ADVERTISEMENT

ಹೃದಯ ಹೇಳಿದ ನೀತಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ಸೈಫ್‌ ಅಲಿ ಖಾನ್‌
ಸೈಫ್‌ ಅಲಿ ಖಾನ್‌   

ಸುರುಳಿ ಸುರುಳಿಯಾಗಿ ಹೊಗೆ ಬಿಡುವ ಖುಷಿಗೆ ಮರಳಾಗಿ ಹದಿನಾರರ ಹರೆಯದಲ್ಲೇ ಸಿಗರೇಟಿನ ಚಟಕ್ಕೆ ದಾಸರಾಗಿದ್ದ ಬಾಲಿವುಡ್ ನಟ ಸೈಫ್ ಅಲಿಖಾನ್, ನಂತರದ ದಿನಗಳಲ್ಲಿ ಹೃದಯದ ಮಾತು ಕೇಳಿ ಸಿಗರೇಟು ಬಿಟ್ಟ ಕಥೆಯನ್ನು ಇಲ್ಲಿ ಹೇಳಿಕೊಂಡಿದ್ದಾರೆ.

‘ನನಗೆ ಹದಿನಾರು ವರ್ಷವಿರುವಾಗಲೇ ಸಿಗರೇಟು ಸೇದಲು ಪ್ರಾರಂಭಿಸಿದೆ. ಆಗ ನಾನು ಲಂಡನ್‌ನಲ್ಲಿ ಓದುತ್ತಿದ್ದೆ. ಕನ್ನಡಿಯ ಮುಂದೆ ಸಿಗರೇಟು ಸೇದುತ್ತಾ ಹೊಗೆಯನ್ನು ಸುರುಳಿಯಾಗಿ ಬಿಡುವುದು ಖುಷಿ ನೀಡುತ್ತಿತ್ತು. ಆಗಿನ್ನೂ ನಾನು ಚಿಕ್ಕವನು. ಯಾವುದು ಸರಿ, ತಪ್ಪು ಎಂಬುದೇ ಗೊತ್ತಾಗುತ್ತಿರಲಿಲ್ಲ. ಸ್ನೇಹಿತರ ಮುಂದೆಯೂ ಸಿಗರೇಟು ಸೇದುವುದೇ ಹೆಗ್ಗಳಿಕೆ ಎನ್ನುವಂತೆ ಪೋಸು ಕೊಡುತ್ತಿದ್ದೆ.

ತುಂಬಾ ಹೊತ್ತು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಾಗ ಸಿಗರೇಟು ಸೇದದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತಿತ್ತು. ಸಿಗರೇಟು ಸೇದಿದರೆ ಒತ್ತಡ ಕಡಿಮೆ ಎನಿಸಿದಂತೆ ಆಗುತ್ತಿತ್ತು. ನಾನು ಅದರ ದಾಸನಾಗಿರುವುದು ತಿಳಿಯುವ ಮೊದಲೇ ಅದು ನನ್ನನ್ನು ಆಳಲು ಪ್ರಾರಂಭಿಸಿತು.

ADVERTISEMENT

ಸಿಗರೇಟು ಸೇವನೆಯಿಂದ ಆಗುವ ಹಾನಿಯ ಬಗ್ಗೆ ಪುಸ್ತಕಗಳನ್ನು ಓದಿ ತಿಳಿದುಕೊಂಡಾಗಲೂ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ನಾನು ಇಪ್ಪತ್ತೈದು ವರ್ಷದವನಿದ್ದಾಗ ಅಮ್ಮನ ಎದುರಿಗೆ ಸಿಗರೇಟು ಸೇದಿದ್ದೆ. ಅವರಿಗೆ ಅದು ಇಷ್ಟವಾಗಲಿಲ್ಲ. ಆದರೆ ನಾನು ಅವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈಗ ಯೋಚನೆ ಮಾಡಿದಾಗ ನಾನೆಷ್ಟು ಕಟುವಾಗಿದ್ದೆ ಎಂದು ಬೇಸರವಾಗುತ್ತದೆ.

ಅದೊಂದು ದಿನ ನನಗೆ ಹೃದಯಾಘಾತವಾಯಿತು. ವೈದ್ಯರು ಸಿಗರೇಟು ಸೇದಿದ ಪರಿಣಾಮ ಹೀಗೆ ಆಗಿದೆ. ಇನ್ನು ಮುಂದೆ ಈ ಕೆಟ್ಟ ಚಟವನ್ನು ಸಂಪೂರ್ಣವಾಗಿ ಬಿಡಬೇಕು ಎಂದು ತಿಳಿಸಿದರು. ನಾನು ಬದುಕನ್ನು ಪ್ರೀತಿಸುತ್ತೇನೆ. ಹೀಗಿದ್ದೂ, ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದೇನೆ ಎಂದು ಅರಿವಾದ ತಕ್ಷಣ, ಸಿಗರೇಟು ಸೇದುವುದು ಬಿಟ್ಟೇ ಬಿಡುತ್ತೇನೆ ಎಂದು ತೀರ್ಮಾನಿಸಿದೆ.

ಹದಿನಾರು ವರ್ಷಗಳ ನಂಟನ್ನು ಬಿಡುವುದು ಅಷ್ಟು ಸುಲಭವಾಗಿರಲಿಲ್ಲ. ಆದಷ್ಟು ಮನಸಿಗೆ ಖುಷಿ ಕೊಡುವ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದೆ. ಈಗ ನಾನು ಸಂಪೂರ್ಣವಾಗಿ ಸಿಗರೇಟಿನ ಚಟದಿಂದ ಮುಕ್ತನಾಗಿದ್ದೇನೆ.

ಸಿನಿಮಾಗಳಲ್ಲಿ ಸಿಗರೇಟು ಸೇದುವ ದೃಶ್ಯಗಳಲ್ಲಿ ನಟಿಸಿದ್ದೇನೆ. ಅದು ಪಾತ್ರಕ್ಕಾಗಿ ಅನಿವಾರ್ಯವಾಗಿತ್ತು. ಆದರೆ ಸಿಗರೇಟು ಸೇದುವುದನ್ನು ನಾನ್ಯಾವತ್ತು ಪ್ರೋತ್ಸಾಹಿಸುವುದಿಲ್ಲ. ನಾನು ಸಿಗರೇಟು ಬಿಟ್ಟಂತೆ ಬೇರೆಯವರು ಅದನ್ನು ಬಿಡಬೇಕು ಎನ್ನುವುದು ನನ್ನ ಬಯಕೆ’ ಎಂದು ಮಾತು ಮುಗಿಸುತ್ತಾರೆ ಸೈಫ್‌ ಅಲಿಖಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.