ADVERTISEMENT

ದಾರಿ ತೋರುವ ರೋಬೊ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ದಾರಿ ತೋರುವ ರೋಬೊ
ದಾರಿ ತೋರುವ ರೋಬೊ   

ಜಪಾನಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋದವರು ತಾವು ತಲುಪಬೇಕಿರುವ ಜಾಗದ ವಿಳಾಸ ಗೊತ್ತಿಲ್ಲದಿದ್ದರೆ ಇನ್ನು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಯಾವುದೇ ಸ್ಥಳದ ವಿಳಾಸ ತಿಳಿಸಿಕೊಡುವಂಥ  ರೋಬೊ ಒಂದು ಅಲ್ಲಿ ರೂಪಿತಗೊಳ್ಳುತ್ತಿದೆ. ವಿಶ್ವದಲ್ಲಿ ಇದೇ ಪ್ರಥಮ ಬಾರಿಗೆ ವಿಳಾಸ ಹೇಳುವ ರೋಬೊ ಎಂದು ಇದು ಎನಿಸಿಕೊಂಡಿದೆ.

ಬಿಳಿ ಮತ್ತು ಕೆಂಪು ಬಣ್ಣಗಳಿಂದ ಕೂಡಿರುವ ಈ ರೋಬೊ ಕೇವಲ 90ಸೆಂ.ಮೀ ಇದೆ. ಇದರ ಹೆಸರು ‘ಇಎಂಇಐಡಬ್ಲ್ಯು3’.  ಇದು ಜಪನೀಸ್‌ ಭಾಷೆ ಅಷ್ಟೇ ಅಲ್ಲದೇ ಇಂಗ್ಲಿಷ್‌ನಲ್ಲಿಯೂ ಮಾತನಾಡುವ ಶಕ್ತಿ ಹೊಂದಿದೆ. ಹಿತಾಚಿ ಲಿಮಿಟೆಡ್‌ ಎಂಬ ಸಂಸ್ಥೆ ಪ್ರಾಯೋಗಿಕವಾಗಿ ಇದನ್ನು ಉದ್ಘಾಟಿಸಿದ್ದು, ಒಂದೆರಡು ವಾರಗಳಲ್ಲಿಯೇ ಜನರ ಸೇವೆಗೆ ಸಿದ್ಧಗೊಳ್ಳಲಿದೆ. 2005ರಲ್ಲಿಯೇ ಇಂಥದ್ದೊಂದು ರೋಬೊ ಅನ್ನು ಅಲ್ಲಿಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿತ್ತು. ಆದರೆ ಅದು ಅಷ್ಟೆಲ್ಲಾ ಸರಿಯಾಗಿ ಕಾರ್ಯನಿರ್ವಹಿಸಿರಲಿಲ್ಲ. ಆದ್ದರಿಂದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಈಗ ಹೊಸ ಆವಿಷ್ಕಾರ ಮಾಡಲಾಗಿದೆ.

ಒಂದು ವೇಳೆ ಪ್ರಯಾಣಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ರೋಬೊಗೆ ಸಾಧ್ಯವಾಗದೇ ಹೋದಲ್ಲಿ, ಅದು ‘ಪ್ಲೀಸ್‌ ಫಾಲೋ ಮೀ’ (ದಯವಿಟ್ಟು ನನ್ನನ್ನು ಹಿಂಬಾಲಿಸಿ) ಎನ್ನುವ ಮೂಲಕ ಪ್ರಯಾಣಿಕರನ್ನು ಕಾಲ್‌ಸೆಂಟರ್‌ಗೆ ಅಥವಾ ಅವರು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ಕೇಂದ್ರಗಳಿಗೆ ಕರೆದುಕೊಂಡು ಹೋಗುತ್ತದೆ.

ಈ ರೋಬೊಗೆ ಚೈನೀಸ್‌ ಮತ್ತು ಕೋರಿಯಾ ಭಾಷೆಗಳನ್ನೂ ಕಲಿಸಲು ತಂತ್ರಜ್ಞರು ತಯಾರಿ ನಡೆಸಿದ್ದಾರೆ. ಇಲ್ಲಿ ಸಂಪೂರ್ಣವಾಗಿ ಯಶಸ್ವಿಯಾದರೆ ಬೇರೆ ದೇಶಗಳಲ್ಲಿಯೂ ಈ ರೋಬೊ ತಂತ್ರಜ್ಞಾನ ಅಳವಡಿಸಲು ಕಂಪೆನಿ ಉತ್ಸುಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.