ಚಿತ್ರತಾರೆಯರೆಂದರೆ ಹಾಗೇನೇ. ಅಲ್ಲಿ ‘ಸಂಬಂಧ’ದ ಶಬ್ದ ದಿನೇ ದಿನೇ ಬೇರೆ ರೂಪ ಪಡೆದುಕೊಳ್ಳುತ್ತಲೇ ಇರುತ್ತದೆ. ಒಂದು ದಿನ ಒಬ್ಬರ ಜೊತೆ, ಇನ್ನೊಂದು ದಿನ ಇನ್ನೊಬ್ಬರ ಜೊತೆ... ಹೀಗೆ ಗಾಸಿಪ್ ಇದ್ದೇ ಇದೆ. ಸದ್ಯ ಕತ್ರೀನಾ ಕೈಫ್ ಹಾಗೂ ರಣಬೀರ್ ಕಪೂರ್ ಸಂಬಂಧದ ಕುರಿತು ದಿನೇ ದಿನೇ ಹೊಸ ಹೊಸ ವರದಿಯಾಗುತ್ತಿವೆ. 2016ರಲ್ಲಿ ತಾವಿಬ್ಬರೂ ಮದುವೆಯಾಗುವುದಾಗಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದ ರಣಬೀರ್ ಕಪೂರ್, ‘ಈ ವರ್ಷ (2015)ರಲ್ಲಿ ನಮ್ಮಿಬ್ಬರಿಗೂ ಕೆಲಸದ ಒತ್ತಡವಿರುವುದರಿಂದ ಮದುವೆಗೆ ಸಮಯವಿಲ್ಲ.
ಮುಂದಿನ ವರ್ಷದ ಕೊನೆಯಲ್ಲಿ ವಿವಾಹವಾಗಲು ಬಯಸಿದ್ದೇವೆ’ ಎಂದಿದ್ದರು. ಅಷ್ಟೇ ಅಲ್ಲದೇ, ‘ನಮ್ಮ ಸಂಬಂಧದ ಬಗ್ಗೆ ನಮಗೆ ನಂಬಿಕೆ ಇದೆ, ಈಗಲೂ ಇದರ ಬಗ್ಗೆ ನಾವು ತಿಳಿಸದಿದ್ದರೆ ನಮ್ಮ ಸಂಬಂಧಕ್ಕೆ ಅಗೌರವ ಸೂಚಿಸಿದಂತೆ. ನನಗೆ ಈಗ 33 ವರ್ಷ, ನನ್ನದೇ ಆದ ಕುಟುಂಬವನ್ನು ಹೊಂದಲು ಇದು ಸರಿಯಾದ ಸಮಯ, ಕತ್ರೀನಾಗೂ ಇದೇ ಬಯಕೆ ಇದೆ’ ಎಂದಿರುವುದಾಗಿ ಹೇಳಿದ್ದರು. ನಂತರ ಒಂದೇ ತಿಂಗಳ ಅಂತರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ನಾವಿಬ್ಬರೂ ಪ್ರೀತಿಸುತ್ತಿದ್ದೇವೆ, ಆದರೆ ಮದುವೆಯ ಬಗ್ಗೆ ಇನ್ನೂ ಯೋಚಿಸಿಲ್ಲ. ನಮ್ಮ ಮದುವೆ ವಿಚಾರವಾಗಿ ಹಲವು ಗಾಳಿಸುದ್ದಿಗಳು ಬಂದಿದೆ.
ಮುಂದಿನ ವರ್ಷ ಮದುವೆಯಾಗುತ್ತಿರುವುದಾಗಿ ನಾನೇ ಹೇಳಿದಂತೆ ಕೆಲವು ವರದಿಗಳಲ್ಲಿ ಪ್ರಕಟವಾಗಿದೆ. ಆದರೆ ಈ ರೀತಿಯ ಯಾವುದೇ ಯೋಚನೆಗಳಿಲ್ಲ’ ಎಂದು ಬಿಟ್ಟಿದ್ದರು. ಈ ಮಾತಿನಿಂದ ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿತ್ತೇನೋ ಎಂದೆಲ್ಲಾ ಗುಸುಗುಸು ಸುದ್ದಿಯಾಗಿತ್ತು. ಇವರ ಸಂಬಂಧದ ಬಗ್ಗೆ ರೆಕ್ಕೆಪುಕ್ಕಗಳು ಹರಡಿಕೊಳ್ಳುತ್ತಲೇ ಇತ್ತು. ರಣಬೀರ್ ಮೊನ್ನೆ ಇನ್ನೊಂದು ರೀತಿಯಲ್ಲಿ ಹೇಳಿಕೆ ನೀಡಿ ಗುಸುಗುಸು ಸುದ್ದಿಗೆ ಸದ್ಯದ ಮಟ್ಟಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ. ‘ಸದ್ಯ ಮದುವೆ ಯೋಚನೆ ಇಲ್ಲ. ಅದನ್ನು ಮುಂದೆ ನೋಡುವ.
ಸದ್ಯ ಬಾಂದ್ರಾದ ಅಪಾರ್ಟ್ಮೆಂಟ್ ಒಂದರಲ್ಲಿ ಒಟ್ಟಿಗೇ ಇರಲು ಯೋಚಿಸಿದ್ದೇವೆ’ ಎಂದು ಹೇಳಿದ್ದಾರಂತೆ. ಈ ಮಧ್ಯೆಯೇ ಮೊನ್ನೆ ಮೊನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ರಣಬೀರ್ ಅವರ ತಂದೆ ನಟ ರಿಶಿ ಕಪೂರ್ ಅವರನ್ನು ‘ಪಪ್ಪಾ, ಹೇಗಿದ್ದೀರಾ?’ ಎಂದು ಕತ್ರೀನಾ ಮಾತನಾಡಿಸಿದ್ದಾರೆ. ಗಂಡನ ಅಪ್ಪನನ್ನು ‘ಪಪ್ಪಾ’ ಎಂದು ಮಾತನಾಡಿಸುವುದು ಸಹಜವಾದ್ದರಿಂದ ಇವರಿಬ್ಬರ ನಡುವೆ ಸಂಬಂಧ ಚೆನ್ನಾಗಿದೆ, ಅದಕ್ಕೆ ಕುಟುಂಬದವರ ಒಪ್ಪಿಗೆಯೂ ಇದೆ’ ಎಂದು ಬಿ–ಟೌನ್ನಲ್ಲಿ ಸುದ್ದಿಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.