ADVERTISEMENT

ಗಿಯರ್ ಬದಲಿಸದೆ ಹೆದ್ದಾರಿ ಪಯಣ

ಜಯಸಿಂಹ ಆರ್.
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಗಿಯರ್ ಬದಲಿಸದೆ  ಹೆದ್ದಾರಿ ಪಯಣ
ಗಿಯರ್ ಬದಲಿಸದೆ ಹೆದ್ದಾರಿ ಪಯಣ   

ಭಾರತದಲ್ಲಿ ದಿನಗಟ್ಟಲೆ ರೈಡಿಂಗ್ ಮಾಡುವ ಬೈಕರ್‌ಗಳು, ಆಯ್ಕೆ ಮಾಡಿಕೊಳ್ಳುವ ಪ್ರವೇಶಮಟ್ಟದ ಬೈಕ್‌ಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಮತ್ತು ಕ್ಲಾಸಿಕ್‌ಗಳಿಗೆ ಮೊದಲ ಸ್ಥಾನವಿದೆ.

ಬೇರೆ ಯಾವುದೇ ದುಬಾರಿ ಬೈಕ್‌ಗಳನ್ನು ಹೊಂದಿದ್ದರೂ, ಅವರನ್ನು ಬೈಕರ್‌ಗಳೆಂದು ಮಾತ್ರ ಕರೆಯಲಾಗುತ್ತದೆ. ಆದರೆ, ರಾಯಲ್‌ ಎನ್‌ಫೀಲ್ಡ್‌ನ ಯಾವುದೇ ಬೈಕ್‌ ಹೊಂದಿರುವ ಬೈಕರ್‌ಗಳನ್ನು ‘ಬುಲೆಟೀರ್’ ಎಂದು ಕರೆಯುವುದು ರೂಢಿ. ಭಾರತೀಯ ಬೈಕಿಂಗ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ಗೆ ಅಂತಹ ಸ್ಥಾನವಿದೆ. ಹೀಗಾಗಿಯೇ ಕಂಪೆನಿ ಅತ್ಯಂತ ಕಚ್ಚಾ ತಂತ್ರಜ್ಞಾನ ಮತ್ತು ಒರಟು ವಿನ್ಯಾಸವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಅದೇ ಈ ಬೈಕ್‌ಗಳ ಹೆಗ್ಗಳಿಕೆಯೂ ಹೌದು, ಮಾರಾಟ ತಂತ್ರವೂ ಹೌದು.

ಕಂಪೆನಿಯು ತನ್ನ ಥಂಡರ್‌ಬರ್ಡ್ 500 ಬೈಕ್‌ ಅನ್ನು ‘ಲಾಂಗ್‌ ರೈಡ್‌’ ಮಾಡಿ, ಪರೀಕ್ಷಿಸುವಂತೆ ಆಹ್ವಾನ ನೀಡಿತ್ತು. ಇದಕ್ಕಾಗಿ, ಸುಮಾರು 20,000 ಕಿ.ಮೀ ಕ್ರಮಿಸಿರುವ ಬೈಕ್‌ ಒಂದನ್ನು ತಿಂಗಳ ಕಾಲ ಒದಗಿಸಿತ್ತು. ಥಂಡರ್‌ಬರ್ಡ್ ಅತ್ತ ಕ್ರೂಸರ್‌ ಅಲ್ಲದ ಇತ್ತ ಸಾಮಾನ್ಯ ಬೈಕ್‌ ಸಹ ಅಲ್ಲದ ಒಂದು ಬೈಕ್. ಗ್ರೌಂಡ್ ಕ್ಲಿಯರೆನ್ಸ್ ಕಡಿಮೆ ಇರುವುದರಿಂದ ಹಾಗೂ ಬೈಕ್‌ನಲ್ಲೇ ಬರುವ ಟೈರ್‌ಗಳು ಕಚ್ಚಾ ರಸ್ತೆಯಲ್ಲಿ ಹಿಡಿತ ತಪ್ಪುವುದರಿಂದ ದೂರದ ಪಯಣಕ್ಕೆ ಹೆದ್ದಾರಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು.

ADVERTISEMENT

ಎಂಜಿನ್‌ಗೆ ಇಂಧನ ಊಡಿಸಲು ಫ್ಯುಯಲ್ ಇಂಜೆಕ್ಷನ್ ಬಳಸಿದ್ದರೂ, ಇದರಲ್ಲಿರುವುದು ಕಚ್ಚಾ ಎಂಜಿನ್. 500 ಸಿ.ಸಿ ಸಾಮರ್ಥ್ಯದ ಎಂಜಿನ್‌ನಲ್ಲೂ ರಾಯಲ್ ಎನ್‌ಫೀಲ್ಡ್‌ ಒಂದೇ ಸಿಲಿಂಡರ್ ಬಳಸುತ್ತದೆ. ಅಲ್ಲದೆ, ಕಂಪೆನಿಯ ಯಾವುದೇ ಎಂಜಿನ್‌ನಲ್ಲೂ ಬ್ಯಾಲೆನ್ಸರ್‌ಗಳಿಲ್ಲ. ಹೀಗಾಗಿಯೇ ಈ ಎಂಜಿನ್‌ಗಳಲ್ಲಿ ನಡುಗುವಿಕೆ ಹೆಚ್ಚು. ಈ ನಡುಗುವಿಕೆಯೂ ರಾಯಲ್‌ ಎನ್‌ಫೀಲ್ಡ್‌ನ ಹೆಗ್ಗುರುತು. ಥಂಡರ್‌ಬರ್ಡ್ ಸಹ ಇದಕ್ಕೆ ಹೊರತಲ್ಲ.

20,000 ಕಿ.ಮೀ ಕ್ರಮಿಸಿದ್ದರೂ ಥಂಡರ್‌ಬರ್ಡ್‌ನ ಗಿಯರ್‌ ಬದಲಾವಣೆ 150-200 ಸಿ.ಸಿ ಸಾಮರ್ಥ್ಯದ ಬೈಕ್‌ಗಳಿಗಿಂತ ನಯವಾಗಿತ್ತು. ಕ್ಲಚ್‌ ಸಹ ಹಗುರವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಎಂಜಿನ್‌ ಅಪಾರವಾದ ಶಕ್ತಿ ಉತ್ಪಾದಿಸುವುದರಿಂದ ನಗರದ ಪಯಣದಲ್ಲೂ ಗಿಯರ್‌ ಬದಲಾವಣೆ ಅಗತ್ಯವಿಲ್ಲ.

ಹೆದ್ದಾರಿಯ ಸುಂಕ ವಸೂಲಾತಿ ಕೇಂದ್ರಗಳನ್ನೂ ಟಾಪ್‌ ಗಿಯರ್‌ನಲ್ಲೇ, ಕಡಿಮೆ ವೇಗದಲ್ಲಿ ದಾಟುವಷ್ಟು ಶಕ್ತಿಯನ್ನು ಈ ಎಂಜಿನ್‌ ಉತ್ಪಾದಿಸುತ್ತದೆ. ಹೀಗೆ ಹೆದ್ದಾರಿಯಲ್ಲಿ ಗಿಯರ್‌ ಬದಲಿಸದೇ 390 ಕಿ.ಮೀ ಕ್ರಮಿಸಲಾಯಿತು. ಇದೊಂದು ರೀತಿ ಗಿಯರ್‌ಲೆಸ್ ಸ್ಕೂಟರ್‌ನ ಚಾಲನೆಯಷ್ಟು ಸುಲಭ.

ಆ 390 ಕಿ.ಮೀ ಅಂತರದಲ್ಲಿ ನಮ್ಮ ಸರಾಸರಿ ವೇಗ 60 ಕಿ.ಮೀ ಇತ್ತು. ಕೆಲವೆಡೆ ವೇಗ 35 ಕಿ.ಮೀಗೂ ಇಳಿದಿದ್ದುಂಟು. ಎಷ್ಟೋ ಬಾರಿ ಹಿಂದೆ ಹಾರ್ನ್‌ ಮಾಡಿ ಕಿರಿಕಿರಿ ಮಾಡುತ್ತಿದ್ದ ಕಾರ್‌ಗಳಿಂದ ಮುಂದೆ ಹೋಗುತ್ತಿದ್ದ ರೀತಿಯಂತೂ ಮಜಾ ಕೊಡುತ್ತಿತ್ತು. 35 ಕಿ.ಮೀ/ಗಂಟೆ ವೇಗದಲ್ಲಿ ಚಲಿಸುತ್ತಿದ್ದಾಗ, ಟಾಪ್‌ ಗಿಯರ್‌ನಲ್ಲೇ ಕೆಲವೇ ಸೆಕೆಂಡ್‌ಗಳಲ್ಲಿ 140 ಕಿ.ಮೀ ವೇಗ ಮುಟ್ಟುವುದನ್ನು ಊಹಿಸಿಕೊಳ್ಳಿ.

ಬಹುಶಃ 500 ಸಿ.ಸಿ ವರ್ಗದ ಬೈಕ್‌ಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳು ಮಾತ್ರ ಇಂತಹ ಅನುಭವ ಕೊಡಬಲ್ಲವು. ಆದರೆ, ಈ ವೇಗವನ್ನು ಮುಟ್ಟುವಾಗ ಬೈಕ್‌ ಎಷ್ಟು ನಡುಗುತ್ತಿತ್ತೆಂದರೆ, ರಸ್ತೆಯಲ್ಲಿದ್ದ ಎಲ್ಲವೂ ಎರಡೆರಡು ಕಾಣುತ್ತಿದ್ದವು.

ಬೈಕ್‌ ಮೇಲೆ ಕಡಿಮೆ ತೂಕ ಇದ್ದದ್ದೂ ಇದಕ್ಕೆ ಒಂದು ಕಾರಣ ಇರಬಹುದು. ಆದರೂ, ಈ ವಿಚಾರದಲ್ಲಿ ರಾಯಲ್‌ ಎನ್‌ಫೀಲ್ಡ್‌ ಖಂಡಿತ ಸುಧಾರಿಸಲೇಬೇಕು. ಆದರೆ, ನಿಜವಾದ ಮಜಾ ಇರುವುದು ಈ ಬೈಕ್‌ ಅನ್ನು 40-50 ಕಿ.ಮೀ ವೇಗದಲ್ಲಿ ಚಲಾಯಿಸುವುದರಲ್ಲಿ. ಹೀಗಾಗಿ ದೊಡ್ಡ ಬೈಕ್‌ ಆಗಿದ್ದರೂ, ನಗರದಲ್ಲಿ ದಿನಬಳಕೆಗೂ ಇದು ಹೇಳಿ ಮಾಡಿಸಿದಂತಿದೆ. ನಡುಗುವಿಕೆಯನ್ನು ಸಹಿಸಿಕೊಳ್ಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.