ADVERTISEMENT

ನನ್ನ ಹಾಡು ನನ್ನ ಕಥೆ

ಒಡಲಾಳ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ನಾನು ನುಡಿವ ನನ್ನೀ ಕತೆಯು ನನ್ನೊಬ್ಬನದಲ್ಲ...
ನಾನು ಹುಟ್ಟಿದ ದಿನ ಮನೆಯಲ್ಲಿ ಸಂತಸ.

ಅವಧಿಗೆ ಮುಂಚೆ ಹುಟ್ಟಿದೆನೆಂದಳು ಅಮ್ಮ. ಸೆರಬಲ್, ಬುದ್ಧಿಮಂದ ಮಗು ಎಂದ ಡಾಕ್ಟರ್, ಬೆಳವಣಿಗೆ ನಿಧಾನವಂತೆ, ಮಗು ಬದುಕಿತಲ್ಲ– ಅಪ್ಪನ ಸಮಾಧಾನ.

ಏನಾದ್ರೂ ಮಗು ಬೆಳ್ಳಗಿದೆ–ಮುದ್ದು ಅಜ್ಜ ಅಜ್ಜಿಯ ಪ್ರೀತಿ ಮಾತು.
ತಿಂಗಳಾನುಗಟ್ಟಲೇ ಅದ್ರೂ ಮಗು ನಡೆದಿಲ್ಲ, ಹೊರಳುತ್ತಲೇ ಹೊಸಿಲು ದಾಟಿದೆ ಮಗು ಆರತಿ ಬೆಳಗಿದರು, ಮನೆ ಮಹಿಳೆಯರು ಚೌಲಾ ಮಾಡಿಸಿ, ಕಿವಿ ಚುಚ್ಚಿದರು.

ಆ ದೇವರು -ಈ ದೇವರು, ಆ ಮಾತೆ,
ಅಮ್ಮ -ಮಾರಮ್ಮ ಗುಡಿ ಆ- ಶಾಸ್ತ್ರ,

ಈ -ಜೋತಿಷ್ಯ, ದೂರದೂರಿಗೆ ಪಯಣ, ಫಲಿತಾಂಶ ಸುಸ್ತು ಸಂಕಟ...
ವೀಲ್ ಚೇರ್ ಹಿಡಿದರು ಅಪ್ಪ
ಎತ್ತಿಕೊಂಡು ಸುಸ್ತಾದರು...

ಬೀದಿ, ಗಲ್ಲಿ, ನಗರದ ತುಂಬಾ ಮೆರವಣಿಗೆ
ಜನರ ದೃಷ್ಟಿ, ನನ್ನ ಕಡೆ–‘ಪಾಪ ಮಗು ಚೆಂದ’. ‘ವಿಶೇಷಚೇತನ’ ಹೆಸರಿನಿಂದ ಸರ್ಕಾರದ ನಾಮಕರಣ, ವಿಶೇಷಚೇತನ ಮಕ್ಕಳ ಶಾಲೆಗೆ ಸೇರ್ಪಡೆ.
ಅಲ್ಲಿ ನನ್ನ ವಿದ್ಯೆ ಕಲಿಕೆಗೆ ದಾರಿ, ನನ್ನಂತೆ ಅಲ್ಲಿ ನೂರಾರು ಮಕ್ಕಳು.

ಯಾರದೋ ನಟಿಯ ಜನುಮದ ದಿನವಂತೆ, ಬಂದರು ಶಾಲೆಗೆ, ನಮ್ಮ ಜತೆ ನಿಂತರು, ಫೋಟೊ ತೆಗೆಸಿ, ಸಿಹಿ ಹಂಚಿದರು. ಬರ್ರನೇ ಕಾರಲ್ಲಿ ಹಿಂತಿರುಗಿದರು.

ನಮ್ಮ ನಗರದಲ್ಲಿ ಬಂತು ಚುನಾವಣೆ. ನಮ್ಮನ್ನ ಕಾಡದೇ ಇರುವರೇ ಇವರು? ಓಟು ಕೊಡಿ, ಒಂದೇ ಮತ ನಿಮಗೆ ಹಿತವೆಂದು ನುಡಿದರು. ಮೈದಾನದಲ್ಲಿ ಪೆಂಡಾಲ್ ಹಾಕಿದ್ದರು, ವೀಲ್ ಚೇರ್ ಸಮೇತ ನನ್ನ ವೇದಿಕೆಗೆ ಹೊತ್ತೊಯ್ದರು. ರಾಜಕಾರಿಣಿ ನನ್ನ ಕೈಗೆ ಹಣ್ಣಿನ ಬುಟ್ಟಿ ಇಟ್ಟು, ಮಾಲೆ ಹಾಕಿ, ಶಾಲು ಹೊದಿಸಿದ. ಜನ ಜೈ ಎಂದರು.

ಅಳುತ್ತಿದ್ದ ನನ್ನ ಬಳಿಗೆ ಅಪ್ಪ ಬರಲು ಬಿಡಲಿಲ್ಲ, ರಾಜಕಾರಿಣಿ ಭಾಷಣ ಮುಗಿದ ಮೇಲೆ ಬಿಟ್ಟರು. ಕೊಟ್ಟಿದ್ದ ಹಣ್ಣು, ಹಣ, ಶಾಲು ಕಿತ್ತರು. ಮತ್ತೆ ಮಂತ್ರಿಗೆ ಜೈ ಎಂದು ಹೋದರು. ಪತ್ರಿಕೆಯಲ್ಲಿ ನನ್ ಫೋಟೊ ಮಂತ್ರಿಯ ಜತೆ. ಮಂತ್ರಿಯನ್ನು ಹೊಗಳಿ ಬರೆದ ಲೇಖನಗಳೂ... ನಾನು ಬೀದಿ ಗಲ್ಲಿಯಲ್ಲಿ ಹೆಸರಾದೆ.

‘ಸಾವಿರ ಸಾವಿರ ಹಣ ಬಂತಾ, ಅದೃಷ್ಟ ನೋಡಿ ಹೀಗಿರಬೇಕು, ಮಗು ಅದೃಷ್ಟ ನಾನು ಹೇಳಿಲ್ವೇ’ ಜನರ ಈ ಮಾತಿಗೆ ಅಪ್ಪ -ಅಮ್ಮ ಕೆಂಡವಾದರು. ಫೋಟೊ ಹಿಡಿವ ತನಕವಷ್ಟೇ  ಈ ಅದೃಷ್ಟ, ಅವು ಒರಿಜನಲ್ ಅಲ್ಲ ಫೋಟೊ ಗಾಗಿಯಷ್ಟೇ. ನಂತರ ಎಲ್ಲ ಕಿತ್ತಿದ್ದು ಇವರಿಗೆ ಗೊತ್ತಿಲ್ಲ.

ನಿಮ್ಮ ಜನುಮದ ದಿನಕ್ಕೆ ನಮ್ಮನ್ನು ಬಳಸದಿರಿ, ನಿಮ್ಮ ಓಟಿಗೆ ನಮ್ಮನ್ನು ಬಲಿಯಾಗಿಸಬೇಡಿ, ನೀವು ಕೊಟ್ಟ ಚಾಕೊಲೇಟ್ ಸಿಹಿಯಲ್ಲ. ನೀವು ಕೊಟ್ಟ ಕಾಸು ಕಳ್ಳ ನೋಟು. ಸೆಲ್ಫೀ ಫೋಟೊಗೆ ನಮ್ಮನ್ನು ಬಳಸದಿರಿ, ದಿನವಿಡೀ ದುಡಿದು ತಂದ ಅನ್ನವಾ ನಮಗೆ ತಿನಿಸುವ ಅಪ್ಪ-ಅಮ್ಮ ಅಮೃತಕ್ಕೆ ಸಮಾನ.

ನಮ್ಮನ್ನ ನಮ್ಮ ಪಾಡಿಗೆ, ಬದುಕಲು ಬಿಡಿ. ನನಗೆ ವಿಕಲ ಚೇತನ ಮಗುವಿದ್ದು, ಅವನ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT