ADVERTISEMENT

‘ನನ್ನನ್ನು ಲಿಪ್‌ಸ್ಟಿಕ್‌ ಎಂದೇ ಕರೀತಾರೆ’

ರೋಹಿಣಿ ಮುಂಡಾಜೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
‘ನನ್ನನ್ನು ಲಿಪ್‌ಸ್ಟಿಕ್‌ ಎಂದೇ ಕರೀತಾರೆ’
‘ನನ್ನನ್ನು ಲಿಪ್‌ಸ್ಟಿಕ್‌ ಎಂದೇ ಕರೀತಾರೆ’   

* ಏನು ‘ಕುಮುದಾ’ ಚೆನ್ನಾಗಿದ್ದೀರಾ?

ಅಯ್ಯೋ... ನೀವೂ ಹಾಗೇ ಕರೀತೀರಾ? ಎಲ್ರೂ ಹಾಗೇ ಕರೀತಾರೆ. ನನ್ನ ಹೆಸರು ಅನಿಖಾ. ಕೆಲವರು ಅನಿತಾ ಅಂದುಕೊಳ್ಳುತ್ತಾರೆ. ಕೆಲವು ಪೇಪರ್‌ನೋರೂ ಅನಿತಾ ಅಂತಲೇ ಬರೆದಿದ್ದರು. ನಾನು ‘ಕುಮುದಾ’ ಆಗಿರಲು ಇಷ್ಟಪಡೋದಿಲ್ಲ. ಅನಿಖಾ ಆಗಿಯೇ ಇರುತ್ತೇನೆ.

* ಜೋರಾಗಿ ಮೇಕಪ್‌ ಮಾಡ್ಕೋತೀರಿ ಅಲ್ವಾ?

ADVERTISEMENT

ಮೇಕಪ್‌ ಮಾಡ್ಕೊಳ್ಳೋದು ನನಗಿಷ್ಟ. ಈಗೀಗ ‘ಲಕ್ಷ್ಮೀ ಬಾರಮ್ಮ’ದಲ್ಲಿ ನನ್ನ ಮೇಕಪ್‌ ಬಗ್ಗೆ ತುಂಬಾನೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಂಗೆ ಮೇಕಪ್‌ ಮಾಡೋದು ಮೇಕಪ್‌ಮನ್ ಅಂತ್ಲೇ ಎಲ್ಲರೂ ಅಂದ್ಕೊಂಡಿದ್ದಾರೆ. ಆದರೆ ನಿಮಗೆ ಗೊತ್ತಾ? ನನ್ನ ಮೇಕಪ್‌ ಮಾಡ್ಕೊಳ್ಳೋದು ನಾನೇ. ಪ್ರತಿದಿನ ಒಂದು ಗಂಟೆ ಮೇಕಪ್‌ಗೆ ಮೀಸಲು. ಮೇಕಪ್ ಮಾಡಿಕೊಂಡರೆ ಸಾಕಾ? ಶೂಟಿಂಗ್ ಮುಗಿದ ಮೇಲೆ ಮುಖ ಕ್ಲೀನ್ ಮಾಡಿಕೊಳ್ಳೋದು ಇನ್ನೊಂದು ತಲೆನೋವು. ಆದರೂ ಶ್ರದ್ಧೆಯಿಂದ ಮಾಡ್ಕೋತೀನಿ.

* ಸ್ಮೋಕಿ ಐ ಮತ್ತು ಢಾಳಾದ ಲಿಪ್‌ಸ್ಟಿಕ್‌, ಖಳ ನಟಿಗೆ ಇನ್ನಷ್ಟು ಜೀವ ತುಂಬುತ್ತಾ?

ಮೇಕಪ್‌ ಬಗ್ಗೆ ಅಲಕ್ಷ್ಯ ಮಾಡಲಾಗದು. ಯಾಕೆಂದರೆ ನಮ್ಮನ್ನು ಲಕ್ಷಾಂತರ ಜನ ನೋಡ್ತಾರೆ. ನಮ್ಮ ಉಡುಗೆ, ತೊಡುಗೆ ಮತ್ತು ಮೇಕಪ್‌ಗಳನ್ನು ಅನುಕರಿಸುವವರೂ ಇದ್ದಾರೆ. ಇನ್ನೊಂದು ಸತ್ಯ ಹೇಳ್ತೀನಿ. ನನ್ನನ್ನು ಸ್ನೇಹಿತರೆಲ್ಲಾ ‘ಲಿಪ್‌ಸ್ಟಿಕ್‌' ಅಂತಾನೇ ಕರೆಯೋದು. ನಾನು ಬೇಜಾರು ಮಾಡ್ಕೊಳ್ಳಲ್ಲ. ಆದರೆ ‘ಕುಮುದಾ’ ಪಾತ್ರ ಜನರ ಮನಸ್ಸಿನಲ್ಲಿ ನಿಂತಿದೆ ಅನ್ನೋದಷ್ಟೇ ಖುಷಿ.

* ನಿಮ್ಮ ಸಂಪಾದನೆ ಮೇಕಪ್‌ಗೆ ಸಾಕಾಗುತ್ತದಾ?

ಹ್ಹಹ್ಹ... ಸದ್ಯದ ಮಟ್ಟಿಗೆ ಹಾಗೇ ಆಗಿದೆ. ನನಗೆ ಲಿಪ್‌ಸ್ಟಿಕ್‌ ಖರೀದಿಸೋದು ಒಂಥರಾ ಕ್ರೇಜ್‌. ನಿನ್ನೆ ಲೊರಿಯಲ್‌ ಪ್ಯಾರಿಸ್‌ನ ಲಿಪ್‌ಸ್ಟಿಕ್‌ ಖರೀದಿಸಿದೆ. ನಾನು ಋತುಮಾನಕ್ಕೆ ಅನುಗುಣವಾಗಿ ಮೇಕಪ್‌ ಮಾಡಿಕೊಳ್ಳುವ ಕಾರಣ ಬ್ರ್ಯಾಂಡೆಡ್‌ ಪ್ರಸಾಧನಗಳನ್ನೇ ಖರೀದಿಸುತ್ತೇನೆ. ಅದರಲ್ಲಿ ರಾಸಾಯನಿಕ ಅಂಶಗಳೂ ಕಡಿಮೆ ಇರುತ್ತವೆ.

* ಮದುವೆ ಯಾವಾಗ?

ಗೊತ್ತಿಲ್ಲ. ನಾನು ಖಳ ಪಾತ್ರ ಮಾಡುತ್ತಿರುವ ಕಾರಣ ನಿಜಜೀವನದಲ್ಲಿಯೂ ಕೆಟ್ಟವಳು ಅಂದುಕೊಂಡು ಕೆಲ ಮದುವೆ ಪ್ರಸ್ತಾವಗಳು ಬಿದ್ದು ಹೋದವು. ಕೆಲವರು ನನ್ನ ವೃತ್ತಿ ಇಷ್ಟಪಡುತ್ತಿಲ್ಲ. ಪಾತ್ರವೇ ಬೇರೆ ನಮ್ಮ ನಿಜ ವ್ಯಕ್ತಿತ್ವವೇ ಬೇರೆ ಅನ್ನೋ ಸತ್ಯಾನ ಅರ್ಥ ಮಾಡಿಕೊಂಡವರು ಸಿಕ್ಕೇ ಸಿಗುತ್ತಾರೆ. ಮೊದಲೇ ನನ್ನ ಬಗ್ಗೆ ಅಪಾರ್ಥ ಮಾಡಿಕೊಂಡವರನ್ನು ಮದುವೆ ಆಗಿ ಚಿಂತೆ ಪಡೋದಕ್ಕಿಂತ ನನ್ನನ್ನು ಗೌರವಿಸುವವರನ್ನೇ ಆಗೋದು ಒಳ್ಳೇದಲ್ವಾ?

* ಸಿನಿಮಾದಲ್ಲಿ ಖಳ ನಟಿಯಾಗುತ್ತೀರಾ?

ಇಲ್ಲ ಇಲ್ಲ. ಖಳ ಪಾತ್ರಗಳಿಂದ ದೂರವಿರಬೇಕು ಎಂದುಕೊಂಡಿದ್ದೇನೆ. ಅಪ್ಪ ಅಮ್ಮನೂ ಅದೇ ಹೇಳುತ್ತಾರೆ. ಒಂದು ಬಾರಿ ಖಳ ಪಾತ್ರದಲ್ಲಿ ಒಳ್ಳೆಯ ಹೆಸರು ಪಡೆದರೆ ನಮ್ಮನ್ನು ಅದಕ್ಕೇ ಬ್ರ್ಯಾಂಡ್ ಮಾಡಿಬಿಡುತ್ತಾರೆ. ಇನ್ನು ಮುಂದೆ ಸ್ವಲ್ಪ ಪಾಸಿಟಿವ್‌ ಪಾತ್ರಗಳನ್ನು ಮಾಡಬೇಕೆಂದುಕೊಂಡಿದ್ದೇನೆ.

* ಸಿನಿಮಾ ರಂಗದ ಕನಸು ಇಲ್ಲವೇ?

ಖಂಡಿತಾ ಇದೆ. 10 ವರ್ಷಗಳ ಹಿಂದೆ ಸಿನಿಮಾಗಳಲ್ಲಿ ನಟಿಸಿದ್ದೆ. ಆದರೆ ಆಗಿನ ವಾತಾವರಣ ಇಷ್ಟವಾಗದೆ ಆಫರ್‌ಗಳನ್ನೆಲ್ಲಾ ಬಿಟ್ಟಿದ್ದೆ. ಈಗ ವಸಿಷ್ಠ ಸಿಂಹ ಅವರ ‘ಸಂಘರ್ಷ’ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದೇನೆ. ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಇನ್ನು ಮುಂದೆ ಆಫರ್‌ಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ಈಗ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳಿಗೆ ನಟನೆಗೆ ಪೂರಕವಾದ ವಾತಾವರಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.