ADVERTISEMENT

ಪಿಕ್ಚರ್ ನೋಡಿ

ದ ಲಾಸ್ಟ್‌ ಟೆಂಪ್ಟೇಶನ್‌ ಆಫ್‌ ಕ್ರೈಸ್ಟ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಪಿಕ್ಚರ್ ನೋಡಿ
ಪಿಕ್ಚರ್ ನೋಡಿ   

‘ದ ಲಾಸ್ಟ್‌ ಟೆಂಪ್ಟೇಶನ್‌ ಆಫ್‌ ಕ್ರೈಸ್ಟ್‌’ ಇದು 1988ರಲ್ಲಿ ತಯಾರಾದ ಅಮೆರಿಕನ್ ಸಿನಿಮಾ. ಕ್ರಿಸ್ತನ ಬದುಕನ್ನು ಆಧರಿಸಿದ ಈ ಸಿನಿಮಾ ನಿಕೋಸ್‌ ಕೆಜೆಂಟ್‌ಜಕಿಸ್‌ನ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದ್ದು. ಮಾರ್ಟೀನ್‌ ಸ್ಕಾರ್ಸಸ್‌ ನಿರ್ದೇಶಿಸಿದ್ದಾರೆ.

ಸಾಮಾನ್ಯವಾಗಿ ದೇವಮಾನವರು, ಸಂತರ ಕುರಿತಾದ ಸಿನಿಮಾಗಳು ಅವರನ್ನು ಸಾಮಾನ್ಯ ಮನುಷ್ಯತನದಿಂದ ಮೇಲಕ್ಕೆತ್ತಿ ಪವಾಡಪುರುಷರನ್ನೋ ಅಥವಾ ದೈವೀಪುತ್ರರನ್ನಾಗಿಸಿಯೇ ಚಿತ್ರಿಸುತ್ತವೆ. ಕ್ರಿಸ್ತನ ಕುರಿತಾದ ಹಲವು ಸಿನಿಮಾಗಳೂ ಇದಕ್ಕೆ ಹೊರತಲ್ಲ. ಆದರೆ ‘ದ ಲಾಸ್ಟ್‌ ಟೆಂಪ್ಟೇಶನ್‌ ಆಫ್‌ ಕ್ರೈಸ್ಟ್‌’ ಇದಕ್ಕಿಂತ ಕೊಂಚ ಭಿನ್ನ ಹಾದಿಯ ಸಿನಿಮಾ.

ಇಡೀ ಸಿನಿಮಾದಲ್ಲಿ ಕ್ರಿಸ್ತ ಆಗಾಗ ಪವಾಡ ಮಾಡ್ತಿದ್ರೂ ಪವಾಡಪುರುಷ ಆಗುವುದಿಲ್ಲ. ಮನುಷ್ಯನಾಗಿಯೇ ಇರುತ್ತಾನೆ. ಅಗತ್ಯಬಿದ್ದಾಗ ಪವಾಡ ಮಾಡಿದರೂ, ಪವಾಡ ಮಾಡುವುದರ ತಾನು ದೇವಪುತ್ರ ಅಂತ ಸಾಬೀತುಪಡಿಸಲು ಒಪ್ಪುವುದಿಲ್ಲ. ನೀನು ದೇವಪುತ್ರ ಎಂದು ಸಾಬೀತಾಗಲು ಪವಾಡ ಮಾಡಿ ತೋರಿಸು ಎಂಬ ಪ್ರಶ್ನೆಗೆ ಅವನು ‘ನಾನು ಮಾಂತ್ರಿಕ ಅಲ್ಲ’ ಎಂದು ಉತ್ತರಿಸುತ್ತಾನೆ!

ADVERTISEMENT

ಇದು ದೇವರನ್ನು ಸಾಮಾನ್ಯ ಮನುಷ್ಯನನ್ನಾಗಿ ನೋಡುವ ರೀತಿಯೂ ಅಲ್ಲ; ಸಾಮಾನ್ಯ ಮನುಷ್ಯನನ್ನು ಸರ್ವಶಕ್ತನನ್ನಾಗಿಸುವ ರೀತಿಯೂ ಅಲ್ಲ. ಅವೆರಡರ ನಡುವಿನ ಹಾದಿಯಲ್ಲಿ ಈ ಸಿನಿಮಾ ಬೆಳೆಯುತ್ತ ಹೋಗುತ್ತದೆ.

ಜ್ಞಾನೋದಯ ಆದ ಮೇಲೆಯೂ ಅವನ ಸಂಕಟಗಳು, ದ್ವಂದ್ವಗಳು ಮುಗಿಯುವುದಿಲ್ಲ. ಜನರು ಅವನನ್ನು ಸುಲಭವಾಗಿ ಒಪ್ಪಿಕೊಳ್ಳುವುದೂ ಇಲ್ಲ. ಸುಲಭವಾಗಿ ಎಲ್ಲವನ್ನೂ ಬಗೆಹರಿಸಿಕೊಂಡು ದೇವಮಾನವನಾಗಿಬಿಡುವುದು ಅವನಿಗೂ ಬೇಕಾದಂತಿಲ್ಲ. ಜನರಿಗಾಗಿ ಮಿಡಿಯುವ, ಅಂಧಜ್ಞಾನದ ಜಾಲದಲ್ಲಿ ಸಿಕ್ಕಿಕೊಂಡು ತಮಗೆ ಗೊತ್ತಿಲ್ಲದೆಯೇ ಒದ್ದಾಡುತ್ತಿರುವ ಜನರಿಗಾಗಿ ಅವನು ಅಳುತ್ತಾನೆ. ತನ್ನತ್ತ ಕಲ್ಲು ತೂರುತ್ತಿರುವವರನ್ನೂ ತನ್ನ ದಾರಿಗೆ ಬರುವಂತೆ ಕೇಳಿಕೊಳ್ಳುತ್ತಾನೆ.

ಯೇಸುಕ್ರಿಸ್ತನ ಬದುಕನ್ನು ಆಧರಿಸಿಯೇ ರೂಪಿಸಿದ್ದರೂ ಕೊನೆಯಲ್ಲಿ ಇದು ಕ್ರಿಸ್ತನಂತರದ ಕ್ರೈಸ್ತಧರ್ಮದ ಪೊಳ್ಳುತನದ ಟೀಕೆಯೂ ಆಗಿದೆ. ಈ ಭಾಗವೇ ಇಡೀ ಚಿತ್ರಕ್ಕೆ– ಅದರ ಉದ್ದೇಶಕ್ಕೆ ಹೊಸದೇ ತಿರುವು ನೀಡುವಂತಿದೆ.

ಶಿಲುಬೆಗೇರಿದ ರಕ್ತಸಿಕ್ತ ಯೇಸುವನ್ನು ದೇವಕನ್ಯೆ ಬಿಡಿಸಿಕೊಂಡು ಕರೆದುಕೊಂಡು ಹೋಗುತ್ತಾಳೆ. ಅವಳ ಜತೆ ಹೋದವನು ಹೆಣ್ಣಿನೊಂದಿಗೆ ಸುಖಿಸುತ್ತಾನೆ. ಸಂಸಾರವಂದಿಗನಾಗಿ ಸಾಮಾನ್ಯ ಮನುಷ್ಯನಂತೆ ಬದುಕುತ್ತಾನೆ!

ಒಂದು ದಿನ ಬೀದಿಯಲ್ಲಿ ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಜನರಿಗೆ ತನ್ನ ಬಗ್ಗೆಯೇ ಹೇಳುತ್ತಿರುವುದು ಕೇಳಿಸುತ್ತದೆ. ‘ಯೇಸುಕ್ರಿಸ್ತನು ಮೇರಿಯ ಹೊಟ್ಟೆಯಲ್ಲಿ ಹುಟ್ಟಿಲ್ಲ. ಅವನು ದೇವರಿಂದ ಜನ್ಮತಳೆದವನು. ಶಿಲುಬೆಗೇರಿದ ಮೂರು ದಿನಗಳ ನಂತರ ಮತ್ತೆ ಎದ್ದು ಬಂದವನು’ ಹೀಗೆ ಅವನ ಮಾತು ಸಾಗುತ್ತಿರುತ್ತದೆ. ಅದನ್ನು ಯೇಸು ಪ್ರತಿಭಟಿಸಿದರೂ ಅವನು ಅದಕ್ಕೆ ಸೊಪ್ಪು ಹಾಕುವುದಿಲ್ಲ.

ಹೀಗೆ ತನ್ನ ಕಣ್ಣೆದುರೇ ತನ್ನ ಕುರಿತಾದ ಪವಾಡದ ಕಥೆಗಳನ್ನು ಹುಟ್ಟುವುದನ್ನು ಅವನೇ ನೋಡಬೇಕಾಗುತ್ತದೆ. ಇವೆಲ್ಲವೂ ಶಿಲುಬೆಗೇರಿಸುವಾಗ ಸಾಯುವ ಸ್ವಲ್ಪ ಮೊದಲು ಯೇಸುಕ್ರಿಸ್ತ ಕಂಡ ಭ್ರಮೆಯಷ್ಟೇ ಆಗಿರುತ್ತದೆ.

ಹೀಗೆ ಯೇಸುವಿನ ಮಹಿಮೆಯನ್ನೂ ಆ ಮಹಿಮೆಯ ಪ್ರಭಾವಳಿಯಲ್ಲಿಯೇ ಅದರ ನಾಶದ ಬೀಜವನ್ನೂ ಗುರ್ತಿಸುವ ವಿಶಿಷ್ಟ ಸಿನಿಮಾ ಇದು. ಯೇಸುವಿನ ಪಾತ್ರದಲ್ಲಿ ವಿಲಿಯಂ ಡೆಫೊರ್‌ ಅಭಿನಯವೂ ಈ ಚಿತ್ರವನ್ನು ಇನ್ನೊಂದು ಮೆಟ್ಟಿಲು ಮೇಲೇರಿಸಿದೆ. ತಾಂತ್ರಿಕವಾಗಿಯೂ ಗಮನ ಸೆಳೆಯುವ ಸಿನಿಮಾ ಇದು. ಯೂಟ್ಯೂಬ್‌ನಲ್ಲಿ goo.gl/N12iC8 ಕೊಂಡಿ ಬಳಸಿ ಈ ಸಿನಿಮಾ ನೋಡಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.