ADVERTISEMENT

ಅತಿವೇಗ, ರಸ್ತೆ ಉಬ್ಬು ಕಾರಣವೇ...

ಅಶ್ವಿನ್ ಸುಂದರ್ ರಸ್ತೆ ಅಪಘಾತ ದುರಂತ

ಜಯಸಿಂಹ ಆರ್.
Published 5 ಏಪ್ರಿಲ್ 2017, 19:30 IST
Last Updated 5 ಏಪ್ರಿಲ್ 2017, 19:30 IST
ಅತಿವೇಗ, ರಸ್ತೆ ಉಬ್ಬು ಕಾರಣವೇ...
ಅತಿವೇಗ, ರಸ್ತೆ ಉಬ್ಬು ಕಾರಣವೇ...   
ಭಾರತದ ಉದಯೋನ್ಮುಖ ಟ್ರ್ಯಾಕ್ ರೇಸಿಂಗ್ ಚಾಲಕರಲ್ಲಿ ಒಬ್ಬರಾಗಿದ್ದ ತಮಿಳುನಾಡಿನ ಅಶ್ವಿನ್ ಸುಂದರ್‌ ಇತ್ತೀಚೆಗೆ ಭೀಕರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದು ಇನ್ನೂ ಕಣ್ಣೆದುರೇ ಇದೆ. ಆ ಘಟನೆಯಲ್ಲಿ ಅವರ ಪತ್ನಿ, ವೈದ್ಯೆ ನಿವೇದಿತಾ ಸಹ ಮೃತಪಟ್ಟಿದ್ದರು. 
 
ಅಶ್ವಿನ್ ಚಾಲನೆ ಮಾಡುತ್ತಿದ್ದ ಬಿಎಂಡಬ್ಲ್ಯು ಕಾರು, ಮರಕ್ಕೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡಿದ್ದರಿಂದ ಅವರಿಬ್ಬರೂ ಮೃತಪಟ್ಟಿದ್ದರು. ಆರಂಭದಲ್ಲಿ ಇದಕ್ಕೆ ಕಾರಿನಲ್ಲಿದ್ದ ದೋಷವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು.

ಈ ಹಿಂದೆ ಬಿಎಂಡಬ್ಲ್ಯು ಕಾರುಗಳು ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡಿದ್ದ ಹಲವಾರು ಘಟನೆಗಳು ಇನ್ನೂ ಜನರ ಕಣ್ಣಿಂದ ಮಾಸಿಲ್ಲ. ತೀರಾ ಹತ್ತಿರದ ಘಟನೆ ಎಂಬಂತೆ, ಬೆಂಗಳೂರಿನಲ್ಲಿ ಮೂವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಟೆಸ್ಟ್‌ ಡ್ರೈವ್‌ನಲ್ಲಿದ್ದಾಗ, ಅವರ ಬಿಎಂಡಬ್ಲ್ಯು ಕಾರಿಗೆ ಬೆಂಕಿ ಹೊತ್ತಿಕೊಂಡು ಮೂವರೂ ಸಜೀವವಾಗಿ ಸುಟ್ಟುಹೋಗಿದ್ದರು. ಇವೆಲ್ಲಾ ಘಟನೆಗಳು, ಅಶ್ವಿನ್‌ ಸಂದರ್ಭದಲ್ಲೂ ಕಾರಿನಲ್ಲಿದ್ದ ದೋಷವೇ ಕಾರಣ ಎಂಬ ಆರೋಪಕ್ಕೆ ಇಂಬು ನೀಡಿದ್ದವು.
 
ಆದರೆ, ಘಟನೆ ನಡೆದು ಎರಡು ದಿನಗಳ ನಂತರ, ‘ಅಪಘಾತ ಸಂಭವಿಸಿದ್ದು ಹೇಗೆ?’, ‘ಉತ್ತಮ ಸುರಕ್ಷಾ ರೇಟಿಂಗ್ ಇದ್ದರೂ, ಕಾರಿಗೆ ಬೆಂಕಿ ಹೊತ್ತಿಕೊಂಡದ್ದು ಹೇಗೆ?’ ಎಂಬೆಲ್ಲಾ ಪ್ರಶ್ನೆಗಳು ಕಾಡತೊಡಗಿದವು.

ಈ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಪ್ರತಿಕ್ರಿಯಿಸುವುದಿಲ್ಲ ಎಂದು ಬಿಎಂಡಬ್ಲ್ಯು ಹೇಳಿಕೆ ನೀಡಿತು. ಇದೊಂದು ಹೈ ಪ್ರೊಫೈಲ್‌ ಪ್ರಕರಣವಾಗಿರುವುದರಿಂದ ತನಿಖೆಯ ಮಾಹಿತಿ ಸೋರಿಕೆಯಾಗುತ್ತಿರುವುದು, ಹೆಚ್ಚು ಕುತೂಹಲ ಮೂಡಿಸುತ್ತಿದೆ.
 
ಮೊದಲಿಗೆ ಘಟನೆ ನಡೆದ ದಿನ ಅಶ್ವಿನ್ ಮತ್ತು ಪತ್ನಿ ಇಬ್ಬರೂ ಪಾರ್ಟಿಯೊಂದರಿಂದ ಮನೆಗೆ ವಾಪಸ್ ಆಗುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಆದರೆ ಅವರು ಪಾರ್ಟಿ ಮಾಡಿದ್ದು ಏಕೆ? ಪಾರ್ಟಿ ನಡೆದದ್ದು ಎಲ್ಲಿ? ಎಂಬ ಮಾಹಿತಿಗಳು ಬಹಿರಂಗವಾಗಿಲ್ಲ.

ಅಶ್ವಿನ್ ಅವರ ಮನೆಯವರಿಗೆ ಪಾರ್ಟಿಯ ವಿಚಾರ ತಿಳಿದಿತ್ತೆ? ತಿಳಿದಿದ್ದರೂ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲವೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ತನಿಖೆಯಲ್ಲಿ ಪಾರ್ಟಿಯ ವಿಚಾರಕ್ಕೆ ಹೆಚ್ಚು ಮಹತ್ವ ಇರುವುದು ಏಕೆಂದರೆ, ಪಾರ್ಟಿ ವೇಳೆ ಅಶ್ವಿನ್ ಮದ್ಯಪಾನ ಮಾಡಿದ್ದರೆ?

ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದರೆ? ಎಂಬ ಪ್ರಶ್ನೆ ಅಪಘಾತದ ತನಿಖೆ ವೇಳೆ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಅಶ್ವಿನ್ ಮತ್ತು ನಿವೇದಿತಾ ದೇಹ ಸುಟ್ಟು ಕರಕಲಾಗಿದ್ದರಿಂದ ಮದ್ಯಪಾನದ ಬಗ್ಗೆ ಸಾಕ್ಷ್ಯಗಳು ಸಿಗದೇ ಹೋಗಿರಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.
 
ಇನ್ನು ಅಶ್ವಿನ್‌ ವೃತ್ತಿಪರ ರೇಸಿಂಗ್ ಚಾಲಕ. ಘಟನೆ ನಡೆದಾಗ ಕಾರು 120ಕಿ.ಮೀ/ಗಂಟೆ ವೇಗದಲ್ಲಿತ್ತು ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಪಘಾತ ನಡೆದ ಜಾಗದಿಂದ ಮುಂಬದಿಗೆ ಸುಮಾರು 1 ಕಿ.ಮೀ ಮತ್ತು ಹಿಂಬದಿಗೆ ಸುಮಾರು 700 ಮೀಟರ್‌ ನೇರ ರಸ್ತೆಯಿದೆ.
 
ಜತೆಗೆ ಅದು ಒಟ್ಟು ನಾಲ್ಕು ಲೇನ್‌ಗಳ ರಸ್ತೆ.  ಇಂತಹ ರಸ್ತೆಯಲ್ಲಿ ನಿಜಕ್ಕೂ 120ಕಿ.ಮೀ/ಗಂಟೆ ವೇಗ ಪಡೆಯಲು ಸಾಧ್ಯ. ‘ಅತಿವೇಗದ ಕಾರಣ ನಿಯಂತ್ರಣ ತಪ್ಪಿ, ಅಪಘಾತ ಸಂಭವಿಸಿದೆ’ ಎಂದು ಪ್ರಕರಣವನ್ನು ಮುಗಿಸಲು ಪೊಲೀಸರಿಗೆ ಇಲ್ಲೂ ಒಂದು ಅಡ್ಡಿಯಿತ್ತು.

ಕಾರು ಮರ ಮತ್ತು ಗೋಡೆಯ ಮಧ್ಯೆ ಸಿಲುಕಿದ್ದ ಜಾಗದಿಂದ ಸರಿಯಾಗಿ 110 ಮೀಟರ್‌ ಹಿಂದೆ ಒಂದು ದೊಡ್ಡ ಕಾಂಕ್ರೀಟ್‌ ರಸ್ತೆ ಉಬ್ಬು ಇತ್ತು. ಆ ಉಬ್ಬಿನಿಂದ ಹಿಂದಕ್ಕೆ ಸರಿಯಾಗಿ 100 ಮೀಟರ್‌ನಲ್ಲಿ ಮತ್ತೊಂದು ಡಾಂಬರಿನ ರಸ್ತೆ ಉಬ್ಬು ಇತ್ತು. ಅದರ ಹಿಂಬದಿಗೆ ಮತ್ತೆ 100 ಮೀಟರ್‌ನಲ್ಲಿ ಮತ್ತೊಂದು ಡಾಂಬರಿನ ಉಬ್ಬು ಇತ್ತು. ಒಟ್ಟು 400 ಮೀಟರ್‌ ಅಂತರದಲ್ಲಿ 3 ರಸ್ತೆ ಉಬ್ಬುಗಳಿದ್ದವು.

ಹೀಗಾಗಿ, ‘ಕೊನೆಯ ಎರಡು ರಸ್ತೆ ಉಬ್ಬುಗಳ ಮಧ್ಯೆ ಇದ್ದ 100 ಮೀಟರ್‌ ಅಂತರದಲ್ಲಿ 120 ಕಿ.ಮೀ/ಗಂಟೆ ವೇಗ ಪಡೆಯಲು ಸಾಧ್ಯವೇ’ ಎಂಬ ಪ್ರಶ್ನೆಯನ್ನು ಎಫ್‌ಐಆರ್‌ ಮಾಹಿತಿ ಬಹಿರಂಗವಾದಾಗ ಕೆಲ ಮಾಧ್ಯಮಗಳು ಎತ್ತಿದವು. ಅಶ್ವಿನ್ ಚಲಾಯಿಸುತ್ತಿದ್ದ ಕಾರು ಯಾವುದು ಎಂಬ ಪ್ರಶ್ನೆಗೆ ಆಗ ಮಹತ್ವ ಬಂತು.
 
ಅಶ್ವಿನ್ ಚಲಾಯಿಸುತ್ತಿದ್ದದ್ದು ಬಿಎಂಡಬ್ಲ್ಯು ಝಡ್‌4 ರೋಡ್‌ಸ್ಟಾರ್‌ ಕಾರು. ಈ ಕಾರು ನಿಂತಲ್ಲಿಂದ ಕೇವಲ 5.1 ಸೆಕೆಂಡ್‌ ಅವಧಿಯಲ್ಲಿ 100 ಕಿ.ಮೀ/ಗಂಟೆ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎರಡು ರಸ್ತೆ ಉಬ್ಬುಗಳ ನಡುವಿನ ಅಂತರದಲ್ಲೇ ಕಾರು 100 ಕಿ.ಮೀ./ಗಂಟೆ ವೇಗ ಪಡೆಯಲು ಸಾಧ್ಯವಿತ್ತು.

ಎಂಜಿನ್‌ ಮಾರ್ಪಡಿಸಿದ್ದರಿಂದ (ಪೊಲೀಸರ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ) ಕಾರು ಇನ್ನೂ ಹೆಚ್ಚಿನ ವೇಗ ಪಡೆದಿರುವ ಸಾಧ್ಯತೆಯೂ ಇದೆ. ಈ ಲೆಕ್ಕಾಚಾರಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದ ‘ದಿ ಹಿಂದೂ’, ತಜ್ಞರ ಬಳಿ ಅಪಘಾತ ಹೇಗೆ ಸಂಭವಿಸಿರಬಹುದು ಎಂದು ವಿವರಣೆ ಪಡೆಯಲು ಪ್ರಯತ್ನಿಸಿತು.

‘ಕಾರು ಕೊನೆಯ ರಸ್ತೆಉಬ್ಬನ್ನು ಭಾರಿ ವೇಗದಲ್ಲಿ ದಾಟಿದೆ. ಹೀಗಾಗಿ ಕಾರು ಗಾಳಿಗೆ ಚಿಮ್ಮಿದೆ. ನಂತರ ನೆಲಕ್ಕೆ ಇಳಿದರೂ, ನಿಯಂತ್ರಣ ಸಾಧ್ಯವಾಗದೆ ಮರಕ್ಕೆ ಡಿಕ್ಕಿ ಹೊಡೆದಿದೆ’ ಎಂದು ಕಾಲ್ಪನಿಕ ಚಿತ್ರಗಳ ಸಮೇತ ವರದಿ ಪ್ರಕಟಿಸಿತು.
 
ತನಿಖೆಯೂ ಇದೇ ಹಾದಿಯಲ್ಲಿ ಸಾಗುತ್ತಿದೆ. ಕೊನೆಯ ರಸ್ತೆ ಉಬ್ಬಿನ ಬಳಿ ಕಾರ್‌ನ ಚಕ್ರಗಳು ಸ್ಕಿಡ್‌ ಆಗಿರುವ ಗುರುತುಗಳು ಇರಲಿಲ್ಲ. ಆದರೆ ಮರದಿಂದ ಕೇವಲ 30 ಮೀಟರ್‌ ಹಿಂದೆ ಸ್ಕಿಡ್ ಗುರುತುಗಳು ಇವೆ.

ಅಲ್ಲಿ ಕಾರು ತನ್ನ ದಿಕ್ಕನ್ನು ಬದಲಿಸಿ, ಮರದತ್ತ ನುಗ್ಗುತ್ತಿರುವುದು ದಾಖಲಾಗಿದೆ. ಅಂದರೆ ನೇರವಾದ ರಸ್ತೆಯಲ್ಲಿ ಕಾರು ಎಡಕ್ಕೆ ತಿರುಗಿದೆ. ಇದ್ದಕ್ಕಿದ್ದಂತೆ ಕಾರು ಅಷ್ಟು ತಿರುವು ಪಡೆಯಲು ಹೇಗೆ ಸಾಧ್ಯ.

ಹೀಗಾಗಿ ವೇಗವಾಗಿ ರಸ್ತೆ ಉಬ್ಬು ಹಾದುದ್ದರಿಂದ ಕಾರು ಗಾಳಿಗೆ ಚಿಮ್ಮಿರಬಹುದು. ಮುಂಬದಿಯ ಚಕ್ರಗಳು ಮೊದಲು ಮೇಲಕ್ಕೆ ಚಿಮ್ಮಿರುತ್ತವೆ. ನಂತರ ಹಿಂಬದಿಯ ಚಕ್ರಗಳು ಉಬ್ಬಿಗೆ ಅಪ್ಪಳಿಸಿದಾಗ, ಮುಂದಿನ ಚಕ್ರಗಳು ಗಾಳಿಯಲ್ಲಿದ್ದರೆ, ಕಾರಿನ ಚಲನೆಯ ದಿಕ್ಕು ಬದಲಾಗುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
 
ಆದರೆ ಆ ರಸ್ತೆ ಉಬ್ಬು ಅನಧಿಕೃತವಾದುದು ಎಂಬುದು ಪತ್ತೆಯಾಗಿದೆ. ಕಾಂಕ್ರೀಟ್‌ ಉಬ್ಬನ್ನು ಹೊರತುಪಡಿಸಿ, ಉಳಿದೆರಡು ಉಬ್ಬುಗಳ ಮೇಲೆ ಬಿಳಿ ಪಟ್ಟಿಗಳಿವೆ. ಅವನ್ನು ಕತ್ತಲಲ್ಲೂ ಗುರುತಿಸಬಹುದು. ಜತೆಗೆ ಆ ಎರಡೂ ಉಬ್ಬುಗಳು ರಸ್ತೆಯ ಎರಡೂ ಬದಿ (ನಾಲ್ಕೂ ಲೇನ್‌)ಗಳಲ್ಲಿ ಇವೆ.

ಆದರೆ ಕಾಂಕ್ರೀಟ್‌ ಉಬ್ಬು ರಸ್ತೆಯ ಒಂದು ಬದಿಯಲ್ಲಷ್ಟೇ ಇದೆ. ಅದನ್ನು ರಸ್ತೆಯ ಪಕ್ಕದಲ್ಲಿದ್ದ ಶಾಲೆಯವರು ಹಾಕಿಸಿದ್ದು ಎಂಬುದು ಪತ್ತೆಯಾಗಿದೆ. ಅಪಘಾತಕ್ಕೆ ರಸ್ತೆಯ ಉಬ್ಬೂ ಕಾರಣವಾದುದ್ದರಿಂದ ಮತ್ತು ಅದು ಅನಧಿಕೃತವಾದುದ್ದರಿಂದ ಆ ಶಾಲೆಯವರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
 
‘ಇವೆಲ್ಲಾ ಕಾರು ನಿಯಂತ್ರಣ ತಪ್ಪಿದ್ದು, ಅಪಘಾತ ನಡೆದದ್ದು ಹೇಗೆ ಎಂಬುದನ್ನು ವಿವರಿಸಲು ಪ್ರಯತ್ನಿಸಿವೆ. ಆದರೆ ಬೆಂಕಿ ಹೊತ್ತಿಕೊಂಡದ್ದು ಹೇಗೆ ಎಂಬುದನ್ನು ನಮ್ಮ ‘ವೆಹಿಕಲ್‌ ಎಂಜಿನಿಯರ್‌’ಗಳ ಕೈಯಲ್ಲಿ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ.

ನೀವೇ ಇದನ್ನು ಪರಿಹರಿಸಿಕೊಡಿ’ ಎಂದು ಚೆನ್ನೈ ಪೊಲೀಸರು ಬಿಎಂಡಬ್ಲ್ಯು ಬಳಿ ಮನವಿ ಮಾಡಿಕೊಂಡಿದ್ದಾರೆ. ಬಿಎಂಡಬ್ಲ್ಯು, ಪ್ರಕರಣದ ಇಡೀ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಕಾರಿನ ಎಂಜಿನ್‌ನಲ್ಲಿ ಮಾಡಿದ್ದ ಮಾರ್ಪಾಡೂ, ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
 
‘ಅಶ್ವಿನ್ ಆ ಕಾರಿನ ಮೊದಲ ಮಾಲೀಕರೇನಲ್ಲ. ಅಶ್ವಿನ್‌ಗೂ ಮೊದಲೇ ಝಡ್‌4 ಇಬ್ಬರು ಮಾಲೀಕರನ್ನು ಕಂಡಿತ್ತು. ಆ ಇಬ್ಬರು ಮಾಲೀಕರೂ ಆ ಕಾರಿನ ಎಂಜಿನ್‌ ಅನ್ನು ಮತ್ತಷ್ಟು ಶಕ್ತಿಗಾಗಿ ಮಾರ್ಪಡಿಸಿದ್ದರು. ಅಶ್ವಿನ್‌ ಸಹ ಎಂಜಿನ್‌ ಅನ್ನು ಮತ್ತಷ್ಟು ಮಾರ್ಪಾಡು ಮಾಡಿಸಿದ್ದರು.

ಅಪಘಾತ ನಡೆದ ಸಮಯಕ್ಕೆ ಸರಿಯಾಗಿ ಆರು ತಾಸು ಮೊದಲು, ಅಂದರೆ ರಾತ್ರಿ 8 ಗಂಟೆಗೆ ಅಶ್ವಿನ್‌ ನನ್ನನ್ನು ಭೇಟಿ ಮಾಡಿದ್ದರು. ಝಡ್‌4 ಎಂಜಿನ್‌ ಮಾರ್ಪಡಿಸಿದ್ದು, ಅದಕ್ಕೆ ತಕ್ಕಂತೆ ಟೈರ್‌ಗಳನ್ನು ಅಪ್‌ಗ್ರೇಡ್‌ ಮಾಡಬೇಕಿದೆ. ಅಂತಹ ಟೈರ್‌ ಮತ್ತು ರಿಮ್‌ಗಳನ್ನು ತರಿಸಿಕೊಡು ಎಂದು ಹೇಳಿದ್ದರು.

ಕಾರಿನ ಶಕ್ತಿಗೆ ತಕ್ಕಂತಹ ಟೈರ್‌ಗಳು ಇಲ್ಲದ ಕಾರಣ, ಕಾರು ಚಾಲಕನ ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ. ಎಂಜಿನ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂನಲ್ಲಿನ ಬದಲಾವಣೆಯ ಕಾರಣ ಬೆಂಕಿ ಹೊತ್ತಿಕೊಂಡಿರಬಹದು’ ಎಂದು ಅಶ್ವಿನ್‌ ಅವರ ಗೆಳೆಯರೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ವತಃ ಡ್ರಾಗ್‌ ರೇಸರ್‌ ಸಹ ಆಗಿರುವ ಆ ವ್ಯಕ್ತಿ, ಚೆನ್ನೈನಲ್ಲಿ ಐಶಾರಾಮಿ ಕಾರುಗಳ ಟೈರ್‌ಗಳ ದೊಡ್ಡ ಡೀಲರ್‌ ಸಹ ಹೌದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.