ADVERTISEMENT

ಪೇಪರ್‌ನಲ್ಲಿನ ಪ್ರಾಣಿಗಳು

ಸತತ ನಾಲ್ಕು ವರ್ಷಗಳಿಂದ ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST
ಪೇಪರ್‌ನಲ್ಲಿನ ಪ್ರಾಣಿಗಳು
ಪೇಪರ್‌ನಲ್ಲಿನ ಪ್ರಾಣಿಗಳು   

ನೋಡಿದರೆ ನಿಜವಾದ ಪ್ರಾಣಿಗಳಂತೆ ಕಾಣುವ ಈ ಕಲಾಕೃತಿಗಳು ಸಿದ್ಧಗೊಂಡಿರುವುದು ಪೇಪರ್‌ನಿಂದ. ಜಪಾನ್‌ನಲ್ಲಿ ‘ಪೇಪರ್ ಆರ್ಟಿಸ್ಟ್’ ಎಂದೇ ಹೆಸರಾಗಿರುವ ಚೀ ಹಿಟೋಟ್ಸುಯಾಮಾ ಸತತ ನಾಲ್ಕು ವರ್ಷಗಳಿಂದ ವಿನ್ಯಾಸಗೊಳಿಸಿ ಒಟ್ಟುಗೂಡಿಸಿರುವ ಕಲಾಕೃತಿಗಳು ಇವು.

ಪ್ರತಿದಿನ ನ್ಯೂಸ್‌ಪೇಪರ್ ಓದುವ ಹವ್ಯಾಸವಿರಿಸಿಕೊಂಡಿದ್ದ ಹಿಟೋಟ್ಸುಯಾಮಾಗೆ ಇದ್ದಕ್ಕಿದ್ದಂತೆ ಇದರಿಂದಲೇ ಪ್ರಾಣಿಗಳ ಪ್ರತಿಕೃತಿ ರೂಪಿಸುವ ಆಲೋಚನೆಯೂ ಸುಳಿಯಿತು. ಅಂದಿನಿಂದ ಒಂದೊಂದೇ ಪ್ರಯೋಗಕ್ಕೆ ತೊಡಗಿಕೊಂಡರು. ದಿನಗಳೆದಂತೆ ನ್ಯೂಸ್‌ಪೇಪರ್‌ನ ಈ ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದವು.

ನಿರ್ಜೀವ ಪೇಪರ್‌ಗೆ ಈ ಮೂಲಕ ಜೀವ ತುಂಬುತ್ತಿರುವ ಹಿಟೋಟ್ಸುಯಾಮಾಗೆ ಕಲೆಯಿಂದ ಸಮಾಜಕ್ಕೆ ಧನಾತ್ಮಕ ಸಂದೇಶ ಕೊಡಬೇಕೆಂಬ ತುಡಿತವಂತೆ. ಅದಕ್ಕಾಗೇ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪ್ರತಿಕೃತಿಗಳನ್ನೂ ರೂಪಿಸಿದರು. ರೈನೋಸಾರ್, ಸಮುದ್ರ ಆಮೆ ಮುಂತಾದ ಪ್ರಾಣಿಗಳ ಪ್ರತಿಕೃತಿಗಳನ್ನು ರೂಪಿಸಿ ಪ್ರದರ್ಶನಕ್ಕೆ ಇಡುವ ಮೂಲಕ ಅವುಗಳನ್ನು ರಕ್ಷಿಸಬೇಕಿರುವ ಅವಶ್ಯಕತೆಯನ್ನು ಮನದಟ್ಟುಮಾಡಲು ಪ್ರಯತ್ನಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಹಿಟೋಟ್ಸುಯಾಮಾ ಮತ್ತು ಅವರ ತಂಡ ಈ ಕೆಲಸದಲ್ಲಿ  ನಿರಂತರವಾಗಿ ತೊಡಗಿಕೊಂಡಿದೆ. ಪೇಪರನ್ನು ತೇವಗೊಳಿಸಿದ ನಂತರ ಅವುಗಳನ್ನು ಹಿಂಡಿ,  ಚೆನ್ನಾಗಿ ಸುತ್ತಿ ಅದಕ್ಕೆ ಬೇಕಾದ ರೂಪವನ್ನು ನೀಡಲಾಗುತ್ತದೆ.

‘ಇದಕ್ಕೆ ಯಾವುದೇ  ಯಂತ್ರವನ್ನು ಬಳಸುವುದಿಲ್ಲ. ಸಂಪೂರ್ಣ ಕರಕುಶಲ. ವನ್ಯ ಪ್ರಾಣಿಪ್ರೀತಿಗೆ, ಅವುಗಳ ಉಳಿವಿಗೆ ಶ್ರಮಿಸಲು ಈ ಪೇಪರ್ ಕಲಾಕೃತಿಗಳನ್ನು ಮೂಡಿಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ ಹಿಟೋಟ್ಸುಯಾಮಾ. ಬಣ್ಣದ ಪತ್ರಿಕೆಗಳನ್ನು ಜಾಣ್ಮೆಯಿಂದ ಉಪಯೋಗಿಸಿಕೊಂಡು ಆಯಾ ಪ್ರಾಣಿಗಳ ಬಣ್ಣಕ್ಕೆ ತಕ್ಕಂತೆ ವಿನ್ಯಾಸಗೊಳಿಸಿರುವುದೂ ಇವರ ಛಾತಿ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT