ADVERTISEMENT

ಮಗು ನೀ ಆಟವಾಡು...

ರೋಹಿಣಿ ಮುಂಡಾಜೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಮಗು ನೀ ಆಟವಾಡು...
ಮಗು ನೀ ಆಟವಾಡು...   

ಗುಲಾಬಿ ಬಣ್ಣದ ಹೊಸ ಫ್ರಾಕು, ಕೈಬಳೆ, ಹೇರ್‌ಬ್ಯಾಂಡು, ಅದೇ ಬಣ್ಣದ ಬೂಟು ಹಾಕಿಕೊಂಡು ಆಧುನಿಕ ಗೌರಿಯಾಗಿದ್ದ ಸಂಭ್ರಮ ಮನೆ ಮುಂದಿನ ರಸ್ತೆಯಲ್ಲೇ ಗೆಳೆಯರೊಂದಿಗೆ ಆಟವಾಡುತ್ತಿದ್ದಳು. ‘ಕೆರೆ–ದಡ’ ಎಂದು ಜಿಗಿಯುತ್ತಿದ್ದಾಗ ಫ್ರಾಕ್‌ ಕಾಲಿಗೆ ಸಿಕ್ಕಿಹಾಕಿಕೊಂಡು ಬಣ್ಣದ ರಂಗೋಲಿ ಮೇಲೆ ಬಿದ್ದುಬಿಟ್ಟಳು. ಕೈಲಿದ್ದ ಚೋಕೊಬಾರ್‌ ಕರಗಿ ಫ್ರಾಕ್‌ನಲ್ಲಿ ಹೊಸ ಚಿತ್ತಾರ ಮೂಡಿತು.

ಅಳುತ್ತಾ ಮನೆಗೆ ಬಂದ ಸಂಭ್ರಮಳಿಗೆ ಅವಳಮ್ಮ ಇನ್ನೆರಡು ಏಟು ಕೊಟ್ಟರು. ಹೊಸ ಬಟ್ಟೆ ಹಾಕಿಕೊಂಡು ಆಟವಾಡಲು ಹೋದ ಕಾರಣಕ್ಕೆ, ಅದನ್ನು ಹಾಳು ಮಾಡಿಕೊಂಡಿದ್ದಕ್ಕೆ ಆ ಏಟು.

ತಾನು ಹೊಸ ಬಟ್ಟೆ ಹಾಕಿದ್ದೇನೆ ಎಂಬುದನ್ನು ಊರಿಡೀ ತೋರಿಸುವ ಉಮೇದು ಮಕ್ಕಳಿಗಿರುತ್ತದೆ. ಕಾರಣವೇ ಇಲ್ಲದೆ ಮನೆಯಿಂದ ಹೊರಗೆ ಹೋಗಿ ಯಾರಾದರೂ ನೋಡಲಿ ಎಂದು ಬಯಸುವುದು, ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುವುದು ಅವರ ‘ಹುಡುಗುಬುದ್ಧಿ’.

ADVERTISEMENT

ಸಂಭ್ರಮಳಂತೆ ಪ್ರತಿ ಮಗುವೂ ಹಬ್ಬದ ದಿನ ಮನೆಯಿಂದಾಚೆ ಇರಲು ಬಯಸುತ್ತದೆ. ಹೊಸ ಬಟ್ಟೆ ಕೊಳೆಯಾದರೆ, ಕಲೆಯಾದರೆ ಮತ್ತೆ ಅದನ್ನೆಂದೂ ಹಾಕಲು ಬಾರದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರೆ ಸಂಭ್ರಮ ಮನೆಯೊಳಗೇ ಸಂಭ್ರಮಿಸುತ್ತಿದ್ದಳೇನೊ?

ಚಂದದ ಉಡುಗೆ ತೊಡುಗೆ ಹಾಕಿಕೊಂಡು ಮಕ್ಕಳು ಆಟವಾಡಲು ಹೋಗಬಾರದು ಎಂದು ಅಪ್ಪ ಅಮ್ಮ ಕಡಿವಾಣ ಹಾಕುವುದು ಸರ್ವೇಸಾಮಾನ್ಯ. ಬಟ್ಟೆ ಕೊಳೆಯಾಗುತ್ತದೆ, ಹಾಳಾಗುತ್ತದೆ, ಕೆಸರಿನ ಕಲೆಯಾದರೆ ತೊಳೆಯುವುದು ಕಷ್ಟ... ಹೀಗೆ ಅಮ್ಮ ಕೊಡುವ ಸಮರ್ಥನೆ ಹತ್ತಾರು.

ಆಟ ಎಂಬುದು ಮಕ್ಕಳ ಮನೋ ವಿಕಸನದ ಸಹಜಮಾರ್ಗ. ಹೊಸ ಚಿಂತನೆಗಳು, ಯೋಚನೆಗಳು, ಯೋಜನೆಗಳು, ತಪ್ಪುಗಳನ್ನು ಮಾಡುತ್ತಲೇ ತಿದ್ದಿಕೊಳ್ಳುವ ಪ್ರಯೋಗಶೀಲತೆ ಇವೆಲ್ಲವೂ ಆಟದ ಮೂಲಕವೇ ನಡೆಯುತ್ತವೆ. ಮಕ್ಕಳು ಆಟವಾಡದೇ ಮಂಕಾಗಿದ್ದರೆ ಚಿಂತಿಸಬೇಕೇ ವಿನಾ ಸದಾ ಚಟುವಟಿಕೆಯಿಂದ ಇರಲು ಬಯಸಿದರೆ ಅಲ್ಲ. ಮಕ್ಕಳ ಬೆಳವಣಿಗೆ ಸಹಜವಾಗಿರುವುದರ ಲಕ್ಷಣ ಅದು.

ಬಟ್ಟೆ ಹಾಳಾಗುತ್ತೆ ಎಂದು ಮಕ್ಕಳನ್ನು ಮನೆಯಿಂದ ಹೊರಗೆ ಹೋಗದಂತೆ ತಡೆಯುವುದರ ಬದಲು, ಮಕ್ಕಳ ಆಟಕ್ಕೆ ಪೂರಕವಾದ ಬಟ್ಟೆ ಆಯ್ಕೆ ಮಾಡುವುದು ಜಾಣತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.