ADVERTISEMENT

ಬೆಳ್ಳಿತೆರೆಯಲ್ಲಿ ಸಚಿನ್ ಕನಸುಗಳ ಕಣಜ

ಗಿರೀಶದೊಡ್ಡಮನಿ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಪತ್ನಿ ಅಂಜಲಿ, ಮಗ ಅರ್ಜುನ್ ಹಾಗೂ ಮಗಳು ಸಾರಾ ಜೊತೆ ಸಚಿನ್‌
ಪತ್ನಿ ಅಂಜಲಿ, ಮಗ ಅರ್ಜುನ್ ಹಾಗೂ ಮಗಳು ಸಾರಾ ಜೊತೆ ಸಚಿನ್‌   
ಹೊಡೆದಾಟದ ಹುಡುಗನೊಬ್ಬ ಕ್ರಿಕೆಟ್‌ ಜಗತ್ತಿನ ದಂತಕಥೆಯಾಗಿ ಬೆಳೆದ ಕಥೆ ‘ಸಚಿನ್; ದ ಮಿಲಿಯನ್ ಡ್ರೀಮ್ಸ್‌’ ಚಲನಚಿತ್ರ. 
 
ಖ್ಯಾತ ಕ್ರೀಡಾಪಟುಗಳ ಬಯೋಪಿಕ್‌ಗಳು  (ಆತ್ಮಕತೆ ಆಧಾರಿತ ಸಿನಿಮಾ) ಸಾಲು ಸಾಲಾಗಿ ಯಶಸ್ವಿಯಾಗುತ್ತಿರುವ ಈ ದಿನಗಳಲ್ಲಿ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಚಿತ್ರವೂ ಬೆಳ್ಳಿ ತೆರೆಗೆ ಲಗ್ಗೆ ಇಡಲಿದೆ. 
 
ಬರೋಬ್ಬರಿ 24 ವರ್ಷಗಳ ಕಾಲ 22 ಗಜಗಳ ಕ್ರಿಕೆಟ್‌ ಪಿಚ್‌ನಲ್ಲಿ  ಕೋಟಿ ಕೋಟಿ ಹೃದಯಗಳಲ್ಲಿ ಕನಸುಗಳನ್ನು ಬಿತ್ತಿದ ಸಚಿನ್ ಸ್ವತಃ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಅವರ ಪತ್ನಿ ಅಂಜಲಿ, ಮಗ ಅರ್ಜುನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಹೇಂದ್ರಸಿಂಗ್ ದೋನಿ ಕೂಡ ತಾರಾಗಣದಲ್ಲಿರುವುದು ವಿಶೇಷ. 
 
ಹದಿನಾರನೇ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮುಂಬೈನ ಸಚಿನ್ ರಮೇಶ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಹಲವಾರು ವಿಶ್ವದಾಖಲೆಗಳು ಇವೆ.
 
ಏಕದಿನ ಕ್ರಿಕೆಟ್‌ನಲ್ಲಿಯೂ ದ್ವಿಶತಕ ಬಾರಿಸಬಹುದು ಎಂದು ಮೊಟ್ಟಮೊದಲಿಗೆ ತೋರಿಸಿಕೊಟ್ಟ ದಾಖಲೆಯೂ ಅವರದ್ದೇ. 2010ರ ಫೆಬ್ರುವರಿ 24ರಂದು ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಅವರು ಅಜೇಯ ದ್ವಿಶತಕ ದಾಖಲಿಸಿದ್ದರು. ಅದಕ್ಕಾಗಿಯೇ ಅವರ ಚಲನಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಸಂಸ್ಥೆಯ ಹೆಸರನ್ನು ‘200 ನಾಟ್‌ಔಟ್ ಪ್ರೊಡಕ್ಷನ್ಸ್‌’ ಎಂದು ಇಡಲಾಗಿದೆ. 
 
ಬಾಲ್ಯದಲ್ಲಿ ತನ್ನ ಸಹಪಾಠಿಗಳೊಂದಿಗೆ ಜಗಳವಾಡುತ್ತಿದ್ದ ಗುಂಗುರು ಕೂದಲಿನ, ತುಂಟ ಕಂಗಳ ಬಾಲಕನ ಕಥೆಯೊಂದಿಗೆ ಚಿತ್ರ ಆರಂಭವಾಗುತ್ತದೆ. ನಂತರ ರಮಾಕಾಂತ್ ಅಚ್ರೇಕರ್ ಅವರ ತರಬೇತಿಯಲ್ಲಿ ತುಂಟ ಹುಡುಗ ಹಠವಾದಿ ಆಟಗಾರನಾಗಿ ಬದಲಾಗುವ  ಪರಿ ಚಿತ್ರದಲ್ಲಿ ದಾಖಲಾಗಿದೆ.
ಶತಕಗಳ ಶತಕದ ದಾಖಲೆವೀರ ಸಚಿನ್ ಜೀವನದ ಮಹತ್ವದ ಘಟನಾವಳಿಗಳನ್ನು ಸಿನಿರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
 
ಮೂರು ವರ್ಷಗಳ ಹಿಂದೆ ಹಾರುವ ಸಿಖ್ ಮಿಲ್ಕಾ ಸಿಂಗ್ ಕುರಿತ ‘ಭಾಗ್ ಮಿಲ್ಕಾ ಭಾಗ್’, ಬಾಕ್ಸಿಂಗ್ ತಾರೆ ಮೇರಿ ಕೋಮ್ ಕುರಿತ ಚಿತ್ರ ಮತ್ತು ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ದೋನಿ ಕುರಿತ ‘ಎಂ.ಎಸ್. ದೋನಿ’ ಚಿತ್ರಗಳು ಸೂಪರ್ ಹಿಟ್ ಆಗಿದ್ದವು.
 
ತಮ್ಮ ಆಟದ ಮೂಲಕ ಕ್ರಿಕೆಟ್‌ಪ್ರೇಮಿಗಳ ಮನ ಗೆದ್ದಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಚಿತ್ರವೂ ಅಭಿಮಾನಿಗಳ ಹೃದಯ ಜಯಿಸುವುದೇ ಎಂಬ ಕುತೂಹಲ ಗರಿಗೆದರಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.