ADVERTISEMENT

ಪರಿಷ್ಕೃತವಾಗಿದೆ ರೆನೊ ಡಸ್ಟರ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 19:30 IST
Last Updated 6 ಸೆಪ್ಟೆಂಬರ್ 2017, 19:30 IST
ಪರಿಷ್ಕೃತವಾಗಿದೆ ರೆನೊ ಡಸ್ಟರ್
ಪರಿಷ್ಕೃತವಾಗಿದೆ ರೆನೊ ಡಸ್ಟರ್   

ರೆನೊ ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಪರಿಷ್ಕೃತಗೊಂಡು ಮತ್ತಷ್ಟು ಸುಂದರವಾಗಿ ಹೊರಬರಲು ಸಜ್ಜಾಗಿದೆ. ಕಾಸ್ಮೆಟಿಕ್ ಬದಲಾವಣೆಗಳು ಇದರ ಬಹುಮುಖ್ಯ ಅಂಶ. ಇದರಲ್ಲಿ ಮೊದಲು ಕಣ್ಸೆಳೆಯುವುದೇ ಕಾರಿನ ನಿಲುವು.

ಹೊರ ಹಾಗೂ ಒಳಾಂಗಣ ಎರಡರ ಶೈಲಿಯಲ್ಲೂ ಮಾರ್ಪಾಡಾಗಿದೆ. ಮುಂಭಾಗದಲ್ಲಿ ಕ್ರೋಮ್ ಪ್ಲೇಟೆಡ್‌ನ ಗ್ರಿಲ್, ಡಿಆರ್‌ಎಲ್‌ನ ಥ್ರೀ ಬ್ಯಾರೆಲ್ ಹೆಡ್‌ಲ್ಯಾಂಪ್‌, ಬಾನೆಟ್‌ ಮೇಲಿನ ಸ್ಪೋರ್ಟಿ ಸೀಸ್‌ಲೈನ್‌, ದೊಡ್ಡ ಸ್ಕಿಡ್ ಪ್ಲೇಟ್‌ಗಳು ಪರಿಷ್ಕೃತಗೊಂಡವು.

ಎತ್ತರದ ಬೆಲ್ಟ್‌ ಲೈನ್, ಅಲ್ಯುಮಿನಿಯಂ ರೂಫ್‌ ಬಾರ್‌ಗಳು, 17 ಇಂಚಿನ ಅಲಾಯ್ ಚಕ್ರಗಳು ಹಾಗೂ ಚಾಚಿಕೊಂಡಿರುವ ವಿಂಡ್‌ಸ್ಕ್ರೀನ್‌ಗಳು ಎಸ್‌ಯುವಿಯನ್ನು ಇನ್ನಷ್ಟು ವಿಸ್ತಾರವಾಗಿ ಗೋಚರಿಸುವಂತೆ ಮಾಡಿವೆ. ದೊಡ್ಡ ಸ್ಕಿಡ್‌ ಪ್ಲೇಟ್‌ನಲ್ಲಿ ಸ್ಯಾಟಿನ್ ಕ್ರೋಮ್ ಫಿನಿಶ್ ಹಾಗೂ ಕಂಪೆನಿಯ ಸಿಗ್ನೇಚರ್ ರಿಯರ್ ಲೈಟಿಂಗ್ ಮೆರುಗು ನೀಡಿವೆ. ಜರ್ಮನಿಯಲ್ಲಿ ಈ ಎಸ್‌ಯುವಿ ತೆರೆ ಕಾಣುವ ಮುನ್ನ ಫ್ರ್ಯಾಂಕ್‌ ಫರ್ಟ್ ಮೋಟಾರ್ ಶೋನಲ್ಲಿ ಪ್ರದರ್ಶನಕ್ಕೆ ಅಣಿಯಾಗಿದೆ.

ADVERTISEMENT

ಸ್ಟೀರಿಂಗ್ ಇಲ್ಲದ ಎಲೆಕ್ಟ್ರಿಕ್ ಕಾರು
ಕಾರು ಓಡಿಸದೆಯೇ ಅದರಲ್ಲಿ ಕೂತು ಅಂದುಕೊಂಡ ಜಾಗವನ್ನು ಬೇಗ ತಲುಪಬೇಕು. ಜೊತೆಗೆ ಕಾರ್ ಶೇರಿಂಗ್ ಎಂಬ ಪರಿಕಲ್ಪನೆಯೂ ಬೆಳೆಯಬೇಕು. ಇದೇ ಉದ್ದೇಶದೊಂದಿಗೆ ಈ ‘ಸ್ಮಾರ್ಟ್ ವಿಷನ್ ಇಕ್ಯೂ ಫಾರ್ ಟು’ ಪರಿಕಲ್ಪನೆಯ ಮಾದರಿ ಕಾರು ರೂಪುಗೊಂಡಿದೆ.

ಮರ್ಸಿಡಿಸ್ ಬೆಂಜ್‌ನ ಬ್ರ್ಯಾಂಡ್ ಡೈಮ್ಲರ್‌, ಈ ಕಾರಿನ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿರುವುದು. ಇದರಲ್ಲಿ ಸ್ಟೀರಿಂಗ್ ಇಲ್ಲ, ಪೆಡಲ್ ಇಲ್ಲ. ಎಲ್ಲವೂ ಸ್ವಯಂ ಚಾಲಿತ. ಆಟೊನೊಮಸ್ ಡ್ರೈವಿಂಗ್ ಸಿಸ್ಟಂ ಅಳವಡಿಕೆ ಮೂಲಕ ಕಾರಿನ ಚಲನೆ ಸಾಧ್ಯವಾಗಿದೆ.

ನಗರ ಚಾಲನೆಯನ್ನು ಗಮನದಲ್ಲಿಟ್ಟುಕೊಂಡು, ಇದನ್ನು ವಿನ್ಯಾಸಗೊಳಿಸಲಾಗಿದೆ. ದೇಹ ವೃತ್ತಾಕಾರದಲ್ಲಿದೆ. ಹೆಡ್‌ಲೈಟ್‌, ಟೇಲ್‌ಲೈಟ್‌, ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿದ್ದು, ಗ್ರಾಹಕರ ಬಳಕೆಗೆ ದೊಡ್ಡ ಡಿಜಿಟಲ್ ಪ್ಯಾನೆಲ್ ಇದೆ. ಇದು ಮಲ್ಟಿಪಲ್ ಮೆಸೇಜ್‌ಗಳನ್ನು ತೋರಲು, ದಾರಿಯಲ್ಲಿನ ಬೇರೆ ಕಾರುಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ.

ಕಿಟಕಿಗಳಿಗೆ, ಒಳಗೆ ಮಾಹಿತಿಯನ್ನು ಬಿತ್ತರಿಸಲು ವಿಶೇಷ ಸ್ಕ್ರೀನ್ ಹಾಕಲಾಗಿದೆ. ಇಬ್ಬರು ಆರಾಮಾಗಿ ಕೂರುವಂತೆ ಚೆಂದದ ಕ್ಯಾಬಿನ್ ಇದೆ. ಅಪಘಾತಗಳನ್ನು ತಡೆಯುವಂಥ ತಂತ್ರಜ್ಞಾನವೂ ಇದಕ್ಕಿದೆ. ಲೀಥಿಯಂ ಐಯಾನ್ ಬ್ಯಾಟರಿಯಿದ್ದು, 30kWh ಸಾಮರ್ಥ್ಯ ಹೊಂದಿದೆ. ಚಾರ್ಜ್‌ ಖಾಲಿಯಾದರೆ ತನ್ನಷ್ಟಕ್ಕೆ ತಾನೇ ಚಾರ್ಜ್ ಮಾಡಿಕೊಳ್ಳುತ್ತದೆ. ಇದಿನ್ನೂ ಮಾದರಿಯ ರೂಪದಲ್ಲಿದ್ದು, 2022ರ ಹೊತ್ತಿಗೆ ಹೊರತರುವುದಾಗಿ ಕಂಪೆನಿ ಹೇಳಿಕೊಂಡಿದೆ.

ಬರುತ್ತಿದೆ ಕೆಂಪು ವೆಸ್ಪಾ
ವೆಸ್ಪಾ ಬ್ರ್ಯಾಂಡ್‌ ಎಲ್ಲೆಡೆಯೂ ಇದೆ. ಆದರೆ ಕೆಂಪು ಬಣ್ಣದ ವೆಸ್ಪಾ ಮೊದಲ ಬಾರಿ ಭಾರತಕ್ಕೆ ಬರಲು ಸಜ್ಜಾಗಿದೆ. ಪಿಯಾಗಿಯೊ ಗ್ರೂಪ್, ಎಚ್‌ಐವಿ, ಕ್ಷಯ, ಮಲೇರಿಯಾ ರೋಗಗಳಿಗೆ ಸಂತ್ರಸ್ತ ನಿಧಿ ಸೇರಿಸುವ ರೆಡ್‌ ಸಂಸ್ಥೆ ಜೊತೆ ಸೇರಿ, ಸಂಪೂರ್ಣ ಕೆಂಪು ವೆಸ್ಪಾವನ್ನು ಪರಿಚಯಿಸಿದೆ.

ವೆಸ್ಪಾ 946 ರೆಡ್- ಈ ಉತ್ಪನ್ನ. ಯುರೋಪ್‌, ಏಷ್ಯಾ, ಅಮೆರಿಕದಲ್ಲಿ ಪ್ರಚಲಿತದಲ್ಲಿದ್ದು, ಇದೀಗ ಭಾರತಕ್ಕ ಬರಲು ಅಣಿಯಾಗಿದೆ. 125ಸಿಸಿ ಎಂಜಿನ್‌ನ ಈ ಸ್ಕೂಟರ್, ಸಂತ್ರಸ್ತನಿಧಿ ಉದ್ದೇಶಿತವಾಗಿ ಬಂದ ಒಂದೇ ಆಟೊ ಮೊಬೈಲ್ ಉತ್ಪನ್ನ. ಮಾರಾಟಗೊಂಡ ಬೆಲೆಯಲ್ಲಿ $150 ಹಣವನ್ನು ಎಚ್‌ಐವಿ ಸಂತ್ರಸ್ತ ನಿಧಿಗೆ ನೀಡಲಾಗುತ್ತದೆ.

125 ಸಿಸಿ ಮಾದರಿಯಲ್ಲಿ ಏರ್‌ಕೂಲ್ಡ್, 3-ವಾಲ್ವ್‌ ಮೋಟಾರ್ ಇದ್ದು, ಪೀಕ್ ಪವರ್ 10.06 ಪಿಎಸ್ @7500ಆರ್‌ಪಿಎಂ ಮತ್ತು 10.6ಎನ್‌ಎಂ ಪೀಕ್‌ ಟಾರ್ಕ್ 6000ಆರ್‌ಪಿಎಂ ಶಕ್ತಿ ಉತ್ಪಾದಿಸಲಿದೆ. 125ಸಿಸಿ ಸ್ಟಾಂಡರ್ಡ್‌ಗೆ ₹71,058 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.