ADVERTISEMENT

ರಕ್ಷಣೆಗೊಂದು ಉಂಗುರ

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:30 IST
Last Updated 17 ಮೇ 2017, 19:30 IST
ರಕ್ಷಣೆಗೊಂದು ಉಂಗುರ
ರಕ್ಷಣೆಗೊಂದು ಉಂಗುರ   
ಮಹಿಳೆಯರ ರಕ್ಷಣೆಗೆ ಸಾಕಷ್ಟು ತಂತ್ರಜ್ಞಾನಗಳು, ಆ್ಯಪ್‌ಗಳು ಅಭಿವೃದ್ಧಿಗೊಂಡಿವೆ. ಈಗಲೂ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ಅವುಗಳ ಪೈಕಿ ಲೂಪ್ ಕೂಡ ಒಂದು. 
 
ಸಾಮಾನ್ಯವಾಗಿ ತುರ್ತು ಪರಿಸ್ಥಿತಿ ಎದುರಾದಾಗ ಏನು ಮಾಡುತ್ತೇವೆ? ಮೊಬೈಲ್ ತಡಕಾಡುತ್ತೇವೆ. ಹುಡುಕಾಡುವಷ್ಟರಲ್ಲಿ ಕಾಲ ಕೈಮೀರಬಹುದು. ಆದರೆ ಕೈ ಮೀರುವ ಮುನ್ನ ಕೈಯಲ್ಲೇ ಪರಿಹಾರ ಕಂಡುಕೊಂಡರೆ? ಇದೇ ಆಲೋಚನೆಯಲ್ಲಿ ಈ ಲೂಪ್ ರೂಪುಗೊಂಡಿರುವುದು. ತಂತ್ರಜ್ಞಾನ, ವಿನ್ಯಾಸ ಎರಡರ ಹದ ಬೆರೆಸಿರುವುದೇ ಈ ಲೂಪ್ ವೈಶಿಷ್ಟ್ಯ.
 
ಉಂಗುರದಂತಿರುವ ಈ ಸಾಧನ, ತುರ್ತು ಪರಿಸ್ಥಿತಿ ಎದುರಾದಾಗ ತತ್‌ಕ್ಷಣ ನೆರವಿಗೆ ಬರುತ್ತದೆ. ಉಂಗುರದಲ್ಲಿ ಕಂಡೂ ಕಾಣದಂತಿರುವ ಒಂದು ಪುಟ್ಟ ಬಟನ್ ಒತ್ತಿದರೆ ಸಾಕು, ನಿಮ್ಮ ಸ್ನೇಹಿತರೊಂದಿಗೆ ಸೆಕೆಂಡುಗಳಲ್ಲಿ ಸಂಪರ್ಕ ಸಾಧ್ಯವಾಗುತ್ತದೆ. ನಿರಂತರ ಸಂಪರ್ಕದಲ್ಲಿರಲು, ಸುರಕ್ಷಿತವಾಗಿರಲು ಅನುಕೂಲಕರ ಸಾಧನವಾಗಿ ಇದು ವಿನ್ಯಾಸಗೊಂಡಿದೆ.
 
ವೈಯಕ್ತಿಕ ಅಲಾರಂನಂತೆ ಕೆಲಸ ಮಾಡುತ್ತದೆ. ಈ ಉಂಗುರ, ಆ್ಯಪ್ ಬೆಂಬಲಿತವಾಗಿದ್ದು, ನಿಮ್ಮ ಹತ್ತಿರದ ಅಥವಾ ಸಂಬಂಧಿಕರ ಐದು ಮಂದಿಯ ಮೊಬೈಲ್ ಸಂಖ್ಯೆಯನ್ನು ಇದರಲ್ಲಿ ನಮೂದಿಸಲಾಗಿರುತ್ತದೆ. ಮೊದಲು ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. ಐದು ಮಂದಿಯನ್ನು ಪರ್ಸನಲ್ ನೆಟ್‌ವರ್ಕ್‌ಗೆ ಸೇರಿಸಿಕೊಳ್ಳಬೇಕು. ತುರ್ತು ಎದುರಾದಾಗ  ಹಿಡನ್ ಬಟನ್ ಒತ್ತಿದರೆ ಸಾಕು ಎಲ್ಲರಿಗೂ ಸಂದೇಶ ರವಾನೆಯಾಗುತ್ತದೆ.
 
ನಿಮ್ಮ ಸ್ನೇಹಿತರಿಗೆ ನೀವಿರುವ ಜಾಗದ ಮಾಹಿತಿ ತಿಳಿಯುತ್ತದೆ. ಅವರು ನಿಮಗೆ ಫೋನ್ ಮಾಡಬಹುದು ಅಥವಾ ನಿಮಗೆ ತತ್‌ಕ್ಷಣ ಸಹಾಯ ಮಾಡಬಹುದು. ಸರಳತೆ ಮತ್ತು ಸುಲಭ ಬಳಕೆ ವಿನ್ಯಾಸಕ್ಕೆ ಅತಿ ಮುಖ್ಯ ಎಂಬುದನ್ನು ಮನಗಂಡು ಕೆನಡಾದಲ್ಲಿ ಏಳು ಜನರ ತಂಡ ಈ ಉಂಗುರ ತಯಾರಿಸಿದೆ. ಆ್ಯಪ್ ಕೂಡ ಬಳಸಲು ಸುಲಭ ಇದೆ.
 
ಮೊದಲು 3ಡಿ ಪ್ರಿಂಟೆಡ್ ರಿಂಗ್ ರೂಪಿಸಿ, ಕೊನೆಯ ಮಾದರಿಯಾಗಿ ಈ ಉಂಗುರ ವಿನ್ಯಾಸ ಪಡೆದಿದೆ. ಫೋನ್ ತಯಾರಕರು, ಸೆಮಿಕಂಡಕ್ಟರ್‌ಗಳು, ಸಾಫ್ಟ್‌ವೇರ್ ಆರ್ಕಿಟೆಕ್ಟ್‌್‌ಗಳು ಸೇರಿ ಈ ವಿನ್ಯಾಸ ಹೊರತಂದಿದ್ದಾರೆ. ಐಒಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಒಗ್ಗುವಂತೆ ಲೂಪ್ ರೂಪ ಪಡೆದಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.