ADVERTISEMENT

ಜೀವನ ಸುಲಭವೂ ಅಲ್ಲ, ಕಷ್ಟವೂ ಅಲ್ಲ!

ಪೃಥ್ವಿರಾಜ್ ಎಂ ಎಚ್
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST
ರಾಜ್ ಸೇಠ್
ರಾಜ್ ಸೇಠ್   

ರಾಜ್ ಸೇಠ್

ಸಿ.ಎ. (ಚಾರ್ಟೆಡ್ ಅಕೌಂಟೆಂಟ್) ಪರೀಕ್ಷೆ ಕಬ್ಬಿಣದ ಕಡಲೆ ಎನ್ನುತ್ತಾರೆ. ಐದಾರು ವರ್ಷ ಕೂತು ಓದಿದರೂ ಸಿ.ಎ. ಪರೀಕ್ಷೆ ಪಾಸು ಮಾಡದೇ ಕೈಚೆಲ್ಲಿರುವ ಬಹಳ ಜನ ನಮ್ಮ ನಡುವೆ ಇದ್ದಾರೆ. ಆದರೆ ಬಡ ಕುಟುಂಬದ ಯುವಕ ರಾಜ್ ಸೇಠ್ 2017ನೇ ಸಾಲಿನ ಸಿ.ಎ. ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ರಾಜ್ ಸೇಠ್ ಕುಟುಂಬ ಮುಂಬೈ ಹೊರವಲಯದಲ್ಲಿರುವ ಬೋಲಾವಿಯಲ್ಲಿ ವಾಸವಾಗಿದೆ. ರಾಜ್ ತಂದೆ ವಜ್ರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬರುವ 20 ಸಾವಿರ ರೂಪಾಯಿ ಸಂಬಳದಲ್ಲೇ ಸಂಸಾರ ಸೇರಿದಂತೆ ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಮನೆಯ ಬಡತನ, ಅಪ್ಪನ ಕಷ್ಟವನ್ನು ಅರಿತಿದ್ದ ರಾಜ್ ಕಷ್ಟಪಟ್ಟು ಓದುವ ಮೂಲಕ ಅತಿ ಕಿರಿಯ ವಯಸ್ಸಿಗೆ ಸಿ.ಎ. ಪರೀಕ್ಷೆ ಪಾಸು ಮಾಡಿದ್ದಾರೆ.

ADVERTISEMENT

ಬಿ.ಕಾಂ. ಪದವಿ ಮುಗಿದ ಕೂಡಲೇ ರಾಜ್ ಸಿ.ಎ. ಪರೀಕ್ಷೆಗೆ ತಯಾರಿ ಆರಂಭಿಸಿದರು. ಯಾವುದೇ ಕೋಚಿಂಗ್ ಕ್ಲಾಸ್‌ಗೆ ಹೋಗದೆ ಪರೀಕ್ಷೆಯ ಪಠ್ಯಕ್ರಮ ಓದಿ, ಸ್ವತಃ ನೋಟ್ಸ್ ತಯಾರಿಸಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡೆ ಎಂದು ಅವರು ಹೇಳುತ್ತಾರೆ.

ಮೊದಲ ಎರಡು ವರ್ಷ ಸಿ.ಎ. ಪರೀಕ್ಷೆಯನ್ನು ತೆಗೆದುಕೊಳ್ಳದೇ ಓದಿಕೊಂಡಿದ್ದು ವಿಶೇಷ. ಮೂರನೇ ವರ್ಷದಲ್ಲಿ ಪರೀಕ್ಷೆಗೆ ಕುಳಿತು ಮೊದಲ ಯತ್ನದಲ್ಲೇ ಮೊದಲ ರ್‍ಯಾಂಕ್ ಪಡೆದಿರುವುದು ಖುಷಿ ನೀಡಿದೆ ಎಂದು ರಾಜ್ ಹೇಳುತ್ತಾರೆ.

ಕಳೆದ ಮೂರು ವರ್ಷಗಳಿಂದ ಮನೆಯಲ್ಲಿ ಕೂತು ಓದುವುದೇ ನನ್ನ ಕೆಲಸವಾಗಿತ್ತು. ದಿನಕ್ಕೆ 12 ರಿಂದ 14 ಗಂಟೆಗಳ ಕಾಲ ಓದುತ್ತಿದ್ದೆ. ಅಧ್ಯಯನ ಸಾಮಗ್ರಿಗೆ ಗ್ರಂಥಾಲಯ ಹಾಗೂ ಗೆಳೆಯರ ಪುಸ್ತಕಗಳನ್ನು ನೆಚ್ಚಿಕೊಂಡಿದ್ದೆ. ಪಠ್ಯವನ್ನು ಓದಿ ನೋಟ್ಸ್ ಬರೆದುಕೊಳ್ಳುತ್ತಿದ್ದೆ, ಈ ರೀತಿ ಮಾಡಿದ್ದರಿಂದ ಓದಿದ್ದು ಮನಸಿನಲ್ಲಿ ಅಚ್ಚಳಿಯದೇ ಉಳಿಯಿತು. ಹಾಗಾಗಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿದೆ ಎಂದು ರಾಜ್ ಉತ್ತರಿಸುತ್ತಾರೆ. ಕೋಚಿಂಗ್ ಪಡೆಯದೆಯೇ ರ್‍ಯಾಂಕ್ ಬರಬಹುದು ಎಂಬುದಕ್ಕೆ ನಾನೇ ಉದಾಹರಣೆ! ಅಧ್ಯಯನ ಸಾಮಗ್ರಿ ಇಟ್ಟುಕೊಂಡು ಕಷ್ಟಪಟ್ಟು ಓದಿದರೆ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ ಎಂದು ರಾಜ್ ಯುವಕರಿಗೆ ಕಿವಿ ಮಾತು ಹೇಳುತ್ತಾರೆ.

ಸೌಮ್ಯ ಮುಖರ್ಜಿ

ಇವನು ಉದ್ಧಾರವಾಗಲ್ಲ ಎಂದು ಆ ಯುವಕನ ಮನೆಯವರು ನಿರ್ಧರಿಸಿದ್ದರು! ವರ್ಷಕ್ಕೆ 7 ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಬಿಟ್ಟು ಅದೇನು ಹೋಂಸ್ಟೇ ಮಾಡುತ್ತಾನೋ… ಎಂಬುದು ಆ ಯುವಕನ ಮನೆಯವರ ಪ್ರಶ್ನೆಯಾಗಿತ್ತು. ಹೋಂಸ್ಟೇ ಮಾಡುವ ಸಲುವಾಗಿ ಇದ್ದ ಜಮೀನನ್ನು ಒಲ್ಲದ ಮನಸ್ಸಿನಿಂದ ಪೋಷಕರು ಮಗನ ಹೆಸರಿಗೆ ಬರೆದುಕೊಟ್ಟಿದ್ದರು!

ಆ ಯುವಕನ ಅದೃಷ್ಟ ಚೆನ್ನಾಗಿತ್ತು. ಒಂದು ಕೋಟಿ ರೂಪಾಯಿ ಜಾಕ್‌ಪಾಟ್ ಹೊಡೆಯಿತು! ಒನ್‌ಪ್ಲಸ್ ಮೊಬೈಲ್ ಕಂಪೆನಿಯ ‘ಒಂದು ಕೋಟಿ ರೂಪಾಯಿ’ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದ ಒಡಿಶಾದ ಯುವಕ ಸೌಮ್ಯ ಮುಖರ್ಜಿಯ ಕಥೆ ಇದು. ಎಂಬಿಎ ಪದವೀಧರ ಸೌಮ್ಯ ಮುಖರ್ಜಿ ಮುಂಬೈನ ಸೀತಾ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದ್ಯಾಕೋ ಕೆಲಸ ಇಷ್ಟವಾಗದೇ ಅಪ್ಪನ ಜಮೀನಿನಲ್ಲಿ ಹೋಂಸ್ಟೇ ಮಾಡುವ ಕನಸು ಹೊತ್ತು ಒಡಿಶಾಗೆ ಹಿಂತಿರುಗಿದ್ದರು.

ಹೋಂಸ್ಟೇ ಕೆಲಸದ ನಿಮಿತ್ತ ಸೌಮ್ಯ ಮುಂಬೈಗೆ ಬಂದಿದ್ದರು. ಈ ವೇಳೆ ಮೊಬೈಲ್
ಕಂಪೆನಿಯೊಂದರ ಜಾಹೀರಾತು ನೋಡಿ ಒಂದು ಸೆಲ್ಫೀ ಫೋಟೊ ಹಾಕುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದರು. ಆ ಕಂಪೆನಿಯ ಬ್ರ್ಯಾಂಡ್ ಮಾಹಿತಿ ಹಾಗೂ ಸಾಮಾಜಿಕ ವಿದ್ಯಮಾನಗಳ ಕುರಿತಂತೆ 8 ಹಂತಗಳಲ್ಲಿ ವಿವಿಧ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಅಂತಿಮವಾಗಿ ಒಂದು ಕೋಟಿ ರೂಪಾಯಿ ಗೆದ್ದರು. ಬಹುಮಾನ ಬಂದ ವಿಷಯವನ್ನು ಮನೆ ಯವರಿಗೆ ತಿಳಿಸಿದ್ದರೂ ಅವರು ನಂಬಿರಲಿಲ್ಲ! ಮಾಧ್ಯಮ ಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಸಂಭ್ರಮಪಟ್ಟರು ಎನ್ನುತ್ತಾರೆ ಅವರು. ಬಹು ಮಾನದ ಹಣದಲ್ಲಿ ಹೋಂಸ್ಟೇ ಅಭಿವೃದ್ಧಿಪಡಿಸುತ್ತೇನೆ, ಮುಂದೆ ದೊಡ್ಡ ಉದ್ಯಮಿಯಾಗಿ ಬೆಳೆಯ ಬೇಕು ಎಂಬ ಗುರಿ ಇರುವುದಾಗಿ ಸೌಮ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.