೂಗಡ್ಡೆ, ಗೆಣಸು, ಅನ್ನ. ಬೆಣ್ಣೆ, ತುಪ್ಪ , ಮೊಟ್ಟೆ, ಸಿಹಿಪದಾರ್ಥ)ಮತ್ತು ತರಕಾರಿ (ಎಲೆಕೋಸು, ಹೂಕೋಸು, ಬೆಂಡೆ, ಹುರುಳಿ, ಬದನೆಕಾಯಿ, ಬೀಟ್‌ರೂಟ್)ಗಳ ಪ್ರಮಾಣ ಹೆಚ್ಚಿಸಿರಿ.

ಮೀನು, ಮಾಂಸ, ಅವರೆ, ಬೇಳೆಕಾಳು, ಮೊಳಕೆಕಾಳು, ಆಹಾರದಲ್ಲಿರಲಿ. ದಿನ ಬೆಳಿಗ್ಗೆ ಮೊಟ್ಟೆ ಸೇವಿಸಿರಿ. ರಾಗಿ, ನವಣೆಯಲ್ಲಿ ಕಬ್ಬಿಣಾಂಶ ಹೆಚ್ಚು. ಇವುಗಳನ್ನು ಸೇವಿಸಲು ಮರೆಯದಿರಿ. ನಿದ್ರೆ ಹೋಗುವ ವೇಳೆ ಮತ್ತು ಎದ್ದೇಳುವ ಸಮಯ ನಿಗದಿಯಾಗಿರಲಿ. ಕನಿಷ್ಠ ಆರು ಗಂಟೆ ನಿದ್ರೆ ಅವಶ್ಯ.

ಐಸ್‌ಕ್ರೀಮ್ ಸೇವಿಸಿರಿ. ಏಕೆಂದರೆ ಇದೊಂದು ಪುಷ್ಟಿದಾಯಕ ಹಾಗೂ ಸುಲಭವಾಗಿ ಜೀರ್ಣವಾಗುವ ಸಂಪೂರ್ಣ ಆಹಾರ. ನೂರು ಗ್ರಾಂ ಐಸ್ ಕ್ರೀಮ್ 200 ಗ್ರಾಂ ಕ್ಯಾಲೊರಿ ಶಕ್ತಿ ನೀಡುತ್ತದೆ.

ದುಬಾರಿಯಾದರೂ ಚಿಂತೆಯಿಲ್ಲ ಉತ್ತಮ ಗುಣಮಟ್ಟದ, ಒಳ್ಳೆ ತಯಾರಕರ ಮತ್ತು ಪ್ಯಾಕಿಂಗ್ ಹೊಂದಿರುವುದನ್ನು ಸೇವಿಸಿರಿ. ಬೀದಿ ಬಳಿಯಲ್ಲಿನ ಐಸ್ ಕ್ರೀಮ್ ಅಥವಾ ಸಾಫ್ಟಿ ಬೇಡ. ಇವು ಅನಾರೋಗ್ಯಕರ.

ತೂಕ ಹೆಚ್ಚಿಸುವ ಮತ್ತು ಮಾಂಸಖಂಡ ಗಾತ್ರ ಹೆಚ್ಚಿಸುವ ವ್ಯಾಯಾಮ ಹೆಚ್ಚು ಮಾಡಿರಿ. ಉದಾ: ಈಜುವುದು, ಡೆಮ್ ಬೆಲ್ಟ್, ಪೂಲ್ ಅಪ್ಸ್, ಬಾರ್ ಡಿಷ್, ಬಾಲ್ ಬೆಲ್. ವಾರದಲ್ಲಿ 4 ಗಂಟೆಯಂತೆ, 12 ವಾರ ನಿಯಮಿತ ವ್ಯಾಯಾಮ ಅವಶ್ಯ. ಭಾರ ಎತ್ತುವ ಮತ್ತು ಯಂತ್ರ ಆಧಾರಿತ ವ್ಯಾಯಾಮ ಬೇಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.