ADVERTISEMENT

ನವರಾತ್ರಿಗೆ ಹೀಗೆ ಸಿಂಗಾರವಾಗಬಹುದು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ನವರಾತ್ರಿಗೆ ಹೀಗೆ ಸಿಂಗಾರವಾಗಬಹುದು
ನವರಾತ್ರಿಗೆ ಹೀಗೆ ಸಿಂಗಾರವಾಗಬಹುದು   

ಅದಿತಿ ರಾವ್‌: ಕಣ್ಸೆಳೆಯುವ ಆಭರಣ, ಕೈಯಲ್ಲಿ ಜೋತು ಬಿದ್ದ ಬ್ಯಾಗ್‌, ಸೂರ್ಯನಷ್ಟೇ ಪ್ರಕಾಶವಾದ ಬಣ್ಣದ ಉಡುಪು, ಚೆಂದುಳ್ಳಿ ಚೆಲುವೆಯ ಹೊಳಪು... ಇದು ಅದಿತಿರಾವ್‌ ಗಣೇಶ ಹಬ್ಬದಲ್ಲಿ ಕಾಣಿಸಿಕೊಂಡ ಬಗೆ. ಸಚ್‌ದೇವ್‌ ವಿನ್ಯಾಸ ಮಾಡಿದ ಉಡುಪು, ಅಮ್ರಾಪಲಿ ಆಭರಣ, ಅಕ್ವಾಮರೈನ್‌ ಆಭರಣ, ಬಣ್ಣದಸೆಳೆತ, ಹಳದಿ ಎಂದು ಹ್ಯಾಶ್‌ಟ್ಯಾಗ್‌ನೊಂದಿಗೆ ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ. ಇವರ ಉಡುಪನ್ನು ಹಲವರು ಹಾಡಿ ಹೊಗಳಿದ್ದರು.

**

ಪೂಜಾ ಹೆಗ್ಡೆ: ಉಡುಪಿನ ವಿನ್ಯಾಸದಲ್ಲಿ ಹೊಸತನ್ನು ಪ್ರಯೋಗ ಮಾಡುವಲ್ಲಿ ಪೂಜಾ ಹೆಗ್ಡೆ ಎಂದಿಗೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಇವರು ನವಿಲು ಬಣ್ಣದ ಚೋಲಿ ಹಾಕಿಕೊಂಡಿದ್ದ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು. ಬಳಕುವ ಲತೆಯಂತಿರುವ ಇವರ ದೇಹಸಿರಿಗೆ ಈ ಉಡುಪು ಮೆರುಗು ನೀಡಿತ್ತು. ‘ನೀತು ಹುಲ್ಲಾ ವಿನ್ಯಾಸ ಮಾಡಿರುವ ಈ ಉಡುಗೆ ಮದುವೆಗೆ ಹೇಳಿ ಮಾಡಿಸಿದಂತಿದೆ’ ಎಂದು ಅವರು ಬರೆದುಕೊಂಡಿದ್ದರು.

ADVERTISEMENT

**

ದಿಶಾ ಪಟಾನಿ: ‘ಕುಂಗ್‌ ಫು ಯೋಗ’ ಸಿನಿಮಾದಲ್ಲಿ ಕೆಂಪು ಘಾಗ್ರಾ ಹಾಕಿಕೊಂಡು ಜಾಕಿಚಾನ್‌ ಜೊತೆಗೆ ಸೊಂಟ ಬಳಕಿಸಿದ ದಿಶಾ ಪಟಾನಿ ಕಂಡು ಹಲವರು ಬೆರಗಾಗಿದ್ದರು. ಗಾಢ ಬಣ್ಣದ ಈ ಉಡುಪಿನ ಡಿಸೈನರ್‌ ಯಾರೆಂಬ ಕುತೂಹಲ ಹಲವರಲ್ಲಿ ಮೂಡಿತು. ದಿಶಾ ಹಾಕಿದ್ದ ಈ ಉಡುಪು ಹಬ್ಬಕ್ಕೆ ಒಳ್ಳೆಯ ಆಯ್ಕೆಯಾಗಬಹುದು.

**

ಸೋನಂ ಕಪೂರ್‌: ಕಾನ್‌ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಭಾರತೀಯ ನಟಿಯರು ಧರಿಸುವ ಉಡುಗೆ ತೊಡುಗೆಯಿಂದ ಸುದ್ದಿ ಮಾಡುತ್ತಾರೆ. ಹೀಗೆ ಈಚೆಗೆ ಸುದ್ದಿಯಾಗಿದ್ದವರಲ್ಲಿ ಸೋನಂ ಕೂಡ ಒಬ್ಬರು. ಉಡುಪಿಗಿಂತ ಅವರು ಸುದ್ದಿಯಾಗಿದ್ದು, ಆಭರಣಗಳಿಂದ. ಚೆಂದದ ಉಡುಪು ಧರಿಸಿದರಷ್ಟೇ ಸಾಲದು, ಅದಕ್ಕೊಪ್ಪುವ ಆಭರಣಗಳನ್ನು ಧರಿಸಿದರಷ್ಟೇ ಆಕರ್ಷಕವಾಗಿ ಕಾಣಲು ಸಾಧ್ಯ. ವಿಭಿನ್ನ ಫ್ಯಾಷನ್‌ ಪ್ರಯೋಗಗಳಿಗೆ ಹೆಸರಾಗಿರುವ ಸೋನಂ ಕಾನ್‌ ಉತ್ಸವದಲ್ಲಿ ಈ ಮಾತಿಗೆ ಸಾಕ್ಷಿಯಂತಿದ್ದರು.

**

ಶಿಲ್ಪಾ ಶೆಟ್ಟಿ: ಸೀರೆಯನ್ನೂ ಭಿನ್ನ ಪ್ರಯೋಗಗಳಿಗೆ ಒಗ್ಗಿಸಿಕೊಳ್ಳುವ ಟ್ರೆಂಡ್ ಈಗ ಪ್ರಾರಂಭವಾಗಿದೆ. ಸೀರೆಯನ್ನು ಆಧುನಿಕ ಶೈಲಿಯಲ್ಲಿಯೂ ಧರಿಸಬಹುದು. ಹೀಗೊಂದು ಪ್ರಯೋಗದ ಮೂಲಕ ಸೆಳೆದವರು ಶಿಲ್ಪಾ ಶೆಟ್ಟಿ. ಅದರಲ್ಲೂ ಅವರು ಇತ್ತೀಚೆಗೆ ಸೂಪರ್‌ಡಾನ್ಸರ್‌ ಸೀಸನ್‌ –2 ರಿಯಾಲಿಟಿ ಶೋನಲ್ಲಿ ಧರಿಸಿದ್ದ ಹಳದಿ ಸೀರೆ ವಸ್ತ್ರ ವಿನ್ಯಾಸಕಿಯ ಜಾಣ್ಮೆಯ ಪ್ರತಿಬಿಂಬದಂತಿತ್ತು. ಸೋನಂಮ್ಲೂತಾರಿಯಾ ವಿನ್ಯಾಸದ ಸೀರೆಗೆ ಜೊತೆಯಾಗಿ ಜರ್ಮನ್‌ ಸಿಲ್ವರ್‌ ಆಭರಣಗಳನ್ನು ಇವರು ಧರಿಸಿದ್ದರು. ಫಿಜಿಗೋಬ್ಲೆಟ್‌ ಕಂಪೆನಿಯ ಚಪ್ಪಲಿ ಹಾಕಿಕೊಂಡಿದ್ದರು.

**

ಯಾಮಿ ಗೌತಮಿ: ‘ವೋಗ್‌ ವೆಡ್ಡಿಂಗ್‌ ಶೋ’ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ನಡು ಕಾಣುವ ಲೆಹೆಂಗಾದಲ್ಲಿ ಮಿಂಚುತ್ತಿದ್ದರು ಯಾಮಿ ಗೌತಮಿ. ಈ ಹಬ್ಬಕ್ಕೆ ಎದ್ದುಕಾಣುವಂತೆ ತಯಾರಾಗುವ ಆಸೆಯಿದ್ದರೆ ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಉಡುಪಿನ ವಸ್ತ್ರ ವಿನ್ಯಾಸಕಿ ಅನಿತಾ ಡೋಂಗ್ರೆ.

**

ತಾಪ್ಸಿ ಪನ್ನು: ದೇಸಿ ಸಿಂಡ್ರಲಾ ತರಹ ಈ ಹಬ್ಬಕ್ಕೆ ತಯಾರಾಗಬೇಕೆ? ಹಾಗಿದ್ದರೆ ತಾಪ್ಸಿ ಪನ್ನು ಇನ್‌ಸ್ಟಾಗ್ರಾಂ ತಡಕಾಡಿ, ಅಲ್ಲಿ ನಿಮ್ಮಗೊಂದಿಷ್ಟು ಐಡಿಯಾ ಸಿಗುತ್ತದೆ. ಅಭಿನವ್‌ ಮಿಶ್ರಾ ವಿನ್ಯಾಸದ ಉಡುಪಿಗೆ ತಾಪ್ಸಿ, ಜಸ್ಟ್‌ಜ್ಯುವೆಲ್ಲರಿ ಇಂಡಿಯಾದ ಆಭರಣ ಧರಿಸಿದ್ದರು. ಅವರ ಉಡುಪಿಗೆ ಹೊಂದುವ ನಿಡಲ್‌ ಡಸ್ಟ್‌ ಕಂಪೆನಿಯ ಚಪ್ಪಲಿ ಪ್ರಮುಖ ಆಕರ್ಷಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.