ADVERTISEMENT

ಫೌಂಡೇಶನ್ ಅರಿಯಿರಿ

ಚೆಲುವಿನ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST

ನಿಮ್ಮ ಚರ್ಮದ ಪ್ರಕಾರ ಹಾಗೂ ಬಣ್ಣವನ್ನು ಅರಿಯಿರಿ ಮತ್ತು ನಿಮಗೊಪ್ಪುವ ಫೌಂಡೇಶನ್ ಯಾವುದು ಎನ್ನುವುದನ್ನು ತಿಳಿಯಿರಿ. ಅಂದಾಗ ಮಾತ್ರ ಪರಿಪೂರ್ಣ ಸೌಂದರ್ಯ ನಿಮ್ಮದಾಗುತ್ತದೆ...

ಮೇಕಪ್‌ ಮಾಡಿಕೊಂಡ ಮಾತ್ರಕ್ಕೆ ಎಲ್ಲರೂ ಸುಂದರವಾಗಿ ಕಾಣುತ್ತಾರೆ ಎನ್ನುವ ನಂಬಿಕೆ ತಪ್ಪು. ಕೆಲವೊಮ್ಮೆ ಮೇಕಪ್‌ನಿಂದ ನಿಮ್ಮ ನೈಜ ಸೌಂದರ್ಯವೂ ಕುಂದುವ ಸಾಧ್ಯತೆ ಇರುತ್ತದೆ. ಮೇಕಪ್‌ನ ತಪ್ಪು ಆಯ್ಕೆಯಿಂದ ನಿಮ್ಮ ಸೌಂದರ್ಯ ಮತ್ತಷ್ಟು ಕಳೆಗುಂದಬಹುದು. ಆದ್ದರಿಂದ ನಿಮ್ಮ ನಿಲುವು ಹಾಗೂ ಚರ್ಮದ ಪ್ರಕಾರಕ್ಕೆ ಸರಿಹೊಂದುವಂತಹ ಫೌಂಡೇಶನ್ ಆಯ್ಕೆ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ ಸೌಂದರ್ಯ ತಜ್ಞರು.

ಯಾರು ಯಾವ ಫೌಂಡೇಶನ್ ಹಚ್ಚಿದರೆ ಸೂಕ್ತ, ಅದನ್ನು ಬಳಸುವ ವಿಧಾನ ಹೇಗೆ ಎಂಬ ಬಗ್ಗೆ ಮೇಕಪ್ ತಜ್ಞೆ ಅನ್ನಾಲಿಯ ಝಿಮೊಮಿ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ.

ಅವರು ಹೇಳುವ ಪ್ರಕಾರ, ಪ್ರತಿಯೊಬ್ಬರೂ ವಿಭಿನ್ನ ಸ್ಕಿನ್ ಟೋನ್‌ ಹೊಂದಿರುತ್ತಾರೆ. ಪ್ರತಿಯೊಬ್ಬರ ಚರ್ಮದ ಗುಣವೂ ಭಿನ್ನವಾಗಿರುತ್ತದೆ. ತಮ್ಮ ಚರ್ಮದ ಬಗೆ ಯಾವುದು, ಅದಕ್ಕೆ ಯಾವ ರೀತಿಯ ಫೌಂಡೇಶನ್ ಸೂಕ್ತ ಎನ್ನುವುದನ್ನು ತಜ್ಞರಿಂದ ತಿಳಿದುಕೊಂಡು ಅದನ್ನು ಅನುಸರಿಸುವುದರಿಂದ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.
ಭಾರತೀಯರಲ್ಲಿ ಸಾಮಾನ್ಯವಾಗಿ ಬಿಳಿ ಬಣ್ಣ, ಗೋಧಿ ಬಣ್ಣ, ಕಪ್ಪು ಮತ್ತು ಸಾಮಾನ್ಯ ಬಣ್ಣಗಳು ಇರುತ್ತವೆ. ಹಾಗೆಯೇ ಒಣ ಚರ್ಮ, ಎಣ್ಣೆ ಚರ್ಮ ಮತ್ತು ಮಿಶ್ರ ಅಥವಾ ಸಾಮಾನ್ಯ ಚರ್ಮ ಎಂಬ ಪ್ರಕಾರಗಳೂ ಉಂಟು. ಇದರಲ್ಲಿ ನಿಮ್ಮ ಬಣ್ಣ ಹಾಗೂ ಚರ್ಮ ಯಾವ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಮೊದಲು ಕಂಡುಕೊಳ್ಳಬೇಕು ಎನ್ನುವುದು ಅವರ ಸ್ಪಷ್ಟ ಉತ್ತರ.

ಬಿಳಿ, ಕಪ್ಪು ಹಾಗೂ ಸಾಮಾನ್ಯ ಚರ್ಮಗಳಿಗಾಗಿ ಮಾರುಕಟ್ಟೆಯಲ್ಲಿ ವಿಶೇಷ ಫೌಂಡೇಶನ್‌ಗಳು ಸಿಗುತ್ತವೆ. ಅವುಗಳನ್ನು ಒಣ ಚರ್ಮ, ಎಣ್ಣೆ ಚರ್ಮ ಹಾಗೂ ಮಿಶ್ರ ಚರ್ಮ ಎಂದು ವಿಭಾಗಿಸಲಾಗಿದ್ದು, ನಿಮ್ಮ ಚರ್ಮದ ಪ್ರಕಾರಕ್ಕೆ ಹೊಂದುವಂತಹ ಫೌಂಡೇಶನ್‌ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ಅನ್ನಾಲಿಯ.

ಒಣ, ತೆಳುವಾದ ಚರ್ಮ ಹೊಂದಿರುವವರಿಗೆ ಪೌಡರ್‌ ರೂಪದ ಫೌಂಡೇಶನ್‌ ಸೂಕ್ತವಾಗದು. ಅಂಥವರಿಗೆ ಕ್ರೀಮ್ ಆಧಾರಿತ ಅಥವಾ ತೇವಾಂಶ ಭರಿತವಾದ ಒಂದು ದ್ರವ ರೂಪದ ಫೌಂಡೇಶನ್ ಪರಿಪೂರ್ಣ ಲುಕ್ ನೀಡಬಲ್ಲದು. ಇದನ್ನು ಒಂದು  ತೇವವಿರುವ ಸ್ಪಾಂಜ್ ಸಹಾಯದಿಂದ ಬಳಸುವುದು ಉತ್ತಮ. ತೇವವಿರುವ ಎಂದರೆ ನೆನೆದಿರುವ ಸ್ಪಾಂಜ್ ಎಂದು ಅರ್ಥವಲ್ಲ. ಒಣ ಚರ್ಮಕ್ಕೆ ಇದು ಮೃದುವಾದ ಫಿನಿಶ್ ನೀಡುತ್ತದೆ. ಅಲ್ಲದೇ, ಮಿಶ್ರ ಅಥವಾ ಸಾಮಾನ್ಯ ಚರ್ಮದವರೂ ಸಹ ಇದೇ ರೀತಿ ಇಂಥದೇ ಕ್ರೀಮ್ ಆಧಾರಿತ ದ್ರವ ರೂಪದ ಫೌಂಡೇಶನ್ ಹಚ್ಚುವುದು ಸೂಕ್ತ.

ಎಣ್ಣೆ ಚರ್ಮದವರು ಪೌಡರ್ ಫೌಂಡೇಶನ್‌ ಅನ್ನೂ ಬಳಸಬಹುದು. ಅವರು ಬಫ್ಫಿಂಗ್ ಅಥವಾ ಸ್ಟಿಪ್ಲಿಂಗ್ ಬ್ರಷ್ ಸಹಾಯದಿಂದ ಫೌಂಡೇಶನ್‌ ಅನ್ನು ವೃತ್ತಾಕಾರವಾಗಿ ಹಚ್ಚಿಕೊಳ್ಳಬೇಕು. ಕೊನೆಯಲ್ಲಿ ಪೌಡರ್‌ನಿಂದ ಫೌಂಡೇಶನ್‌ ಅನ್ನು ಸೀಲ್ ಮಾಡುವುದನ್ನು ಮರೆಯಬಾರದು ಎನ್ನುವುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT