ADVERTISEMENT

ಕೃಷ್ಣ ಮತ್ತೆ ಬಂದಾಗ

ಗಣೇಶ ವೈದ್ಯ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

 ನಿಜ ನಾಮಧೇಯದ ಹಿಂದೆ ಕೃಷ್ಣ ಎಂದು ಸೇರಿಸಿಕೊಂಡೇ ಜನಮನದಲ್ಲಿ ಸೇರಿರುವ ನಟ ಕೃಷ್ಣ ಅಜೇಯರಾವ್. ಚಿತ್ರಗಳಲ್ಲಿ ಲವರ್ ಬಾಯ್ ಆಗಿ ಕೃಷ್ಣಲೀಲೆ ಆಡುವ ಅವರೊಳಗೆ ಅಭಿಮಾನಿಗಳಿಗೆ ಗೊತ್ತಿಲ್ಲದ ಪಕ್ಕಾ ಮಾಸ್ ಕ್ಯಾರೆಕ್ಟರ್ ಒಂದಿದೆಯಂತೆ. ಹಿಟ್ ಚಿತ್ರಗಳನ್ನು ನೀಡಿದ ಅಜೇಯರಾವ್ ಒಂದಷ್ಟು ಸೋಲನ್ನೂ ಕಂಡಿದ್ದಾರೆ. ಏನೇ ಆದರೂ ನಾನು ‘ಅಜೇಯ’ ಎನ್ನುವ ಅವರು ತಮ್ಮ ಸಿನಿಮಾ ಬದುಕಿನ ಕುರಿತು ಮಾತನಾಡಿದ್ದಾರೆ.

*ಅಜೇಯರಾವ್ ಅವರನ್ನು ಕೃಷ್ಣ ಅಜೇಯರಾವ್ ಅಂತಾನೇ ಜನ ಗುರ್ತಿಸ್ತಾರಲ್ಲ?
ಹೌದು. ಅದು ನಂಗೆ ತುಂಬ ಖುಷಿ ಕೊಡುತ್ತೆ. ಆ್ಯಕ್ಚುವಲಿ ಅದನ್ನ ಹರಿಕೃಷ್ಣ ಅವರು ಸಲಹೆ ಮಾಡಿದ್ದು. ಅವರು ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ಹೇಳಿದ್ದರು. ಆದರೆ ನಾನು ಸಂಖ್ಯೆಗಳನ್ನೆಲ್ಲ ಲೆಕ್ಕ ಹಾಕಿಲ್ಲ. ತಂದೆ ಕೃಷ್ಣನ ಭಕ್ತರಾಗಿದ್ರು. ನಾನು ಕೂಡ. ಕೃಷ್ಣನ ಹೆಸರು ಸೇರಿಸ್ಕೊಂಡ್ರೆ ಲಕ್ಕಿ ಆಗಬಹುದು ಅಂತ ನಾನು ಹರಿಕೃಷ್ಣ ಅವರ ಸಲಹೆ ಒಪ್ಪಿಕೊಂಡೆ.

*ಕೃಷ್ಣನ್ ಲವ್ವೂ ಆಯ್ತು, ಮ್ಯಾರೇಜೂ ಆಯ್ತು. ಮುಂದೇನು?
ಮುಂದೆ ಕೃಷ್ಣಲೀಲಾ. ‘ಕೃಷ್ಣಲೀಲಾ’ ಚಿತ್ರ ಮಾಡ್ತಿದೀನಿ. ಲೀಲಾ ಏನ್ ಕೊಡ್ತಾಳೊ ಗೊತ್ತಿಲ್ಲ.

ADVERTISEMENT

*ಈ ಕಲಿಯುಗದ ಕೃಷ್ಣ ಇನ್ನೂ ಎಷ್ಟು ಅವತಾರಗಳನ್ನ ಎತ್ತುತ್ತಾನೆ?
ಇದೇ ರೀತಿ ಪ್ರಶ್ನೆಗೇ ಕೃಷ್ಣಲೀಲಾ ಶುರು ಹಚ್ಕೊಂಡಿದ್ದು. ಅಭಿಮಾನಿಗಳು ಎಷ್ಟು ಕೇಳ್ತಾರೋ ಅಷ್ಟು ಅವತಾರಗಳನ್ನು ಕೃಷ್ಣ ಎತ್ತುತ್ತಾನೆ.

*ಕೃಷ್ಣ ಕನ್ಯೆಯರನ್ನ ಹುಡ್ಕೋದಕ್ಕೆ ‘ರೋಜ್’ ಹಿಡ್ಕೊಂಡು ಹೋಗಿದ್ನಾ?
ಇಲ್ಲ. ಕೃಷ್ಣ ರೋಜ್ ಹಿಡ್ಕೊಂಡು ಯಾವತ್ತೂ ಹೋಗಿಲ್ಲ. ಕೃಷ್ಣನ್ ಹಿಂದೆನೇ ಸಾಕಷ್ಟು ಕನ್ಯೆಯರು ಬರ್ತಿರ್ತಾರೆ. ಅದು ಸ್ಕೂಲ್, ಕಾಲೇಜ್ ದಿನಗಳಿಂದಲೂ ಇದ್ದಿದ್ದೇ.

*ರೋಜ್ ಚಿತ್ರದಲ್ಲಿ ಕೀಟಲೆ ಮಾಡಿ ‘ಏನ್ಲಾ ಬಡ್ಡೇದೆ ಮೈಗೆ ಎಂಗದೇ’ ಅಂತ ಕೇಳಿಸ್ಕೊಂಡ್ರಿ. ಆ ರೀತಿ ರಿಯಲ್ ಲೈಫಲ್ಲಿ ಯಾರಾದ್ರೂ ಕೇಳಿದ್ದುಂಟಾ?
ಇಲ್ಲಪ್ಪ. ರಿಯಲ್ ಲೈಫಲ್ಲಿ ಯಾರದೂ ದಾವಣಿ ಎಳಿಯೋ ಕೇಸ್ ಎಲ್ಲ ಮಾಡಿಲ್ಲ. ಏನಂದ್ರೆ ಕೃಷ್ಣ ಸೀರೆನೂ ಕೊಟ್ಟಿದಾನೆ. ಅದನ್ನ ಯಾರೂ ಹೆಚ್ಚು ನೆನೆಸಿಕೊಳ್ಳಲ್ಲ. ಹುಡ್ಗೀರ್ ಬಟ್ಟೆ ಎಳ್ದಿದ್ದೇ ಜಾಸ್ತಿ ನೆನೆಸ್ಕೊಳ್ತಾರೆ.

*ಸಂಭಾವನೆ ಹೊರತಾಗಿ ರೋಜ್ ಚಿತ್ರ ನಿಮಗೆ ಏನು ಕೊಟ್ಟಿದೆ?
ನಿಜ ಹೇಳೋದಾದ್ರೆ ಅದನ್ನೆಲ್ಲ ಲೆಕ್ಕ ಹಾಕೋಕೆ ಹೋಗಿಲ್ಲ. ರೋಜ್ ಅಂತಲ್ಲ, ಎಲ್ಲಾ ಚಿತ್ರಗಳಿಗೂ ಅಷ್ಟೇ. ನಿರ್ಮಾಪಕರು ಸಾಕಷ್ಟು ಕಷ್ಟಪಟ್ಟು ಚಿತ್ರ ಮಾಡಿರುತ್ತಾರೆ. ಹೀಗಾಗಿ ಸಿನಿಮಾ ನನಗೆ ಏನು ಕೊಟ್ಟಿತು ಅನ್ನೋದಕ್ಕಿಂತ ಚಿತ್ರದ ಯಶಸ್ಸಿಗಾಗಿ ನಾನು ಏನು ಕೊಡೋಕೆ ಸಾಧ್ಯವೋ ಅಷ್ಟನ್ನೂ ಕೊಟ್ಟಿದೀನಿ. ಅದು ನನ್ನ ಕರ್ತವ್ಯ ಕೂಡ. 

*ಸಾಮಾನ್ಯವಾಗಿ ಎಲ್ಲರೂ ಒಂದು ಚಿತ್ರ ಮಾಡಿದಾಗ ಈ ಚಿತ್ರ ನನಗೆ ಏನು ಕಲಿಸಿದೆ ಅಂತೆಲ್ಲ ಹೇಳ್ತಾರೆ. ನಿಮಗೆ ‘ರೋಜ್’ ಏನು ಕಲಿಸಿತು?
   ರೋಜ್ ಚಿತ್ರ ಅನ್ನೋದಕ್ಕಿಂತ ನನ್ನ ಅನುಭವದಲ್ಲಿ, ಚಿತ್ರರಂಗದಲ್ಲಿ ಸ್ಟಾರ್‌ಡಮ್ ಅನ್ನೋದು ಸುಳ್ಳು ಅಂತ ಕಂಡುಕೊಂಡಿದ್ದೇನೆ. ಯಾರು ಯಾವ ಮಟ್ಟಕ್ಕಾದರೂ ಏರಬಹುದು ಅಥವಾ ಇಳಿಯಬಹುದು. ಅದನ್ನು ಚಿತ್ರದ ಗಳಿಕೆ ನಿರ್ಧರಿಸುತ್ತದೆ. ಆದರೆ ನಟನೆ ಅನ್ನೋದು ಶಾಶ್ವತ. ಯಾಕೆಂದರೆ, ರೋಜ್‌ಗಿಂತ ಮೊದಲು ನನ್ನ ಎರಡು ಚಿತ್ರಗಳು ಅಟ್ಟರ್‌ ಫ್ಲಾಪ್ ಆಗಿದ್ದವು. ಆದರೆ ರೋಜ್ ಚಿತ್ರದ ನಾಯಕ ಪಾತ್ರಕ್ಕೆ ನಾನು ಸೂಕ್ತ ಅನ್ನೋ ಕಾರಣಕ್ಕೆ ನಿರ್ದೇಶಕರು ನನ್ನ ಬಳಿ ಬಂದರು. ಜನ ನನ್ನ ನಟನೆಯನ್ನು ಗುರುತಿಸಿದ್ದರಿಂದ ಇನ್ನೂ ಚಿತ್ರರಂಗದಲ್ಲಿದೀನಿ. ಅದು ಬಿಟ್ಟು ನಾನು ಸ್ಟಾರ್‌ಡಮ್ ನೆಚ್ಚಿಕೊಂಡಿದ್ದರೆ ನನ್ನ ಹತ್ತಿರ ಯಾರೂ ಬರ್ತಿರ್ಲಿಲ್ಲ.

*ಯಾವ ಹಿರೋಯಿನ್ ಜತೆ ನಟಿಸಲು ತುಂಬ ಆಸೆ?
   ಕಾಜೋಲ್. ಕಾಜೋಲ್ ಅಗರ್‌ವಾಲ್ ಅಲ್ಲ. ಕಾಜೋಲ್ ದೇವಗನ್. ಅವ್ರಿಗೆ ಅಜಯ್‌ನನ್ನೇ ಮದುವೆ ಆಗ್ಬೇಕು ಅಂತ ದೇವರು ಬರ್ದಿದ್ದ. ಆದ್ರೆ ಅದು ಈ ಅಜಯ್ ಆಗಿಲ್ಲ. ಅಜಯ್ ದೇವಗನ್ ಆದ್ರು.

*ನಿಮ್ ಕನಸಿನ ಪಾತ್ರ ಅಂತ ಯಾವುದಾದ್ರೂ ಇದೆಯಾ?
   ಹಂಗಂತ ಏನು ಇಲ್ಲ. ಕಥೆ ಕೇಳ್ದಾಗ ಮಾಡ್ಬೇಕು ಅನ್ನಿಸಿದ್ರೆ ಮಾಡ್ತೀನಿ ಅಷ್ಟೆ.

*ತುಂಬ ತೃಪ್ತಿ ನೀಡಿದ ಪಾತ್ರ?
   ತುಂಬ ತೃಪ್ತಿ ನೀಡಿದ ಪಾತ್ರ ಅಂದ್ರೆ... ಕೃಷ್ಣಲೀಲಾ ಮಾಡ್ತಿದೀನಲ್ಲ, ಅದರಲ್ಲಿ ನನ್ನ ಪಾತ್ರ ಇದುವರೆಗಿನ ‘ದಿ ಬೆಸ್ಟ್’ ಅನ್ನುವಂತಿದೆ.

*ಕೃಷ್ಣಲೀಲಾದಲ್ಲಿ ಕೃಷ್ಣನ ಲೀಲೆಗಳನ್ನ ತೋರಿಸಿದ್ದೀರಾ?
   ಚಿತ್ರದಲ್ಲಿ ಕೃಷ್ಣನ ಲೀಲೆಗಳು ಸೌಂಡ್ ಆಗುತ್ತೆ. ಪಾತ್ರ ನೋಡುವುದಾದರೆ ನಾನು ಕೃಷ್ಣ, ನನ್ನ ನಾಯಕಿ ಲೀಲಾ. ನಾನು ಇದರಲ್ಲಿ ಶಾಲಾ ವಾಹನದ ಡ್ರೈವರ್. ನೂರೆಂಟು ಕಷ್ಟಗಳ ನಡುವೆಯೂ ಕೃಷ್ಣ ಹೇಗೆ ಪ್ರೀತಿ ಉಳಿಸಿಕೊಳ್ತಾನೆ ಅನ್ನೋದು ಚಿತ್ರ.

*ಕೊನೆಯದಾಗಿ ನಿಮ್ಮ ಮದುವೆ ವಿಚಾರಕ್ಕೆ ಬರೋಣ.
   ಮದುವೆ ವಿಚಾರಕ್ಕೆ ಬಂದ್ರೆ, ಸತತ ಮೂರು ವರ್ಷಗಳಿಂದ ಹುಡುಗಿ ಹುಡುಕಾಟ ನಡೀತಿದೆ. ನಾನೂ ಆಗಾಗ ಆಕಡೆ ಈ ಕಡೆ ಕಣ್ಣು ಹಾಯಿಸ್ತಿರ್ತೀನಿ. ಇನ್ನೂ ಸೂಕ್ತ ವಧು ಸಿಕ್ಕಿಲ್ಲ. ಮನೆಯಲ್ಲಿ ನಾನು ನಟನಾಗಿ ಇರುವುದಿಲ್ಲ. ನನ್ನನ್ನು ನಟ ಅಂತ ಒಪ್ಪೋದಕ್ಕಿಂತ ಸಾಮಾನ್ಯ ವ್ಯಕ್ತಿಯಾಗಿ ಒಪ್ಪೋ ಹುಡುಗಿ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ತಾಯಿಗೆ ಒಳ್ಳೆಯ ಸೊಸೆಯಾಗಿರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.