ADVERTISEMENT

ಪರಿಶ್ರಮವೇ ನಮ್ಮ ಬಂಧು…

ಪೃಥ್ವಿರಾಜ್ ಎಂ ಎಚ್
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST
ಸಂತೋಷ್  ಗಾಯಕವಾಡ್
ಸಂತೋಷ್ ಗಾಯಕವಾಡ್   

ಪರಿಶ್ರಮಕ್ಕೆ ಸರಿ ಸಮಾನವಾದ ಬಂಧು ಇಲ್ಲ ಎನ್ನುತ್ತಾರೆ ಹಿರಿಯರು. ಈ ಬಂಧುವನ್ನು ನಂಬಿ ಇಲ್ಲಿಯವರೆಗೂ ಯಾರು ಹಾಳಾಗಿಲ್ಲ ಎಂಬುದು ಅವರ ಮಾತಿನ ತಾತ್ಪರ್ಯ.

ಸಂತೋಷ್  ಗಾಯಕವಾಡ್
ಮುಂಬೈ ಮೂಲದ ಪಶುವೈದ್ಯ ಸಂತೋಷ್  ಗಾಯಕವಾಡ್ ಅವರದ್ದು ಭಿನ್ನವಾದ ಸಾಧನೆ. ಸತ್ತ ಪ್ರಾಣಿ, ಪಕ್ಷಿಗಳ ಚರ್ಮ ಮತ್ತು ಮೂಳೆಗಳನ್ನು ಬಳಸಿ ಶಿಲ್ಪಗಳು ಅಥವಾ ಪ್ರಾತ್ಯಕ್ಷಿಕೆಗಳನ್ನು ತಯಾರಿಸುವುದು! ಇಂಥ ಸುಮಾರು 4 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಮತ್ತು ಒಂದು ಸಾವಿರ ಪ್ರಾಣಿಗಳ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಇವುಗಳು ಭಾರತ ಮಾತ್ರವಲ್ಲದೆ ವಿದೇಶಗಳ ವಸ್ತುಸಂಗ್ರಹಾಲಯಗಳಲ್ಲಿ ಸ್ಥಾನ ಪಡೆದಿವೆ.

ಸಂತೋಷ್ ಮುಂಬೈನ ಪಶುವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಪ್ರದೇಶ ಅಥವಾ ಮೃಗಾಲಯಗಳಲ್ಲಿ ಪ್ರಾಣಿ ಪಕ್ಷಿಗಳು ಸತ್ತರೆ ಅರಣ್ಯ ಅಥವಾ ಮೃಗಾಲಯದ ಅಧಿಕಾರಿಗಳು ಅದೇ ತೆರನಾದ ಪ್ರಾಣಿಯ ಶಿಲ್ಪವನ್ನು ರಚಿಸಿಕೊಡುವಂತೆ ಕೋರುತ್ತಾರೆ! ಸಂತೋಷ್ ಆ ಸತ್ತ ಪ್ರಾಣಿ ಅಥವಾ ಪಕ್ಷಿಯ ಚರ್ಮ, ಮೂಳೆ ಮತ್ತು ಹಲ್ಲುಗಳನ್ನು ಬಳಸಿ 200ರಿಂದ 300 ವರ್ಷಗಳವರೆಗೆ ಬಾಳಿಕೆ ಬರುವಂಥ ಮೂರ್ತಿಯನ್ನು ವಿನ್ಯಾಸ ಮಾಡಿಕೊಡುತ್ತಾರೆ. ಇವುಗಳನ್ನು ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು ಎನ್ನುತ್ತಾರೆ ಸಂತೋಷ್.

ಸಾರ್ವಜನಿಕರು ತಾವು ಸಾಕಿರುವ ನಾಯಿ, ಬೆಕ್ಕು, ಪಾರಿವಾಳ, ಗಿಳಿಗಳು ಸತ್ತು ಹೋದರೆ ಅವುಗಳ ಮಾದರಿಯಂತೆ ಶಿಲ್ಪಗಳನ್ನು ವಿನ್ಯಾಸ ಮಾಡಿಕೊಡುವಂತೆ ಕೋರುತ್ತಿದ್ದು, ಆ ಕೆಲಸವನ್ನು ಮಾಡುತ್ತಿಲ್ಲ ಎಂದು ಸಂತೋಷ್ ಹೇಳುತ್ತಾರೆ. ಅಪಾಯದಲ್ಲಿ ಸಿಲುಕಿರುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಸಂತೋಷ್ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಪ್ರಾಣಿಗಳಿಗೆ ಪಶುಚಿಕಿತ್ಸಾಲಯದಲ್ಲಿ ಅವು ಗುಣಮುಖವಾಗುವವರೆಗೂ ಚಿಕಿತ್ಸೆ ನೀಡಲಾಗುತ್ತದೆ.

ಬಳಿಕ ಆ ಪ್ರಾಣಿಗಳನ್ನು ಅರಣ್ಯ ಪ್ರದೇಶಗಳಲ್ಲಿ ಬಿಡಲಾಗುತ್ತದೆ. ಸಣ್ಣ ಸಣ್ಣ ಪ್ರಾಣಿಗಳು ಪಕ್ಷಿಗಳಿಗೆ ಮನೆಯಲ್ಲೇ ಚಿಕಿತ್ಸೆ ಕೊಟ್ಟು ಅವುಗಳನ್ನು ಸಾಕುತ್ತಾರೆ. ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕುವುದು ಸಂತೋಷ್ ಅವರ ಮತ್ತೊಂದು ಹವ್ಯಾಸ. ಈ ಪ್ರಾಣಿ ಸೇವಕನಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.ಮುಂದಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಪ್ರಾತ್ಯಕ್ಷಿಕೆಗಳು ಮತ್ತು ಪಳೆಯುಳಿಕೆಗಳಿರುವ ವಸ್ತುಸಂಗ್ರಹಾಲಯ ತೆರೆಯಬೇಕು ಎಂಬುದು ಇವರ ಗುರಿ.

***
ಸೋನ್ಯಾ


ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೌಟುಂಬಿಕ ದೌರ್ಜನ್ಯಗಳ ವಿರುದ್ಧದ ಹೋರಾಟದಲ್ಲಿ ಸೋನ್ಯಾ ಸಕ್ರಿಯರಾಗಿದ್ದಾರೆ. ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಲೈಂಗಿಕ ದೌರ್ಜನ್ಯ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಸೋನ್ಯಾ, ಎಫ್‌ವಿಎಪಿ –ಫ್ಯಾಮಿಲಿ ವಯೊಲೆನ್ಸ್ ಅಪಾಲೆಟ್‌ ಪ್ರಾಜೆಕ್ಟ್‌ (ಕೌಟುಂಬಿಕ ದೌರ್ಜನ್ಯ ವಿರುದ್ಧ ಹೋರಾಟ) ಎಂಬ ಲಾಭರಹಿತ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದರ ಮೂಲಕ ದೌರ್ಜನ್ಯಕ್ಕೆ ಒಳಗಾದ ಯುವತಿಯರಿಗೆ, ಮಹಿಳೆಯರಿಗೆ ನೈತಿಕ ಸ್ಥೈರ್ಯ ಮತ್ತು ಕಾನೂನು ನೆರವು ನೀಡುತ್ತಿದ್ದಾರೆ. ವಿಶ್ವದ 120 ದೇಶಗಳಲ್ಲಿ ಸೋನ್ಯಾ ಅವರ ಎಫ್‌ವಿಎಪಿ ಸಂಸ್ಥೆ ಸಕ್ರಿಯವಾಗಿದೆ.

ADVERTISEMENT

ಸೋನ್ಯಾ ಅವರ ಕುಟುಂಬ 50ರ ದಶಕದಲ್ಲಿ ಭಾರತದಿಂದ ಬ್ರಿಟನ್‌ಗೆ ವಲಸೆ ಹೋಗಿತ್ತು. ಸೋನ್ಯಾ ಹುಟ್ಟಿದ್ದು ಲಂಡನ್‌ನಲ್ಲಿ. ಇಲ್ಲಿನ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಎಂಫಿಲ್ ಪದವಿ ಪಡೆದಿದ್ದಾರೆ. ಉದ್ಯೋಗಕ್ಕಾಗಿ ಅಮೆರಿಕಕ್ಕೆ ವಲಸೆ ಬಂದರು. ಕ್ಯಾಲಿಫೋರ್ನಿಯಾದಲ್ಲಿನ ಕಾನೂನು ಸಂಸ್ಥೆಯೊಂದರಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡರು.

ಇಲ್ಲಿಗೆ ಕಾನೂನು ನೆರವು ಕೋರಿ ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದ ನೂರಾರು ಮಹಿಳೆಯರು ಬರುತ್ತಿದ್ದರು. ಅವರ ಕಷ್ಟಗಳನ್ನು ಆಲಿಸುತ್ತಿದ್ದ ಸೋನ್ಯಾಗೆ ಆ ಮಹಿಳೆಯರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ತುಡಿತವಿತ್ತು. ಕ್ಲರ್ಕ್ ಕೆಲಸದ ಜತೆಗೆ ಎರಡು ವರ್ಷ ಅಮೆರಿಕದ ಕಾನೂನು ಸೇರಿದಂತೆ ಅಂತರರಾಷ್ಟ್ರೀಯ ಕಾನೂನು ಅಭ್ಯಾಸ ಮಾಡಿದರು. ಬಳಿಕ ಕೆಲವು ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಎಫ್‌ವಿಎಪಿ ಆರಂಭಿಸಿದರು.

ವಿಶ್ವದಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವ ಸೋನ್ಯಾ, ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಾಗಾರ, ವಿಚಾರ ಸಂಕಿರಣಗಳು ಮತ್ತು ಆಂದೋಲನಗಳನ್ನು ನಡೆಸುತ್ತಿದ್ದಾರೆ. ಜಾಗತಿಕವಾಗಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನು ರೂಪಿಸುವ ಯೋಜನೆ ಸಿದ್ಧಪಡಿಸುತ್ತಿರುವ ಸೋನ್ಯಾ, ಅದನ್ನು ಎಲ್ಲ ದೇಶಗಳಲ್ಲೂ ಜಾರಿಗೆ ತರಲು ಹೋರಾಟ ನಡೆಸುವುದಾಗಿ ಹೇಳುತ್ತಾರೆ.

***
ಮಾನಸಾ ಮೆಂದು


ಗಾಳಿಯನ್ನು ಶಕ್ತಿಯನ್ನಾಗಿ ಪರಿವರ್ತಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು. ಹಾಗೇ ಸೂರ್ಯನ ಶಾಖದಿಂದಲೂ ವಿದ್ಯುತ್ ತಯಾರಿಸುವುದು ಎಲ್ಲರಿಗೂ ಗೊತ್ತಿದೆ. ಆದರೆ ಗಿಡ ಮರಗಳ ಎಲೆಯ ಮೂಲಕವೂ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು 14ರ ಹರೆಯದ ಬಾಲಕಿಯೊಬ್ಬರು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅವರೇ ಭಾರತೀಯ ಮೂಲದ ಮಾನಸಾ ಮೆಂದು.

ಅನಿವಾಸಿ ಭಾರತೀಯರಾದ ಮಾನಸಾ ವಾಸವಿರುವುದು ಅಮೆರಿಕದ ಒಹಿಯೊ (ohio) ಪಟ್ಟಣದಲ್ಲಿ. ಇಲ್ಲಿನ ವಿಲಿಯಂ ಮಾಷನ್ ಪ್ರೌಢಶಾಲೆಯಲ್ಲಿ ಮಾನಸ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಬೇಸಿಗೆ ರಜೆಯಲ್ಲಿ ಭಾರತಕ್ಕೆ ಬಂದಿದ್ದಾಗ ಈ ಯೋಚನೆ ಹೊಳೆಯಿತು ಎನ್ನುತ್ತಾರೆ ಮಾನಸಾ. ಸಸ್ಯಗಳು ಸೂರ್ಯನ ಶಾಖ  ಅಥವಾ ಕಿರಣಗಳ ಮೂಲಕ ಪತ್ರಹರಿತ್ತಿನ ಸಹಾಯದಿಂದ ಆಹಾರ ಉತ್ಪಾದನೆ ಮಾಡಿಕೊಳ್ಳುತ್ತವೆ. ಅಂದರೆ ಇಲ್ಲಿ ಶಕ್ತಿಯ ಬಳಕೆಯಾಗುತ್ತದೆ.

ಇದೇ ಶಕ್ತಿಯನ್ನು ಏಕೆ ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಬಾರದು ಎಂಬ ಆಲೋಚನೆ ಮಾನಸಾ ಅವರಲ್ಲಿ ಹೊಳೆಯುತ್ತದೆ. ಕೂಡಲೇ ಈ ವಿಷಯವನ್ನು ತಮ್ಮ ಶಿಕ್ಷಕರ ಬಳಿ ಹೇಳುತ್ತಾರೆ. ನಂತರ ಗಾಳಿ, ಸಸ್ಯಗಳ ಎಲೆಗಳು ಮತ್ತು ಸೂರ್ಯನ ಶಾಖದಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಮತ್ತು ಪ್ರಬಂಧ ಸಿದ್ಧಪಡಿಸಿ ಅದನ್ನು ಅಮೆರಿಕದ ವಿಜ್ಞಾನ ಕಾಂಗ್ರೆಸ್ ನಡೆಸುವ ಯುವ ವಿಜ್ಞಾನಿ ಸ್ಪರ್ಧೆಗೆ ಕಳುಹಿಸಿ ಕೊಡುತ್ತಾರೆ. ಮಾನಸಾ ಅವರ ಈ ಯೋಜನೆಯನ್ನು ಮೆಚ್ಚಿದ ಅಮೆರಿಕದ ಹಿರಿಯ ವಿಜ್ಞಾನಿಗಳು ಮೊದಲ ಬಹುಮಾನ ಘೋಷಿಸುತ್ತಾರೆ. ಜತೆಗೆ 16 ಲಕ್ಷ ರೂಪಾಯಿ ಹಣ ನೀಡುತ್ತಾರೆ.

ಭವಿಷ್ಯದ ಇಂಧನ ಕ್ಷಮತೆಗಾಗಿ ಹೊಸ ಹೊಸ ಆಲೋಚನೆ ಮತ್ತು ಸಂಶೋಧನೆಗಳಿಗೆ ಅಮೆರಿಕದ ವಿಜ್ಞಾನ ಕಾಂಗ್ರೆಸ್ ಈ ಯುವ ವಿಜ್ಞಾನಿ ಸ್ಪರ್ಧೆಯನ್ನು ನಡೆಸುತ್ತದೆ. ಇಲ್ಲಿ ಆಯ್ಕೆಯಾಗುವ ಸಂಶೋಧನೆಗಳಿಗೆ ಪೇಟೆಂಟ್ ಪಡೆದು ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಾರೆ. ಒಟ್ಟಿನಲ್ಲಿ, ಇವರ ಸಾಧನೆ ಭಾರತೀಯರಿಗೆ ಹೆಮ್ಮೆ ತರುವ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.