ADVERTISEMENT

ಫೇಲಿನಿಂದ ಪಾಠ ಕಲಿತರಂತೆ

ವಿಶಾಖ ಎನ್.
Published 31 ಜುಲೈ 2017, 19:30 IST
Last Updated 31 ಜುಲೈ 2017, 19:30 IST
ಫೇಲಿನಿಂದ ಪಾಠ ಕಲಿತರಂತೆ
ಫೇಲಿನಿಂದ ಪಾಠ ಕಲಿತರಂತೆ   

ಪಟ್ನಾದ ಹೊಲಗಳಲ್ಲಿ ಅಪ್ಪ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವ ಕೆಲಸದಲ್ಲಿ ಮುಳುಗಿದ್ದಾಗ, ಬಾಲಕ ಇಮ್ತಿಯಾಜ್ ಅಲಿ ನೆಲದ ಘಮಲನ್ನು ಆಘ್ರಾಣಿಸುತ್ತಾ ಕಳೆದುಹೋಗುತ್ತಿದ್ದ. ರೈತರ ಕನಸುಗಳು–ಕಷ್ಟಗಳು, ಕೂಲಿ ಕಾರ್ಮಿಕರ ತಾಕಲಾಟಗಳು ಗೊತ್ತಾದದ್ದೇ ಆಗ. ಅಪ್ಪ ಮನ್ಸೂರ್ ಅಲಿ. ಮಗನೆಂದರೆ ಅವರಿಗೆ ಬಲು ಪ್ರೀತಿ. ಜೆಮ್‌ಷೆಡ್‌ಪುರದಲ್ಲಿ ಹುಟ್ಟಿದ ಮಗ ಪಟ್ನಾದಲ್ಲಿ ಓದಲು ಕಾರಣ–ವರ್ಗಾವಣೆ ಅನಿವಾರ್ಯವಾಗಿದ್ದ ಅವರ ವೃತ್ತಿ.

ಒಂಬತ್ತನೇ ಇಯತ್ತೆಗೆ ಬರುವಷ್ಟರಲ್ಲಿ ಇಮ್ತಿಯಾಜ್‌ ಮತ್ತೆ ಜೆಮ್‌ಷೆಡ್‌ಪುರಕ್ಕೆ ಹೋದ. ಅಲ್ಲಿ ಚಿಕ್ಕಮ್ಮನ ಮನೆಯಲ್ಲಿ ಓದು. ಅವರು ವಾಸವಿದ್ದ ಕರೀಂ ಮ್ಯಾನ್ಷನ್ ಇಡೀ ನಗರಕ್ಕೇ ಹೆಸರುವಾಸಿ. ಅಲ್ಲಿ ಎರಡು ಚಿತ್ರಮಂದಿರಗಳು ಮನೆಗೆ ಹೊಂದಿಕೊಂಡಂತೆಯೇ ಇದ್ದುವು. ರಾತ್ರಿ ಇಮ್ತಿಯಾಜ್ ಅಂಗಾತ ಮಲಗಿದರೆ, ಕಿವಿಮೇಲೆ ಸಿನಿಮಾ ಸದ್ದೇ ಬೀಳುತ್ತಿತ್ತು. ಸಂಭಾಷಣೆಯ ಜೊತೆಗೆ ಶಬ್ದ ಸಂಯೋಜನೆಯನ್ನೂ ಬಾಲಕ ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತಿದ್ದ.

ಬಾಲ್ಯದಲ್ಲಿ ಇಮ್ತಿಯಾಜ್ ಸುಳ್ಳುಪುರುಕ ಆಗಿದ್ದನಂತೆ. ಗಲ್ಲಿ ಆಟದಲ್ಲಿ ತನ್ನದು ಎತ್ತಿದ ಕೈ ಎಂದು ಶಾಲೆಯ ಸ್ನೇಹಿತರಲ್ಲಿ ಬೂಸಿ ಬಿಡುವುದು, ಶಾಲೆಯ ಫುಟ್‌ಬಾಲ್ ತಂಡದಲ್ಲಿ ತಾನು ವಿಖ್ಯಾತ ಎಂದು ಮನೆ ಹತ್ತಿರದ ಗೆಳೆಯರಿಗೆ ಸುಳ್ಳು ಸುರಿಯುವುದು ಮಾಮೂಲಾಗಿತ್ತು. ಮೊದಲೇ ಅಂತರ್ಮುಖಿಯಾಗಿದ್ದ ಹುಡುಗ ಒಂಬತ್ತನೇ ತರಗತಿಯ ಪರೀಕ್ಷೆಯಲ್ಲಿ ಫೇಲಾದ.

ADVERTISEMENT

ಮರುವರ್ಷವೂ ಅದೇ ತರಗತಿಗೆ ಹೋಗುವುದು ಅವಮಾನದ ಸಂಗತಿಯಾಯಿತು. ತಲೆ ಎತ್ತದೆ ನಡೆದು ಸಾಗುವಾಗ, ಹಿಂದೆ ತಾನು ಹೇಳಿದ್ದ ಸುಳ್ಳುಗಳ ಕೇಳಿಸಿಕೊಂಡವರೆಲ್ಲ ಹೀಯಾಳಿಸುತ್ತಿದ್ದರು. ಇಮ್ತಿಯಾಜ್‌ಗೆ ಧೈರ್ಯ ತುಂಬಿದ್ದು ಅಪ್ಪ. ಅವರ ನುಡಿಗಳಿಂದ ಪ್ರೇರಿತನಾದ ಹುಡುಗ ಎಲ್ಲ ಮಕ್ಕಳ ಜೊತೆ ಬೆರೆತ. ಆಟವಾಡಿದ. ಓದಿ, ಪಾಸಾದ. ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಿದ ಹಿಂದೂ ಕಾಲೇಜಿನಲ್ಲಿ ಕಲಿಯುವ ಮಟ್ಟಕ್ಕೆ ಬೆಳೆದ. ಕಾಪಿ ಎಡಿಟರ್ ಆಗಬೇಕೆಂಬ ಬಯಕೆ ಇಟ್ಟುಕೊಂಡ. ರಂಗಪ್ರೀತಿಯನ್ನೂ ಬೆಳೆಸಿಕೊಂಡ.

ಬಾಲಕ ಇಮ್ತಿಯಾಜ್ ಯುವಕನಾದ. ದೃಶ್ಯ ಮಾಧ್ಯಮದಲ್ಲಿ ಸಾಧನೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊತ್ತು ಮುಂಬೈ ಗಲ್ಲಿಗಳಿಗೆ ಎಡತಾಕಿದ. ಝೀ ವಾಹಿನಿಯಲ್ಲಿ ಕ್ಯಾಸೆಟ್‌ಗಳಿಗೆ ಟೇಪ್ ಅಂಟಿಸುವ ಕೆಲಸ ಸಿಕ್ಕಿತು. ತಿಂಗಳಿಗೆ 1500 ರೂಪಾಯಿ ಸಂಬಳ. ಆಮೇಲೆ ‘ಕ್ರೆಸ್ಟ್‌ ಕಮ್ಯೂನಿಕೇಷನ್‌’ನಲ್ಲಿ ಧಾರಾವಾಹಿಗೆ ಸಂಭಾಷಣೆ ಬರೆಯುವ ಅವಕಾಶ ಹುಡುಕಿಕೊಂಡು ಬಂತು.

ದಿನಕ್ಕೆ ಹದಿನೇಳು ತಾಸು ಕಂಪ್ಯೂಟರ್‌ ಮುಂದೆ ಕುಳಿತು ಬರೆಯುವುದೇ ಕಾಯಕ. ಬರೆದೂ ಬರೆದೂ ಸುಸ್ತಾಗಿ ಅಲ್ಲೇ ನೆಲದ ಮೇಲೆ ಮಲಗುತ್ತಿದ್ದ ಇಮ್ತಿಯಾಜ್‌, ಒಂದು ದಿನ ಕಣ್ಣು ಹೊಸಕಿಕೊಳ್ಳುವಷ್ಟರಲ್ಲಿ ಧಾರಾವಾಹಿ ನಿರ್ದೇಶಕನಾಗುವ ಅದೃಷ್ಟ ಖುಲಾಯಿಸಿತು. ‘ಇಮ್ತೆಹಾ’, ‘ನೈನಾ’ ಹಾಗೂ ‘ಕುರುಕ್ಷೇತ್ರ’ ಅವರ ನಿರ್ದೇಶನದ ಹಿಂದಿ ಧಾರಾವಾಹಿಗಳು.

ನಟ ಸನ್ನಿ ದೇವಲ್ ಹೊಸ ಕಥೆಯ ಹುಡುಕಾಟದಲ್ಲಿದ್ದರು. ಅವರ ಕಚೇರಿಗೆ ಹೋಗಿ, ವರ್ಷಗಳಿಂದ ಸಿದ್ಧಪಡಿಸಿದ್ದ ಚಿತ್ರಕಥೆಯನ್ನು ಹೇಳತೊಡಗಿದರು ಇಮ್ತಿಯಾಜ್. ‘ಈ ದೃಶ್ಯ ಮುಗಿದದ್ದೇ ಮಧ್ಯಂತರ’ ಎಂದು ಅವರು ಹೇಳಿದ ಮರುಕ್ಷಣ ಸನ್ನಿ, ‘ನಾನು ಈ ಚಿತ್ರ ನಿರ್ಮಿಸುತ್ತೇನೆ’ ಎಂದರು. ‘ಸೋಚಾ ನಾ ಥಾ’ ಸಿನಿಮಾ ಸಾಕಾರಗೊಂಡದ್ದು ಹಾಗೆ.

ಒಂಬತ್ತನೇ ತರಗತಿಯಲ್ಲಿ ಫೇಲಾದ ಇಮ್ತಿಯಾಜ್ ಈಗ ಶಾರುಖ್ ಖಾನ್, ಅನುಷ್ಕಾ ಶರ್ಮ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೆಜಲ್’ ಸಿನಿಮಾ ನಿರ್ದೇಶಿಸಿದ್ದಾರೆ. ಮುಂದಿನ ತಿಂಗಳ ಮೊದಲ ವಾರ ಈ ಸಿನಿಮಾ ತೆರೆಕಾಣಲಿದೆ. ಇಮ್ತಿಯಾಜ್ ಫೇಲಾಗಿದ್ದ ಕಥೆ ಕೇಳಿದ ಮೇಲೆ ಶಾರುಖ್ ಕೂಡ ತಮ್ಮ ಬದುಕಿನ ಹೋರಾಟದ ದಿನಗಳನ್ನು ನೆನಪಿಸಿಕೊಂಡರಂತೆ. →v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.