ADVERTISEMENT

ತೆರೆ ಮರೆಯಲ್ಲಿ...

ಜಯಸಿಂಹ ಆರ್.
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST
ತೆರೆ ಮರೆಯಲ್ಲಿ...
ತೆರೆ ಮರೆಯಲ್ಲಿ...   

ಯಾವುದೇ ವಾಹನ ತಯಾರಕರು ಹೊಸದೊಂದು ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವ ಮುನ್ನ, ಆ ಉತ್ಪನ್ನದ ಬಗ್ಗೆ ತುಸು ಸುಳಿವು ಬಿಟ್ಟುಕೊಟ್ಟು ಕುತೂಹಲ ಹುಟ್ಟು ಹಾಕುತ್ತಾರೆ. ಅದು ಅಧಿಕೃತವೂ ಆಗಿರಬಹುದು, ಅನಧಿಕೃತವೂ ಆಗಿರಬಹುದು. ಅಧಿಕೃತವೆಂದರೆ ಸಾಮಾನ್ಯವಾಗಿ ಆಟೊ ಎಕ್ಸ್‌ಪೋಗಳಲ್ಲಿ ಅದರ ಕಾನ್ಸೆಪ್ಟ್ ಪ್ರದರ್ಶಿಸುವುದು. ಕೇವಲ ಕಾನ್ಸೆಪ್ಟ್ ಪ್ರದರ್ಶಿಸಿದರೆ ಅದು ಹೆಚ್ಚು ಸುದ್ದಿಯಾಗದು. ಅವುಗಳೊಂದಿಗೆ ಉತ್ಪನ್ನದ ವಿವರಗಳನ್ನು ತೇಲಿಬಿಟ್ಟರೆ ಕಥೆ ಆರಂಭ­ವಾದಂತೆ. ಅನಧಿಕೃತವೆಂದರೆ, ವಾಹನದ ರೂಪುರೇಷೆ ಸಿದ್ಧಪಡಿಸುತ್ತಿ­ರುವವರು ಅವು­ಗಳ ಸುಳಿವು ಕೊಡುವುದು. ಎರಡೂ ನಂಬಲರ್ಹ ಮೂಲಗಳೇ.

ಅಂತೂ ಹೊಸ ಉತ್ಪನ್ನದ ಬಗ್ಗೆ ವಾಹನ ಪ್ರಿಯರು ತಮ್ಮದೇ ಕಲ್ಪನೆಗಳನ್ನು ಕಟ್ಟಿಕೊಳ್ಳುತ್ತಾರೆ. ಏಕೆಂದರೆ ಕಾನ್ಸೆಪ್ಟ್ ಮಾದರಿಗಳಿಗೂ ಮಾರು­ಕಟ್ಟೆಗೆ ಬರುವ ಮಾದರಿಗಳಿಗೂ ಬಹ­ಳಷ್ಟು ವ್ಯತ್ಯಾಸವಿರುತ್ತದೆ. ವಾಹನ ಪ್ರಿಯರ ಸಲಹೆ, ನಿರೀಕ್ಷೆಗಳು ತಯಾರ­ಕರ ಕಿವಿಗೆ ಬಿದ್ದೇ ಬೀಳುತ್ತವೆ. ಇವು ಅಂತಿಮ ಅವತರಣಿಕೆಯ ಮೇಲೆ ಪ್ರಭಾವ ಬೀರೇ ಬೀರುತ್ತವೆ. ತೆರೆಮರೆ­ಯಲ್ಲಿ ಇಷ್ಟೆಲ್ಲಾ ಕಸರತ್ತು ನಡೆದೇ ಇರುತ್ತದೆ. ಇದರ ಸುಳಿವು ಪಡೆದು ಹೊಸ ಉತ್ಪನ್ನಕ್ಕಾಗಿ ವರ್ಷಗಟ್ಟಲೆ ಕಾದವರೂ ಇದ್ದಾರೆ.

ಈ ವರ್ಷಾರಂಭದಲ್ಲಿ ದೆಹಲಿ ಆಟೊ ಎಕ್ಸ್‌ಪೋದಲ್ಲಿ ಪ್ರದರ್ಶನ­ಗೊಂಡ ಕೆಲವು ಕಾನ್ಸೆಪ್ಟ್‌ಗಳು ಹೊಸ ವರ್ಷದ ಮಧ್ಯಾರ್ಧದಲ್ಲಿ ನಮ್ಮ ರಸ್ತೆ­ಗಿಳಿ­ಯಲು ಸಿದ್ಧತೆ ನಡೆದಿವೆ. ಅಂತೆಯೇ ಅವುಗಳ ಬಗ್ಗೆ ವಾಹನ ಪ್ರಿಯರ ನಿರೀಕ್ಷೆಯೂ ಸಾಗರೋಪಾದಿಯಲ್ಲಿವೆ. ದೇಶದೊಳಗಿನ ಮತ್ತು ದೇಶದಾಚೆಯ ವಾಹನ ತಯಾರಕರಿಗೆ ಚುರುಕು ಮುಟ್ಟಿಸಿರುವುದು ಟಿವಿಎಸ್ ಮತ್ತು ಹೀರೊ. ತನ್ನ ಬಹುಬೇಡಿಕೆಯ ಉತ್ಪನ್ನ  ಅಪಾಚೆ ಆರ್‌ಟಿಆರ್ ಸರಣಿಯ ಬೈಕ್‌ಗಳಿಗೆ ಭಾರೀ ‘ಫೇಸ್‌ಲಿಫ್ಟ್’ ನೀಡಲು ಟಿವಿಎಸ್‌ ಮುಂದಾಗಿದೆ. ಇದು ಕಾಸ್ಮೆಟಿಕ್ ಬದಲಾವಣೆಯಲ್ಲ ಎಂಬುದು ಮುಖ್ಯ.

ಪ್ರಸ್ತುತ 160 ಮತ್ತು 180 ಸಿಸಿ ಸಾಮರ್ಥ್ಯದಲ್ಲಿ ಲಭ್ಯವಿರುವ ಅಪಾಚೆ­ಗಳ ಶಕ್ತಿವರ್ಧನೆಗೆ ಟಿವಿಎಸ್‌ ಮುಂದಾ­ಗಿದೆ. 2015ರಲ್ಲಿ ಅಪಾಚೆಯ 200, 220 ಮತ್ತು 250 ಸಿ.ಸಿ ಸಾಮರ್ಥ್ಯದ ಅವತರಣಿಕೆಗಳು ಹೊರಬರಲಿದೆ ಎನ್ನಲಾಗಿದೆ. 250 ಸಿ.ಸಿಯ ಅಪಾಚೆಯ ಎಂಜಿನ್ ‘ಡಾರ್ಕನ್’ನಿಂದ (ದೆಹಲಿ ಆಟೊ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ನೇಕಡ್‌ ಸ್ಪೋರ್ಟ್ಸ್ ಮಾದರಿ) ಎರವಲು ಪಡೆದಿರುವ ಬಗ್ಗೆ ಮಾತು ಪ್ರಚಲಿತದಲ್ಲಿದೆ.

ಆದರೆ ವಾಹನ ಪ್ರಿಯರು ಇದಕ್ಕಿಂತಲೂ ಹೆಚ್ಚು ತಲೆ ಕೆಡಿಸಿಕೊಂಡಿರುವುದು 200 ಸಿ.ಸಿ ಸಾಮರ್ಥ್ಯದ ಅಪಾಚೆ ಬಗ್ಗೆ. ಅಪಾಚೆ ಈಗಾಗಲೆ ಸಾಬೀತಾಗಿರುವ ಅತ್ಯುತ್ತಮ ಬೈಕ್. ಕಡಿಮೆ ಟಾರ್ಕ್ ಹೊಂದಿದ್ದರೂ, ವೇಗಿಗಳ ಮನಸ್ಥಿತಿಗೆ ತಕ್ಕಂತೆ ಸ್ಪಂದಿಸುವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ನಿಂದ ಇದು ಬಿಸಿ ದೋಸೆ. ರಸ್ತೆ ಹಿಡಿತ, ಹ್ಯಾಂಡ್ಲಿಂಗ್ ಕೊನೆಗೆ ಮೈಲೇಜ್‌­ನಲ್ಲೂ ಉತ್ತಮ ಬೈಕ್ ಇದು.
ಟಿವಿಎಸ್ ಇಂತಹ ಉತ್ತಮ ಎಂಜಿನ್‌ ಅನ್ನೇ 200ಸಿ.ಸಿ ಅವತರಣಿಕೆಯಲ್ಲಿ ಉಳಿಸಿ­ಕೊಳ್ಳುತ್ತದೆಯೇ ಅಥವಾ ಹೊಸ ಎಂಜಿನ್‌ ಅನ್ನು ಅಭಿವೃದ್ಧಿಪಡಿಸುತ್ತಿದೆಯೇ ಎಂಬುದು ನಾಡಿಮಿಡಿತ ಹೆಚ್ಚಿ­ಸು­ವಂತಹ ಪ್ರಶ್ನೆ.

ಆದರೆ ಈ ಎಂಜಿನ್ 20 ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದ್ದು, ಟಾರ್ಕ್ 18 ಎನ್‌ಎಂನ ಆಸುಪಾಸಿನಲ್ಲಿರಲಿದೆ. ಈ ಅವತರ­ಣಿ­ಕೆಯ ಹಿಂಬದಿ­ಯಲ್ಲಿ ಮೋನೊ ಸಸ್ಪೆನ್ಷನ್ ಇರಲಿದ್ದು, ಎಬಿಎಸ್‌ ಸೌಲಭ್ಯ­ವನ್ನೂ ಹೊಂದಿರ­ಲಿದೆ. ಆರು ಗಿಯರ್‌ಗಳ ಟ್ರಾನ್ಸ್‌­ಮಿಷನ್, ಭಾಗಶಃ ನೇಕಡ್ ಸ್ಪೋರ್ಟ್ಸ್ ವಿನ್ಯಾಸ... ಹೀಗೆ  ಟಿವಿಎಸ್‌ ಇದರ ಸುಳಿವು ನೀಡಿದೆ.

ಮೋನೊ ಸಸ್ಪೆನ್ಷನ್ ಮತ್ತು ಎಬಿಎಸ್ ಬೈಕ್‌ಗೆ ಮತ್ತಷ್ಟು ರಸ್ತೆ ಹಿಡಿತ ನೀಡಲಿದೆ.  ಶಕ್ತಿಯುತ ಎಂಜಿನ್‌, ಆಧುನಿಕ ರೂಪ ಮತ್ತು ಸ್ಪರ್ಧಾತ್ಮಕ ಬೆಲೆ ನೀಡಿದಲ್ಲಿ ಮಾರುಕಟ್ಟೆಯಲ್ಲಿ ಅಪಾಚೆ 200 ಸಿ.ಸಿ ಅವತರಣಿಕೆ ಸಂಚಲನ ಮೂಡಿಸಲಿದೆ ಎನ್ನಲಾಗಿದೆ.
ಅಂದಹಾಗೆ ಈ ಪ್ರಾಜೆಕ್ಟ್‌ಗೆ ಟಿವಿಎಸ್ ಇಟ್ಟ ಹೆಸರು, ‘ನ್ಯೂ ಬೀಸ್ಟ್. ಸೇಮ್ ಬ್ಲಡ್‌ಲೈನ್’.

ರೇಸಿಂಗ್ ಪ್ರಚಂಡರಿಗೆ ಹೀರೊ ಚುರುಕು
ಹೋಂಡಾದಿಂದ ಬೇರ್ಪಟ್ಟ ಮೇಲೆ ಹೀರೊ ಹೊಸ ಎಂಜಿನ್‌ಗಳ ಅಭಿವೃದ್ಧಿಗೆ  ಹೆಚ್ಚು ಒತ್ತು ನೀಡಿದ್ದು ಪರ್ಫಾರ್ಮೆನ್ಸ್ ಎಂಜಿನ್‌ಗಳ ಮೇಲೆ ಮಾತ್ರ. ಈಗಾಗಲೆ ಮಾರುಕಟ್ಟೆಗೆ ಬರಲು ತುದಿಗಾಲಲ್ಲಿರುವ ಎಚ್‌ಎಕ್ಸ್ 250 ಈ ನಿಟ್ಟಿನಲ್ಲಿ ಅದರ ಮೊದಲ ಹೆಜ್ಜೆ.
ಆದರೆ ಇದಕ್ಕಿಂತಲೂ ಪ್ರಚಂಡ ಪ್ರಯೋಗಕ್ಕೆ ಹೀರೊ ಮುಂದಾಗಿದೆ. ಈ ಪ್ರಯೋಗದ ಅಂತಿಮ ಫಲಿತಾಂಶ ‘ಹ್ಯಾಸ್ಟರ್ 620’.
620 ಎಂಬುದು ಬೈಕ್‌ನ ಎಂಜಿನ್ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂಬುದು ಮುಖ್ಯ. ಈ ಬೈಕ್‌ ಬಗ್ಗೆ ಮಾತನಾಡುವ ಮುನ್ನ ಅದರ ವಿವರಗಳನ್ನು ನೋಡುವುದು ಸೂಕ್ತ.

ಅವಳಿ ಸಿಲಿಂಡರ್‌ ಹೊಂದಿರುವ ಈ ಎಂಜಿನ್‌ ಸಾಮರ್ಥ್ಯ 620 ಸಿ.ಸಿ. ಸಿಲಿಂಡರ್‌ಗೆ ಎರಡರಂತೆ ನಾಲ್ಕು ವಾಲ್ವ್‌ಗಳಿವೆ. ಎಂಜಿನ್ ವೇಗವನ್ನು ಆಧರಿಸಿ ಗಾಳಿ ಮತ್ತು ಇಂಧನವನ್ನು ಸರಿಯಾಗಿ ಬೆರೆಸುವ ‘ಕಂಟ್ರೋಲ್ಡ್‌ ಸ್ವಿರ್ಲ್ ಇಂಜೆಕ್ಷನ್’ (ಇದು ದ್ರವ ಇಂಧನದಿಂದ ಚಲಿಸುವ ರಾಕೆಟ್‌ಗಳಲ್ಲಿ ಬಳಕೆಯಲ್ಲಿರುವ ತಂತ್ರಜ್ಞಾನ). 12,000 ಆರ್‌ಪಿಎಂನಲ್ಲಿ 80 ಬಿಎಚ್‌ಪಿ ಶಕ್ತಿ. 9500 ಆರ್‌ಪಿಎಂನಲ್ಲಿ 77 ಎನ್‌.ಎಂ ಟಾರ್ಕ್. ಆರು ಗಿಯರ್‌ಗಳ ಟ್ರಾನ್ಸ್‌ಮಿಷನ್. 3.8 ಸೆಕೆಂಡ್‌ನಲ್ಲಿ 0–100 ಕಿ.ಮೀ ವೇಗ. ಗರಿಷ್ಠ 240 ಕಿ.ಮೀ ವೇಗ. ಇದು ಎಂಜಿನ್ ವಿವರ.

ಸಂಪೂರ್ಣ ಎಂಜಿನ್ ಕಾಣು­ವಂ­ತಹ ನೇಕಡ್ ವಿನ್ಯಾಸ. ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್. ತಲೆಕೆಳಗಾದ ಮುಂದಿನ ಫೋರ್ಕ್ ಸಸ್ಪೆನ್ಷನ್, ಮುಂಬದಿಯಲ್ಲಿ 330 ಎಂ.ಎಂ.ನ ಅವಳಿ ಡಿಸ್ಕ್‌ ಬ್ರೇಕ್‌ಗಳು. ಹಿಂಬದಿಯಲ್ಲಿ 280 ಎಂ.ಎಂ.ನ ಡಿಸ್ಕ್ ಬ್ರೇಕ್. ತಲಾ ರೂ.30 ಸಾವಿರ ಬೆಲೆ ಬಾಳುವ ಎರಡು ರೋಸಮ್ ಟೈರ್‌ಗಳು. ಒಟ್ಟಾರೆ ತೂಕ  160 ಕೆ.ಜಿ. (ಬಹು ಜನಪ್ರಿಯ ಬೈಕ್‌ ಹೋಂಡಾ ಸಿಬಿಆರ್ 250ಆರ್‌ನ ತೂಕವೂ ಸರಿಸುಮಾರು ಇಷ್ಟೇ ಇದೆ). ಮತ್ತು ಎಕ್ಸ್‌ ಷೋರೂಂ ಬೆಲೆ ಸರಿಸುಮಾರು ರೂ. 4 ಲಕ್ಷ.
ಮಧ್ಯಮ ವರ್ಗದ ಸ್ಪೋರ್ಟ್ಸ್ ವಿಭಾಗದಲ್ಲಿ ಈ ಬೈಕ್ ಮೆರೆಯುವು­ದರಲ್ಲಿ ಎರಡು ಮಾತಿಲ್ಲ.

ಇದೇ ವಿಭಾಗ­ದಲ್ಲಿ ರಸ್ತೆಗಿಳಿಯಲು ತಯಾರಾಗಿರುವ ಕೆಟಿಎಂ ಡ್ಯೂಕ್ 690 ಎಲ್ಲದರಲ್ಲೂ ಹ್ಯಾಸ್ಟರ್‌ಗಿನ್ನ ಹಿಂದುಳಿ­ದಿದೆ. 677 ಸಿ.ಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಎಂಜಿನ್‌, 7500 ಆರ್‌ಪಿಎಂ­ನಲ್ಲಿ 67 ಬಿಎಚ್‌ಪಿ ಶಕ್ತಿ, 5500 ಆರ್‌ಪಿಎಂನಲ್ಲಿ 68 ಎನ್‌ಎಂ ಟಾರ್ಕ್. ಗರಿಷ್ಠ 230 ಕಿ.ಮೀ ವೇಗ. 150 ಕೆ.ಜಿ ತೂಕವಿರುವ ಡ್ಯೂಕ್‌ 690ಯ ಬೆಲೆ ಸುಮಾರು ರೂ. 4.6 ಲಕ್ಷ (ಎಕ್ಸ್‌ಷೋರೂಂ ಬೆಲೆ). ಅದು ಬೇಗ ಮಾರು­ಕ­ಟ್ಟೆಗೆ ಬರಲಿದೆ ಎಂಬು­ದಷ್ಟೇ ಪ್ಲಸ್ ಪಾಯಿಂಟ್. ಆದರೆ ಮುಂದಿನ ವರ್ಷಾಂತ್ಯಕ್ಕೆ ಹ್ಯಾಸ್ಟರ್ ರಸ್ತೆಗಿಳಿಯಲಿದೆ ಎನ್ನಲಾಗಿದೆ. ಅದೇ ಹೊತ್ತಿಗೆ ಭಾರತಕ್ಕೆ ಕಾಲಿಡಲಿರುವ ಹೋಂಡಾ ಸಿಬಿಆರ್ 600ಆರ್, 650ಆರ್, ಕವಾಸಕಿ ನಿಂಜಾ 600ಗಳಿಗೆ ಹ್ಯಾಸ್ಟರ್‌ ಪ್ರಬಲ ಸ್ಪರ್ಧೆ ಒಡ್ಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT