ADVERTISEMENT

ನೆನೆವ ಖುಷಿಯಲಿ ಗಣೇಶ್

ಗಣೇಶ ವೈದ್ಯ
Published 15 ಏಪ್ರಿಲ್ 2015, 19:30 IST
Last Updated 15 ಏಪ್ರಿಲ್ 2015, 19:30 IST
ನೆನೆವ ಖುಷಿಯಲಿ ಗಣೇಶ್
ನೆನೆವ ಖುಷಿಯಲಿ ಗಣೇಶ್   

ನಟ ಗಣೇಶ್ ಮತ್ತೆ ಮಳೆಯಲ್ಲಿ ನೆನೆವ ಖುಷಿಗೆ ಸಜ್ಜಾಗುತ್ತಿದ್ದಾರೆ. ‘ಮುಂಗಾರು ಮಳೆ–2’, ‘ಸ್ಟೈಲ್ ಕಿಂಗ್’ ಹೀಗೆ ಕೆಲವು ಚಿತ್ರಗಳ ಚಿತ್ರೀಕರಣಗಳಲ್ಲಿ ತೊಡಗಿಕೊಂಡಿರುವ ‘ಗೋಲ್ಡನ್ ಸ್ಟಾರ್’ ಗಣೇಶ್ ‘ಕಾಮನಬಿಲ್ಲು’ ಜೊತೆ ಲಹರಿಗಿಳಿದಿದ್ದಾರೆ ಹಾಗೇ ಸುಮ್ಮನೆ....

ಗಣೇಶ ಅಂದ್ರೆ ವಿಘ್ನ ನಿವಾರಕ. ಅವನಿಗೆ ಮೊದಲ ಪೂಜೆ. ನಿಮಗೂ ನಿಮ್ಮ ಮನೆಯಲ್ಲಿ ಮೊದಲ ಪೂಜೆ ಸಲ್ಲೋದುಂಟೇ?
ಹಾಗೇನು ಮೊದಲ ಪೂಜೆ ಅಂತ ಇಲ್ಲ. ಆದರೂ ಯಾವ ರೀತಿಯ ಪೂಜೆ ಅನ್ನೋದರ ಮೇಲೆ ಅವಲಂಬಿಸಿರುತ್ತೆ! ಸಾಮಾನ್ಯವಾಗಿ ಕೊನೇ ಪೂಜೆಯೇ ನನಗೆ ಆಗುವುದು. ಕೆಲವೊಮ್ಮೆ ನಾನೇ ವಿಘ್ನ ನಿವಾರಣೆ ಮಾಡುವ ವಿಚಾರದಲ್ಲಿ ನನಗೇ ಮೊದಲ ಪೂಜೆ.

ನೀವು ಮಿಮಿಕ್ರಿ ಕಲಾವಿದ ಕೂಡ. ತುಂಬಾ ಇಷ್ಟ ಪಟ್ಟು ಮಾಡುವ ಅನುಕರಣೆ?
ಚಿಕ್ಕವನಿದ್ದಾಗಿಂದಲೇ ಮಿಮಿಕ್ರಿ ರೂಢಿಯಲ್ಲಿತ್ತು. ಅದನ್ನ ನಾನು ಕಷ್ಟಪಟ್ಟೇನೂ ಮಾಡಬೇಕಿರಲಿಲ್ಲ. ಸಹಜವಾಗೇ ಬರುತ್ತೆ. ಎಲ್ಲರನ್ನೂ ಅನುಕರಿಸುತ್ತೇನೆ. ಎಲ್ಲ ಅನುಕರಣೆಯೂ ನನಗಿಷ್ಟ.

ನಿಮ್ಮ ಜೀವನದ ‘ಸೂಪರ್ ಮಿನಿಟ್’?
ಪ್ರತಿಯೊಂದು ಗಳಿಗೆಯೂ ಸೂಪರ್ ಮಿನಿಟ್. ನನ್ನ ಜೀವನದ ಡಬ್ಬಾ ಮಿನಿಟ್ ಅನ್ನೋದು ಯಾವುದೂ ಇಲ್ಲ. ‘ಕಾಮಿಡಿ ಟೈಮ್’ ಆರಂಭದ ದಾರಿ ಸುಗಮಗೊಳಿಸಿತ್ತು. ‘ಸೂಪರ್ ಮಿನಿಟ್’ಗೆ ಸೂಪರ್ ಪ್ರತಿಕ್ರಿಯೆಗಳೇ ಬಂದವು. ಅವೆರಡೂ ಅದ್ಭುತ ಯಶಸ್ಸು ಕಂಡಂಥ ಷೋಗಳು.

ನಿಮ್ಮ ಮಾಮೂಲಿ ಡಾನ್ಸ್ ಶಿಲ್ಪಾ ಮೇಡಂಗೆ ಬೋರ್ ಆಗಿದ್ಯಂತೆ?


ಹೌದು. ‘ಯಾವಾಗ್ಲೂ ಒಂದೇ ಥರ ಡಾನ್ಸ್ ಮಾಡ್ತೀರಾ. ಎರಡೂ ಕೈ ಚಾಚಿಕೊಂಡು ಅತ್ತಿಂದಿತ್ತ, ಇತ್ತಿಂದತ್ತ ಓಡಾಡ್ತೀರಿ’ ಅಂತ ಒಂದು ವರ್ಷದ ಹಿಂದೆ ಹೇಳಿದ್ದಳು. ಈಗ ‘ಖುಷಿ ಖುಷಿಯಾಗಿ’ ಚಿತ್ರದ ಡಾನ್ಸ್ ನೋಡಿ ಅವಳಿಗೂ ಖುಷಿಯಾಗಿದೆ. ಇನ್ನು ಮುಂದೆ ಪಕ್ಕಾ ಮಾಸ್ ಡಾನ್ಸ್ ಹೀರೊ ಆಗಿ ಕೂಡ ನೋಡ್ತೀರಿ ಈ ಗಣೇಶನನ್ನ.

ಕನ್ನಡದ ‘ಸ್ಟೈಲ್ ಕಿಂಗ್’ ಆಗಲು ಹೊರಟಿ ದ್ದೀರಿ. ಏನೀ ‘ಕಿಂಗ್’ನ ವಿಶೇಷ?
ಹೆಸರೇ ಹೇಳೋ ಹಾಗೆ ಸಿಕ್ಕಾಪಟ್ಟೆ ಸ್ಟೈಲಿಷ್ ಚಿತ್ರ. ಮೊದಲ ಬಾರಿ ನನ್ನನ್ನು ದ್ವಿಪಾತ್ರದಲ್ಲಿ, ಬೇರೆ ರೀತಿಯಲ್ಲಿ ಕಾಣುತ್ತೀರಿ. ಒಬ್ಬ ಸಹಜ ಗಣೇಶನಾದರೆ, ಮತ್ತೊಬ್ಬ ಖಳ ಗಣೇಶ. ಆವಾಗವಾಗ ತುಟಿ ಮೇಲೆ ಸಿಗರೇಟ್‌ಗೆ ಮುತ್ತಿಕ್ಕುತ್ತೀನಿ. ‘ಖುಷಿ ಖುಷಿಯಾಗಿ’ ಚಿತ್ರಕ್ಕಾಗಿ ತೆಳ್ಳಗಾಗಿದ್ದೆ. ಈ ಚಿತ್ರಕ್ಕೆ ಮತ್ತೆ ಜಿಮ್ ವರ್ಕ್ ಮಾಡಿ ಮೈ ಹುರಿಗೊಳಿಸಿದ್ದೇನೆ. ಜನ ಚೇಂಜ್ ಕೇಳ್ತಾರೆ ನೋಡಿ. ಮತ್ತೊಂದು ವಿಶೇಷ ಅಂದರೆ ‘ಸ್ಟೈಲ್ ಕಿಂಗ್’ಗಾಗಿ ಜನಸಂದಣಿ ಮಧ್ಯೆ ಶೂಟಿಂಗ್ ಮಾಡುವಾಗ ನನ್ನನ್ನು ಅಲ್ಲಿದ್ದ ಯಾರೂ ಗುರುತಿಸಲೇ ಇಲ್ಲ. ಗಡ್ಡ, ಮೀಸೆ, ಮೇಕಪ್ ಅಷ್ಟು ವಿಭಿನ್ನವಾಗಿತ್ತು.

‘ಬುಗುರಿ’ ಆಟ ಜೋರಾಗಿರುತ್ತಾ?
ಖಂಡಿತವಾಗಿಯೂ. ಎಂ.ಡಿ. ಶ್ರೀಧರ್ ಅವರು ಮತ್ತು ನಾನು ಸೇರಿ ಮಾಡುತ್ತಿರುವ ಮೂರನೇ ಚಿತ್ರ. ಮತ್ತೆ ನನ್ನ ಪಾಲಿಗೆ ಇಪ್ಪತ್ತೈದನೇ ಸಿನಿಮಾ. ಹಾಗಾಗಿ ಈ ಚಿತ್ರಕ್ಕೆ ಸಾಕಷ್ಟು ಸಮಯ ಮೀಸಲಿಟ್ಟು ಅಚ್ಚುಕಟ್ಟಾಗಿ ಬರುವಂತೆ ಕಾಳಜಿ ವಹಿಸುತ್ತಿದ್ದೇವೆ. ‘ಬುಗುರಿ’ ಜೋರಾಗಿ ಸುತ್ತುವ ಸಕಲ ಭರವಸೆಯೂ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.