ADVERTISEMENT

ನಂಬಿ, ಇದು ಗಾಜಿನ ಉದ್ಯಾನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST
ನಂಬಿ, ಇದು ಗಾಜಿನ ಉದ್ಯಾನ
ನಂಬಿ, ಇದು ಗಾಜಿನ ಉದ್ಯಾನ   

ಅಲ್ಲಿ ಬಣ್ಣಗಳ ಮೋಡಿಯಿದೆ. ಭಿನ್ನ ವಿಭಿನ್ನ ಹೂವು ನಳನಳಿಸುತ್ತವೆ. ವಿಶಿಷ್ಟ ವಿನ್ಯಾಸದ ಚಿತ್ರಗಳು ಮನಸೆಳೆಯುತ್ತವೆ.  ಕೆಂಪು, ಹಳದಿ ಹೂವುಗಳ ರಾಶಿ, ಅಷ್ಟಪದಿಯ ಕಾಲುಗಳನ್ನೆಲ್ಲಾ ಜೋಡಿಸಿ ಒಂದೆಡೆ ಇಟ್ಟಂತೆ ಕಾಣುವ ಕಲಾಕೃತಿ, ಫ್ಲೋಟ್‌ ಬೋಟ್‌.

ವ್ಹಾ, ಒಮ್ಮೆ ನೋಡಿದರೆ ಕಣ್ಣೆವೆಯಿಕ್ಕದೆ ನೋಡುತ್ತಲೇ ನಿಲ್ಲಬೇಕೆನ್ನುವ ಚೆಲುವು ಈ ಉದ್ಯಾನದ್ದು. ಹಗಲಿರಲಿ, ಇರುಳಿರಲಿ ಕಲಾ ಪ್ರೇಮಿಗಳ ಕಣ್ಣಿಗೆ ಇಲ್ಲಿ ಹಬ್ಬದೂಟ ಗ್ಯಾರಂಟಿ.

ಅಂದಹಾಗೆ ಉದ್ಯಾನದ ಚೆಂದ ಸವಿಯುತ್ತಾ ಪ್ರಕೃತಿ ವಿಶ್ಲೇಷಣೆಯಲ್ಲಿ ತೊಡಗಬೇಡಿ. ಯಾಕೆಂದರೆ ಇಲ್ಲಿರುವ ಯಾವ ಹೂವುಗಳೂ, ವಿನ್ಯಾಸಗಳೂ ನೈಜವಾದದ್ದಲ್ಲ. ಬದಲಾಗಿ ಗಾಜಿನಿಂದ ಮೈದಳೆದವು!



ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಸಿಯಾಟೆಲ್‌ನಲ್ಲಿ ಪ್ರಖ್ಯಾತಿ ಗಳಿಸಿರುವ ಈ ಉದ್ಯಾನದ ಹೆಸರು  ಚಿಹುಲಿ ಗಾರ್ಡನ್‌ ಹಾಗೂ ಗ್ಲಾಸ್‌ ಹೌಸ್‌. ಗಾಜಿನಿಂದ ಬಗೆಬಗೆಯ ವಿನ್ಯಾಸಗಳನ್ನು ಮಾಡಿ ಇಲ್ಲಿ ಅಲಂಕರಿಸಲಾಗಿದೆ. ಹೂವಿನ ವಿನ್ಯಾಸಗಳು ನೈಜ ಎನಿಸುವಷ್ಟು ಸುಂದರವಾಗಿ ಮೈದಳೆದಿವೆ.

ಗಾಜಿನ ಕಲೆಯಲ್ಲಿ ಹೆಸರು ಮಾಡಿರುವ ಕಲಾವಿದ ಡೇಲ್‌ ಪ್ಯಾಟ್ರಿಕ್‌ ಚಿಹುಲಿ ಅವರ ಕಲ್ಪನೆಯಲ್ಲಿ ಈ ಉದ್ಯಾನ ವಿನ್ಯಾಸಗೊಂಡಿದೆ. ನಿರ್ದಿಷ್ಟ ತಾಪಮಾನಕ್ಕೆ ಗಾಜನ್ನು ಒಡ್ಡಿ ನಂತರ ತಮಗೆ ಬೇಕಾದ ವಿನ್ಯಾಸಕ್ಕೆ ಅವನ್ನು ಬಗ್ಗಿಸುವ ಕಲೆ ಚಿಹುಲಿ ಅವರಿಗೆ ಸಿದ್ಧಿಸಿದೆ.

ಇಲ್ಲಿ ವಿಭಿನ್ನ ಕಲಾಕೃತಿಗಳ ಎಂಟು ಗ್ಯಾಲರಿ ಇದೆ. ಗ್ಲಾಸ್‌ ಫಾರೆಸ್ಟ್‌, ನಾರ್ತ್‌ವೆಸ್ಟ್‌ ರೂಂ, ಸೀ ಲೈಫ್‌ ರೂಂ, ಪರ್ಷಿಯನ್‌ ಸೀಲಿಂಗ್‌, ಮಿಲ್ಲೆ ಫಿಯೊರಿ, ಇಕೆಬಾನಾ ಅಂಡ್‌ ಫ್ಲೋಟ್‌ ಬೋಟ್‌, ಚಾಂಡೇಲಿಯರ್ಸ್‌, ಮಕಿಯಾ ಫಾರೆಸ್ಟ್‌, ಡ್ವೆಲಿಂಗ್‌ ವಾಲ್ಸ್‌ ಎಂದು ವಿಭಿನ್ನ ಹೆಸರಿಡಲಾಗಿದೆ.


ಪ್ರತಿಯೊಂದೂ ಕೋಣೆಯೂ ವಿಭಿನ್ನ ಕಲಾಕೃತಿಗಳಿಂದ ಮನಸೂರೆಗೊಳ್ಳುತ್ತವೆ.  ನೀಲಿ, ಗುಲಾಬಿ ಬಣ್ಣದ ಗಾಜಿನ ವಸ್ತುಗಳ ವಿನ್ಯಾಸ, ಅಮೆರಿಕ ಸಂಸ್ಕೃತಿ ಎತ್ತಿ ತೋರಿಸುವ ವಸ್ತುಗಳು, ಸಮುದ್ರದಾಳದ ಪ್ರಪಂಚವನ್ನು ಬಿಂಬಿಸುವ ಚಿತ್ರಗಳು ಕ್ರಿಸ್‌ಮಸ್‌ ಟ್ರೀಯಂತೆಯೂ ನೋಡುಗರಿಗೆ ಭಾಸವಾಗುತ್ತದೆ. ಭಿತ್ತಿ ಚಿತ್ರಗಳೂ ಆಕರ್ಷಕವಾಗಿದ್ದು ಕಲ್ಪನೆಗೆಟುಕದ ನೂರಾರು ವಿನ್ಯಾಸಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ.

2012ರಿಂದ ಪ್ರಾರಂಭವಾಗಿರುವ ಈ ಉದ್ಯಾನದಲ್ಲಿ ಹೆಚ್ಚೂ ಕಡಿಮೆ ಎಲ್ಲವೂ ಗಾಜಿನಿಂದಲೇ ನಿರ್ಮಾಣಕಂಡಿದೆ. ಇದರ ಬಳಿಯೇ ಇರುವ ಸ್ಪೇಸ್‌ ನೀಡಲ್‌ ಕೂಡ ಬಹುಖ್ಯಾತಿ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.