ADVERTISEMENT

ಕ್ಲಾಸಿಗೆ ಚಕ್ಕರ್, ಕ್ರಿಕೆಟ್‌ಗೆ ಹಾಜರ್...

ಪ್ರಜಾವಾಣಿ ವಿಶೇಷ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಅಭಿಮಾನಿಗಳ ಮನಗೆದ್ದ ಕ್ರಿಕೆಟ್ ಆಟಗಾರನ ವೈಯಕ್ತಿಕ ಬದುಕು ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇಷ್ಟದ ನಾಯಕ-ನಾಯಕಿ, ಪ್ರೀತಿ-ಪ್ರೇಮ ಹೀಗೆ ಹಲವು ವಿಷಯಗಳ ಬಗ್ಗೆ ಕರ್ನಾಟಕ ತಂಡದ ಉಪನಾಯಕ ಸಿ.ಎಂ. ಗೌತಮ್ ಮಾತನಾಡಿದ್ದಾರೆ.

* ಕ್ರಿಕೆಟ್ ಚಟುವಟಿಕೆಗಳು ಇಲ್ಲದಾಗ ನಿಮ್ಮ ಜೀವನ ಶೈಲಿ ಹೇಗಿರುತ್ತದೆ?
ಪ್ರತಿದಿನವೂ ಜಿಮ್ ಮಾಡುತ್ತೇನೆ. ಮನೆಯವರ ಜೊತೆ ಹೆಚ್ಚು ಸಮಯ ಕಳೆಯುತ್ತೇನೆ. ಗೆಳೆಯರೊಂದಿಗೆ ಓಡಾಡುವುದು, ಲಾಂಗ್ ಡ್ರೈವ್ ಹೋಗುವುದೆಂದರೆ ತುಂಬಾ ಇಷ್ಟ. ಬಿಡುವು ಸಿಗುವುದೇ ಕಡಿಮೆ. ಸಿಕ್ಕಾಗ ಪೋಷಕರೊಂದಿಗೆ ಸಿನಿಮಾ ನೋಡಲು ಇಷ್ಟಪಡುತ್ತೇನೆ.

*ಕ್ರಿಕೆಟ್ ಟೂರ್ನಿ ಆಡಲು ಹೋದಾಗ ಹೇಗೆ ಸಮಯ ಕಳೆಯುತ್ತೀರಿ?
ದಿನದಾಟ ಮುಗಿದ ಬಳಿಕ ಗೆಳೆಯರೆಲ್ಲರೂ ಸೇರಿ ಒಂದೇ ಕೊಠಡಿಯಲ್ಲಿ ಹರಟೆ ಹೊಡೆಯುತ್ತೇವೆ. ಪಂದ್ಯ ಮುಗಿದ ದಿನ ಸಿನಿಮಾಕ್ಕೆ ಹೋಗುತ್ತೇವೆ. ಪಾರ್ಟಿ ಮಾಡುತ್ತೇವೆ. ಗೆಳೆಯರು ಹೆಚ್ಚಿರುವ ಕಾರಣ ಹೊರಗಡೆ ಹೋದಾಗ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ.

*ಯಾವ ರೀತಿಯ ಸಿನಿಮಾ ಇಷ್ಟವಾಗುತ್ತದೆ?
ಇಂಥದ್ದೇ ಸಿನಿಮಾ ಎಂದು ಏನಿಲ್ಲ. ಎಲ್ಲಾ ಭಾಷೆಗಳ ಚಿತ್ರಗಳನ್ನೂ ನೋಡುತ್ತೇನೆ. ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾ ನೋಡಲು ಖುಷಿಯಾಗುತ್ತದೆ.

*ನೆಚ್ಚಿನ ನಟ-ನಟಿ ಯಾರು?
ರಜನಿಕಾಂತ್ ಹಾಗೂ ದೀಪಿಕಾ ಪಡುಕೋಣೆ.

*ತುಂಬಾ ಇಷ್ಟವಾಗುವ ಆಹಾರ?
ಮಟನ್ ಬಿರಿಯಾನಿ, ಚಿಲ್ಲಿ ಚಿಕನ್ ತುಂಬಾ ಇಷ್ಟ. ಅದರಲ್ಲೂ ಮನೆಯಲ್ಲಿ ಮಾಡಿದ ಊಟವೆಂದರೆ ಕೊಂಚ ಜಾಸ್ತಿಯೇ ತಿನ್ನುತ್ತೇನೆ. ವೆಜ್‌ನಲ್ಲಿ ಅನ್ನ ಸಾಂಬಾರ್ ಬಲು ಇಷ್ಟ.

*ಸಾಕಷ್ಟು ಸಮಯ ಹೊರಗಡೆ ಕಳೆಯುತ್ತೀರಲ್ಲಾ. ಮನೆಯವರನ್ನು ಮಿಸ್‌್ ಮಾಡಿಕೊಳ್ತೀನಿ ಎನಿಸುವುದಿಲ್ಲವೇ?
ಮೊದಲೇ ಅವಕಾಶಗಳು ಸಿಗುವುದು ಕಡಿಮೆ. ಆದ್ದರಿಂದ ಕ್ರಿಕೆಟ್‌ಗೆ ಮೊದಲ ಆದ್ಯತೆ. ರಣಜಿ ಟೂರ್ನಿ ವೇಳೆ ನಿರಂತರ ಪಂದ್ಯಗಳು ಇದ್ದೇ ಇರುತ್ತವೆ. ಇರುವುದರಲ್ಲಿಯೇ ಕೊಂಚ ಬಿಡುವು ಮಾಡಿಕೊಂಡು ಎರಡು ಮೂರು ದಿನ ಕುಟುಂಬದ ಜೊತೆ ಕಳೆಯುತ್ತೇನೆ. ಕುಟುಂಬದ ಜೊತೆ ಕಳೆಯುವ ಕೊಂಚ ಸಮಯವೇ ನನ್ನಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡಿಸುತ್ತದೆ. ಲಾಂಗ್ ಡ್ರೈವ್ ಹೋಗುವುದೆಂದರೆ ಪಂಚಪ್ರಾಣ.

*ಪದೇ ಪದೇ ಹೋಗಬೇಕು ಎನಿಸುವ ಸ್ಥಳ ಯಾವುದು?
ಗೋವಾಕ್ಕೆ ಹೋಗುವುದು. ವರ್ಷದಲ್ಲಿ ಕನಿಷ್ಠ ಎರಡು ಸಲವಾದರೂ ಗೋವಾಕ್ಕೆ ಹೋಗುತ್ತೇನೆ. ಬೀಚ್ ಇರುವ ಸ್ಥಳಕ್ಕೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಅಮೆರಿಕ ಹಾಗೂ ಮಾಲ್ಡೀವ್ಸ್ ಕೂಡ ನೆಚ್ಚಿನ ತಾಣ.

*ಕಾಲೇಜಿನ ದಿನಗಳ ಬಗ್ಗೆ ಹೇಳಿ?
ಶಾಲಾ, ಕಾಲೇಜುಗಳೆಂದರೆ ಮೊದಲಿನಿಂದಲೂ ಅಷ್ಟಕಷ್ಟೆ. ಕ್ಲಾಸ್‌ಗೆ ಹೆಚ್ಚು ಹೋಗುತ್ತಿರಲಿಲ್ಲ. ಆದರೆ, ಬ್ಯಾಟಿಂಗ್ ಅಭ್ಯಾಸವನ್ನು ಒಂದೂ ದಿನ ತಪ್ಪಿಸುತ್ತಿರಲಿಲ್ಲ. ಕ್ರಿಕೆಟ್ ಜೊತೆಗೆ ಫುಟ್‌ಬಾಲ್ ಆಡಲು ಖುಷಿಯಾಗುತ್ತಿತ್ತು. ಕಾಲೇಜು ದಿನಗಳಲ್ಲಿನ ಸವಿ ನೆನಪುಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕ್ಲಾಸಿಗೆ ಚಿಕ್ಕರ್ ಹೊಡೆದು ಕ್ರಿಕೆಟ್, ಫುಟ್‌ಬಾಲ್‌ ಆಡಿದ್ದೇ ಹೆಚ್ಚು.

*ಕ್ರಿಕೆಟ್, ಫುಟ್‌ಬಾಲ್ ಎರಡೂ ನಿಮ್ಮ ನೆಚ್ಚಿನ ಕ್ರೀಡೆಗಳು. ಕೊನೆಗೆ ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದು ಏಕೆ?
ಕಾಲೇಜು ದಿನಗಳಲ್ಲಿ ಹವ್ಯಾಸಕ್ಕಾಗಿಯಷ್ಟೇ ಫುಟ್‌ಬಾಲ್ ಆಡುತ್ತಿದ್ದೆ. ಆದರೆ, ಕ್ರಿಕೆಟ್‌ನಲ್ಲಿಯೇ ಸಾಧನೆ ಮಾಡಬೇಕೆನ್ನುವ ಗುರಿ ಹೊಂದಿದ್ದೆ.

*ಶಾಲಾ ದಿನಗಳನ್ನು ನೆನಪಿಸಿಕೊಳ್ಳುವುದಾದರೆ...
ತರಗತಿಗೆ ಹೋದ ನೆನಪುಗಳೇ ಕಡಿಮೆ. ಆದರೆ, ಫಸ್ಟ್‌ ಕ್ಲಾಸ್ ಪಾಸಾಗುವಷ್ಟು ಓದುತ್ತಿದ್ದೆ. ತರಗತಿಗೆ ಹೋಗುವುದು ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ.

*ಏಕೆ?
ಬೆಳಿಗ್ಗೆ ಮತ್ತು ಸಂಜೆ ಸಾಕಷ್ಟು ಹೊತ್ತು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ತರಗತಿಯಲ್ಲಿ ಕುಳಿತುಕೊಳ್ಳುವಷ್ಟು ಸಹನೆ ಇರುತ್ತಿರಲಿಲ್ಲ.

*ತರಗತಿಗೆ ಚಕ್ಕರ್ ಹೊಡೆದಾಗಲೆಲ್ಲಾ ಗೆಳೆಯರು ಏನೂ ಹೇಳುತ್ತಿರಲಿಲ್ಲವೇ?
ವರ್ಷದ ಕೊನೆಯಲ್ಲಿ ಯಾರ ಹಾಜರಾತಿ ಎಷ್ಟು ಎಂದು ಕ್ಲಾಸ್‌ನಲ್ಲಿ ಹೇಳುತ್ತಿದ್ದರು. ನನಗೆ ಕೊನೆಯ ಸ್ಥಾನವಿರುತ್ತಿತ್ತು. ಆದ್ದರಿಂದ ಆಗಾಗ್ಗೆ ತರಗತಿಗೆ ಹೋದಾಗ ಗೆಳೆಯರು ರೇಗಿಸುತ್ತಿದ್ದರು. ಪ್ರತಿಯಾಗಿ ನಾನೂ ರೇಗಿಸುತ್ತಿದ್ದೆ. ಎಷ್ಟು ದಿನ ಕ್ಲಾಸ್‌ಗೆ ಬರುತ್ತೀರಿ ಎನ್ನುವುದು ಮುಖ್ಯವಲ್ಲ, ಎಷ್ಟು ಅಂಕ ತೆಗೆಯುತ್ತೇವೆ ಎನ್ನುವುದು ಮುಖ್ಯವೆಂದು ಕಾಲೆಳೆಯುತ್ತಿದ್ದೆ.

*ತರಗತಿ ತಪ್ಪಿಸುತ್ತಿದ್ದಾಗ ನಿಮ್ಮ ಶಿಕ್ಷಕರು ಬೈಯುತ್ತಿರಲಿಲ್ಲವೇ?
‘ನೀನು ಜೀವನದಲ್ಲಿ ಏನು ಮಾಡ್ತಾ ಇದೀಯಾ ಎನ್ನುವುದು ನಿನಗೆ ಗೊತ್ತಿದ್ದರೆ ಸಾಕು. ತರಗತಿಗೆ ಬರಲೇಬೇಕು ಎಂದೇನಿಲ್ಲ. ಕ್ರಿಕೆಟ್ ಬಗ್ಗೆ ಆಸಕ್ತಿ ಇದ್ದರೆ ಅದರತ್ತ ಗಮನ ಹರಿಸು. ಪರೀಕ್ಷೆಗೆ ಎರಡು ಮೂರು ತಿಂಗಳು ಬಾಕಿ ಇದ್ದಾಗ ಚೆನ್ನಾಗಿ ಓದಿಕೊಂಡರೆ ಸಾಕು’ ಎಂದು ಸಲಹೆ ನೀಡುತ್ತಿದ್ದರು. ಈಗ ಭೇಟಿಯಾದಾಗ ಶಿಕ್ಷಕರು ನನ್ನ ಸಾಧನೆ ನೋಡಿ ಹೆಮ್ಮೆ ಪಡುತ್ತಾರೆ.

*ಕಾಲೇಜಿನ ಗೆಳೆಯರು ಈಗ ಸಿಕ್ಕಾಗ ಏನೆನುತ್ತಾರೆ?
ಟಿ.ವಿ ಹಾಗೂ ಪೇಪರ್‌ಗಳಲ್ಲಿ ಆಗಾಗ್ಗೆ ಬರುತ್ತಿರುತ್ತೇನೆ. ಅದನ್ನು ಅವರು ನನಗೆ ನೆನಪು ಮಾಡಿಕೊಡುತ್ತಾರೆ. ಕಾಲೇಜು ದಿನಗಳ ಬಗ್ಗೆ ಮಾತನಾಡುತ್ತೇವೆ.

*ಕಾಲೇಜು ದಿನಗಳಲ್ಲಿ ಮರೆಯಲಾಗದ ಸಂದರ್ಭ?
16 ವರ್ಷದ ಒಳಗಿನವರ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದೆ. ಈ ಅವಕಾಶ ನನ್ನ ಕ್ರಿಕೆಟ್ ಬದುಕಿನ ಸಾಧನೆಯ ಹಾದಿಗೆ ಮೊದಲ ಮೆಟ್ಟಿಲಾಯಿತು. ಎರಡು ಮೂರು ವರ್ಷಗಳ ಹಿಂದೆ ನಾನು ಓದಿದ ಕಾಲೇಜಿಗೆ ಮುಖ್ಯ ಅತಿಥಿಯಾಗಿ ಹೋಗಿದ್ದೆ. ಇದಕ್ಕಿಂತ ಖುಷಿಯ ಸಂಗತಿ ಇನ್ನೊಂದಿದೆಯೇ.

*ತುಂಬಾ ದಿನಗಳ ಬಳಿಕ ಮನೆಗೆ ಹಿಂತಿರುಗಿದಾಗ ಪೋಷಕರ ಪ್ರತಿಕ್ರಿಯೆ ಹೇಗಿರುತ್ತದೆ?
ಅಪ್ಪ ಅಮ್ಮ ನಾನು ಮನೆಗೆ ಬರುವುದನ್ನೇ ಕಾಯುತ್ತಿರುತ್ತಾರೆ. ಏನಾದರೂ ಸಾಧನೆ ಮಾಡಿದರೆ ಹಲವಾರು ಜನ ನನ್ನನ್ನು ಪ್ರಶ್ನಿಸುತ್ತಾರೆ. ಆದರೆ, ಮನೆಗೆ ಬಂದ ಮೇಲೆ ಅಪ್ಪ ಅಮ್ಮನನ್ನು ನಾನು ಪ್ರಶ್ನಿಸುತ್ತೇನೆ. ಟಿ.ವಿ ಹಾಗೂ ಪತ್ರಿಕೆಗಳಲ್ಲಿ ನನ್ನನ್ನು ನೋಡಿ ಏನೆನಿಸುತ್ತದೆ ಎಂದು ಅವರಿಂದ ತಿಳಿದುಕೊಳ್ಳುತ್ತೇನೆ.

*ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೀರಿ. ಕ್ರಿಕೆಟ್ ಹಾಗೂ ವೈಯಕ್ತಿಕ ಬದುಕು ಎರಡನ್ನೂ ಹೇಗೆ ನಿಭಾಯಿಸುತ್ತೀರಿ?
ಇಷ್ಟು ದಿನ ನನಗೆ ಇಷ್ಟಬಂದಂತೆ ಓಡಾಡಿಕೊಂಡಿದ್ದೆ. ಈಗ ಜವಾಬ್ದಾರಿಯಿದೆ. ಪತ್ನಿ ಪವಿತ್ರಾ ಪ್ರತಿ ಹೆಜ್ಜೆಯಲ್ಲಿಯೂ ಬೆಂಬಲ ನೀಡುತ್ತಾಳೆ. ಆದ್ದರಿಂದ ಹೊಸ ಜವಾಬ್ದಾರಿ ನಿಭಾಯಿಸುವುದು ಕಷ್ಟವಾಗುವುದಿಲ್ಲ.  ಪಂದ್ಯಗಳನ್ನು ನೋಡಲು ಪವಿತ್ರಾ ಹಲವು ಬಾರಿ ನನ್ನ ಜೊತೆ ಬಂದಿದ್ದಾಳೆ. ಇನ್ನು ಮುಂದೆಯೂ ಆಕೆಯನ್ನೂ ಕರೆದುಕೊಂಡು ಹೋಗಬಹುದು.

*ಸ್ನೇಹಿತರಾಗಿದ್ದವರು ಪ್ರೇಮಿಗಳಾಗಿದ್ದು ಹೇಗೆ?
ಮೊದಲೆಲ್ಲಾ ನಾವು ಸ್ನೇಹಿತರಂತೆಯೇ ಇದ್ದೆವು. ಅವರ ಮನೆಯೂ ನಮ್ಮ ಮನೆಯ ಹತ್ತಿರವೇ ಇದೆ. ಆದ್ದರಿಂದ ಆಗಾಗ್ಗೆ ಭೇಟಿಯಾಗುತ್ತಿದ್ದೆವು. ಹಲವು ದಿನಗಳ ಸ್ನೇಹ ಪ್ರೀತಿಯಾಗಿ ಬದಲಾಯಿತು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಕಳೆದ ತಿಂಗಳು ಮದುವೆಯಾದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT