ADVERTISEMENT

ನಮ್ಮ ಒಳಗಿನ ನೆಮ್ಮದಿಯೇ ಅಧ್ಯಾತ್ಮ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ನಮ್ಮ ಒಳಗಿನ ನೆಮ್ಮದಿಯೇ ಅಧ್ಯಾತ್ಮ
ನಮ್ಮ ಒಳಗಿನ ನೆಮ್ಮದಿಯೇ ಅಧ್ಯಾತ್ಮ   
‘ಸ್ಪಿರಿಚ್ಯುಯಾಲಿಟಿ’. ಇದು ಇಂದು ತುಂಬ ಆಕರ್ಷಕ ಪದಗಳ ಪಟ್ಟಿಯಲ್ಲಿ ಸ್ಥಾನವನ್ನು ಅಲಂಕರಿಸಿದೆ. ಇದರ ಆಕರ್ಷಣೆ ಯುವಜನರನ್ನೂ ಬಿಟ್ಟಿಲ್ಲ. ವಾರದ ಐದಾರು ದಿನಗಳನ್ನು ರಾತ್ರಿ ಹಗಲು ಆಫೀಸಿನಲ್ಲಿಯೇ ಕಳೆದು, ಉಳಿದ ಒಂದು ದಿನದಲ್ಲಿ ‘ಸ್ಪಿರಿಚ್ಯುಯಲ್‌’ ಆಗುವ ಹೆಬ್ಬಯಕೆ ಅವರದ್ದು. ಇಷ್ಟಕ್ಕೂ ‘ಸ್ಪಿರಿಚ್ಯುಯಾಲಿಟಿ’ ಎಂದರೇನು? 
 
‘ಸ್ಪಿರಿಚ್ಯುಯಾಲಿಟಿ’ಯನ್ನು ನಮ್ಮ ಭಾಷೆಗೆ ಅನುವಾದಿಸಿಕೊಂಡು ಅದನ್ನು ‘ಆಧ್ಯಾತ್ಮಿಕತೆ’ ಎಂದು ಕರೆಯೋಣ. ಹಾಗಾದರೆ ಆಧ್ಯಾತ್ಮಿಕತೆ ಎಂದರೇನು? ಇದನ್ನು ತಿಳಿಯುವ ಮೊದಲು ಒಂದು ಕಥೆಯನ್ನು ಕೇಳೋಣ.
 
ಮಧ್ಯಾಹ್ನದ ಸಮಯ. ಒಬ್ಬ ಹುಡುಗ ಮರದ ಕೆಳಗೆ, ತಂಪಾದ ನೆರಳಲ್ಲಿ, ಮಲಗಿ ನಿದ್ರಿಸುತ್ತಿದ್ದಾನೆ. ಅದೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಕಣ್ಣಿಗೆ ಆ ಹುಡುಗ ಬಿದ್ದ. ಆ ಬಾಲಕನ ಸೋಮಾರಿತನವನ್ನು ಕಂಡು ಅವನಲ್ಲಿ ಚಡಪಡಿಕೆ ಹುಟ್ಟಿತು. ಮಲಗಿದ್ದ ಕಡೆಗೆ ನೇರ ನಡೆದು, ಆ ಹುಡುಗನನ್ನು ತಟ್ಟಿ ಎಬ್ಬಿಸಿದ. ‘ಎಲೈ, ಮೂರ್ಖ! ಸುಮ್ಮನೆ ಮಲಗಿ ನಿದ್ರಿಸುವ ಬದಲು ಇದೇ ಮರವನ್ನು ಕಡಿದು ಸೌದೆಯನ್ನಾದರೂ ಮಾರಬಾರದಿತ್ತೆ?’ ಎಂದ ಆ ಹಿರಿಯ.
 
‘ಅದನ್ನು ನಾನು ಯಾಕೆ ಮಾಡಬೇಕು?’ – ಹುಡುಗ ಪ್ರಶ್ನಿಸಿದ. ‘ದುಡ್ಡು ಬರುತ್ತದೆ ಕಣೋ!’ ‘ಅದರಿಂದ ಏನು?’ ‘ನಿನಗೆ ಏನು ಬೇಕೋ ಅದನ್ನು ಕೊಳ್ಳಬಹುದಪ್ಪ!’ ‘ಅದರಿಂದೇನು?’ ‘ ಪೆದ್ದ! ಆಗ ನೀನು ಸಂತೋಷವಾಗಿರಬಹುದು’. ‘ಈಗ ನಾನು ಸಂತೋಷವಾಗಿರುವುದರಿಂದಲೇ ಮಲಗಿರುವುದು’ ಎಂದು ಹೇಳಿ ತರುಣ ಮತ್ತೆ ನಿದ್ರೆಗೆ ಜಾರಿದ! 
 
ನೆಮ್ಮದಿಗಾಗಿನ ಹುಡುಕಾಟವೇ ‘ಅಧ್ಯಾತ್ಮ’. ಈ ಹುಡುಕಾಟದ ಮೂಲದಲ್ಲಿ ನೆಲೆಯಾಗುವುದೇ ‘ಆಧ್ಯಾತ್ಮಿಕತೆ.’ ಇಷ್ಟಕ್ಕೂ ಈ ಹುಡುಕಾಟದ ಅನಿವಾರ್ಯತೆಯಾದರೂ ಹೇಗೆ ಎದುರಾಯಿತು? ನಮ್ಮ ಜೀವನವನ್ನು ರೂಪಿಸಿಕೊಳ್ಳುವ ವಿಧಾನದಲ್ಲೇ ನಾವು ಏನನ್ನೋ ಕಳೆದುಕೊಳ್ಳುತ್ತಿರುವುದರಿಂದ ಹುಡುಕಾಟ ಅನಿವಾರ್ಯವಾಗುತ್ತಿದೆ. ಯಾವುದನ್ನು ಕಳೆದುಕೊಂಡಿರುತ್ತೇವೆಯೋ ಅದನ್ನೇ ಅಲ್ಲವೆ ಹುಡುಕುವುದು? ಜೀವನದ ನಿರ್ಮಾಣಕಾಲದಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಲೇ ಅದೇ ನೆಮ್ಮದಿಗಾಗಿ ಮತ್ತೆ ಜೀವನದುದ್ದಕ್ಕೂ ಹುಡುಕುತ್ತಿರುತ್ತೇವೆ.
 
ನೆಮ್ಮದಿ ಎಂದರೇನು – ಎನ್ನುವುದು ನಮ್ಮ ಅರಿವಿಗೆ ಬರದೇ ಇರುವುದರಿಂದಲೇ ನಾವೇ ಅದನ್ನು ಕಳೆಯುತ್ತಿದ್ದೇವೆ; ಇದು ಗೊತ್ತಾಗದೆಯೇ ಮತ್ತೆ ಅದನ್ನೇ ಹುಡುಕಿ ಆಯಾಸ ಪಡುತ್ತಿದ್ದೇವೆ. ಇದು ಸೋಜಿಗವಲ್ಲದೆ ಮತ್ತೇನು?
 
ನೆಮ್ಮದಿ ಎಂದರೆ ಅದು ಯಾವುದೋ ನಮ್ಮಿಂದ ಹೊರಗಿರುವ ಸಂಗತಿ ಎಂದೇ ಭಾವಿಸಿಕೊಂಡಿದ್ದೇವೆ. ಆದುದರಿಂದಲೇ ಅದನ್ನು ಹಣದಲ್ಲೋ ಪದವಿಯಲ್ಲೋ ಶಿಕ್ಷಣದಲ್ಲೋ; ಕಾರಿನಲ್ಲೋ ವಿಮಾನದಲ್ಲೋ; ಮನೆಯಲ್ಲೋ ಹಿಮಾಲಯದಲ್ಲೋ ಮಠದಲ್ಲೋ; ಎಲ್ಲೆಲ್ಲೋ ಹುಡುಕುತ್ತಿದ್ದೇವೆ. ಸೌದೆ, ಸೌದೆಯಿಂದ ದುಡ್ಡು, ದುಡ್ಡಿನಿಂದ ಬೇಕಾದ ವಸ್ತು, ಆ ವಸ್ತುಗಳಿಂದ ನೆಮ್ಮದಿ – ಇಂಥ ಸಮೀಕರಣದ ಜೀವನತತ್ತ್ವ ಆ ದಾರಿಹೋಕನದ್ದು. ಆದರೆ ನೆಮ್ಮದಿ ಎನ್ನುವುದು ಇಂಥ ಹೊರಗಿನ ವಸ್ತುಗಳಿಂದ ಸಿಗದು; ಅದು ನಮ್ಮ ಅಂತರಂಗದಲ್ಲಿ ಮೂಡಬೇಕಾದ ಸ್ಥಿತಿ. 
 
‘ಅದು ಬೇಕು, ಇದು ಬೇಕು’ ಎಂಬ ಬಾಹ್ಯ ಅನ್ವೇಷಣೆಗಿಂತಲೂ ‘ಇಷ್ಟು ಸಾಕು’ ಎನ್ನುವ ಅಂತರಂಗದ ತೃಪ್ತಿಯೇ ನೆಮ್ಮದಿಯ ಮೂಲ ಬಂಡವಾಳ. ಇದು ಆ ಬಾಲಕನದ್ದು. ಜೀವನದುದ್ದಕ್ಕೂ ಏನೇನನ್ನೋ ಗಳಿಸುವುದಕ್ಕಾಗಿಯೇ ನಾವು ಹೋರಾಟ ಮಾಡುತ್ತಿದ್ದರೆ, ಈಗಾಗಲೇ ಪಡೆದುದನ್ನು ಆಸ್ವಾದಿಸುವುದು ಯಾವಾಗ? ನಮ್ಮಲ್ಲಿ ಈಗಾಗಲೇ ಇರುವ ಸಂತಸವನ್ನು ಸವಿಯುವ ಗುಣವೇ ಆಧ್ಯಾತ್ಮಿಕತೆ; ಅದೇ ನಿಜವಾದ ಸ್ಪಿರಿಚ್ಯುಯಾಲಿಟಿ. 
-ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.