ADVERTISEMENT

‘ಮರ ಸುತ್ತುವ ಪಾತ್ರ ಒಲ್ಲೆ’

ಮಂಜುನಾಥ ರಾಠೋಡ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ   

‘ಮರ ಸುತ್ತುವ, ಹೀರೊಗಳ ಬೆನ್ನ ಹಿಂದೆ ನಿಲ್ಲುವ ಪಾತ್ರಗಳು ನನಗೆ ರೇಜಿಗೆ ಹುಟ್ಟಿಸುತ್ತವೆ...’ ಇದು ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರ ಮಾತು.

ತಮ್ಮದೇ ಪ್ರೊಡಕ್ಷನ್‌ನಿಂದ ತಯಾರಾಗುತ್ತಿರುವ ‘ಫಿಲ್ಲೌರಿ’ ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಅನುಷ್ಕಾ ನೀಡಿದ ಈ ಹೇಳಿಕೆ ಬಾಲಿವುಡ್‌ ನಟಿಯರ ಬದಲಾದ ಆಲೋಚನೆಗಳಿಗೆ ಭಾಷ್ಯ ಬರೆದಂತೆ ಇತ್ತು.

ನಿರ್ಮಾಪಕಿಯಾಗಿ ಅನುಷ್ಕಾಗೆ ಇದು ಎರಡನೇ ಚಿತ್ರ. ಭಿನ್ನ ಕಥಾ ಹಂದರ ಹೊಂದಿದ್ದ ‘ಎನ್ಎಚ್10’ ಮಾದರಿಯಲ್ಲಿ ಇಲ್ಲಿಯೂ ಅವರು ಜನಪ್ರಿಯತೆಯ ಪರಿಧಿಯ ಹೊರಗಿನ ಕಥೆಯನ್ನು ಆರಿಸಿಕೊಂಡಿದ್ದಾರೆ.

ಕೆಟ್ಟ ನಕ್ಷತ್ರದಲ್ಲಿ ಹುಟ್ಟಿದ ಯುವಕನೊಬ್ಬ ದೋಷ ಕಳೆದುಕೊಳ್ಳಲು ಶಶಿ ಎಂಬ ಆತ್ಮ ಸೇರಿಕೊಂಡಿರುವ ಮರವನ್ನು ಮದುವೆಯಾಗುತ್ತಾನೆ. ಮದುವೆಯಾದ ಹುಡುಗನನ್ನೇ ಗಂಡನೆಂದು ನಂಬುವ ಶಶಿ ಆತನ ಹಿಂದೆ ಬೀಳುತ್ತಾಳೆ.

ಸುಂದರ ದೆವ್ವ ಶಶಿ ಮತ್ತು ಹುಡುಗಾಟದ ಹುಡುಗನ ನಡುವಣ ನಡೆಯುವ ಹಲವು ತಮಾಷೆ ಸನ್ನಿವೇಶಗಳು ಚಿತ್ರದಲ್ಲಿರಲಿವೆ. ಜೊತೆಗೆ ಶಶಿಯ ಹಿಂದಿನ ಜನ್ಮದ ಪ್ರೇಮಕತೆಯೂ ಚಿತ್ರದ ಮುಖ್ಯ ಅಂಶವೆಂಬಂತೆ ಬಿಂಬಿತವಾಗಲಿದೆ.

‘ಜನಪದ ಗೀತಕಾರ ಮತ್ತು ಶಶಿಯ ನಡುವೆ ನಡೆಯುವ ಪ್ರೇಮಕಥೆ ಹೀರ್ ರಾಂಜಾ ಪ್ರೇಮ ಕಥೆಯನ್ನು ನೆನಪಿಸುತ್ತದೆ’ ಎನ್ನುತ್ತಾರೆ ಚಿತ್ರದಲ್ಲಿ ಶಶಿ ಪಾತ್ರಧಾರಿಯಾಗಿರುವ ಅನುಷ್ಕಾ.

ನಟನೆಯಷ್ಟೇ ಗಂಭೀರವಾಗಿ ನಿರ್ಮಾಪಕಿಯ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ ಅನುಷ್ಕಾ ಶರ್ಮಾ, ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವಾಗಲೂ ಅಲ್ಲಿನ ಪರಿಸ್ಥಿತಿಗಳನ್ನು ಗಮನಿಸುತ್ತಾ ನಿರ್ಮಾಣದ ಪಟ್ಟುಗಳನ್ನು ಕಲಿಯುತ್ತಿರುತ್ತಾರಂತೆ.

‘ನಾನು ಸಿನಿಮಾದ ಗಂಭೀರ ವಿದ್ಯಾರ್ಥಿ’ ಎನ್ನುವ ಅನುಷ್ಕಾ, ಇದರಿಂದಾಗಿಯೇ ಬಾಲಿವುಡ್‌ನ ಉಳಿದ ನಟಿಯರಿಗಿಂತ ಭಿನ್ನ ಎನಿಸಿಕೊಳ್ಳುತ್ತಾರೆ.

ವಯಸ್ಸು 30 ದಾಟುವವರೆಗೆ ಮುಖ್ಯ ಪಾತ್ರ ನಂತರ ಅಕ್ಕ, ಮಾಜಿ ಪ್ರೇಯಸಿಯ ಪಾತ್ರಗಳನ್ನು ಮಾಡಿ ನಂತರ ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿಯುವುದು ಅಥವಾ ಯಾವುದಾದರೂ ರಿಯಾಲಿಟಿ ಶೋಗಳ ಜಡ್ಜ್‌ಗಳಾಗುವುದು, ಸಿನಿಮಾ ಹಿನ್ನಲೆಯ ಗಂಡ ಸಿಕ್ಕರೆ ನಿರ್ಮಾಪಕಿಯಾಗುವುದು ಬಾಲಿವುಡ್‌ನಲ್ಲಿ ಹೀರೊಯಿನ್‌ಗಳು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ.

ಆದರೆ ಅನುಷ್ಕಾ ಇದಕ್ಕೆ ವ್ಯತಿರಿಕ್ತ. ಬಾಲಿವುಡ್‌ನ ಪ್ರಮುಖ ನಾಯಕಿ ನಟಿಯಾಗಿ ಬೇಡಿಕೆಯುಳ್ಳ ಸಮಯದಲ್ಲಿಯೇ ಇವರು ನಿರ್ಮಾಣದತ್ತ ಹೊರಳಿದ್ದಾರೆ. ಮೊದಲ ಬಾರಿಗೆ ಈ ನಟಿ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದಾಗ ‘ಅನುಷ್ಕಾ ತನ್ನ ನಿವೃತ್ತಿಗೆ ಸಜ್ಜಾಗುತ್ತಿದ್ದಾರೆ’ ಎಂದು ಕುಹಕವಾಡಿದ್ದವರಿಗೆ ಸಿನಿಮಾ ಮೂಲಕವೇ ಉತ್ತರಿಸುತ್ತಿದ್ದಾರೆ ಅನುಷ್ಕಾ.

ನಿರ್ಮಾಣ ಸಂಸ್ಥೆ ‘ಕ್ಲೀನ್ ಸ್ಲೇಟ್‌’ ಮೂಲಕ ನಿರ್ಮಿಸಿದ ಮೊದಲ ಚಿತ್ರ ‘ಎನ್‌ಎಚ್10’ ಮಹಿಳಾ ಪ್ರಧಾನ ಚಿತ್ರವಾಗಿತ್ತು. ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ‘ಕೇವಲ ಸುಂದರವಾಗಿ ಕಾಣುವ, ಹಾಡುಗಳಿಗೆ ಕೈ ಕಾಲು ಅಲ್ಲಾಡಿಸುವ ಪಾತ್ರಗಳು ನನಗೆ ವಾಕರಿಕೆ ತರಿಸುತ್ತವೆ. ನನ್ನ ಪಾತ್ರ ಸಿನಿಮಾದಲ್ಲಿ ಗಟ್ಟಿ ನೆಲೆ ಹೊಂದಿದ್ದರೆ ಮಾತ್ರವೇ ನಟಿಸುತ್ತೇನೆ’ ಎನ್ನುವ ದೃಢನಿಲುವು ಅನುಷ್ಕಾದು.

ಸಿನಿಮಾ ನಿರ್ಮಾಣದಲ್ಲೂ ಇದೇ ನಿಯಮಗಳನ್ನು ಅನ್ವಯಿಸುತ್ತಾರಂತೆ ಅನುಷ್ಕಾ. ಪೂರ್ಣ ಕಲಾತ್ಮಕವೂ ಅಲ್ಲದ ಜನಪ್ರಿಯ ಸಿದ್ಧ ಮಾದರಿಯೂ ಅಲ್ಲದ ಮಧ್ಯದ ಮಾದರಿ ಸಿನಿಮಾಗಳು ಅವರ ಆಯ್ಕೆಯಂತೆ.

ಸಾಮಾನ್ಯ ಜನರ ಜೀವನದ ಎಳೆಯನ್ನೇ ಆಯ್ದು ಸಿನಿಮಾ ಮಾಡುವುದು ನನಗೆ ಇಷ್ಟ ನನ್ನಂತೆಯೆ ಆಲೋಚಿಸುವ ನನ್ನ ಸೋದರ ಕರ್ಣೇಶ್‌ ಶರ್ಮಾ ನಿರ್ಮಾಣದಲ್ಲಿ ನನ್ನ ಪಾರ್ಟನರ್‌ ಎನ್ನುತ್ತಾರೆ ಅನುಷ್ಕಾ.

ಅನುಷ್ಕಾ ಅವರ ಬಹು ನಿರೀಕ್ಷಿತ ‘ಪಿಲ್ಲೌರಿ’ ಚಿತ್ರದ ಟ್ರೇಲರ್‌ ಅನ್ನು ಈಗಾಗಲೇ 75 ಲಕ್ಷ ಮಂದಿ ವೀಕ್ಷಿಸಿದ್ದಾರೆ ಮಾರ್ಚ್‌ 24ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಮರದೊಂದಿಗೆ ಮದುವೆಯಾಗುವ ಹುಡುಗಾಟದ ಹುಡುಗನಾಗಿ ‘ಲೈಫ್‌ ಆಫ್‌ ಪೈ’ ನ ಮುಖ್ಯ ಪಾತ್ರಧಾರಿ ಸೂರಜ್ ಪಟೇಲ್ ನಟಿಸಿದ್ದಾರೆ. ಜನಪದ ಗೀತಕಾರನಾಗಿ ದಿಲ್‌ಜೀತ್‌ ದೊಸಾಂಜ್‌ ನಟಿಸಿದ್ದಾರೆ. ನಿರ್ದೇಶನ ಅನ್ಶಾಯ್ ಲಾಲ್‌ ಅವರದ್ದು.

‘ಫಿಲ್ಲೌರಿ’ ಟ್ರೇಲರ್‌ ನೋಡಲು ಲಿಂಕ್‌:  http://bit.ly/2kEbn2T

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT