ADVERTISEMENT

ದುಲ್ಕರ್‌ ಸಿನಿಮಾದಲ್ಲಿ ಬರೀ 21 ಹಾಡು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 19:30 IST
Last Updated 5 ಸೆಪ್ಟೆಂಬರ್ 2017, 19:30 IST
ದುಲ್ಕರ್‌ ಸಿನಿಮಾದಲ್ಲಿ ಬರೀ 21 ಹಾಡು
ದುಲ್ಕರ್‌ ಸಿನಿಮಾದಲ್ಲಿ ಬರೀ 21 ಹಾಡು   

ದುಲ್ಕರ್‌ ಸಲ್ಮಾನ್‌ ಎಂದರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ಪೋಸ್ಟರ್‌ ಕಂಡರೂ ಅರೆಕ್ಷಣ ನಿಂತು ಕಣ್ತುಂಬಿಕೊಂಡು ಮುಂದೆ ಹೋಗುವಂತಹ ಅಭಿಮಾನ. ಅವರ ಹೊಸ ಸಿನಿಮಾ ‘ಸೋಲೊ’ ಬಿಡುಗಡೆಯಾಗುವುದನ್ನೇ ಮಲಯಾಳಂ ಮತ್ತು ತಮಿಳು ಚಿತ್ರ ರಸಿಕರು ಕಾಯುತ್ತಿದ್ದಾರೆ. ದುಲ್ಕರ್‌ ಸಲ್ಮಾನ್‌ ಅವರ ಈ ಸಿನಿಮಾದಲ್ಲಿ ಎರಡೂ ಭಾಷೆಗಳಲ್ಲಿ ಒಟ್ಟು 21 ಹಾಡುಗಳಿರುತ್ತವೆ ಎಂಬುದು ಈಗಿನ ಸುದ್ದಿ.

ಹಾಗಂತ, ಖುದ್ದು ಬಿಜೋಯ್‌ ಅವರೇ ಟ್ವೀಟ್‌ ಮಾಡಿದ್ದಾರೆ. ಈ ಸುದ್ದಿ ಹೊರಬೀಳುತ್ತಲೇ ಮಲಯಾಳಿ ಮತ್ತು ತಮಿಳು ಸಿನಿಪ್ರೇಮಿಗಳು ಹೌಹಾರಿದ್ದಾರೆ. ‘ಹೀಗೂ ಉಂಟೇ? ನಾವು ಸಿನಿಮಾ ನೋಡ್ಬೇಕೋ ಬೇಡ್ವೋ ಅಷ್ಟೊಂದು ಹಾಡುಗಳನ್ನು ತುರುಕಿಬಿಟ್ಟರೆ ಹೇಗೆ?’ ಎಂದು ಬಿಜೋಯ್‌ ಅವರ ಮೇಲೆ ಹರಿಹಾಯ್ದಿದ್ದಾರೆ. ಅಂದಹಾಗೆ, ‘ಸೋಲೊ’ಗೆ ಬಿಜೋಯ್‌ ಅವರೇ ಕತೆ, ಚಿತ್ರಕತೆ ಹೆಣೆದಿದ್ದು ರೊಮ್ಯಾಂಟಿಕ್‌ ಥ್ರಿಲ್ಲರ್‌ ಸಿನಿಮಾವಿದು ಎಂದು ಹೇಳಲಾಗುತ್ತಿದೆ.

ಚಿತ್ರದ ಟ್ರೇಲರ್‌ಗಳನ್ನು ನೋಡಿದರೆ ನವಿರು ಪ್ರೇಮದ ಕಥೆಗೆ ರಕ್ತದೋಕುಳಿಯ ಕೆಂಪು ಮೆತ್ತಿಕೊಂಡಿರುವುದು ಎದ್ದು ಕಾಣುತ್ತದೆ.

ADVERTISEMENT

‘ಸೋಲೊ’ದಲ್ಲಿ ದುಲ್ಕರ್‌, ರುದ್ರ ಮತ್ತು ಶಿವ ಎಂಬ ಎರಡು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಅಂದರೆ, ಲೆಫ್ಟಿನೆಂಟ್‌ ರುದ್ರ ರಾಮಚಂದ್ರನ್ ಎಂಬ ಖಡಕ್‌ ಸೇನಾಧಿಕಾರಿಯಾಗಿಯೂ, ಶಿವ ಎಂಬ ಪಾತಕಿಯ ಗೆಟಪ್ಪಿನಲ್ಲಿ ಅಭಿಮಾನಿಗಳಿಗೆ ಡಬಲ್‌ ಧಮಾಕಾ ನೀಡಲಿದ್ದಾರೆ ದುಲ್ಕರ್‌.

ಆರತಿ ವೆಂಕಟೇಶ್‌, ನೇಹಾ ಶರ್ಮಾ, ಡಿನೊ ಮೊರಿಯಾ, ಮೇಜರ್‌ ದೇವ್‌ ಪ್ರತಾಪ್‌ ಸಿಂಗ್‌ ಮಾತ್ರವಲ್ಲದೆ, ನಮ್ಮ ಚಂದನವನದ ಚೆಲುವೆ ಶ್ರುತಿ ಹರಿಹರನ್‌ ಕೂಡಾ ‘ಸೋಲೊ’ಗಾಗಿ ಬಣ್ಣ ಹಚ್ಚಿದ್ದಾರೆ. ಅವರದು ‘ರುಕ್ಕು’ ಎಂಬ ಪಾತ್ರ. ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.