ADVERTISEMENT

ಮನೀಷ್ ಮಾನಸ

ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮೊದಲ ಶತಕ ಗಳಿಸಿದ ಆಟಗಾರ

ವಿಶಾಖ ಎನ್.
Published 13 ಮಾರ್ಚ್ 2017, 19:30 IST
Last Updated 13 ಮಾರ್ಚ್ 2017, 19:30 IST
ಮನೀಷ್ ಮಾನಸ
ಮನೀಷ್ ಮಾನಸ   
ಕೆಲವೇ ವರ್ಷಗಳ ಹಿಂದಿನ ಮಾತು. ಕೋಲ್ಕತ್ತ ನೈಟ್ ರೈಡರ್ಸ್ ಐಪಿಎಲ್ ಕ್ರಿಕೆಟ್ ತಂಡದ ನೆಟ್ಸ್ ಅಭ್ಯಾಸ ನಡೆಯುತ್ತಿತ್ತು. ಗಾರ್ಡ್ ತೆಗೆದುಕೊಂಡು ನಿಂತ ಹುಡುಗ ಕರ್ನಾಟಕದ ಮನೀಷ್ ಪಾಂಡೆ,  ಬೌಲಿಂಗ್ ಮಾಡಲಿರುವವರು ಯಾರೆಂದು ನೋಡಿದ್ದೇ ಹುಬ್ಬು ಹಾರಿಸಿದರು.

ಪಾಕಿಸ್ತಾನದ ವಸೀಂ ಅಕ್ರಂ ಚೆಂಡನ್ನು ಕೈಗೆತ್ತಿಕೊಂಡಿದ್ದರು. ಬಾಲ್ಯದಲ್ಲಿ ರಾಹುಲ್ ದ್ರಾವಿಡ್ ಬ್ಯಾಟಿಂಗ್ ವೈಖರಿಯನ್ನು ಶ್ರದ್ಧೆಯಿಂದ ಗಮನಿಸಿದ್ದ ಮನೀಷ್‌ಗೆ ಅಕ್ರಂ ಎಸೆತಗಳನ್ನು ಎದುರಿಸುವ ಭಾಗ್ಯ ಬಯಸದೇ ಬಂದಿತ್ತು. 
 
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮೊದಲ ಶತಕ ಗಳಿಸಿದ ಆಟಗಾರ ಎಂಬ ಗೌರವ ಸಂದಾಗ ಆಕಾಶಕ್ಕೆ ಮೂರೇ ಗೇಣು ಎಂಬ ಭಾವದಲ್ಲಿದ್ದರು ಮನೀಷ್. ಎಂ.ಜಿ. ರಸ್ತೆಯ ಕಾಫಿ ಬಾರ್‌ನಲ್ಲಿ ಅವರು ಕುಳಿತಾಗ ಸುತ್ತುವರಿದ ಲಲನೆಯರ ಸಂಖ್ಯೆ ದೊಡ್ಡದು.

ಆ ಸಂದರ್ಭದಲ್ಲಿ ಕೆಲವು ಪಂದ್ಯಗಳಲ್ಲಿ ಅವರು ಲಯ ತಪ್ಪಿದಂತೆ ಆಡಿದ್ದೂ ಇದೆ. ಜನಪ್ರಿಯತೆಯ ಲೋಲುಪತೆಯಲ್ಲಿ ಹುಡುಗ ಚಂಚಲಚಿತ್ತನಾಗಿದ್ದಾನೆ ಎಂಬ ಟೀಕೆಯನ್ನೂ ಆಗ ಅವರು ಎದುರಿಸಬೇಕಾಯಿತು.  
 
2013-14 ಹಾಗೂ 2014-15ರಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆದ್ದಿತಲ್ಲ; ಆಗ ಮನೀಷ್ ಆಟದ ಕಾಣ್ಕೆಯನ್ನು ಮರೆಯಲಾಗದು. ಟ್ವೆಂಟಿ-20 ಕ್ರಿಕೆಟ್‌ನ ‘ವೇಗಕ್ಕೆ ತಕ್ಕ ಹೊಡೆತಗಳ ಉತ್ಪಾದಕ’ ಎನಿಸಿಕೊಂಡ ಮನೀಷ್, 2015ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಹೆಚ್ಚು ರನ್ ಗಳಿಸಿ ಗಮನ ಸೆಳೆದರು.
 
ಜಿಂಬಾಬ್ವೆ ಪ್ರವಾಸದಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡುವ ತಂಡಕ್ಕೆ ಅದೇ ವರ್ಷ ಆಯ್ಕೆಯಾದದ್ದು. ಅಷ್ಟು ಹೊತ್ತಿಗೆ ಮನೀಷ್ ಐಪಿಎಲ್‌ನಲ್ಲಿ ಮೊದಲ ಶತಕ ದಾಖಲಿಸಿ ಆರು ವರ್ಷಗಳು ಸರಿದದ್ದೇ ಗೊತ್ತಾಗಲಿಲ್ಲ.
 
ಹಾಗೆ ನೋಡಿದರೆ ಕರ್ನಾಟಕದ ನಾಲ್ವರು ದಿಗ್ಗಜ ಬ್ಯಾಟ್ಸ್‌ಮನ್‌ಗಳು ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಲೇ ಇದ್ದರು. ರಾಬಿನ್ ಉತ್ತಪ್ಪ ಅಸ್ಥಿರ ಪ್ರದರ್ಶನದ ನಡುವೆಯೂ ಕೆಲವು ಮರೆಯಲಾಗದ ಇನಿಂಗ್ಸ್ ಕಟ್ಟಿಕೊಟ್ಟವರು.

ಕರುಣ್ ನಾಯರ್ ಹಾಗೂ ಕೆ.ಎಲ್. ರಾಹುಲ್ ಈಗ ಭಾರತ ತಂಡದ ಪರವಾಗಿ ಆಡಿ ಹೆಜ್ಜೆಗುರುತು ಮೂಡಿಸಿದ್ದಾರೆ. ಈ ಎಲ್ಲ ಬ್ಯಾಟ್ಸ್‌ಮನ್‌ಗಳೂ ಪರಸ್ಪರ ಮಾತನಾಡಿಕೊಳ್ಳುತ್ತ, ತಂತಮ್ಮ ಬ್ಯಾಟಿಂಗ್ ತಂತ್ರಗಳನ್ನು ಉತ್ತಮ ಪಡಿಸಿಕೊಂಡವರೇ. 
 
‘ಐಪಿಎಲ್ ಶತಕ ನನ್ನ ಪಾಲಿಗೆ ವರ ಎಂದು ಅನೇಕರ ಬಳಿ ಹೇಳಿದ್ದೆ. ಆದರೆ, ಹಾಗೆಂದ ಮಾತ್ರಕ್ಕೆ ಟೆಸ್ಟ್ ಕ್ರಿಕೆಟ್ ಆಡಲು ನಾನು ನಾಲಾಯಕ್ಕು ಎಂದು ಕೆಲವರು ಟೀಕಿಸಿದ್ದನ್ನು ಸಹಿಸಿಕೊಳ್ಳಲು ಆಗಲಿಲ್ಲ. ದಾಳಿಕೋರ ಮನಸ್ಥಿತಿಯಿಂದ ಆಡಬಲ್ಲ ಬ್ಯಾಟ್ಸ್‌ಮನ್‌ ತಾಳ್ಮೆಯಿಂದಲೂ ಇನಿಂಗ್ಸ್ ಕಟ್ಟುವುದು ಸಾಧ್ಯವಿದೆ’ ಎಂದು ಮನೀಷ್ ಹಿಂದೊಮ್ಮೆ ಬೇಸರದಿಂದ ಹೇಳಿಕೊಂಡಿದ್ದರು.

ದೇಸಿ ಕ್ರಿಕೆಟ್‌ನಲ್ಲಿ ನಿರ್ದಿಷ್ಟ ಲಯದಲ್ಲಿ ಅವರು ಐದಾರು ಪಂದ್ಯ ಆಡಿದಾಗಲೂ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಅದೃಷ್ಟ ಒಲಿದಿರಲಿಲ್ಲ. ಆಗ ಅವರ ಬಾಯಿಂದ ಸಹಜವಾಗಿಯೇ ಆ ಮಾತು ಹೊರಟಿತ್ತು. 
 
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ಗೂ ಮನೀಷ್‌ಗೂ ಮರೆಯಲಾಗದ ನಂಟಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್‌ನಲ್ಲಿ ತಂಡವನ್ನು ಮನೀಷ್ ಮುನ್ನಡೆಸುತ್ತಿದ್ದಾರೆ. 
 
ಅಕ್ರಂ ಎಸೆತಗಳನ್ನು ಎದುರಿಸಿದ ಪುಳಕ, ದ್ರಾವಿಡ್ ಒಡನಾಟದಿಂದ ಕಲಿತ ಪಾಠ, ಜಾಕ್ ಕಾಲಿಸ್ ಹೇಳಿಕೊಟ್ಟ ಬ್ಯಾಟಿಂಗ್ ತಂತ್ರಗಳು ಎಲ್ಲವೂ ಈಗ ಮನೀಷ್ ತಲೆಯಲ್ಲಿ ಓಡಾಡುತ್ತಿರಬಹುದು.  
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.