ADVERTISEMENT

ಸರಳ ಪ್ರಶ್ನೆಗೆ ಸಂದಿಗ್ಧ ಉತ್ತರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST
ಸರಳ ಪ್ರಶ್ನೆಗೆ ಸಂದಿಗ್ಧ ಉತ್ತರ
ಸರಳ ಪ್ರಶ್ನೆಗೆ ಸಂದಿಗ್ಧ ಉತ್ತರ   

ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂಬುದು ಹಳೆಯ ಕೂಗು. ಆದರೆ ಇದಕ್ಕೆ ಪರ, ವಿರೋಧ ಪ್ರತಿಕ್ರಿಯೆಗಳು ಬರುತ್ತಲೇ ಇರುತ್ತವೆ. ಮಕ್ಕಳ ಕೌತುಕವನ್ನು ಬೆಳೆಸದೆ ಅವರಿಗೆ ಸರಿಯಾದ ಸಮಯದಲ್ಲಿ ಮಾರ್ಗದರ್ಶನ ನೀಡಬೇಕು ಎಂಬ ಎಳೆಯನ್ನು ಬಿಂಬಿಸುವ ಚಿತ್ರವೇ ತುಳುವಿನ ‘ಒರು’ ಕಿರುಚಿತ್ರ.

ಮೂರು ಮಕ್ಕಳ ಸಂಭಾಷಣೆಯೊಂದಿಗೆ ಚಿತ್ರ ಆರಂಭವಾಗುತ್ತದೆ. ‘ಸೆಕ್ಸ್‌’ ಎಂದರೇನು? ಎನ್ನುವುದು ಈ ಮೂವರ ಪ್ರಶ್ನೆ. ಆದರೆ ಇದಕ್ಕೆ ಯಾರ ಬಳಿ ಉತ್ತರ ಕಂಡುಕೊಳ್ಳುವುದು ಎಂದು ಚರ್ಚಿಸಿ, ನಂತರ ಮನೆಯವರ ಬಳಿಯೇ ತಿಳಿದುಕೊಳ್ಳೋಣ ಎಂದು ನಿರ್ಧರಿಸುತ್ತಾರೆ.
ಮೂವರಲ್ಲಿ ಒಬ್ಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪಡುವ ಸಾಹಸವನ್ನು ಇಲ್ಲಿ ತೋರಿಸಲಾಗಿದೆ. ಯಾರ ಬಳಿ ಕೇಳಿದರೂ ಅವರಿಂದ ಉದ್ದುದ್ದ ಬೈಗುಳದ ಪುರಾಣಗಳನ್ನೇ ಕೇಳಬೇಕಾಗುತ್ತದೆ. ಕೊನೆಗೆ ಮಾವ ಎಲ್ಲರನ್ನೂ ಸಮಾಧಾನ ಮಾಡಿ, ಈ ವಯಸ್ಸಿನ ಮಕ್ಕಳು ಲೈಂಗಿಕ ಶಿಕ್ಷಣ ಅರಿವು ಪಡೆಯುವುದು ಅಗತ್ಯ ಎಂಬುದನ್ನು ಮನವರಿಕೆ ಮಾಡುತ್ತಾನೆ.

ಅವರ ಮಾತನ್ನು ಒಪ್ಪಿ ತಂದೆ ಮಗನಿಗೆ ‘ಸೆಕ್ಸ್’ ಪದದ ಅರ್ಥವನ್ನು ತಿಳಿಸುತ್ತಾನೆ. ಆದರೆ ಕೊನೆಯಲ್ಲಿ ಎಲ್ಲರೂ ತಬ್ಬಿಬ್ಬಾಗುವ ಘಟನೆಯೊಂದು ನಡೆಯುತ್ತದೆ. ಮಗ ತಲೆಕೆಡಿಸಿಕೊಂಡು ರೂಮಿಗೆ ಹೋಗುತ್ತಾನೆ. ಎಲ್ಲರೂ ಅವನ ಹಿಂದೆಯೇ ಹೋಗಿ ನೋಡಿದರೆ, ಅವನಿಗೆ ಅರ್ಜಿಯಲ್ಲಿ ಸೆಕ್ಸ್‌ ಎಂಬ ಬಾಕ್ಸ್‌ಗೆ ಅಪ್ಪ ಹೇಳಿದ ಅಷ್ಟುದ್ದ ಪದಗಳನ್ನು ಹೇಗೆ ತುಂಬುವುದು ಎಂಬ ಚಿಂತೆ. ಇಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಗಂಭೀರವಾಗಿ ಪ್ರಾರಂಭವಾಗುವ ಚಿತ್ರ ತಮಾಷೆಯ ಘಟನೆಯೊಂದಿಗೆ ಮುಕ್ತಾಯ ಕಾಣುತ್ತದೆ.

ADVERTISEMENT

ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ ಎನ್ನುವುದರ ಜೊತೆಗೆ ಪೋಷಕರು ಮಕ್ಕಳ ಮನಸ್ಸಿಗೆ ಬೆಲೆ ಕೊಡಬೇಕು. ಅವರ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ.  ಛಾಯಾಗ್ರಹಣ  ತಂತ್ರಗಾರಿಕೆಯಲ್ಲಿ  ಹೊಸತನವಿಲ್ಲವಾದರೂ, ಸಹಜ ಅಭಿನಯದಿಂದಲೇ ಪಾತ್ರಗಳು ಹತ್ತಿರವಾಗುತ್ತವೆ.  ಹರ್ಷಾ ರೈ ನಿರ್ದೇಶನದ  ಹದಿಮೂರು ನಿಮಿಷದ ಈ ಕಿರುಚಿತ್ರವನ್ನು ಸುಮಾರು 8 ಲಕ್ಷ ಮಂದಿ ವೀಕ್ಷಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.