ADVERTISEMENT

ಮಾತು ಮರೆಯಾಯ್ತು, ಮೊಬೈಲೇ ಬೇಕಾಯ್ತು...

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಮಾತು ಮರೆಯಾಯ್ತು, ಮೊಬೈಲೇ ಬೇಕಾಯ್ತು...
ಮಾತು ಮರೆಯಾಯ್ತು, ಮೊಬೈಲೇ ಬೇಕಾಯ್ತು...   

ಅಜ್ಜಿಯನ್ನು ನೋಡಲೆಂದೇ ತುಂಬಾ ದೂರದಿಂದ ಮೊಮ್ಮಕ್ಕಳೆಲ್ಲಾ ಸೇರಿದ್ದಾರೆ. ಹಾಲ್‌ನಲ್ಲಿ ಎಲ್ಲರೂ ಒಟ್ಟಿಗೇ ಕೂತಿದ್ದಾರೆ. ಆದರೆ ಮಾತಿಲ್ಲ, ಕಥೆಯಿಲ್ಲ. ಎಲ್ಲರೂ ಗಪ್‌ಚುಪ್. ಹಾಗೆಂದು ಅವರೆಲ್ಲ ಸುಮ್ಮನೆ ಕೂತಿದ್ದಾರೆ ಎಂದು ತಿಳಿದಿರೋ ನಿಮ್ಮ ಊಹೆ ತಪ್ಪು. ಅವರು ಮಾತನಾಡುತ್ತಿರುವುದು ಮೊಬೈಲ್ ಜೊತೆ ಮಾತ್ರ. ಸುಮ್ಮಸುಮ್ಮನೆ ನಗುತ್ತಲೇ ಮೊಬೈಲ್‌ ಮೇಲೆ ಬೆರಳು ಒತ್ತುತ್ತಾ ಅದರಲ್ಲೇ ಮುಳುಗಿ ಹೋಗಿರುವ ಮೊಮ್ಮಕ್ಕಳನ್ನು ಕಂಡು ಅಜ್ಜಿಗೆ ಹೇಗಾಗಿರಬೇಡ? ಎಷ್ಟೋ ವರ್ಷಗಳ ನಂತರ ತನ್ನ ಕ್ಷೇಮಸಮಾಚಾರ ಕೇಳುವರು ಎಂಬ ನಿರೀಕ್ಷೆಯಲ್ಲಿರುವ ಅಜ್ಜಿಗೆ ಎಷ್ಟು ಕೋಪ ಬಂದಿರಬೇಡ?

ಇದೇ ಚಿತ್ರಣ ಹೊತ್ತ ಚಿತ್ರವೊಂದು ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು. ಸ್ಮಾರ್ಟ್‌ಫೋನ್‌ ಪ್ರಪಂಚದ ಒಳಗೆ ಹೋಗುತ್ತಲೇ ತಮ್ಮ ಸುತ್ತಲಿನ ಪ್ರಪಂಚವನ್ನೇ ಮರೆಯುತ್ತಿರುವ ಯುವ ಜನಾಂಗದ ಮನಸ್ಥಿತಿಯನ್ನು ತಿಳಿಸುವ ಈ ಚಿತ್ರ ಫೋನಿನ ಗೀಳಿಗೆ ಬಿದ್ದವರ ‘ಫಬ್ಬಿಂಗ್’ ಅಭ್ಯಾಸವನ್ನೂ ತೋರುತ್ತಿತ್ತು.

ಅಂದ ಹಾಗೆ ಈ ಫಬ್ಬಿಂಗ್ ಅಂದರೆ ಏನು?

ADVERTISEMENT

ಸಂಬಂಧಗಳ ನಡುವೆ ಅಂತರವನ್ನು ಸೃಷ್ಟಿಸಿರುವ ವಿಪರೀತ ಸ್ಮಾರ್ಟ್‌ಫೋನ್‌ ಬಳಕೆ ಗೀಳಿಗೆ ಫಬ್ಬಿಂಗ್‌ ಎಂದು ಹೆಸರಿಡಲಾಗಿದೆ. ಈ ಕುರಿತಂತೆ ಹಲವು ಅಧ್ಯಯನಗಳೂ ನಡೆಯುತ್ತಿವೆ.

ಅಧ್ಯಯನದ ಪ್ರಕಾರ ‘ಫಬ್ಬಿಂಗ್‌’ (phubbing) ಹಾವಳಿ ವಿಪರೀತ ಎನ್ನುವಷ್ಟು ಆಗಿದೆಯಂತೆ. ಇದು ದಾಂಪತ್ಯದ ಬಿರುಕಿಗೂ ಕಾರಣವಾಗಿದೆ.

ಫೋನ್‌ ಮತ್ತು ಸ್ನಬ್ಬಿಂಗ್‌ ಸಮೀಕರಣವೇ ಫಬ್ಬಿಂಗ್‌. ಬಿಡುವು ಸಿಕ್ಕಾಗ ಮನುಷ್ಯರೊಂದಿಗೆ ವ್ಯವಹರಿಸದೇ ಫೋನಿನಲ್ಲಿಯೇ ಮುಳುಗಿರುವ, ಎದುರಿನವರು ಮಾತನಾಡುತ್ತಿದ್ದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳದ ವರ್ತನೆಯ ಫಲಿತಾಂಶವಿದು.

ಕೈಯಲ್ಲಿ ಮೊಬೈಲ್‌ ಇದ್ದರೆ ಊಟ, ತಿಂಡಿಯನ್ನು ಮರೆತುಬಿಡುವ ಕಾಲವಿದು. ಇನ್ನು ಸಂಬಂಧಗಳಿಗೆ ಬೆಲೆ ಎಲ್ಲಿ. ಈ ಸ್ಮಾರ್ಟ್‌ಫೋನ್‌ ಟ್ರೆಂಡ್‌ ಸಂಬಂಧಗಳ ಬಿರುಕಿಗೂ ಕಾರಣವಾಗುತ್ತಿದೆ ಎನ್ನುತ್ತಿವೆ ಸಂಶೋಧನೆಗಳು. ಇದೊಂದು ಟ್ರೆಂಡ್‌ ಆಗಿಬಿಟ್ಟಿದ್ದೆ. ಫಬ್ಬಿಂಗ್‌ ಗೀಳಿಗೆ ಒಳಗಾದವರಿಗೆ ಮನುಷ್ಯ ಸಂಬಂಧಕ್ಕಿಂತ ಫೋನಿನ ಸಾಂಗತ್ಯವೇ ಹಿತ.

ಬೆಳಿಗ್ಗೆ ಎದ್ದ ಕೂಡಲೇ, ರಾತ್ರಿ ಮಲಗುವ ಮುನ್ನ ಮೊಬೈಲ್‌ ನೋಡದಿದ್ದರೆ ಏನೋ ಕಳೆದುಕೊಂಡಂತಾಗುವುದು ಸಾಮಾನ್ಯ. ಇದು ಒಬ್ಬಿಬ್ಬರ ಕಥೆಯಲ್ಲ. ಹಲವರು ಹೀಗೆಯೇ ಇರುವುದು. ಒಬ್ಬರ ಮಾತನ್ನು ವ್ಯವಧಾನದಿಂದ ಕೇಳಿಸಿಕೊಳ್ಳುವುದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಸಂಗಾತಿಯ ಅಗತ್ಯಕ್ಕೆ ಗಮನ ನೀಡುವುದರಿಂದ ಬಾಂಧವ್ಯ ವೃದ್ಧಿಸುತ್ತದೆ. ಆದರೆ ‘ಫಬ್ಬಿಂಗ್‌’ ಹಾವಳಿಯಿಂದಾಗಿ ಬಾಂಧವ್ಯಗಳ ನಡುವೆ ಬಿರುಕು ಮೂಡುತ್ತಿದೆ.

ಕೆಲವರಂತೂ ವಿಪರೀತ ಎನ್ನುವಷ್ಟು ಮೊಬೈಲ್‌ನಲ್ಲಿ ಕಳೆದುಹೋಗಿರುತ್ತಾರೆ. ಇದರಿಂದ ಎದುರಿಗಿರುವವರಿಗೆ ಬೇಸರವಾಗುತ್ತದೆ ಎಂಬ ಅರಿವೂ ಅವರಿಗಿರುವುದಿಲ್ಲ. ನಿಮ್ಮ ಸಂಗಾತಿಗೆ ಯಾವುದೋ ವಿಷಯವನ್ನು ಆಸಕ್ತಿಯಿಂದ ಒಂದೇ ಉಸಿರಿನಲ್ಲಿ ನೀವು ಹೇಳುತ್ತಿರುವಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ನಿಮಗೆ ಕೋಪ ಬರದಿರಲು ಸಾಧ್ಯವೇ. ಹರಟುತ್ತಾ ಸಮಯ ಕಳೆಯಬೇಕು ಎಂದು ಗೆಳತಿಯನ್ನು ಭೇಟಿ ಮಾಡಿದಾಗ, ಆಕೆಯೋ/ ಅವನೋ ತಮ್ಮಷ್ಟಕ್ಕೆ ಮೊಬೈಲ್‌ ಮೇಲೆ ಬೆರಳಾಡಿಸುತ್ತಿದ್ದರೆ ಹಿಂಸೆ ಎನಿಸುವುದಿಲ್ಲವೇ? ಇವೆಲ್ಲದರ ಪರಿಣಾಮ ಸಂಬಂಧಗಳ ಒಡಕಿಗೂ ಕಾರಣವಾಗುತ್ತಿದೆ.

**

‘ಫಬ್ಬಿಂಗ್‌’ ನಿಯಂತ್ರಣಕ್ಕೆ ಹೀಗೆ ಮಾಡಿ

ಮಹತ್ವದ್ದು ಎನಿಸುವಂತಹ ನೋಟಿಫಿಕೇಷನ್‌ ಮಾತ್ರವೇ ಬರುವಂತೆ ಮಾಡಿ. ಅಗತ್ಯವಿಲ್ಲದ ನೋಟಿಫಿಕೇಷನ್‌ ಅನ್ನು ಮ್ಯೂಟ್‌ ಮಾಡಿ. ಇದರಿಂದ ಮೊಬೈಲ್‌ ಶಬ್ದ ಮಾಡಿದಾಗಲೆಲ್ಲ ಮೊಬೈಲ್‌ ನೋಡಬೇಕೆನಿಸುವುದು ತಪ್ಪುತ್ತದೆ.

ಮನೆಯವರೊಂದಿಗೆ ಊಟ ಮಾಡುವಾಗ ಫೋನ್‌ ಮುಟ್ಟುವುದೇ ಇಲ್ಲ ಎನ್ನುವ ಶಪಥ ಮಾಡಿ.

ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವ ಅಭ್ಯಾಸವಿದ್ದರೆ ಅದು ಬಿಡಿ. ಮನೆಯವರಿಗೆ ‘ಗುಡ್‌ ಮಾರ್ನಿಂಗ್‌’ ಹೇಳಿದ ತಕ್ಷಣ ಮೊಬೈಲ್‌ ನೋಡಿ.

ಸಂಗಾತಿ ಜೊತೆಗಿರುವಾಗ ಆದಷ್ಟು ಮೊಬೈಲ್‌ ಬಳಕೆ ಮಾಡುವ ಬಗ್ಗೆ ನಿರ್ಧರಿಸಿಕೊಳ್ಳಿ. ಇದರಿಂದ ಇಬ್ಬರ ನಡುವೆ ಮಾತನ್ನಾಡಲು ಹೆಚ್ಚು ಸಮಯ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.