ADVERTISEMENT

ಮನಸು ಕದಿವ ಜಾಣೆ...

ಮಂಜುಶ್ರೀ ಎಂ.ಕಡಕೋಳ
Published 5 ಫೆಬ್ರುವರಿ 2017, 19:30 IST
Last Updated 5 ಫೆಬ್ರುವರಿ 2017, 19:30 IST
ಮನಸು ಕದಿವ ಜಾಣೆ...
ಮನಸು ಕದಿವ ಜಾಣೆ...   

ಅವನೆಂದರೆ ಅವಳಿಗೆ ಪಂಚಪ್ರಾಣ. ಉತ್ತಮ ಸ್ನೇಹಿತನೂ ಆಗಿದ್ದ ಅವನು ತನ್ನ ಬಾಳಸಂಗಾತಿಯಾದರೆ ಎಷ್ಟು ಚೆನ್ನ ಎನ್ನುವ ಕನಸು ಕಾಣುತ್ತಿದ್ದಾಕೆಗೆ ಅವನಿಂದ ಸಿಕ್ಕಿದ್ದು ನಿರಾಸೆಯ ಉತ್ತರ.

‘ನೋಡಲು ಅಷ್ಟಾಗಿ ಚೆನ್ನಾಗಿಲ್ಲ. ನೀರಸ ವ್ಯಕ್ತಿತ್ವದ ನೀನು ನನಗೆ ತಕ್ಕವಳಲ್ಲ’ ಎನ್ನುವ ಅವನ ಮಾತು ಮನಕ್ಕೆ ಚೂರಿಯಂತೆ ಇರಿದ ದಿನಗಳಲ್ಲೇ ಆಕೆ ಗಟ್ಟಿ ಮನಸು ಮಾಡಿ, ಕಿರುತೆರೆಯ ಅದೃಷ್ಟ ಪರೀಕ್ಷೆಗಿಳಿದಳು.

ಒಂದೆಡೆ ಅಪ್ಪನ  ಐಎಎಸ್‌ ಕನಸು, ಮತ್ತೊಂದೆಡೆ ಬಣ್ಣದ ಬದುಕಿನ ಆಕರ್ಷಣೆ. ಅಂತಿಮವಾಗಿ ಬಣ್ಣದ ಬದುಕಿಗೆ ಮಣಿದಾಕೆ ಇಂದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು.

ADVERTISEMENT

ಇದು ಕಿರುತೆರೆ ಮತ್ತು ಹಿರಿತೆರೆಯ ಮಿಂಚುತ್ತಿರುವ ಸಾಕ್ಷಿ ತನ್ವರ್ ಎಂಬ ನಟಿಯ  ಫ್ಲ್ಯಾಷ್‌ ಬ್ಯಾಕ್.
‘ದಂಗಲ್’ ಸಿನಿಮಾ ನೋಡಿದವರಿಗೆ ಸಾಕ್ಷಿ ತನ್ವರ್ ಪರಿಚಯ ಇದ್ದೇ ಇರುತ್ತದೆ. ಅಮೀರ್ ಖಾನ್ ಹೆಂಡತಿಯಾಗಿ ಅಭಿನಯಿಸಿರುವ ಸಾಕ್ಷಿ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತ ಮುಖ.  ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾಗಿದ್ದ ‘ಕಹಾನಿ ಘರ್ ಘರ್ ಕೀ’,ಯ ಪಾರ್ವತಿ, ‘ಬಡೇ ಅಚ್ಛೇ ಲಗ್ತೆ ಹೈ’ಯ ಪ್ರಿಯಾ ಪಾತ್ರಧಾರಿಯಾಗಿ ಸಾಕ್ಷಿ ಮಾಡಿದ್ದ ಕಮಾಲ್‌ ಕೂಡಾ ನೆನಪಾಗಬಹುದು.

‘ನೋಡಲು ಅಷ್ಟೇನೂ ಚೆನ್ನಾಗಿಲ್ಲ, ಆದರೆ ಪ್ರತಿಭೆ ಬಗ್ಗೆ ಎರಡು ಮಾತನಾಡುವಂತಿಲ್ಲ’ ಎಂದು ಈಕೆಯ ಬಗ್ಗೆ ಸಿನಿಮಾ ಮಂದಿ ಗುಸುಗುಸು ಮಾತನಾಡಿಕೊಳ್ಳುವುದು ಸುಳ್ಳಲ್ಲ.
ತಮ್ಮ ಪ್ರತಿಭೆ ಮತ್ತು ಅಭಿನಯವಷ್ಟೇ ವಿಶಿಷ್ಟ ವ್ಯಕ್ತಿತ್ವದ ಕಾರಣಕ್ಕಾಗಿ ಸಾಕ್ಷಿ ಪ್ರೇಕ್ಷಕರ ಮನದಲ್ಲಿ ನೆಲೆ ನಿಂತವರು. ಮಧ್ಯಮ ವರ್ಗದ ಹೆಣ್ಣುಮಕ್ಕಳ ಭಾವನೆಗಳನ್ನೂ ಅಭಿನಯದ ಮೂಲಕ ಸುಲಭವಾಗಿ ದಾಟಿಸುವ ಪ್ರತಿಭಾವಂತೆ  ಸಾಕ್ಷಿ. ಅದೇ ಕಾರಣಕ್ಕಾಗಿ ಅವರು ಅಮೀರ್ ಖಾನ್ ಅವರ ತಾಯಿಯ ಮನಸ್ಸನ್ನೂ ಕದ್ದರು.

ಅಂದ ಹಾಗೆ ತಾಯಿಯ ಶಿಫಾರಸಿನ ಮೇರೆಗೆ ನಟ ಅಮೀರ್ ಖಾನ್‌ ತಮ್ಮ ‘ದಂಗಲ್’ ಸಿನಿಮಾಕ್ಕೆ ಸಾಕ್ಷಿಯೇ ಬೇಕೆಂದು ಹಟ ಮಾಡಿ, ಆಯ್ಕೆ ಮಾಡಿದ್ದು ಈಗ ಇತಿಹಾಸ.
ಹಾಗೆ ನೋಡಿದರೆ ಸಾಕ್ಷಿ ಕಿರುತೆರೆ ಪ್ರವೇಶಿಸಿ ದಶಕವೇ ಆಗಿದೆ. ಆಕೆಗೆ ಬಹುದೊಡ್ಡ ಬ್ರೇಕ್ ನೀಡಿದ್ದು ಏಕ್ತಾ ಕಪೂರ್. ‘ಕಹಾನಿ ಘರ್ ಘರ್ ಕೀ’ಯಲ್ಲಿ ಪಾರ್ವತಿಯಾಗಿ ಸಾಕ್ಷಿ ಅಭಿನಯ ಎಷ್ಟೊಂದು ಮೋಡಿ ಮಾಡಿತ್ತೆಂದರೆ, ತಮಗೂ ಪಾರ್ವತಿಯಂಥ ಸೊಸೆ ಇರಬೇಕಿತ್ತು ಎಂದು ಅತ್ತೆಯಂದಿರು ಮಾತಾಡಿಕೊಳ್ಳುತ್ತಿದ್ದರು.

ಇಪ್ಪತ್ತೈದರ ಹರೆಯದ ಸಾಕ್ಷಿ, ಮೂವತ್ತೈದರ ಗೃಹಿಣಿ, ತಾಯಿಯಾಗಿ ನಿರ್ವಹಿಸಿದ್ದ ಪಾತ್ರ ಇಂದಿಗೂ ಪ್ರೇಕ್ಷಕರ ಮನದಲ್ಲಿ ನೆಲೆ ನಿಂತಿದೆ. ಸತತ ಎಂಟು ವರ್ಷಗಳ ಕಾಲ ಪಾರ್ವತಿ ಪಾತ್ರ ನಿರ್ವಹಿಸಿ ಸಾಕ್ಷಿ ದಾಖಲೆಯನ್ನೇ ನಿರ್ಮಿಸಿದರು.
‘ಕಹಾನಿ...’ ನಂತರ ಸಾಕ್ಷಿ ಹೆಸರು ಮತ್ತೊಮ್ಮೆ  ಮುಂಚೂಣಿಗೆ ತಂದದ್ದು ‘ಬಡೇ ಅಚ್ಛೇ ಲಗ್ತೆ ಹೇ’ ಧಾರಾವಾಹಿ. ಇಲ್ಲಿಯೂ ಮೂವತ್ತು ದಾಟಿದ ಪಾತ್ರವನ್ನೇ ಸಾಕ್ಷಿ ಆರಿಸಿಕೊಂಡಿದ್ದರು. ಸಹನಟ ರಾಮ್‌ ಕಪೂರ್ ಜತೆ ಬೆಡ್‌ರೂಂ ದೃಶ್ಯಗಳಲ್ಲಿ ಸಾಕ್ಷಿ ತುಸು ಬಿಸಿಯಾಗಿಯೇ ಕಾಣಿಸಿಕೊಂಡಿದ್ದು ಚರ್ಚೆಗೆ ಕಾರಣವಾಗಿತ್ತು.

ರೇಷ್ಮೆ ಸೀರೆ, ಮೈತುಂಬಾ ಒಡವೆ, ವಿವಾಹೇತರ ಸಂಬಂಧಗಳ ಸುಳಿಯಲ್ಲಿ ಸಿಲುಕಿ ಒದ್ಡಾಡುವ ಪಾತ್ರಗಳನ್ನೇ ಆಯ್ಕೆ ಮಾಡುತ್ತಿದ್ದ ಸಹನಟಿಯರಿಗಿಂತ ಸಾಕ್ಷಿ ಭಿನ್ನವಾಗಿ ನಿಂತಿದ್ದು ತಮ್ಮ ಸರಳ ಸೌಂದರ್ಯ ಮತ್ತು ಪ್ರತಿಭೆಯ ಕಾರಣಕ್ಕಾಗಿ. ಇತರ ನಟಿಯರು ಹಲವು ಟೇಕ್‌ಗಳಲ್ಲಿ ಮುಗಿಸಲಾಗದ ಸೀನ್‌ಗಳನ್ನು ಸಾಕ್ಷಿ ಒಂದೇ ಟೇಕ್‌ನಲ್ಲಿ ಓಕೆ ಮಾಡುತ್ತಿದ್ದ ಕಾರಣ, ಅವರು ಕಿರುತೆರೆ ನಿರ್ದೇಶಕರಿಗೂ ಇಷ್ಟವಾದರು.
1996ರಲ್ಲಿ ‘ದಸ್ತೂರ್’ ಎನ್ನುವ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ಸಾಕ್ಷಿ, ದೂರದರ್ಶನ–1ರಲ್ಲಿ ‘ಅಲ್‌ಬೇಲಾ ಸುರ್ ಮೇಲಾ’ ಕಾರ್ಯಕ್ರಮದ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು.

‘ಓ ರೇ ಮಾನ್ವ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ‘ಕಾಫಿ ಹೌಸ್‌’, ‘ಸಲೂನ್‌’, ‘ಸಿ ಕಂಪೆನಿ’, ‘ಬಾವ್ರಾ ಮನ್’, ‘ಕಹೀ ದೂರ್’, ‘ಆತಂಕ್‌ವಾದಿ ಅಂಕಲ್‌’, ‘ಮೊಹಲ್ಲಾ ಅಸ್ಸಿ’ ಸೇರಿದಂತೆ ಹತ್ತು–ಹಲವು ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ, ಅವು ಜನಪ್ರಿಯವಾಗಲಿಲ್ಲ.
‘ಮೊಹಲ್ಲಾ ಅಸ್ಸಿ’ಯಲ್ಲಿ ಸನ್ನಿ ಡಿಯೋಲ್‌ಗೆ ನಾಯಕಿಯಾದರೂ ಚಿತ್ರ ಬಾಕ್ಸ್‌ ಆಫೀಸಿನಲ್ಲಿ ಸೋತಿತ್ತು. ಹಾಗೆಂದು ಸಾಕ್ಷಿ ಧೃತಿಗೆಡಲಿಲ್ಲ. ಕಿರುತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.  ಮತ್ತೀಗ ಕಿರುತೆರೆಯ ಅದೃಷ್ಟವೇ ಅವರನ್ನು ಬೆಳ್ಳಿತೆರೆಯತ್ತ ಎಳೆದು ತಂದಿರುವುದು ವಿಶೇಷ.

ತಾಯಿಯ ಶಿಫಾರಸಿನ ಮೇರೆಗೆ ‘ದಂಗಲ್‌’ ಸಿನಿಮಾಕ್ಕೆ ಸಾಕ್ಷಿಯನ್ನು ಆಯ್ಕೆ ಮಾಡಿದ ಅಮೀರ್, ಆಕೆಯ ಪ್ರತಿಭೆ, ಅಭಿನಯ ಕುರಿತ ಬದ್ಧತೆಗೆ ಮನಸೋತಿದ್ದಾರೆ.

ಕಿರುತೆರೆ, ಬೆಳ್ಳಿತೆರೆಯಲ್ಲಿ ಇಷ್ಟೆಲ್ಲಾ ಜನಪ್ರಿಯವಾಗಿದ್ದರೂ ಸಾಕ್ಷಿ ತನ್ನ ವೈಯಕ್ತಿಕ ಬದುಕನ್ನು ಎಲ್ಲಿಯೂ ಬಿಚ್ಚಿಡದಿರುವುದು ವಿಶೇಷ.
ಹದಿನೈದು ವರ್ಷದ ಬಣ್ಣದ ಬದುಕಿನಲ್ಲಿ ಸಾಕ್ಷಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಆಗಾಗ, ಪೇಜ್‌3 ಪಾರ್ಟಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಅಭಿಮಾನಿಗಳಿಂದ ಆಕೆ ದೂರವೇ ಉಳಿಯುತ್ತಾರಂತೆ.  ಆದರೆ, ಸಹ ಕಲಾವಿದರ ಜತೆ ಫ್ರೆಂಡ್ಲಿಯಾಗಿ ಇರುವ ಸಾಕ್ಷಿಯ ಸರಳ ವ್ಯಕ್ತಿತ್ವದ ಬಗ್ಗೆ ಬಹುತೇಕರು ಮೆಚ್ಚುಗೆ ಸೂಚಿಸುವುದು ವಿಶೇಷ.

ಸಾಕ್ಷಿ ಅದ್ಭುತ ನಟಿ. ಸಾಕ್ಷಿಯ ಎದುರು ನಾನೂ ಮಂಕಾಗಿದ್ದೇನೆ. ನಾನು ಏಳೆಂಟು ಟೇಕ್‌ ತೆಗೆದುಕೊಳ್ಳುತ್ತಿದ್ದ ದೃಶ್ಯಗಳನ್ನು ಸಾಕ್ಷಿ ಒಂದೇ ಟೇಕ್‌ಗೆ ಮುಗಿಸಿದ್ದಾಳೆ.
ಅಮೀರ್ ಖಾನ್ ,
ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.