ADVERTISEMENT

ಹುಡುಗಿಯರಿಗೂ ಷರ್ಟ್ ಅಂದ್ರೆ ಇಷ್ಟ

ಫ್ಯಾಷನ್

ಮಂಜುಶ್ರೀ ಎಂ.ಕಡಕೋಳ
Published 13 ಜನವರಿ 2017, 19:30 IST
Last Updated 13 ಜನವರಿ 2017, 19:30 IST
ಹುಡುಗಿಯರಿಗೂ ಷರ್ಟ್ ಅಂದ್ರೆ ಇಷ್ಟ
ಹುಡುಗಿಯರಿಗೂ ಷರ್ಟ್ ಅಂದ್ರೆ ಇಷ್ಟ   
ಗಂಡನ ಶರ್ಟ್‌ಅನ್ನೋ, ಅಪ್ಪನ ಶರ್ಟ್‌ ಅನ್ನೋ  ಭಾವುಕವಾಗಿ ಧರಿಸುವ ಹೆಣ್ಣುಮಕ್ಕಳು, ಆ ಶರ್ಟ್‌ನೊಂದಿಗೆ ಹೊಂದುವ ಭಾವಬೆಸುಗೆ ಅನನ್ಯ.
 
ಅಂಥದೊಂದ್ದು ಕಂಫರ್ಟ್‌ ಆ ಉಡುಪಿನಲ್ಲಿರುತ್ತಿತ್ತು. ಈಚೆಗೆ ಟ್ರೆಂಡಿ ಆಗಿರುವ ಷರ್ಟ್ ಮಾದರಿಯ ಉಡುಪುಗಳು ಕೂಡಾ ಈಗ ಅದೇ ಬೆಚ್ಚನೆಯ ಭಾವಗುಚ್ಛ ನೀಡುತ್ತಿವೆ. 
 
ಆಕರ್ಷಕ ನೋಟ, ಧರಿಸಲು ಆರಾಮದಾಯಕವಾಗಿರುವ ಷರ್ಟ್ ಮಾದರಿಯ ಉಡುಪುಗಳು ಕಾಲೇಜು ಹುಡುಗಿಯರಿಂದ ಹಿಡಿದು ಉದ್ಯೋಗಸ್ಥ ಮಹಿಳೆಯರ ಪಾಲಿಗೆ ನೆಚ್ಚಿನ ಉಡುಪುಗಳಾಗಿವೆ. ಅದರಲ್ಲೂ ಕಾರ್ಪೊರೇಟ್‌ ಜಗತ್ತಿನ ಮಹಿಳೆಯರಿಗೆ ಈ ಉಡುಪುಗಳು ಹೇಳಿ ಮಾಡಿಸಿದಂತಿರುವುದು ವಿಶೇಷ.
ಎಲ್ಲದಕ್ಕೂ ಹೊಂದಿಕೆ
 
ಕುರ್ತಾ, ಜೀನ್ಸ್‌, ಉದ್ದನೆಯ ಲಂಗ, ಫಲಾಜೋ ಹೀಗೆ ಎಲ್ಲದಕ್ಕೂ  ಷರ್ಟ್‌ ಮಾದರಿಯ ಉಡುಪುಗಳು ಹೊಂದಿಕೆಯಾಗುತ್ತವೆ. 
 
ಇತ್ತೀಚಿನ ತನಕ ಹೆಣ್ತನದ (ಫೆಮಿನೈನ್‌ ಲುಕ್‌) ನೋಟ ನೀಡುವ ಉಡುಪುಗಳು ಉದ್ಯೋಗಸ್ಥ ಮಹಿಳೆಯರಿಗೆ ಅನಿವಾರ್ಯ ಎಂಬಂತಿದ್ದವು. ಆದರೆ, ಷರ್ಟ್ ಮಾದರಿಯ ಉಡುಪುಗಳು ಅಷ್ಟಾಗಿ ಫೆಮಿನೈನ್ ಲುಕ್ ನೀಡುವುದಿಲ್ಲ. ಹಾಗಾಗಿ, ಕಚೇರಿ ಸ್ಥಳಗಳಲ್ಲಿ ಪದೇಪದೆ ದುಪಟ್ಟಾ ಸರಿಪಡಿಸುವ ಗೋಜಾಗಲೀ, ಬಸ್ ಹತ್ತುವಾಗ, ಇಳಿಯುವಾಗ ದುಪಟ್ಟಾ ಸಿಕ್ಕಿಬೀಳುವ ರಗಳೆಯಾಗಲಿ ಈ ಉಡುಪುಗಳಲ್ಲಿ ಇಲ್ಲ. 
 
ಧರಿಸಲು ಎಷ್ಟು ಆರಾಮವೋ,  ಅಷ್ಟೇ ಆಕರ್ಷಕ ನೋಟವನ್ನು ಒದಗಿಸುವುದು ಷರ್ಟ್ ಮಾದರಿಯ ಉಡುಪುಗಳ ವಿಶೇಷ ಗುಣ ಎನ್ನುತ್ತಾರೆ  ಫ್ಯಾಷನ್ ಡಿಸೈನರ್ ಸುಷ್ಮಾ ರೆಡ್ಡಿ. 
 
ಯಾರಿಗೆ ಎಂಥದ್ದು?
ಎತ್ತರ ಇರುವವರಿಗೆ ಷರ್ಟ್ ಮಾದರಿಯ ಉಡುಪುಗಳು ಹೇಳಿ ಮಾಡಿಸಿದಂಥವು. ಕುಳ್ಳಗಿರುವವರು ಉದ್ದನೆಯ ಶರ್ಟ್ ಉಡುಪುಗಳನ್ನು ಧರಿಸುವುದಕ್ಕಿಂತ ತಮ್ಮ ಎತ್ತರಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ದಪ್ಪಗಿರುವವರು ತುಸು ಸಡಿಲವಾಗಿರುವ ಉಡುಪುಗಳನ್ನು ಧರಿಸುವುದು ಒಳ್ಳೆಯದು.
 
ಡೆನಿಮ್ ಮಾದರಿಯ ಷರ್ಟ್‌ಗಳು ವೆಸ್ಟರ್ನ್‌ ನೋಟ ನೀಡುವುದರಿಂದ ಕಾಲೇಜು ಹುಡುಗಿಯರು ಧರಿಸಲು ಅಡ್ಡಿಯಿಲ್ಲ. ಡೆನಿಮ್‌ ಶರ್ಟ್ ಉಡುಪುಗಳು ಜೀನ್ಸ್ ಪ್ಯಾಂಟ್‌, ಜೆಗ್ಗಿಂಗ್ಸ್, ಲೆಗ್ಗಿಂಗ್ಸ್‌ಗೂ ಧರಿಸಬಹುದು. 
 
ಕಾಲರ್ ನೆಕ್, ಕ್ಲೋಸ್ಡ್‌ ಕಾಲರ್ ನೆಕ್‌  ಉಳ್ಳ ಷರ್ಟ್ ಮಾದರಿಯ ಉಡುಪುಗಳು ಕಚೇರಿಗೆ ಹೊಂದಿಕೆಯಾಗುತ್ತವೆ. ಮೊಣಕೈ ಭಾಗದಲ್ಲಿ ಮಡಚಲು ಗುಂಡಿಗಳಿರುವುದರಿಂದ ಶರ್ಟ್ ಮಾದರಿಯಲ್ಲಿ ಮಡಚಬಹುದು. ಇಲ್ಲವೇ ಉದ್ದ ತೋಳಿನ ಮಾದರಿಯಲ್ಲೂ ಧರಿಸಬಹುದು. 
 
ಷರ್ಟ್‌ ಮಾದರಿಯ ದಿರಿಸುಗಳ ಮತ್ತೊಂದು ವೈಶಿಷ್ಟ್ಯ ಎಂದರೆ ಇದು ಧರಿಸುವವರ ದೇಹಾಕೃತಿಯ ನೂನ್ಯತೆಯನ್ನು ಮುಚ್ಚಿ ಅಂದ ಹೆಚ್ಚಿಸುತ್ತದೆ. ಗಾಢವರ್ಣದ ಬಣ್ಣಗಳಲ್ಲಿರುವ ಈ ಮಾದರಿಯ ಉಡುಪುಗಳಿಗೆ ತಿಳಿ ಬಣ್ಣ ಇಲ್ಲವೇ ಮಂದ ಬಣ್ಣದ ಲೆಗ್ಗಿಂಗ್ಸ್  ಧರಿಸುವುದು ಸೂಕ್ತ ಆಯ್ಕೆ.
 
ಆನ್‌ಲೈನ್‌ ಸೇರಿದಂತೆ ಸ್ಥಳೀಯ ಬಟ್ಟೆ ಅಂಗಡಿಗಳಲ್ಲೂ ಷರ್ಟ್ ಮಾದರಿಯ ಉಡಪುಗಳು ಕೈಗೆಟುಕುವ ದರಗಳಲ್ಲಿ ದೊರೆಯುತ್ತವೆ.
 
**
ಷರ್ಟ್ ವಿನ್ಯಾಸದ ಉಡುಪುಗಳನ್ನು ಜೀನ್ಸ್, ಲೆಗ್ಗಿಂಗ್‌, ಜಗ್ಗಿಂಗ್‌, ಸ್ಕರ್ಟ್ ಮೇಲೂ ಹಾಕಿಕೊಳ್ಳಬಹುದು. ಇದೊಂಥರಾ ಸರ್ವರಿಗೂ ಒಪ್ಪುವ ವಿನ್ಯಾಸ..
–ಸುಷ್ಮಾ ರೆಡ್ಡಿ, ಡಿಸೈನರ್, ಸಮೀಕ್ಷಾ ಡಿಸೈನರ್ ಬೊಟಿಕ್
 
**
* ಪ್ಯಾಂಟಲೂನ್ಸ್ ₹ 500ರಿಂದ ಆರಂಭ
* ಬೀಬಾ ₹ 1,000ದಿಂದ ಆರಂಭ
* ಬೆಂಗಳೂರು (ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್), ಹುಬ್ಬಳ್ಳಿ, ಮಂಗಳೂರಿನ ಮಳಿಗೆಗಳಲ್ಲಿ ಬೆಲೆ ₹500ರಿಂದ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.