ADVERTISEMENT

ನಿಮ್ಮ ಮಾತು ಮಕ್ಕಳು ಕೇಳಿಸಿಕೊಂಡರೇ?

ರೋಹಿಣಿ ಮುಂಡಾಜೆ
Published 12 ಸೆಪ್ಟೆಂಬರ್ 2017, 19:30 IST
Last Updated 12 ಸೆಪ್ಟೆಂಬರ್ 2017, 19:30 IST
ನಿಮ್ಮ ಮಾತು ಮಕ್ಕಳು ಕೇಳಿಸಿಕೊಂಡರೇ?
ನಿಮ್ಮ ಮಾತು ಮಕ್ಕಳು ಕೇಳಿಸಿಕೊಂಡರೇ?   

ಸನ್ನಿವೇಶ 1

‘ಏ ನೀನು ನಮ್ಮ ಮನೆಗೆ ಬರಬೇಡ, ನೀನು ಬ್ಯಾಡ್‌ ಬಾಯ್‌’

‘ಮಾವನನ್ನೇ ಬ್ಯಾಡ್‌ ಬಾಯ್‌ ಅಂತೀಯಾ?’

ADVERTISEMENT

‘ನಾನು ಹೇಳಿದ್ದಲ್ಲ, ನಿನ್ನೆ ಪಪ್ಪ–ಅಮ್ಮ ನಿಂಗೆ ಬೈತಿದ್ರು. ಅದಕ್ಕೆ ನೀನು ಬ್ಯಾಡ್‌ ಬಾಯ್‌’

***

ಸನ್ನಿವೇಶ 2

‘ಅಮ್ಮ, ನಿಂಗೆ ಅಡುಗೆ ಮಾಡೋಕೆ ಬರಲ್ವಂತೆ ಹೌದಾ? ನಂಗೆ ಮಾತ್ರ ಟೇಸ್ಟಿಯಾಗಿ ಮಾಡ್ಕೊಡ್ತೀಯಾ?’

‘ಅಮ್ಮ ಹಾಗೆಲ್ಲ ಮಾಡೋದಿಲ್ಲ ಮಗಾ. ಎಲ್ಲರಿಗೂ ಒಂದೇ ಸಲ ಅಡುಗೆ ಮಾಡೋದಲ್ವಾ? ಯಾಕೆ ಹಾಗೆ ಕೇಳಿದೆ?’

‘ನೀನು ಸೂಪರ್ರಾಗೇ ಮಾಡ್ತೀಯಾ. ಆದ್ರೆ ಅಪ್ಪನತ್ರ ಅಜ್ಜಿ ಹೇಳ್ತಿದ್ರು’

***

ಮೊನ್ನೆ ಗೌರಿ ಗಣೇಶ ಹಬ್ಬದ ಸಂದರ್ಭ. ಗೆಳೆಯನೊಬ್ಬ ಎರಡನೇ ಬಾರಿಗೆ ದುಬಾರಿ ಫೋನ್‌ ಕಳೆದುಕೊಂಡ. ಸಂಜೆ ಮನೆಯಲ್ಲಿ ಎಲ್ಲರ ಮುಂದೆ ಹೇಳಿಕೊಂಡ. ಮರುದಿನ ಈತನ ತಲೆ ಕಂಡಲ್ಲೆಲ್ಲಾ ಎಲ್ಲರದೂ ಒಂದೇ ಪ್ರಶ್ನೆ– ‘ಏನ್ಸಾರ್‌ ಮೊಬೈಲು ಕಳ್ಕೊಂಡ್ರಂತೆ? ಸ್ವಲ್ಪ ಹುಷಾರಾಗಿರೋದಲ್ವಾ?’ ‘ನಿಮಗೆ ಹೇಗೆ ಗೊತ್ತು? ಎಂದರೆ, ‘ನಿಮ್ಮ ಮಗ ಹೇಳಿದ’ ಎಂಬ ಸಾರ್ವತ್ರಿಕ ಉತ್ತರ! ಆರು ವರ್ಷದ ಮಗ, ಗಣೇಶ ಪೆಂಡಾಲುಗಳಿಗೆ ಓಡಾಡಿ ಮಾಡಿದ ಘನಂದಾರಿ ಕೆಲಸ ಅದಾಗಿತ್ತು!

***

ರಹಸ್ಯವಾಗಿ ಇರಬೇಕಾದ ಸಂಗತಿಗಳನ್ನು ಮಕ್ಕಳ ಮುಂದೆ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಕೆಲವು ನಿದರ್ಶನಗಳಿವು. ಮಕ್ಕಳ ಮುಂದೆ ದೊಡ್ಡವರು ಆಡಿದ ಮಾತುಗಳು ಸದ್ದೇ ಇಲ್ಲದೆ ಸುದ್ದಿಯಾಗುತ್ತವೆ ಎಂಬುದನ್ನು ಮರೆಯಬಾರದು. ‘ನಮ್ಮ ಮಕ್ಕಳು ಮನೆ ವಿಷಯಗಳನ್ನು ಹಾಗೆಲ್ಲ ಬೇರೆಯವರ ಹತ್ತಿರ ಹೇಳಿಕೊಳ್ಳುವುದಿಲ್ಲ’ ಎಂಬ ಅತಿಯಾದ ವಿಶ್ವಾಸದಿಂದ ಅವರ ಸಮ್ಮುಖದಲ್ಲಿ ಸಹಜವಾದ ವಿಷಯಗಳನ್ನು ಚರ್ಚಿಸಿದರೆ ಹೊಸ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆಯೇ. ಗಂಭೀರವಾಗಿ ತಮ್ಮ ಪಾಡಿಗೆ ಕುಳಿತಿದ್ದರೂ, ಆಟವಾಡುತ್ತಿದ್ದರೂ ಸೂಕ್ಷ್ಮ ಸಂಗತಿಗಳನ್ನು ತಲೆಗೆ ತುಂಬಿಕೊಳ್ಳುವುದರಲ್ಲಿ ಮಕ್ಕಳದು ಎತ್ತಿದ ಕೈ.

ಮಕ್ಕಳ ಎದುರು ಯಾವ ಮಾತು ಆಡಬೇಕು, ಯಾವ ಮಾತು ಆಡಬಾರದು ಎನ್ನುವ ಎಚ್ಚರ ಪೋಷಕರಲ್ಲಿ ಇರಬೇಕು. ಇಲ್ಲದಿದ್ದರೆ ಸಂಸಾರದ ಗುಟ್ಟುಗಳೆಲ್ಲಾ ಡಾಣಾ ಡಂಗುರವಾಗಿ ಜಗಜ್ಜಾಹೀರಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.