ADVERTISEMENT

ದಿಗಂತವಿರದ ದಾರಿಯಲ್ಲಿ...

ಒಡಲಾಳ

ಕಾವೇರಿ ಎಸ್.ಎಸ್, ಹಾಸನ.
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಸಂಜೆ ಬೆಳಕು ಕಂದುವ ಹೊತ್ತು... ಯಾಕೋ ಸುತ್ತಾಡಬೇಕೆಂಬ ಆಸೆ ಮೂಡಿ, ತಿಕ್ಕಲು ಬಯಕೆಗಳ ಜೊತೆ ಸೇರಿ ತಿರುಗುತ್ತಿದ್ದೇನೆ. ಮುಂದೆ ಸಾಗಬೇಕು ಅನಿಸುತ್ತಿದೆಯೇ ಹೊರತು ಕೊನೆಯ ಆಲೋಚನೆಯ ಸುಳಿವಿಲ್ಲ. ಮನಸ್ಸು ಖುಷಿ ಲೇಪಿಸಿಕೊಂಡಿದೆ... ನೀನಿರುವೆ ಎಂಬ ನಂಬಿಕೆಯಲಿ. ಎಷ್ಟೋ ದಿನಗಳ ನಂತರ ಒಲವಿನ ಸುಂದರ ಒಡನಾಟಗಳ ಜೊತೆಗೂಡಿ ಸಾಗುತ್ತಿರುವ ನನ್ನಲ್ಲಿ ನೆಮ್ಮದಿಯ ಭಾವ ಮನೆಮಾಡಿದೆ.

ಏಕಾಂತದಿ ಮರದ ನೆರಳಿನಲ್ಲಿ ಸಾಗುತ್ತಿದ್ದೇನೆ. ತಂಗಾಳಿಯ ತಾಳಕ್ಕೆ ಮರದ ಎಲೆಗಳು ನರ್ತಿಸುತ್ತಾ ನಗುತ್ತಿವೆ. ನನ್ನದೇ ಲೋಕದಲ್ಲಿ ಸಾಗುತ್ತಿರುವ ನಾನು, ಹೊರ ಜಗತ್ತಿನ ಆಗು-ಹೋಗುಗಳನ್ನು ಗಮನಿಸುತ್ತಿಲ್ಲ. ನಾ ಸಾಗಬೇಕು, ಸಾಗುತ್ತಲೇ ಇದ್ದೇನೆ. ನನ್ನಲ್ಲಿ ಕಳೆದುಕೊಂಡದ್ದನ್ನು ಮರಳಿ ಪಡೆಯುತ್ತಿರುವ ಸಂತಸ. ಮನಸ್ಸಿನ ಬಯಕೆಗಳು ಗರಿ ಬಿಚ್ಚಿ ನಲಿಯುತ್ತಿವೆ. ಕಣ್ಣಲ್ಲಿ ನನಗೇ ಅರಿವಿಲ್ಲದಂತೆ ನೀರು ಜಿನುಗುತ್ತಿದೆ. ನಿರಾಸೆಯ ಪೊರೆ ಹೊದ್ದು, ಜೀವನದ ಜಂಜಾಟಗಳ ನಡುವೆ ಸಿಲುಕಿ ನರಳಿದ್ದ ನಾನು ಇಂದು ಬೆಳಕನ್ನು ಅರಸುತ್ತಿದ್ದೇನೆ. ಕಳೆದುಕೊಂಡದ್ದನ್ನು ಮರಳಿ ಪಡೆಯುವ ಉತ್ಸಾಹದಲ್ಲಿ ಮನಸ್ಸು ಹುಚ್ಚು ಕುದುರೆಯಾಗಿ ಲಗಾಮಿಲ್ಲದೇ ಮುನ್ನಡೆಯುತ್ತಿದೆ. ನೀ ಸಾಗು, ಹಿಂದಿರುಗಿ ನೋಡದಿರು ಎಂದು ನನ್ನ ಮನಸ್ಸಿಗೆ ಕೂಗಿ ಕೂಗಿ ಹೇಳಬೇಕು ಅನಿಸುತ್ತಿದೆ. ಕೆಲವರ ಕೂಗಾಟ ನನ್ನ ಏಕಾಂತಕ್ಕೆ ಭಂಗ ತಂದಿದೆ.

ಮುನ್ನಡೆಯುತ್ತಿದ್ದ ನಾನು ನಿಂತು ತದೇಕಚಿತ್ತದಿಂದ ಬೆರಗಾಗಿ ಎಲ್ಲರ ಗಮನವನ್ನೂ ತಮ್ಮತ್ತ ಸೆಳೆಯುತ್ತಿರುವ ಹಿಜಡಾಗಳನ್ನು ನೋಡುತ್ತಿದ್ದೇನೆ. ಕೆಲ ಹಿಜಡಾಗಳು ನಾ ಸಾಗುವ ದಾರಿಯಲ್ಲಿ ಕಂಡ ಕಂಡ ಅಂಗಡಿಗಳಿಗೆ ನುಗ್ಗಿ ಹಣ ಕೀಳುತ್ತಿದ್ದಾರೆ. ಗಂಡಸರ ಬಳಿ ಹೋಗಿ ಅಣ್ಣಾ ದುಡ್ಡು ಕೊಡೋ ಅಂತ ಸಲುಗೆಯಿಂದ ಕೇಳುತ್ತಿದ್ದಾರೆ. ಅವರ ವರ್ತನೆ ನನಗೇಕೋ ಸಹಜವೆನಿಸುತ್ತಿಲ್ಲ. ಈ ಜಗದ ಪಾಲಿಗೆ ಸಹಜವೆನಿಸುವುದು ಅಸಲಿಗೂ ಸಹಜವೇ ಎಂದು ಪ್ರಶ್ನಿಸಿಕೊಳ್ಳಲು ಹೊರಟಾಗ ಸಿಕ್ಕದ್ದು ನಕಾರಾತ್ಮಕ ಉತ್ತರವೇ. ಹೀಗಿರುವಾಗ ಇವರ ವರ್ತನೆಯಲ್ಲಿನ ಅಸಹಜತೆಗೆ ಅವರ ಜಗತ್ತಿನಲ್ಲಿ ಸಹಜತೆಯ ಸ್ಥಾನಮಾನ ದಕ್ಕಿರಬಹುದು.

ಹಣ ಕೊಡದವರಿಗೆ ಕೆಲ ಹಿಜಡಾಗಳು ಶಾಪ ಹಾಕಿದರೆ, ಮತ್ತೆ ಕೆಲವರು ಮುಂದಿನ ವಾರ ನೀ ಕೊಡಲೇಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ಅವರೆಲ್ಲರೂ ಮೈ ಮೇಲೆ ಓಕುಳಿ ಎರಚಿಕೊಂಡಿದ್ದಾರೆ. ಪರಸ್ಪರ ಬಣ್ಣಗಳನ್ನು ಹಚ್ಚಿಕೊಳ್ಳುತ್ತಲೂ ಇದ್ದಾರೆ. ಸಿಕ್ಕ ಸಿಕ್ಕ ಗಂಡಸರಿಗೆ ಬಣ್ಣದ ರುಚಿ ತೋರಿಸಲು ಹೊರಟಿರುವ ಅವರನ್ನು ನೋಡಿ ಕೆಲವರು ನಗುತ್ತಿದ್ದರೆ, ಮತ್ತೆ ಕೆಲವರು ಛೀಮಾರಿ ಹಾಕುತ್ತಿದ್ದಾರೆ. ಯಾರು ಏನೇ ಅಂದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಯಾರಿಗೂ ಅಂಜದೇ ಅಳುಕದೇ ಮುಂದೆ ಸಾಗುತ್ತಿರುವ ಅವರಲ್ಲಿ ಅವರದೇ ಆದ ನೆಮ್ಮದಿಯ ಭಾವವಿದೆ. ಜನರೆಲ್ಲರೂ ಅವರನ್ನೇ ವಿಚಿತ್ರವಾಗಿ ದಿಟ್ಟಿಸಿ ನೋಡುತ್ತಿದ್ದಾರೆ. ನಾನೂ ಅವರನ್ನೇ ನೋಡುತ್ತಾ ಮೈ ಮರೆತಿದ್ದೇನೆ.

ಮನದಲ್ಲಿ ಎಷ್ಟೇ ನೋವಿದ್ದರೂ ತೋರ್ಪಡಿಸದೇ ತಮ್ಮದೇ ಆಲಯ ಸೃಷ್ಟಿಸಿಕೊಂಡು, ತಮ್ಮ ನಡುವೆ ಬೇಧ ಭಾವ ಇರಿಸಿಕೊಳ್ಳದೇ ನಸುನಗುತ್ತಾ ಜೊತೆಯಾಗಿ ಸಾಗುತ್ತಿರುವ ಅವರನ್ನು ಕಂಡು ಮನಸ್ಸು ಮುದಗೊಳ್ಳುತ್ತಿದೆ. ಏನೇ ಮಾಡಿದರೂ ಅದರಲ್ಲಿ ತಪ್ಪು ಹುಡುಕುವ ಜನರ ಮಧ್ಯೆ, ಸಮಾಜದ ತಿರಸ್ಕಾರಕ್ಕೆ ಸೆಡ್ಡು ಹೊಡೆದು ಎಲ್ಲಕ್ಕಿಂತಲೂ ತಮ್ಮ ಬದುಕು ದೊಡ್ಡದು ಎಂದು ನಂಬಿಕೊಂಡಿರುವ ಅವರು ಅದ್ಯಾಕೋ ಇಷ್ಟವಾಗುತ್ತಿದ್ದಾರೆ. ಇವರನ್ನು ಕಂಡ ಮೇಲೆ... ಬದುಕಲ್ಲಿ ಏನೇ ಬಂದರೂ ಕುಗ್ಗದೇ ಮುಂದೆ ಸಾಗುವ ಕನಸ ಹೊದ್ದು ಸಾಗುತ್ತಲೇ ಇದ್ದೇನೆ... ದಿಗಂತವಿರದ ದಾರಿಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.