ADVERTISEMENT

ಹುಚ್ಚು ಪ್ರೇಮಕಥೆಯ ‘ಸರಯೂ’

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಹುಚ್ಚು ಪ್ರೇಮಕಥೆಯ ‘ಸರಯೂ’
ಹುಚ್ಚು ಪ್ರೇಮಕಥೆಯ ‘ಸರಯೂ’   

ಹೆಣ್ಣಿನ ತಾಯ್ತನ ಹಾಗೂ ಚಲನಶೀಲತೆಯ ರೂಪಕವಾಗಿ ನದಿಯನ್ನು ಉದಾಹರಿಸುತ್ತೇವಷ್ಟೇ. ಈ ಪೊರೆಯುವ ಗುಣದ ಸರಯೂ ಈಗ ಕಿರುತೆರೆಯ ಮೂಲಕ ಮನೆಮನೆಗೆ ಬರಲು ಸಿದ್ಧತೆ ನಡೆಸುತ್ತಿದ್ದಾಳೆ.

ಜಗತ್ತಿನಲ್ಲಿರುವ ಎಲ್ಲವನ್ನೂ ಕೊಳ್ಳಲು ಸಾಧ್ಯ ಎಂದು ನಂಬಿರುವ ನಾಯಕ ಹಾಗೂ ಮಾನವೀಯ ಮೌಲ್ಯಗಳನ್ನೇ ವ್ಯಕ್ತಿತ್ವವನ್ನಾಗಿಸಿಕೊಂಡ ನಾಯಕಿಯ ನಡುವಣ ಸಂಘರ್ಷ ಹಾಗೂ ಪ್ರೇಮದ ಕಥೆ ‘ಸರಯೂ’ ಧಾರಾವಾಹಿಯದು.

ಹಣದ ಮದವಿರುವ ಕಥಾನಾಯಕ ಅಭಿರಾಮ್, ತಾನು ಹಣದಿಂದ ಏನನ್ನಾದರೂ ಕೊಳ್ಳುತ್ತೇನೆ ಎನ್ನುವ ಧೋರಣೆಯ ವ್ಯಕ್ತಿ. ಪ್ರಾಮಾಣಿಕತೆ, ಸತ್ಯ ಇಂಥ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಕಥಾನಾಯಕಿ ಸರಯೂ.

ಈಕೆ ಅರ್ಚಕರೊಬ್ಬರ ಮಗಳು. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಚಲಿಸುತ್ತಿರುವವರು. ಇವರಿಬ್ಬರಲ್ಲಿ ಪ್ರೀತಿ ಅಂಕುರಿಸುತ್ತದೆ. ಅವರ ಸುತ್ತವೇ ಕಥೆ ಬೆಳೆಯುತ್ತದೆ. ಈ ಕಥೆಯನ್ನು ‘ಹುಚ್ಚು ಪ್ರೇಮಕಥೆ’ ಎಂದು ನಿರ್ದೇಶಕ ಮಹೇಶ್ ಭಗವಾನ್ ಸಾರಂಗ ಬಣ್ಣಿಸುತ್ತಾರೆ.

ಅಂದಹಾಗೆ, ಉದಯ ವಾಹಿನಿಯಲ್ಲಿ ಇದೇ 29ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 7 ಗಂಟೆಗೆ ‘ಸರಯೂ’ ಪ್ರಸಾರವಾಗಲಿದೆ.

ವೀಕ್ಷಕರ ಅಭಿರುಚಿಗೆ ತಕ್ಕಂತೆ ಧಾರಾವಾಹಿಯ ಕಥೆಯನ್ನು ರೂಪಿಸಿದ್ದೇವೆ ಎನ್ನುವುದು ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥ ಸುಧೀಂದ್ರ ಭಾರಧ್ವಾಜ್ ಹೇಳಿಕೆ. ಈ ಧಾರಾವಾಹಿಯು ಮೇಲ್ಮಧ್ಯಮ ವರ್ಗದ ವೀಕ್ಷಕರನ್ನು ಆಕರ್ಷಿಸಲಿದೆ ಎಂಬುದು ಅವರ ವಿಶ್ವಾಸ.

‘ಸರಯೂ’ ಕನ್ನಡದ ಅದ್ದೂರಿ ಧಾರಾವಾಹಿಗಳಲ್ಲಿ ಒಂದಾಗಲಿದೆ. ಧಾರಾವಾಹಿಯ ಆರಂಭದಲ್ಲಿ ಬರುವ ಸ್ಕೈ ಡೈವಿಂಗ್ ದೃಶ್ಯಗಳನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಲಾಗಿದೆಯಂತೆ.

ಏಷ್ಯಾದ ಅತಿ ಎತ್ತರದ ಕಟ್ಟಡದ ಮೇಲೆ ಚಿತ್ರೀಕರಣಗೊಂಡ ಮೊದಲ ಧಾರಾವಾಹಿ ಎಂಬ ಹೆಮ್ಮೆ ‘ಸರಯೂ’ದ್ದು. ‘ಅತ್ಯುತ್ತಮ ತಂತ್ರಜ್ಞರನ್ನೊಳಗೊಂಡ ಧಾರಾವಾಹಿಯ ಗುಣಮಟ್ಟವೂ ಅಷ್ಟೇ ಉನ್ನತ ಮಟ್ಟದಲ್ಲಿರುತ್ತದೆ’ ಎಂದರು ವಾಹಿನಿಯ ಫಿಕ್ಷನ್ ಹೆಡ್ ಶ್ರೀನಿಧಿ ಡಿ.ಎಸ್.

ಅಭಿಷೇಕ್ ದಾಸ್, ಶ್ವೇತಾ ಹೆಗಡೆ ಮುಖ್ಯ ಪಾತ್ರದಲ್ಲಿದ್ದಾರೆ. ಹರೀಶ್ ರಾಯ್, ಋತು, ಸತ್ಯವತಿ, ಶಂಕರ್ ಭಟ್, ಗೀತ ರವಿಶಂಕರ್, ರಾಜೇಶ್ ಧ್ರುವ ತಾರಾಗಣದಲ್ಲಿ ಇರುವ ಪ್ರಮುಖರು. ಗಣಪತಿ ಭಟ್ ನಿರ್ಮಾಪಕರು.

ಅಭಿಲಾಶ್ ಗೌಡ ಚಿತ್ರಕಥೆ, ಚೈತ್ರಿಕಾ ಹೆಗಡೆ ಸಂಭಾಷಣೆ, ಗೌತಮ್ ವಖಾರಿ ಶೀರ್ಷಿಕೆ ಸಾಹಿತ್ಯ ಮತ್ತು ಸುನಾದ್ ಗೌತಮ್ ಸಂಗೀತ ‘ಸರಯೂ’ ಧಾರಾವಾಹಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.