ADVERTISEMENT

‘ನನ್ನ ಧ್ವನಿ ಇರೋದೇ ಹೀಗೆ’

ರೋಹಿಣಿ ಮುಂಡಾಜೆ
Published 26 ಮೇ 2017, 19:30 IST
Last Updated 26 ಮೇ 2017, 19:30 IST
‘ನನ್ನ ಧ್ವನಿ ಇರೋದೇ ಹೀಗೆ’
‘ನನ್ನ ಧ್ವನಿ ಇರೋದೇ ಹೀಗೆ’   

‘ನನ್ನ ತಲೆಯಲ್ಲಿ ಕೂದಲು ಇಲ್ಲ. ತಮ್ಮ ಚಿತ್ರದಲ್ಲಿ ವಿಗ್‌ ಹಾಕುವಂತಿಲ್ಲ ಅಂತ, ನಿರ್ದೇಶಕ ಚೇತನ್‌ ಮುಂಡಾಡಿ ‘ಮದಿಪು’ ಚಿತ್ರಕ್ಕೆ ಆಫರ್‌ ಮಾಡುವಾಗಲೇ ಹೇಳಿದ್ದರು. ನನ್ನ ವಿಗ್‌ ಕತೆ ಎಲ್ಲರಿಗೂ ಗೊತ್ತಾಗುತ್ತದಲ್ಲಾ ಅಂತ ಮುಜುಗರ ಆಯ್ತು. ಆದರೂ ಒಪ್ಪಿದ್ದೆ. ಪ್ರಶಸ್ತಿ ಬಂದಾಗ ಅದ್ಯಾವುದೂ ನೆನಪಾಗ್ಲಿಲ್ಲ’
– ರಾಷ್ಟ್ರೀಯ ಪ್ರಶಸ್ತಿ ವಿಜೇತ ತುಳು ಚಿತ್ರ ‘ಮದಿಪು’ನಲ್ಲಿ ಪ್ರಮುಖ ಪಾತ್ರ ಮಾಡಿದ್ದ ಚೇತನ್‌ ರೈ ಮಾಣಿ ಅವರು ಹೀಗೆ ನೆನಪಿಸಿಕೊಂಡು ನಕ್ಕರು. ಅದೇ ಎಳೆಯೊಂದಿಗೆ ಮಾತಿಗೆಳೆದಾಗ...

* ಹೌದಾ? ನಿಮ್ಮ ತಲೆಯಲ್ಲಿ ಕೂದಲಿಲ್ಲವಾ?
ಇಲ್ಲ ಮಾರ್ರೆ. ಅದು ಹಾಗೇ ಉದುರಿ ಉದುರಿ ಹೋದದ್ದು. ಈಗ ಪೂರ್ತಿ ಬೋಳು. ಆದ್ರೆ ಬೊಂಡು (ಮಿದುಳು) ಉಂಟು!

* ಸ್ನಾನ ಮಾಡುವಾಗ ಶಾಂಪೂ ಜಾಸ್ತಿ ಹಾಕಿದ್ರಾ ಹ್ಯಾಗೆ?
ಇಲ್ಲಪ್ಪಾ. ನಂಗೆ ಮೊದಲಿಂದ್ಲೇ ತಲೆಯಲ್ಲಿ ಕೂದಲು ಕಮ್ಮಿ. ಬರ್ತಾ ಬರ್ತಾ ಎಲ್ಲಾ ಹೋಯ್ತು.

ADVERTISEMENT

* ಕೂದಲಿಲ್ಲದಿದ್ರೆ ಏನಾಯ್ತು? ಅಷ್ಟು ಚಂದ ನಟಿಸ್ತೀರಲ್ಲ?
ಹೌದು, ಎಲ್ರೂ ಹಾಗೇ ಹೇಳ್ತಾರೆ. ನಂಗೆ ಇಲ್ಲೆಲ್ಲಾ (ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ) ಎಷ್ಟು ಸನ್ಮಾನ ಮಾಡಿದ್ದಾರೆ ಗೊತ್ತುಂಟಾ?  ಹತ್ತಕ್ಕೂ ಹೆಚ್ಚು ಬಿರುದು ಕೊಟ್ಟಿದ್ದಾರೆ. ನಂಬ್ತೀರೋ ಇಲ್ವೋ ನಮ್ಮೂರಲ್ಲಿ ಮತ್ತು ಮುಂಬೈಯಲ್ಲಿ ಅಭಿಮಾನಿಗಳ ಬಳಗವೂ ಉಂಟು. ನಾನು ಹೇಳಿ ಬಳಗ ಮಾಡಿಸಿದ್ದಲ್ಲ ಆಯ್ತಾ?

* ನೀವು ಖಳನಂತೆ ಮಾತಾಡ್ತೀರಿ...
ಅಯ್ಯಯ್ಯೋ... ನನ್ನ ಧ್ವನಿ ಇರೋದೇ ಹೀಗೆ. ಕೆಲವು ಖಳಪಾತ್ರಗಳಿಗೆ ಆಯ್ಕೆಯಾಗಿರುವುದಕ್ಕೆ ಈ ಕಂಠವೂ ಕಾರಣವೆನ್ನಿ. ಆದರೆ ನಾಯಕ ಪಾತ್ರ ಬಿಟ್ಟು ಎಲ್ಲಾ ಬಗೆಯ ಪಾತ್ರ ಮಾಡಿದ್ದೇನೆ. ಎಲ್ಲದರ ಬಗ್ಗೆ ಒಳ್ಳೆಯ ಮಾತುಗಳೇ ಸಿಕ್ಕಿವೆ.

* ನಿಮಗೆ ಹೆಚ್ಚು ಇಷ್ಟವಾಗುವ ಪಾತ್ರ?
ಯಾವುದೇ ಪಾತ್ರಕ್ಕೆ ಒಗ್ಗಿಕೊಳ್ಳುವುದು ಕಲಾವಿದರಾಗಿ ನಮ್ಮ ಧರ್ಮ. ನನ್ನ ಧ್ವನಿಗೆ, ಈ ಮೀಸೆಗೆ ಖಳ ಪಾತ್ರ ಹೆಚ್ಚು ಒಪ್ಪುವಂತೆ ವೈಯಕ್ತಿಕವಾಗಿ ನನಗೂ ಖಳ ಪಾತ್ರವೇ ಹೆಚ್ಚು ಇಷ್ಟ.  ಪೌರಾಣಿಕ ಪಾತ್ರಗಳೆಂದರೆ ದಿಲ್‌ಕುಶ್‌... ಹ್ಹಹ್ಹಹ್ಹ...

* ನೀವು ಪ್ರಮುಖ ಪಾತ್ರ ಮಾಡಿದ್ದ ‘ಮದಿಪು’ ಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿದೆ...
ಹೌದು. ಸಿಗಲೇಬೇಕಲ್ವಾ? ಕತೆ, ಚಿತ್ರಕತೆ, ನಿರ್ದೇಶನ, ಸಂಗೀತ ಎಲ್ಲೂ ಬಿಗಿ ಕಳೆದುಕೊಳ್ಳದಂತೆ ಚೇತನ್‌ ಮುಂಡಾಡಿ ನಿರ್ದೇಶನ, ನಿರೂಪಣೆ ಮಾಡಿದ್ದಾರೆ.  ಕತೆಯ ಶೈಲಿಯೂ ಹಾಗೇ ಇದೆ ಮಾರ್ರೆ.

* ಚೇತನ್‌ ಮುಂಡಾಡಿ ಬಹಳ ಶಿಸ್ತಿನ ನಿರ್ದೇಶಕರಂತೆ...
ಅದ್ಯಾರು ಹೇಳಿದ್ದು? ಆದರೆ ಅದು ಸತ್ಯ. ನೀವೇ ಯೋಚನೆ ಮಾಡಿ. ಮೊದಲ ಚಿತ್ರಕ್ಕೇ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ. ‘ಮದಿಪು’ ಚಿತ್ರೀಕರಣದ ವೇಳೆ ಎಷ್ಟೋ ಕಲಾವಿದರಿಗೆ ಕಿರಿಕಿರಿ ಆಗಿದ್ದೂ ಇದೆ. ಈ ದೃಶ್ಯ ಹೀಗೇ ಬರಬೇಕು ಅಂತ ಚೇತನ್‌ಗೆ ಗೊತ್ತಿತ್ತು. ದೃಶ್ಯ ಅಂದುಕೊಂಡ ಹಾಗೆ ಬರುವವರೆಗೂ ಅವರು ಬಿಡುತ್ತಿರಲಿಲ್ಲ. ಈಗ ಇಡೀ ದೇಶವೇ ತುಳು ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ಚೇತನ್‌ ತಲೆಯಲ್ಲಿ ಅದೇನೇನು ಐಡಿಯಾ ಇದೆಯೋ ಗೊತ್ತಿಲ್ಲಪ್ಪ. ಅವರು ಭಯಂಕರ!

* ಹೊಸ ಚಿತ್ರ ‘ಚಾವಡಿ’ಯಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ...
ಚೇತನ್‌ ಅವರದೇ ನಿರ್ದೇಶನದ ಚಿತ್ರವಿದು. ನನ್ನದು ಗಾಂಧಿವಾದಿಯ ಪಾತ್ರ. ಸರಿ ದಾರಿಯಲ್ಲಿ ಹೋಗುವವನಿಗೆ ಕಲ್ಲು ಹೊಡೆಯುವವರು ಸಾಕಷ್ಟು ಜನ ಇರ್ತಾರೆ. (ಸನ್ನಡತೆಯವರಿಗೆ ಈ ಕಷ್ಟ ಇದ್ದದ್ದೇ. ‘ಮದಿಪು’ ಸಿನಿಮಾ ಬಿಡುಗಡೆಯಾಗುವ ವೇಳೆ ವ್ಯವಸ್ಥಿತ ಷಡ್ಯಂತ್ರ ರೂಪಿಸಿ ತೊಂದರೆ ಕೊಟ್ಟವರು, ನಾಯಿ ನೋಡದ ಸಿನಿಮಾ ಅಂತ ಧಮಕಿ ಹಾಕಿದವರೂ ಉಂಟು ಗೊತ್ತುಂಟಾ?) ಅಂತಹ ಸಜ್ಜನನ ಪಾತ್ರ ನನ್ನದು. ತುಂಬಾ ಒಳ್ಳೆಯ ಚಿತ್ರಕತೆ.

* ನಿಮ್ಮ ನಟನೆಯ ಹಾದಿ ಹೇಗಿತ್ತು?
ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಕಂಸನ ಪಾತ್ರ ಮಾಡಿದಲ್ಲಿಂದ ನಟನೆಯ ನಂಟು ಶುರು. ರಂಗಭೂಮಿ ಮತ್ತು ಯಕ್ಷಗಾನ ನನ್ನ ತವರು. ಆನಂದ ಪಿ.ರಾಜು ಅವರ ‘ಕೋಟಿ ಚೆನ್ನಯ–2’ ನನ್ನ ಮೊದಲ ಸಿನಿಮಾ. ‘ಮಹಾಭಾರತ’ ಧಾರಾವಾಹಿಯಲ್ಲಿನ ದ್ರೋಣನ ಪಾತ್ರ ತುಂಬಾ ಖುಷಿ ಕೊಟ್ಟಿತ್ತು.

* ಇತರ ಅವಕಾಶಗಳು?
‘ದೇಯಿ ಬೈದ್ಯೆದಿ’ ಎಂಬ ತುಳು ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡ್ತಿದ್ದೇನೆ. (ಅದಕ್ಕಾಗಿ ಮೀಸೆ ತಗೀಬೇಕಾಯ್ತು!) ಕಲರ್ಸ್‌ ಕನ್ನಡ ವಾಹಿನಿಯ ಹೊಸ ಧಾರಾವಾಹಿಗಾಗಿ ಆಫರ್‌ ಬಂದಿದೆ. ‘ಚಾವಡಿ’ ಚಿತ್ರೀಕರಣ ಆಗಬೇಕು. ನಂತರ... ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.