ADVERTISEMENT

ಮುಳುಗದಂತೆ ಜೀವ ಉಳಿಸುವ ಕಿಂಗಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST
ಮುಳುಗದಂತೆ ಜೀವ ಉಳಿಸುವ ಕಿಂಗಿ
ಮುಳುಗದಂತೆ ಜೀವ ಉಳಿಸುವ ಕಿಂಗಿ   

ಕಾರು ಓಡಿಸುವಾಗ ಸುರಕ್ಷೆ ದೃಷ್ಟಿಯಿಂದ ಸೀಟ್‌ ಬೆಲ್ಟ್‌ ಧರಿಸುತ್ತೇವೆ, ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿಕೊಳ್ಳುತ್ತೇವೆ. ಆದರೆ ನೀರಿನಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡುತ್ತೇವೆ? ಇದಕ್ಕೆಂದು ಲೈಫ್ ಜಾಕೆಟ್‌ ಹಾಕಿಕೊಂಡು ನೀರಿಗೆ ಇಳಿಯುವವರ ಸಂಖ್ಯೆ ತುಂಬಾ ಕಡಿಮೆ.

ನಾಲ್ಕು ವರ್ಷದ ಹಿಂದೆ, ಕ್ಯಾಲಿಫೋರ್ನಿಯಾದಲ್ಲಿ ಟಾಮ್ ಅಗಪಿಯಾಡ್ಸ್‌ ಎಂಬುವರು ನದಿಯೊಂದರಲ್ಲಿ ಈಜುತ್ತಿದ್ದರು. ಅವರ ಸ್ನೇಹಿತರೊಬ್ಬರೂ ಜೊತೆಗಿದ್ದರು. ಇದ್ದಕ್ಕಿದ್ದಂತೆ ಸ್ನೇಹಿತ ನೀರಿನಲ್ಲಿ ಮುಳುಗುತ್ತಿದ್ದಂತೆ ಅನ್ನಿಸಿತು. ಹತ್ತಿರ ಹೋಗಿ ಅವರನ್ನು ರಕ್ಷಿಸುವಷ್ಟರಲ್ಲೇ ಮುಳುಗಿ ಹೋಗಿದ್ದರು. ಈ ಘಟನೆ ಎಷ್ಟೋ ದಿನಗಳವರೆಗೆ ಟಾಮ್ ಅವರನ್ನು ಕೊರೆಯುತ್ತಲೇ ಇತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕಿಂಗಿ ಎಂಬ ಸಾಧನ ಆವಿಷ್ಕರಿಸಿದರು ಟಾಮ್. ನೀರಿನಡಿ ಏರ್‌ಬ್ಯಾಗ್‌ ಬಳಕೆ ಮೂಲಕ ಮುಳುಗುವುದನ್ನು ತಡೆಯುವ ಸಾಧನ ಇದು.

ಕ್ಲಾಮಿಡೋಸಾರಸ್ ಕಿಂಗಿ ಎಂಬ ಹಲ್ಲಿ ಪ್ರಭೇದದ ಸಸ್ಥನಿ ತನ್ನ ಶತ್ರುಗಳಿಂದ ತಪ್ಪಿಸಿಕೊಳ್ಳಲು ಕುತ್ತಿಗೆ ಭಾಗದ ಚರ್ಮವನ್ನು ಹಿಗ್ಗಿಸಿ ಮೇಲಕ್ಕೆ ತನ್ನನ್ನು ತಾನು ಎಳೆದುಕೊಂಡು ಸಾಗುತ್ತದೆ. ಇದೇ ಕ್ರಿಯೆಯನ್ನೇ ಟಾಮ್ ಈ ಸಾಧನಕ್ಕೆ ಒಗ್ಗಿಸಿಕೊಂಡರು. ಅದಕ್ಕೇ ಈ ಸಾಧನಕ್ಕೆ ‘ಕಿಂಗಿ’ ಎಂದು ಹೆಸರಿಟ್ಟರು.

ಈಜುತ್ತಾ ಈಜುತ್ತಾ ಮಧ್ಯದಲ್ಲಿ ಕಾಲು ಸೋತಾಗಲೋ ಅಥವಾ ಈಜಲು ಸಾಧ್ಯವೇ ಇಲ್ಲ ಎನಿಸಿದಾಗಲೋ, ಇನ್ನಿತರ ತುರ್ತು ಸಂದರ್ಭ ಎದುರಾಗಿ ಮುಳುಗುತ್ತಿದ್ದಾಗ ಒಂದು ಬಟನ್ ಒತ್ತಿದರೆ ಸಾಕು, ಯಾವುದೇ ಶ್ರಮವಿಲ್ಲದೇ ನಮ್ಮನ್ನು ರಕ್ಷಿಸಿಕೊಳ್ಳಬಹುದು.

ಇದನ್ನು ಕೈಗೆ ಬ್ಯಾಂಡ್‌ನಂತೆ ಕಟ್ಟಿಕೊಳ್ಳಬೇಕು. ಈ ಕಿಂಗಿಯಲ್ಲಿ ಆಯತಾಕಾರದ ಪೌಚ್‌ (ಏರ್‌ಬ್ಯಾಗ್), ಕಾರ್ಬನ್ ಡಯಾಕ್ಸೈಡ್‌ನ ಸಣ್ಣ ಕ್ಯಾಪ್ಸೂಲ್, ದಾರಿ ತೋರಲು ಕಂಪಾಸ್ ಹಾಗೂ ಸೀಟಿ ಅಳವಡಿಸಲಾಗಿದೆ.

ಐದು ಔನ್ಸ್‌ಗಳಿಗೂ ಕಡಿಮೆ ತೂಕದ್ದಾಗಿದ್ದು, ನೀರಿನಲ್ಲಿ ಮುಳುಗಿದಾಗ ಬ್ಯಾಂಡ್‌ನ ಮೆಟಲ್ ಲೆವರ್ ಬಟನ್ ಒತ್ತಿದರೆ, ಏರ್‌ಬ್ಯಾಗ್ ತೆರೆದುಕೊಳ್ಳುತ್ತದೆ. ಅದರೊಳಗಿನ ಕಾರ್ಬನ್ ಡಯಾಕ್ಸೈಡ್‌ ಮೂಲಕ ಶಕ್ತಿ ಪಡೆದು, ಉಬ್ಬಿ ವೇಗದಿಂದ ಒಂದೇ ಕ್ಷಣದಲ್ಲಿ ಮೇಲಕ್ಕೆ ಎಳೆಯುತ್ತದೆ. ಮೇಲೆ ಬಂದ ನಂತರ ಸಿಳ್ಳೆ ಹೊಡೆಯುವ ಮೂಲಕ ಸಹಾಯಕ್ಕೆ ಬೇರೆಯವರನ್ನು ಕರೆಯಬಹುದು. ಇದರಲ್ಲಿನ ಕಂಪಾಸ್ ದಾರಿ ಹುಡುಕಾಟಕ್ಕೆ ಸಹಾಯ ಮಾಡುತ್ತದೆ.

124 ಕೆ.ಜಿ ತೂಕವನ್ನು ತಡೆಯಬಲ್ಲಷ್ಟು ಇದರ ಸಾಮರ್ಥ್ಯವಿದೆ. 48 ಗಂಟೆಗಳವರೆಗೂ ನಿರಂತರ ಕಾರ್ಯ ನಿರ್ವಹಿಸಬಲ್ಲದು. ಸಿಒ2 ಕ್ಯಾಪ್ಸೂಲ್ ಖಾಲಿಯಾದಂತೆಲ್ಲಾ ಬದಲಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದಲ್ಲಿ ವರ್ಷಕ್ಕೆ ಸುಮಾರು 3,72,000 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದು, ಈ ಪ್ರಮಾಣ ಕಡಿಮೆ ಮಾಡುವಲ್ಲಿ, ಕಿಂಗಿ ಸಹಕರಿಸಬಲ್ಲದು ಎಂದಿದ್ದಾರೆ ಟಾಮ್.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.