ADVERTISEMENT

ಶೌಚಾಲಯದಲ್ಲಿ ಗರ್ನಾಲ್‌ ಇಟ್ಟಿದ್ದ ‘ಕಿಶೋರ್‌’!

ಕಿರುತೆರೆ

ಸುರೇಖಾ ಹೆಗಡೆ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST
ಕಿಶೋರ್‌
ಕಿಶೋರ್‌   

ದ್ವೇಷ, ಪ್ರೀತಿಯ ಅಲೆಯಲ್ಲಿ ಸಾಗುವ ಈ ಧಾರಾವಾಹಿಯ ಖಳನಾಯಕನ ಪಾತ್ರ ಮಾಡಿದ ಕಿಶೋರ್‌ನ ನಿಜ ನಾಮಧೇಯ ಅನೂಪ್‌ ಅಮಿತ್‌ ರಾವ್‌. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅವರು ಓದಿದ್ದು ಫ್ಯಾಷನ್‌ ಡಿಸೈನಿಂಗ್‌. ಬೆಂಗಳೂರಿಗೆ ಬಂದ ಮೇಲೆಯೇ ನಟನೆಯ ಗೀಳು ಅಂಟಿಸಿಕೊಂಡವರು.

*ನಟನಾ ಪ್ರೀತಿ ಬೆಳೆದಿದ್ದು ಹೇಗೆ?
ಶಾಲಾ, ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಫ್ಯಾಷನ್‌, ನೃತ್ಯ ಸಂಯೋಜನೆ ಮಾಡುತ್ತಿದ್ದೆ. ನಟನಾಗುತ್ತೇನೆ ಎಂದುಕೊಂಡಿರಲಿಲ್ಲ, ಆಗ ಅಂಥ ಎಕ್ಸ್‌ಪೋಶರ್‌ ಕೂಡ ಇರಲಿಲ್ಲ. ಓದು ಮುಗಿಸಿ ಬೆಂಗಳೂರಿನಲ್ಲಿ ಗಾರ್ಮೆಂಟ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಫ್ಯಾಷನ್‌ ಷೋ ಕಾರ್ಯಕ್ರಮ ಆಯೋಜಿಸುವುದಕ್ಕೊಂದು ಅವಕಾಶ ಸಿಕ್ಕಿತು. ಆಗ ನಟನಾ ಕ್ಷೇತ್ರದ ನಂಟು ಬೆಳೆಯಿತು. ಹಾಗೆ ಸಿನಿಮಾ ಅವಕಾಶಗಳು ಸಿಕ್ಕವು.

* ‘ಅಗ್ನಿಸಾಕ್ಷಿ’ಯಲ್ಲಿ ಪ್ರೇಮಿಯ ಪಾತ್ರ. ನಿಜ ಜೀವನದಲ್ಲಿ ಎಷ್ಟು ಸಾರಿ ಲವ್‌ನಲ್ಲಿ ಬಿದ್ದಿದ್ರಿ?
ಅಯ್ಯೋ, ಕಾಲೇಜು ದಿನಗಳಲ್ಲಿ ನಾನು ದೊಡ್ಡ ಫ್ಲರ್ಟ್‌ ಆಗಿದ್ದೆ. ಯಾವಾಗಲೂ ಐದಾರು ಜನ ಹುಡುಗೀರ ಮಧ್ಯೆಯೇ ನಿಂತಿರುತ್ತಿದ್ದೆ. ಹೆಚ್ಚಾಗಿ ಅವರೆಲ್ಲಾ ಜೂನಿಯರ್ಸ್‌ ಇರುತ್ತಿದ್ದರು. ಹೀಗಾಗಿ ಕಾಲೇಜು ಪ್ರಾಂಶುಪಾಲರು ನನ್ನ ಮೇಲೊಂದು ಕಣ್ಣಿಟ್ಟಿರುತ್ತಿದ್ದರು. ಬೇರೆಯವರನ್ನು ಪ್ರೀತಿಯಲ್ಲಿ ಬೀಳಿಸಿದ್ದೇ ಜಾಸ್ತಿ.

ADVERTISEMENT

* ವಿಲನ್‌ ಪಾತ್ರ ಒಪ್ಪಿಕೊಳ್ಳಲು ಕಾರಣ?
ನನ್ನದು ತೀರಾ ಮುಗ್ಧ ಮುಖ. ಈ ಮೊದಲು ಮಾಡಿದ ಸಿನಿಮಾ, ಧಾರಾವಾಹಿಗಳಲ್ಲಿಯೂ ಅಂಥದ್ದೇ ಪಾತ್ರ. ಹೀಗಾಗಿ ವಿಭಿನ್ನ ಅವಕಾಶ ಇದು ಎಂದು ಒಪ್ಪಿಕೊಂಡೆ. ಆಗಲೇ ನಟನೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದೆ. ಜನ ಗುರುತಿಸುತ್ತಿದ್ದರು. ಆದರೆ ‘ಅಗ್ನಿಸಾಕ್ಷಿ’ಯ ಕಿಶೋರ್‌ ಪಾತ್ರ ನೀಡಿದ ಜನಪ್ರಿಯತೆ ದೊಡ್ಡದು.

* ತುಂಬಾ ಮುಂಗೋಪಿಯಂತೆ?
ಹೌದು, ಸಿಕ್ಕಾಪಟ್ಟೆ ಮುಂಗೋಪಿ ನಾನು. ನಗುನಗುತಾ ಇರುತ್ತಿದ್ದೆ. ಆದರೆ ಥಟ್ಟನೆ ಸಿಟ್ಟು ಬರುತ್ತಿತ್ತು. ಹೊಡೆಯೋಕೇ ಹೋಗಿಬಿಡುತ್ತಿದ್ದೆ. ಹಾಗೆ ತುಂಬಾ ಜಗಳವಾಡಿದ್ದೇನೆ ಕೂಡ. ಆದರೆ ಈ ಕ್ಷೇತ್ರಕ್ಕೆ ಬಂದಮೇಲೆ ಜನ ನನ್ನನ್ನು ಗುರುತಿಸಲಾರಂಭಿಸಿದರು. ಹೀಗಾಗಿ ತುಂಬಾ ಬದಲಾಗಿದ್ದೇನೆ. ಎಲ್ಲವನ್ನೂ ಶಾಂತವಾಗಿ ನಿಭಾಯಿಸಲು ಕಲಿತಿದ್ದೇನೆ.

* ‘ಅಗ್ನಿಸಾಕ್ಷಿ’ಯಲ್ಲಿ ಬರೀ ಶಿಕ್ಷೆಯೇ ಆಯ್ತು. ನಿಜ ಜೀವನದಲ್ಲಿ ಅನುಭವಿಸಿದ ದೊಡ್ಡ ಶಿಕ್ಷೆ?
ನಾನು ಶಿಕ್ಷೆ ಅನುಭವಿಸಿದ್ದು ಕಮ್ಮಿ. ಹೈಸ್ಕೂಲು ದಿನಗಳಿಂದಲೇ ತುಂಟ ಹುಡುಗ. ಸಿಕ್ಕಾಪಟ್ಟೆ ಕೀಟಲೆ, ತರಲೆ ಮಾಡಿಕೊಂಡೇ ಇರುತ್ತಿದ್ದೆ. ಆದರೆ ಸಿಕ್ಕಿ ಬೀಳುತ್ತಿರಲಿಲ್ಲ. ಎಲ್ಲರ ಮುಂದೆ ತುಂಬಾ ಪಾಪದವರ ಥರ ಇರುತ್ತಿದ್ದೆ. ಎಷ್ಟೆಂದರೆ ಸ್ನೇಹಿತರ ತಂದೆತಾಯಿಗಳೂ ಸಹ ‘ಅನೂಪ್‌ ನೋಡಿ ಕಲಿಯಿರಿ’ ಎಂದು ಬುದ್ಧಿವಾದ ಹೇಳಿದ್ದಿದೆ. ತಪ್ಪು ಮಾಡುತ್ತಿದ್ದವ ನಾನು. ಬೈಯಿಸಿಕೊಳ್ಳುತ್ತಿದ್ದುದು ಬೇರೆಯವರು. ಹೀಗಾಗಿಯೇ ಇರಬೇಕು ಧಾರಾವಾಹಿಯಲ್ಲಿ ಬರೀ ಬಂಧನ ಶಿಕ್ಷೆ.

* ಚಂದ್ರಿಕಾ ಜೊತೆ ಮದುವೆ ಯಾವಾಗ?
ಹ್ಹಹ್ಹಹ್ಹ. ನನಗೂ ಆ ಪ್ರಶ್ನೆ ಯಕ್ಷಪ್ರಶ್ನೆಯಂತೆ ಕಾಡುತ್ತಿದೆ. ಲವ್‌ ಮಾಡಿದ್ದಕ್ಕೇ ನಾಲ್ಕು ವರ್ಷ ಸೀರಿಯಲ್‌ ಓಡಿದೆ. ಇನ್ನು ಮದುವೆ ಆಗುವ ಯೋಚನೆ ಮಾಡಿದರೆ ಇನ್ನೂ ನಾಲ್ಕು ವರ್ಷ ಓಡಬಹುದು.

* ಜೀವನದ ದೊಡ್ಡ ಖುಷಿ ಯಾವುದು?
ಕಾಲೇಜಿನಲ್ಲಿ ನಾನು ಫ್ಲರ್ಟ್‌ ಅಂತ ಹೆಸರುವಾಸಿ ಆಗಿದ್ದೆ. ಆದರೆ ಒಂದು ದಿನ ನನ್ನ ಕ್ಲಾಸ್‌ಮೇಟ್‌ ರಶ್ಮಿಗೆ ಪ್ರಪೋಸ್‌ ಮಾಡಿದೆ. ನನ್ನದು ನಿಜ ಪ್ರೀತಿ ಆಗಿತ್ತಾದರೂ ಒಪ್ಪಿಗೆ ಸೂಚಿಸಲು ಒಂಬತ್ತು ತಿಂಗಳು ಕಾಯಿಸಿದಳು. ಆಮೇಲೆ ಮದುವೆ ಮಾಡಿಕೊಂಡ್ವಿ. ಜೀವನದಲ್ಲಿ ಸೋಲು ಎದುರಾದಾಗಲೆಲ್ಲಾ ನನ್ನನ್ನು ಪ್ರೋತ್ಸಾಹಿಸಿ ಬೆನ್ನೆಲುಬಾಗಿ ನಿಂತವಳು ಅವಳೇ. ಅವಳು ಸಿಕ್ಕಿದ್ದೇ ದೊಡ್ಡ ಖುಷಿ.

* ಮಾಡಿದ ದೊಡ್ಡ ತರಲೆ?
ತುಂಬಾ ಮಾಡಿದ್ದೇನೆ. ಏಪ್ರಿಲ್‌ ಒಂದರಂದು ಮಾಡಿದ ಕಿತಾಪತಿ ಒಂದೆರಡಲ್ಲ. ಸೋದರ ಸಂಬಂಧಿ ಮನೆಗೆ ಬರುತ್ತೇವೆ ಎಂದು ಸುಳ್ಳು ಹೇಳಿ ಅವರು ನಮಗಾಗಿ ಊಟ ರೆಡಿ ಮಾಡಿ ಕಾದಿದ್ದನ್ನು ಎಂದಿಗೂ ಮರೆಯುವುದಿಲ್ಲ. ಕಾಲೇಜು ಶೌಚಾಲಯದಲ್ಲಿ ಗರ್ನಾಲ್‌ ಇಟ್ಟಿದ್ವಿ. ಟೈಂ ಬಾಂಬ್‌ ಥರ. ಅದು ಸೃಷ್ಟಿಸಿದ ಕೋಲಾಹಲ ಮರೆಯಲು ಸಾಧ್ಯವೇ ಇಲ್ಲ.

* ಇಷ್ಟವಾಗದ ವಸ್ತು?
ಹಾಗೇನೂ ಇಲ್ಲ. ನಾನು ತುಂಬಾ ಸ್ನೇಹಮಯಿ. ಮಾತಾಡುತ್ತಾ, ನಗುನಗುತ್ತಾ, ಇನ್ನೊಬ್ಬರ ಕಾಲೆಳೆಯುತ್ತಾ ಮಜವಾಗಿರುತ್ತೇನೆ. ಹೀಗಾಗಿ ಇಷ್ಟ ಇಲ್ಲ ಎನ್ನುವುದು ಯಾವುದೂ ಇಲ್ಲ.

*ಇಷ್ಟದ ನಟಿ ಯಾರು?
ತಮನ್ನಾ ಒಂದು ದಿನ ಅವರೇ ಹಠಾತ್ತಾಗಿ ಕಾಲ್‌ ಮಾಡಿ ಡೇಟಿಂಗ್‌ಗೆ ಕರೆದರೆ? ಯಾರಿಗೂ ಹೇಳದೆ, ಕೇಳದೆ ಗುಟ್ಟಾಗಿ ಹೋಗಿಬಿಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.