ADVERTISEMENT

ನಿಮ್ಮನ್ನು ನೀವು ಪ್ರೀತಿಸಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2016, 19:35 IST
Last Updated 1 ಏಪ್ರಿಲ್ 2016, 19:35 IST
ನಿಮ್ಮನ್ನು ನೀವು ಪ್ರೀತಿಸಿ
ನಿಮ್ಮನ್ನು ನೀವು ಪ್ರೀತಿಸಿ   

ಈಚೆಗೆ ಎಲ್ಲರ ಮೇಲೆಯೂ ಸಿಡುಕುತ್ತಿರುವಿರಾ? ಏನಾದರೂ ಹೇಳಿದರೆ, ಹೇಳಲಿದ್ದರೆ ಸಿಡಿಮಿಡಿಗೊಳ್ಳುವುದು ಸಾಮಾನ್ಯವಾಗಿದೆಯೇ? ಮುಂಗೋಪ ನಿಮ್ಮ ಮೂಗಿನ ಮೇಲೆಯೇ ವಸತಿ ಹೂಡಿದೆ ಎನಿಸುತ್ತಿದೆಯೇ?

ಇದಕ್ಕೊಂದು ಪರಿಹಾರವಿದೆ. ನಿಮ್ಮನ್ನು ನೀವು ಪ್ರೀತಿಸಿ. ನಿಮ್ಮೊಳಗಿನ ಮಗುವನ್ನು ಅಕ್ಕರೆಯಿಂದ ಕಾಣಿರಿ. ಧಾವಂತದ ಬದುಕಿನಲ್ಲಿ ನಾವು ನಾವಾಗಿದ್ದೆವು ಎನ್ನುವುದನ್ನೇ ಮರೆಯುತ್ತೇವೆ. ಬದುಕಿನ ಬಂಡಿ ನೂಕುವ ಚಕ್ರ ನಾವೆಂದುಕೊಳ್ಳುತ್ತೇವೆ. ಹಾಗೆ ಬದುಕನ್ನು ನೂಕುವಾಗ ಚಕ್ರಕ್ಕೆ ಅಂಟಿಕೊಳ್ಳುವ ಎಲ್ಲ ಮುಳ್ಳು, ಮೊಳೆ, ಹೇಸಿಗೆಯನ್ನು ಹೊತ್ತೇ ಮುಂದೆ ಸಾಗುತ್ತೇವೆ. ಆಗಲೇ ಇರುಸುಮರುಸು ಆರಂಭವಾಗುವುದು.

ಮಾಡಬೇಕಿರುವುದೇನು? ನಿಮ್ಮ ಕಾರು, ಸೈಕಲ್‌ ಹಾಗೂ ಬೈಕ್‌ ತೊಳೆಯುವಾಗ ಚಕ್ರವನ್ನೂ ಝಗಮಗವೆನಿಸುವಂತೆ ತೊಳೆಯುವುದಿಲ್ಲವೇ? ಹಾಗೆಯೇ ಒಂದು ಸರ್ವಿಸಿಂಗ್‌ ಬೇಕು. ನಿಮಗೆ, ನಿಮ್ಮ ದೇಹಕ್ಕೆ ಹಾಗೂ ಮನಸಿಗೆ. ನಿಮ್ಮ ಬದುಕಿನಿಂದ ಒಂದಷ್ಟು ಸಮಯವನ್ನು ನಿಮಗಾಗಿಯೇ ಮೀಸಲಾಗಿಡಿ. ಬಹು ದಿನಗಳಿಂದ ಮಾಡದ ಕೆಲಸಗಳನ್ನು ಆ ಸಮಯದಲ್ಲಿ ಮಾಡಿ ಮುಗಿಸಿ. ನಿಮ್ಮ ಹವ್ಯಾಸವಾದ ಪೇಂಟಿಂಗ್‌, ಕಸೂತಿ, ಓದು, ಸಂಗೀತ, ಟೀವಿ ನೋಡುವುದು ಏನಾದರೂ ಸರಿ. ಆ ಸಮಯ ನಿಮ್ಮದೇ.

ಮಸಾಜ್‌: ಮೂರು ತಿಂಗಳಿಗೆ ಒಮ್ಮೆಯಾದರೂ ಒಂದು ಮಸಾಜ್‌ ಮಾಡಿಸಿಕೊಳ್ಳುವುದು ಒಳಿತು. ನಿಮ್ಮ ಚರ್ಮದ ಸ್ವೇದ ಗ್ರಂಥಿಗಳೂ ಚುರುಕಾಗುತ್ತವೆ. ದೇಹ ಹಗುರವಾಗುತ್ತದೆ. ಸ್ನಾಯುಗಳು ಸಡಿಲಗೊಳ್ಳುತ್ತವೆ. ಮನಸು  ಹಗುರವೆನಿಸುತ್ತದೆ.

ಆರೈಕೆ: ತಿಂಗಳಿಗೆ ಒಮ್ಮೆಯಾದರೂ ಫೇಶಿಯಲ್‌ ಮಾಡಿಸಿಕೊಳ್ಳಿ. ನಿಯಮಿತವಾಗಿ ನಿಮ್ಮ ಕೇಶ ಶೈಲಿಯನ್ನು ಬದಲಿಸುತ್ತಿರಿ.  ನೀವು ಚಂದ ಕಾಣುವಿರಿ ಎಂಬ ನಂಬಿಕೆಯೇ ನಿಮ್ಮಲ್ಲಿ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ಈ ವಿಶ್ವಾಸ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವಂತೆ ಮಾಡುತ್ತದೆ.

ಶಾಪಿಂಗ್‌: ಇತ್ತೀಚೆಗೆ ಮುದುಡಿದ ಮನಸುಗಳಿಗೆ ಶಾಪಿಂಗ್‌ ಥೆರಪಿಯಂತೆ ಕಾಣಿಸುತ್ತಿದೆ. ಆಗಾಗ ಕುಟುಂಬಕ್ಕಾಗಿ ಶಾಪಿಂಗ್‌ ಮಾಡಿ. ನಿಮಗಾಗಿಯೂ ಒಂದಷ್ಟು ಹಣವನ್ನು ಮೀಸಲಾಗಿಡಿ.

ಸೆಲೆಬ್ರೇಷನ್‌: ಸಣ್ಣ ಸಣ್ಣ ಯಶಸ್ಸುಗಳನ್ನು ಆಚರಿಸುವ ರೂಢಿ ಮಾಡಿಕೊಳ್ಳಿ. ಎಲ್ಲದಕ್ಕೂ ಪಾರ್ಟಿ ಮಾಡಬೇಕು ಎಂಬರ್ಥದಲ್ಲಿ ಅಲ್ಲ. ಪ್ರತಿಯೊಂದನ್ನು ಆನಂದಿಸುವುದನ್ನು ಕಲಿಯಿರಿ. ಯಶಸ್ಸಿನ ಮೊದಲ ಮೆಟ್ಟಿಲು ಸಹ ಒಂದು ಗುರಿಯೇ ಆಗಿರುತ್ತದೆ. ನನ್ನ ಗುರಿ ಇನ್ನೂ ದೂರ ಎಂದು ಕರಬುವುದು ಬಿಡಿ.

ಮತ್ಸರ ಬೇಡ: ಪ್ರತಿಸ್ಪರ್ಧಿಯ ಯಶಸ್ಸು ಕಂಡು ಕೊರಗದಿರಿ. ಅವರ ಯಶಸ್ಸಿನಲ್ಲಿ ಪಾಲ್ಗೊಳ್ಳಿ. ಅದು ಸಹಭಾಗಿತ್ವದ ಭಾವವನ್ನು ಕೊಡುತ್ತದೆ. ಸ್ಪರ್ಧೆ ಯಾವಾಗಲೂ ನಮ್ಮೊಳಗೊಂದು ಒತ್ತಡವನ್ನು ಸೃಷ್ಟಿಸುತ್ತದೆ. ಈ ಒತ್ತಡ ನಮ್ಮಲ್ಲಿ ಕೀಳರಿಮೆಯನ್ನೂ ಹುಟ್ಟಿಸುತ್ತದೆ. ಪ್ರತಿಸ್ಪರ್ಧಿಯ ಸಂತೋಷದಲ್ಲಿ ಪಾಲ್ಗೊಳ್ಳಿ. ಅದು ಆನಂದವನ್ನೂ, ಅವರಂತೆ ನೀವಾಗಬೇಕು ಎನ್ನುವ ಪ್ರೇರಣೆಯನ್ನೂ ನೀಡುತ್ತದೆ.

ಉಡುಗೆ: ನಿಮ್ಮ ಉಡುಗೆಯ ಶೈಲಿಯನ್ನು ಆಗಾಗ ಬದಲಿಸುತ್ತಿರಿ. ಈ ಬದಲಾವಣೆಯನ್ನು ಗಮನಿಸಿದವರೆಲ್ಲ ಹೇಳುವ ಪ್ರತಿಕ್ರಿಯೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಇವೆಲ್ಲವೂ ನೀವು ಬಂಡಿ ನೂಕುತ್ತಿರುವಿರಿ ಎಂಬ ಭಾವವನ್ನು ದೂರ ಅಟ್ಟುತ್ತವೆ. ಅದರ ಬದಲಿಗೆ ನಿಮ್ಮ ಬದುಕನ್ನು ಆನಂದಿಸುತ್ತಿರುವಿರಿ ಎಂಬ ವಿಶ್ವಾಸ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.