ADVERTISEMENT

ಬಣ್ಣ ಬದಲಿಸುವ ಅಂಗಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ಬಣ್ಣ ಬದಲಿಸುವ ಅಂಗಿ
ಬಣ್ಣ ಬದಲಿಸುವ ಅಂಗಿ   

ಈಗ ಪರಿಸರಸ್ನೇಹಿ ಉಡುಪಿನ ಜಮಾನ. ಅದೇ ನೆಪದಲ್ಲೇ ವಿನ್ಯಾಸಗೊಂಡಿರುವುದು ಈ ಹೊಸ ಅಂಗಿ ಕೂಡ. ಆದರೆ ಇದು ಪರಿಸರಕ್ಕೆ ಪೂರಕ ಮಾತ್ರವಲ್ಲ, ತನ್ನ ಸುತ್ತಲಿನ ಮಾಲಿನ್ಯದ ಮಟ್ಟವನ್ನೂ ಗುರುತಿಸಿ ಪ್ರತಿಕ್ರಿಯಿಸಬಲ್ಲದು. ಅದೂ ತನ್ನ ಬಣ್ಣದ ಮೂಲಕ.

ವಾಯು ಮಾಲಿನ್ಯ ಅನುಭವಕ್ಕೆ ಬರುತ್ತಿದ್ದಂತೆಯೇ, ತನ್ನ ಬಣ್ಣ ಬದಲಿಸುತ್ತದೆ ಈ ಬಟ್ಟೆ. ಈ ಅಂಗಿ ಹೆಸರು ಏರೊಕ್ರೋಮಿಕ್ಸ್.

ಈ ಉಡುಪಿನ ಹಿಂದಿರುವುದು ವಿನ್ಯಾಸಕರಾದ ನಿಕೋಲಸ್ ಗ್ರೆಗೋರಿ ಬೆಂಟೆಲ್ ಆಲೋಚನೆ. ಜಗತ್ತಿನಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದ್ದು, ಇದನ್ನು ಕಣ್ಣಿಗೆ ಗೋಚರಿಸುವಂತೆ ಮಾಡುವ ಉದ್ದೇಶದಿಂದಲೇ ಈ ಅಂಗಿಯನ್ನು ರೂಪಿಸಿದ್ದಾರೆ.

ADVERTISEMENT

ನಮ್ಮ ಸುತ್ತಲ ವಾತಾವರಣದ ಗುಣಮಟ್ಟವನ್ನು ನಾವೇ ತಿಳಿದುಕೊಂಡರೆ ಮಾಲಿನ್ಯದ ಮಟ್ಟವನ್ನು ನಾವೇ ಕಡಿಮೆ ಮಾಡಲು ಮುಂದಾಗುತ್ತೇವೆ ಎಂಬ ಕಾಳಜಿ ಇದರ ಹಿಂದಿದೆ. ಈ ಉದ್ದನೆ ತೋಳಿನ ಅಂಗಿಯನ್ನು ಸಂಪೂರ್ಣ ಹತ್ತಿಯಿಂದ ರೂಪಿಸಲಾಗಿದೆ. ಇದರಲ್ಲೂ ಮೂರು ರೀತಿಯಿದ್ದು, ಕಪ್ಪು ಬಿಳುಪಿನ ಬಣ್ಣ ಇವುಗಳದ್ದು. ಮಾಲಿನ್ಯದ ಕಣಗಳು, ಕಾರ್ಬನ್ ಮೋನೊಕ್ಸೈಡ್‌ಗೆ ತೆರೆದುಕೊಳ್ಳುತ್ತಿದ್ದಂತೆ ಕಡುಕಪ್ಪು ಬಣ್ಣ ಮಾಸುತ್ತಾ ಒಳಗಿನ ಬಿಳಿ ಬಣ್ಣದ ವಿನ್ಯಾಸ ಗೋಚರಿಸಲು ಆರಂಭಿಸುತ್ತದೆ.

ವಾಯು ಗುಣಮಟ್ಟದ ಸೂಚಕ (ಎಕ್ಯುಐ) ದಲ್ಲಿ 60ಕ್ಕಿಂತ ಹೆಚ್ಚಿದ್ದರೆ, ಏರೋಕ್ರೋಮಿಕ್‌ನ ಡೈ ಪ್ರತಿಕ್ರಿಯಿಸುತ್ತದೆ. ಎಕ್ಯುಐ160ಗೆ ಬಂದಾಗ ಅಂಗಿಯ ಸಂಪೂರ್ಣ ವಿನ್ಯಾಸ ಕಾಣಿಸುತ್ತದೆ.

ಇದರಿಂದ ಅಂಗಿಯನ್ನು ಧರಿಸಿದವರಿಗಷ್ಟೇ ಅಲ್ಲದೇ ಇದನ್ನು ನೋಡುವವರಿಗೂ ನಮ್ಮ ಸುತ್ತಲಿನ ವಾತಾವರಣ ಎಷ್ಟು ಹದಗೆಟ್ಟಿದೆ ಎಂಬುದು ತಿಳಿಯುತ್ತದೆ. ಫ್ಯಾಷನ್ ಮೂಲಕ ಮಾಲಿನ್ಯದ ಕುರಿತು ಜಾಗೃತಿಯೂ ಸಾಧ್ಯವಾಗಲಿದೆ ಎಂದು ಹೇಳಿಕೊಂಡಿದ್ದಾರೆ ನಿಕೋಲಸ್. ಆದರೆ ಇದರ ಬೆಲೆ ದುಬಾರಿಯಾಗಿದ್ದು, ಉಳ್ಳವರು ಮಾತ್ರ ಕೊಳ್ಳಬಹುದಾಗಿರುವುದು ಇದರ ಕೊರತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.