ADVERTISEMENT

ನೋವಿನ ನಡುವೆಯೂ ಡಾನ್ಸ್‌

ವಿಶಾಖ ಎನ್.
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಹೃತಿಕ್ ರೋಷನ್
ಹೃತಿಕ್ ರೋಷನ್   

‘ನೀನಿನ್ನು ಕುಣಿಯಲಾರೆ. ನಿನ್ನ ಮಂಡಿಗಳಲ್ಲಿ ನಿವಾರಿಸಲಾಗದಂಥ ನೋವು ಸೇರಿಕೊಂಡಿದೆ. ನೃತ್ಯದಿಂದ ಬೆನ್ನುಹುರಿಯ ಕೆಳಭಾಗಕ್ಕೂ ಅಪಾಯ’ – ಹೀಗೆ ಮೂಳೆ ವೈದ್ಯರೊಬ್ಬರು ಎಕ್ಸ್-ರೆ ನೋಡಿಕೊಂಡು ಹೇಳಿದಾಗ ಹೃತಿಕ್ ರೋಷನ್ ಚೂಪು ಮೂಗು ಕೆಂಪಾಗಿತ್ತು. ಕಣ್ಣೊಳಗೆ ಎಂಥದೋ ಕುದಿ. ‘ಎಂಥ ಡಾನ್ಸರ್’ ಎಂಬ ಉದ್ಗಾರ ಪದೇ ಪದೇ ಕೇಳಿ ಬೆಳೆದಿದ್ದ ನಟನಿಗೆ ಕುಣಿಯುವುದು ಅಪಥ್ಯ ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟ.

ಆ ವೈದ್ಯರ ಮಾತಿನಿಂದ ಕಂಗಾಲಾಗದ ಹೃತಿಕ್ ಇನ್ನಷ್ಟು ವೈದ್ಯರನ್ನು ಕಂಡರು. ನೋವು ನೀಗಿಕೊಂಡರು. ಅದಕ್ಕಾಗಿ ಇನ್ನಷ್ಟು ನೋವು ನುಂಗಿದರು. ‘ತನ್ನನ್ನು ತಾನೇ ವಿಷಕಂಠ ಎಂದೇನೂ ಹೇಳಿಕೊಳ್ಳಲಿಲ್ಲ. ಕಂಠದಲ್ಲಿ ವಿಷವಿಕ್ಕಿಕೊಂಡು ಬದುಕಲು ಮನುಷ್ಯ ದೇವರಲ್ಲವಲ್ಲ’ ಎಂದು ಸತ್ಯದ ತಲೆಮೇಲೆ ಹೊಡೆದಂತೆ ಮಾತನಾಡುವ ವ್ಯಕ್ತಿತ್ವ ಅವರದ್ದು.

ಹೃತಿಕ್ ಮತ್ತೆ ಕುಣಿದರು. ಸಾಹಸ ದೃಶ್ಯಗಳಿಂದ ವಿಮುಖರಾಗಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ದೇಹ ದಂಡಿಸಿದ್ದರ ಫಲವಿದು. ದೊಡ್ಡ ಸಂಕಟದಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರಿಟ್ಟ ಅವರಿಗೆ ‘ಜಿಂದಗಿ ನಾ ಮಿಲೇಗಿ ದುಬಾರಾ’ ಎಂದೆನಿಸಿದ್ದು ಸುಳ್ಳಲ್ಲ.

ದಶಕ ಮೀರಿದ ದಾಂಪತ್ಯಕ್ಕೆ ಪೂರ್ಣವಿರಾಮ ಬಿದ್ದಾಗಲೂ ಅವರ ಮನದಲ್ಲಿ ಅಲೆಯೊಂದು ಎದ್ದಿದ್ದಿದೆ. ಅವರ ಮದುವೆಯ ಸಂಭ್ರಮ ಕಣ್ತುಂಬಿಕೊಂಡವರಿಗೆ, ಪತಿ-ಪತ್ನಿಯ ಅನ್ಯೋನ್ಯ ಕಂಡವರಿಗೆ ಸುಸೇನ್ ಹಾಗೂ ಹೃತಿಕ್ ವಿವಾಹ ವಿಚ್ಛೇದನ ಸೋಜಿಗದ ಸಂಗತಿಯಾಗಿತ್ತು.

ಬೇಗ ಹೃತಿಕ್ ಇನ್ನೊಂದು ಹುಡುಗಿಯನ್ನು ಕಟ್ಟಿಕೊಳ್ಳುತ್ತಾರೆಂದು ಕೆಲವರು ಭವಿಷ್ಯ ಕೂಡ ನುಡಿದಿದ್ದರು. ಅದನ್ನು ನೃತ್ಯಪ್ರಿಯ ನಟ ಸುಳ್ಳಾಗಿಸಿದರು.
‘ಮನುಷ್ಯನ ಅಗತ್ಯಗಳು ಕೆಲವೇ ಕೆಲವು. ನಾನೀಗ ತೃಪ್ತ. ಇನ್ನೊಂದು ಮದುವೆಯ ಅಗತ್ಯವಿಲ್ಲ’ ಎಂದುಬಿಟ್ಟರು.

ಬದುಕಿನ ಕುರಿತ ಅವರ ಮಾತಿನ ಈ ಲಹರಿ ಇನ್ನೂ ಆಸಕ್ತಿಕರವಾಗಿದೆ, ಕೇಳಿ: ‘ಮೂತ್ರಕೋಶಗಳು ಸರಿಯಾಗಿಲ್ಲ ಎಂದು ಪ್ರಯೋಗಾಲಯದ ವರದಿ ಹೇಳುತ್ತದೆ. ಅದನ್ನು ನೋಡಿ ಮನಸ್ಸು ಮುದುಡುತ್ತದೆ. ಸ್ನೇಹಿತರಿಗೆ ಫೋನ್ ಮಾಡುತ್ತೀರಿ. ಅಪ್ಪ-ಅಮ್ಮನಿಗೆ ಫೋನ್ ಮಾಡುತ್ತೀರಿ. ಅಳುತ್ತೀರಿ. ಹೀಗಾಗಿ ಹೋಯಿತಲ್ಲ ಎಂದು ಕಣ್ಣೀರಿಡುತ್ತೀರಿ. ಅದು ನಮ್ಮ ಹಳೆಯ ವರಸೆ’.

‘ಈಗ ಹಾಗೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮೂತ್ರಕೋಶ ಸರಿಪಡಿಸುವುದು ಹೇಗೆ ಎಂದು ವಿಚಾರಿಸುತ್ತೀರಿ. ಆಪ್ತೇಷ್ಟರ ಬಳಿಗೆ ಹೋಗುತ್ತೀರಿ. ಸರಿ ಹೋಗಲು ಇದೇ ದಾರಿ ಎಂದು ಹೇಳುತ್ತೀರಿ. ಹಣ ಬೇಕಿದ್ದರೆ ಹೊಂದಿಸುತ್ತೀರಿ. ಒಬ್ಬ ವೈದ್ಯರು ಸರಿಹೋಗದು ಎಂದರೆ ಇನ್ನೊಬ್ಬರನ್ನು ಹುಡುಕು ವುದು ಅನಿವಾರ್ಯ. ನಮ್ಮ ಮನೋ ದೈಹಿಕ ದೌರ್ಬಲ್ಯಗಳ ಅರಿವು ಇದ್ದರೆ ನಿಜ ಬದುಕು ನಮ್ಮದು. ಅದೇ ಸತ್ಯ. ಅದನ್ನೇ ಬದುಕಬೇಕು. ಅವೆಲ್ಲವುಗಳ ಅರಿವಿದ್ದರೆ ಎಂಥವನೂ ಸ್ಟಾರ್ ಆಗಬಹುದು’.

ದೀಪಿಕಾ ಪಡುಕೋಣೆ, ಕರಣ್ ಜೋಹರ್ ವ್ಯಾಕುಲಕ್ಕೆ ಒಳಗಾಗಿ, ಅದರಿಂದ ಹೊರಬಂದು ತಮ್ಮತನದ ಬದುಕಿಗೆ ಮರಳಿದ ಉದಾಹರಣೆಗಳು ಹೃತಿಕ್ ಅವರಿಗೆ ಗೊತ್ತಿದೆ. ಅದಕ್ಕೇ ಅವರು ಖಿನ್ನತೆ, ವ್ಯಾಕುಲ ಎಂಬ ಪದಗಳನ್ನು ಒಪ್ಪುವುದಿಲ್ಲ. ‘ದೇಹಕ್ಕೆ ನೋವಾಗುವಂತೆ ಮನಸ್ಸಿಗೂ ಆಗುತ್ತದೆ. ಅದನ್ನು ಸರಿಪಡಿಸಲೂ ವೈದ್ಯರಿದ್ದಾರೆ.

ಸಮಸ್ಯೆಗಳಿಂದ ಆಚೆ ಬರಬೇಕಷ್ಟೆ. ಅದನ್ನೇ ಸುತ್ತಿಕೊಂಡು ನಾನೆಂದೂ ನರಳಿಯೇ ಇಲ್ಲ. ಸುದೀರ್ಘ ಪಯಣದ ಮಧ್ಯ ಬಂಡೆಗಲ್ಲೊಂದು ಸಿಗುತ್ತದೆ. ಅದರ ಹಿಂದೆ ಏನಿದೆ ಎನ್ನುವ ಕುತೂಹಲ ನನ್ನದು. ಆ ಕುತೂಹಲ ತಣಿಸಿಕೊಂಡರೆ ನನಗೆ ನಾನೇ ಸಾಟಿ’- ಇದು ಹೃತಿಕ್ ಅನುಭವದ ಮಾತು.

ನಾಯಕ ಆದಾಗ ನಿಯತಕಾಲಿಕೆಯಲ್ಲಿ ತನ್ನ ಮುಖ ಹೇಗೆ ಬಂದಿದೆ ಎಂದು ಕುತೂಹಲದಿಂದ ನೋಡಿದ್ದ ಅವರು, ವಿವಾಹ ವಿಚ್ಛೇದನದ ಫೋಟೊ ಸರಿಯಾಗಿ ಪ್ರಕಟವಾಗಿದೆಯಾ ಎಂದೂ ಕೇಳಿದ್ದರು. ಎಲ್ಲರಿಗೂ ಇಂಥ ಸಮಚಿತ್ತ ಇರುವುದು ಕಷ್ಟವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.