ADVERTISEMENT

ನಗರದ ನಡುವಿನ ಉಸಿರಾಟಕ್ಕೆ...

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ನಗರದ ನಡುವಿನ ಉಸಿರಾಟಕ್ಕೆ...
ನಗರದ ನಡುವಿನ ಉಸಿರಾಟಕ್ಕೆ...   

ವಾಹನಗಳ ಸಂಖ್ಯೆ ಮಿತಿ ಮೀರಿದೆ. ಇದಕ್ಕೆ ತಕ್ಕಂತೆ ವಾಯುಮಾಲಿನ್ಯದ ಮಟ್ಟವೂ ದಿನೇ ದಿನೇ ಏರಿಕೆಯಾಗುತ್ತಿದೆ. ಶುದ್ಧ ಗಾಳಿ, ಪರಿಸರವನ್ನು ಹುಡುಕಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ದೆಹಲಿ ಹಾಗೂ ಗುರುಗ್ರಾಮ.

ಇತ್ತೀಚೆಗೆ ದೆಹಲಿ ಹೆಚ್ಚು ಸುದ್ದಿಯಾಗಿದ್ದೂ ಮಾಲಿನ್ಯದ ಕಾರಣಕ್ಕೆ. ವಾಹನದ ಹೊಗೆಯನ್ನೇ ತುಂಬಿಕೊಂಡ ರಸ್ತೆಗಳು ಬೆಳಗ್ಗಿನ ಮಂಜನ್ನೂ ಮರೆಸುವಷ್ಟು ಪ್ರಬಲವಾಗುತ್ತಿವೆ. ಉಸಿರಾಡುವಾಗಲೂ ಮೈಯೆಲ್ಲಾ ತುಂಬುವುದು ಇದೇ ಕಲ್ಮಶವೇ. ಗುರುಗ್ರಾಮದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನಿಲ್ಲ.

ಇಂಥ ಪರಿಸ್ಥಿತಿಯಲ್ಲಿ, ಶುದ್ಧ ಗಾಳಿಯ ಅವಶ್ಯಕತೆಯನ್ನು ಮನಗಂಡು ‘ಆಕ್ಸಿಜನ್ ಚೇಂಬರ್’ ಅನ್ನು ರೂಪಿಸಲಾಗಿದೆ. ಜನಜಂಗುಳಿಯಿಂದ ತುಂಬಿರುವ ಹೂಡಾ ಮೆಟ್ರೊ ಸ್ಟೇಷನ್ ಬಳಿಯೇ ಈ ಚೇಂಬರ್ ಇರುವುದು. ಸದಾ ಹೊಗೆ, ದೂಳಿನಿಂದ ತುಂಬಿರುವ ಈ ಜಾಗದಲ್ಲಿ ಒಯಾಸಿಸ್‌ನಂತೆ ಈ ಚೇಂಬರ್ ಕಾಣುತ್ತದೆ.

ADVERTISEMENT

2015ರಿಂದ ಮಾಲಿನ್ಯದ ಕಾರಣಕ್ಕೆ 25 ಲಕ್ಷ ಮಂದಿ ಸಾವನ್ನ‍ಪ್ಪಿದ್ದು, ವಿಶ್ವದಲ್ಲೇ ಇದು ದೊಡ್ಡ ಮಟ್ಟದ್ದು ಎಂಬುದನ್ನು ಇತ್ತೀಚೆಗೆ ಲ್ಯಾಂಸೆಟ ಮೆಡಿಕಲ್ ಜರ್ನಲ್ ತಿಳಿಸಿತ್ತು. ಇಂಥ ಅಂಕಿ ಅಂಶಗಳೊಂದಿಗೆ, ಪ್ರಸ್ತುತ ಪರಿಸ್ಥಿತಿ ಈ ಚೇಂಬರ್ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದು.

13,000 ಚದರ ಅಡಿ ಜಾಗದಲ್ಲಿ ಹರಡಿಕೊಂಡಿರುವ ಈ ಜಾಗವನ್ನು ನರ್ಸರಿ, ಗ್ರೀನ್ ಹೌಸ್ ಹಾಗೂ ಹೊರಾಂಗಣ ಪ್ರದೇಶ ಎಂದು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಗಾಳಿಯನ್ನು ಶುದ್ಧೀಕರಿಸುವ ಐನೂರಕ್ಕೂ ಹೆಚ್ಚು ಗಿಡಗಳನ್ನು ಇಲ್ಲಿ ಬೆಳೆಸಿರುವುದು ವಿಶೇಷ. ಈ ಗಿಡಗಳು ಮೀಥೇನ್, ಕಾರ್ಬನ್ ಡಯಾಕ್ಸೈಡ್, ಕ್ಸೈಲೀನ್, ಬೆನ್‌ಝೀನ್‌ನಂಥ ವಿಷಕಾರಿ ಅನಿಲಗಳನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.

ಇಲ್ಲಿಗೆ ಪ್ರವೇಶ ಮುಕ್ತ. ಗಿಡಗಳ ಮಾರಾಟವೂ ನಡೆಯುತ್ತದೆ. ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್ ಉಸ್ತುವಾರಿಯಲ್ಲಿ, ನ್ಯೂಚರಿಂಗ್ ಗ್ರೀನ್ ಎಂಬ ಸಂಸ್ಥೆಯು ಈ ಆಕ್ಸಿಜನ್ ಚೇಂಬರ್ ಪ್ರಾಜೆಕ್ಟ್ ವಹಿಸಿಕೊಂಡಿದೆ. ಇನ್ನೂ ಆರು ಮೆಟ್ರೊ ನಿಲ್ದಾಣಗಳ ಬಳಿ, ಮನೆ, ಹೋಟೆಲ್, ಆಫೀಸ್, ಶಾಲೆ ಇನ್ನಿತರ ಸ್ಥಳಗಳಲ್ಲಿ ಆಕ್ಸಿಜನ್ ಚೇಂಬರ್‌ಗಳನ್ನು ರೂಪಿಸುವ ಯೋಜನೆಯನ್ನು ಹೊಂದಿದೆ ಸಂಸ್ಥೆ.

‘ಇದು ಭಾರತದ ಮೊದಲ ಆಕ್ಸಿಜನ್ ಚೇಂಬರ್. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೆ. ಆರೋಗ್ಯವಾಗಿರಬೇಕಾದರೆ ವಾಯುಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಅತಿ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ತುಂಬಾ ಇದೆ. ಮುಖ್ಯವಾಗಿ ಮೆಟ್ರೊಪಾಲಿಟನ್ ನಗರಗಳಲ್ಲಿ ಆಕ್ಸಿಜನ್ ಚೇಂಬರ್ ಎನ್ನುವುದು ಎಚ್ಚರಿಕೆಯ ಗಂಟೆಯಾಗಿಯೂ ಇರಲಿದೆ’ ಎಂದು ಹೇಳಿಕೊಂಡಿದೆ ನ್ಯೂಚರಿಂಗ್ ಗ್ರೀನ್ ಸಂಸ್ಥೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.