ADVERTISEMENT

ಸುತ್ತೋದಂದ್ರೆ ನಂಗಿಷ್ಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಸಿದ್ದಾರ್ಥ್‌ ಮಲ್ಹೋತ್ರಾ
ಸಿದ್ದಾರ್ಥ್‌ ಮಲ್ಹೋತ್ರಾ   

ಸಾಯುವ ಮುನ್ನ ಸುತ್ತಬೇಕು

ಎನರ್ಜಿಗೆ, ಡ್ರೆಸ್‌ ಸೆನ್ಸ್‌ಗೆ, ಫ್ಯಾಷನ್‌ಗೆ ರಣವೀರ್ ಸಿಂಗ್ ಹೆಸರುವಾಸಿ. ಆದರೆ ಅವರನ್ನು ಭಿನ್ನವಾಗಿ ಕಾಣಿಸುವ ಮತ್ತೂ ಒಂದು ಹವ್ಯಾಸವಿದೆ. ಅದೇ, ತಿರುಗಾಟದ ಗೀಳು. ಶೂಟಿಂಗ್‌ಗೆ ಮಾತ್ರ ಅಲ್ಲ, ಬೇಜಾರು ಬಂದಾಗಲೆಲ್ಲಾ ಬ್ಯಾಗ್ ಏರಿಸಿಕೊಂಡು ತಿರುಗಾಟಕ್ಕೆ ಹೊರಟುಬಿಡುತ್ತಾರೆ. ಆದರೆ ಬೋರಿಂಗ್ ಟೂರಿಸ್ಟ್‌ನಂತೆ ಹೋಗಿ ಸುಮ್ಮನೆ ಬರುವುದಿಲ್ಲ. ಇದ್ದಷ್ಟೂ ದಿನ ಚೆನ್ನಾಗಿ ತಿರುಗಿ ಹೊಸ ಹೊಸ ಜಾಗ ನೋಡಿಕೊಂಡು ಬರುತ್ತಾರೆ.

ಸ್ವಿಡ್ಜರ್ಲೆಂಡ್, ಅಮೆರಿಕ, ಮಾಲ್ಡೀವ್ಸ್ ಹಾಗೂ ಭಾರತದ ಗೋವಾ – ಯಾರೇ ಆಗಲಿ ಇವಿಷ್ಟಕ್ಕೆ ಸಾಯುವ ಮುನ್ನ ಹೋಗಲೇಬೇಕು ಎಂದು ಹೇಳಿಕೊಂಡಿದ್ದಾರೆ. ಊರು ನೋಡುವುದರೊಂದಿಗೆ ಪ್ಯಾರಾಗ್ಲೈಡಿಂಗ್, ಸ್ಕೈಡೈವಿಂಗ್, ವೇಕ್‌ ಬೋರ್ಡಿಂಗ್, ಸರ್ಫಿಂಗ್‌ನಂಥ ಸಾಹಸ ಕ್ರೀಡೆಗಳಲ್ಲೂ ಎತ್ತಿದ ಕೈ.

ADVERTISEMENT

ಏಕಾಂಗಿ ಪಯಣ ಚೆಂದ

ತಮ್ಮ ರಜೆಯನ್ನು ಚೆಂದದ ಸ್ಥಳಗಳಿಗೆ ಹೋಗಿ ಕಳೆಯುತ್ತಾರೆ ನಟಿ ಸೋನಾಕ್ಷಿ ಸಿನ್ಹಾ. ಫಿಲ್ಮ್‌ಗಳಲ್ಲಿ ಬಿಜಿ ಇದ್ದರೂ, ತಮ್ಮಿಷ್ಟದ ಸ್ಥಳಗಳಿಗೆ ಹೋಗಲೆಂದೇ ಬಿಡುವು ಮಾಡಿಕೊಳ್ಳುತ್ತಾರೆ.

‘ನನಗೆ ಸಮುದ್ರ ಎಂದರೆ ತುಂಬಾ ಇಷ್ಟ’ ಎನ್ನುವ ಇವರು, ವರ್ಷದಲ್ಲಿ ಹಲವು ಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಅದರಲ್ಲೂ ಏಕಾಂಗಿ ಪ್ರವಾಸಕ್ಕೆ ಹೋಗುವುದು ಎಂದರೆ ಭಾರೀ ಇಷ್ಟವಂತೆ.

ಅಮೆರಿಕ (ಮಿಯಾಮಿ, ಸ್ಯಾನ್‌ಫ್ರಾನ್ಸಿಸ್ಕೊ), ಶೆಷೆಲ್ಸ್ ಆಸ್ಟ್ರಿಯಾ, ಭಾರತದ ಗೋವಾ, ದುಬೈ, ಥಾಯ್ಲೆಂಡ್‌... ಹೀಗೆ ಯಾವ ದೇಶ ನೋಡಬೇಕೆನಿಸುತ್ತದೋ ಅಲ್ಲಿಗೆ ಹಾಜರ್.

ಸಾಹಸಕ್ರೀಡೆ ಇಷ್ಟ

ನಟ ಸಿದ್ಧಾರ್ಥ್ ಮಲ್ಹೋತ್ರಾ ಆಗಾಗ್ಗೆ ಪ್ರವಾಸದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ತಮ್ಮ ತಂದೆ ನೌಕಾಪಡೆಯ ಅಧಿಕಾರಿಯಾದ್ದರಿಂದ ವಿಶ್ವ ನೋಡುವ ಕಾತರ ರಕ್ತದಲ್ಲೇ ಇತ್ತಂತೆ.

‘ಹೊಸ ಜಾಗದಲ್ಲಿ ಶೂಟಿಂಗ್ ಮಾಡುವಾಗಲೆಲ್ಲಾ, ಬಿಡುವು ಮಾಡಿಕೊಂಡು, ಹೊರಗೆ ಹೋಗಿ, ಹೊಸ ಜಾಗಗಳನ್ನು ನೋಡಿಕೊಂಡು ಬರುತ್ತೇನೆ. ಹಾಗಾಗದೇ ಇದ್ದರೆ ನನಗೆ ಸಮಾಧಾನವೇ ಇರುವುದಿಲ್ಲ‌’ ಎಂದು ಹೇಳಿಕೊಂಡಿದ್ದಾರೆ. ಹೋಗಿದ ಕಡೆಯಲ್ಲೆಲ್ಲಾ ಸಾಹಸ ಕ್ರೀಡೆಗೂ ಇಳಿಯುತ್ತಾರೆ. ಎಷ್ಟೋ ಕಡೆ ಸ್ಕೈಡೈವಿಂಗ್ ಮಾಡಿದ್ದಾರೆ. ಬ್ಯಾಂಕಾಕ್‌, ನ್ಯೂಯಾರ್ಕ್‌ ಸಿಟಿಗಳ ಅಂದಕ್ಕೆ ಮನಸೋತಿದ್ದಾರೆ.

ಪ್ರಪಂಚ ಪರ್ಯಟನೆ ಮಾಡಬೇಕು

ಮಾಡೆಲಿಂಗ್ ಹೋದರೆ, ದೇಶ ವಿದೇಶ ಸುತ್ತಲು ಸುಲಭವಾಗು ತ್ತದೆ ಎಂದು ಮಾಡೆಲಿಂಗ್‌ಗೆ ಬಂದವರು ನರ್ಗೀಸ್ ಫಕ್ರಿ. ಮನ ಶಾಸ್ತ್ರದಲ್ಲಿ ಹಾಗೂ ಫೈನ್ ಆರ್ಟ್ಸ್‌ನಲ್ಲಿ ಡಿಗ್ರಿ ಪಡೆದ ನಂತರ ಶಿಕ್ಷಕಿ ಆಗಬೇಕು ಎಂದುಕೊಂಡಿದ್ದವರು ಅವರು. ಟೀಚಿಂಗ್‌ನೊಂದಿಗೆ ಪ್ರವಾಸ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಅವರಿಗೆ ಸಾಧ್ಯವಾಗಿದ್ದು ಎರಡನೆಯದು. ಪ್ರಪಂಚ ಸುತ್ತುತ್ತಾ ವಿಧವಿಧ ಆಹಾರಗಳನ್ನು ನೆಚ್ಚಿಕೊಳ್ಳುತ್ತಾರೆ ನರ್ಗೀಸ್.

ಬೀಚ್‌ಗಳೆಂದರೆ ಅವರಿಗೆ ತುಂಬಾ ಇಷ್ಟ. ಮಾಲ್ಡೀವ್‌, ದುಬೈ ಅವರ ನೆಚ್ಚಿನ ತಾಣ. ಡೆಸರ್ಟ್ ಸಫಾರಿ, ಡೆಸರ್ಟ್ ಕ್ಯಾಂಪಿಂಗ್, ಸ್ಕೈಡೈವಿಂಗ್‌ಗೆ ಹೋಗುತ್ತಾರೆ. ವಿದೇಶದಲ್ಲಿ, ತಮ್ಮ ಶೆಡ್ಯೂಲ್ ನಡುವೆಯೂ ಅಲ್ಲಿನ ಅದ್ಭುತ ತಾಣಗಳನ್ನು ನೋಡಿ ಆನಂದಿಸುತ್ತಾರೆ.

ಬೈಕ್‌ನಲ್ಲಿ ದೇಶ ನೋಡುವೆ

‘ದೇಶಾದ್ಯಂತ ಬೈಕ್‌ನಲ್ಲಿ ಸುತ್ತುವುದು ನಂಗಿಷ್ಟ’ ಎಂದು ಹೇಳಿಕೊಂಡಿರುವುದು ನಟ ಜಾನ್ ಅಬ್ರಾಹಂ. ಪ್ರಯಾಣ ಎಂದರೆ ನನ್ನ ಪಾಲಿಗೆ ಸ್ವರ್ಗ ಎಂದಿದ್ದಾರೆ ಅವರು. ಹಿಮಾಲಯ ಎಂದಿಗೂ ಅವರನ್ನು ಸೆಳೆಯುವ ಸ್ಥಳವಂತೆ. ಅದು ‘ರಿಯಲ್ ಟ್ರಾವೆಲ್’ ಎಂದಿದ್ದಾರೆ. ಹೊಸ ಹೊಸ ಜಾಗಗಳನ್ನು ನೋಡಬೇಕೆಂದರೆ ತುದಿಗಾಲಲ್ಲಿ ನಿಂತಿರುತ್ತಾರೆ ಜಾನ್. ಟ್ರೆಕಿಂಗ್ ಅವರ ಹವ್ಯಾಸ ಕೂಡ. ಲಂಡನ್ ಮತ್ತು ಲಾಸ್ ಏಂಜಲೀಸ್ ಇವರಿಷ್ಟದ ಜಾಗ.

ಟ್ರಾವೆಲಿಂಗ್ ನನ್ನ ಹೃದಯಕ್ಕೆ ಹತ್ತಿರದ ಹವ್ಯಾಸ ಎಂದು ವ್ಯಾಖ್ಯಾನಿಸಿದ್ದಾರೆ. ಇದರ ಜೊತೆಗೆ, ಸಂಸ್ಕೃತಿ, ವಾಸ್ತುಶಿಲ್ಪ, ಆಹಾರ, ತಂತ್ರಜ್ಞಾನ ಎಲ್ಲವೂ ಇರುವ ಏಕೈಕ ಜಾಗ ಜಪಾನ್‌ ಎಂದರೆ ಇವರಿಗೆ ಭಾರೀ ಇಷ್ಟವಂತೆ.

ಗೋವಾ ಎಂದರೆ ಪಂಚಪ್ರಾಣ

ನಟಿ ಬಿಪಾಶಾ ಬಸು ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ ಗೋವಾಕ್ಕೆ ಹೋಗಲೇಬೇಕು. ಅಷ್ಟು ಇಷ್ಟ ಆ ಜಾಗ.

‘ಟ್ರಾವೆಲಿಂಗ್ ನಿಮ್ಮ ಆರೋಗ್ಯವನ್ನೂ ಹೆಚ್ಚಿಸುತ್ತೆ. ಟ್ರಿಪ್‌ಗೆ ಹೋದರೆ ಡಯೆಟ್ ಎಲ್ಲಾ ನಾನು ಲೆಕ್ಕಕ್ಕೆ ಇಟ್ಟುಕೊಳ್ಳುವುದೇ ಇಲ್ಲ. ಅಲ್ಲಿನ ಆಹಾರ ವೈವಿಧ್ಯವನ್ನು ಸವಿಯುತ್ತೇನೆ’ ಎಂದು ಹೇಳುತ್ತಾರೆ. ಆಸ್ಟ್ರೇಲಿಯಾ ಇವರು ಆಗಾಗ್ಗೆ ಭೇಟಿ ನೀಡುವ ಊರು. ‘ಎಷ್ಟೋ ದೇಶ ನೋಡಿದ್ದರೂ ಗೋವಾನೇ ನನಗಿಷ್ಟ. ಸಮುದ್ರಾಹಾರಗಳೆಂದರೆ ಬಾಯಲ್ಲಿ ನೀರೂರುತ್ತದೆ’ ಎಂದು ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.