ADVERTISEMENT

ಪ್ರಿಯಾ ಖಡಕ್ ವರಸೆ

ಸುಮಲತಾ ಎನ್, ಪದ್ಮನಾಭ ಭಟ್ಟ
Published 25 ಫೆಬ್ರುವರಿ 2015, 19:30 IST
Last Updated 25 ಫೆಬ್ರುವರಿ 2015, 19:30 IST

ದಕ್ಷಿಣ ಭಾರತದ ಸ್ಟಾರ್ ನಟಿಯರ ಸಾಲಿನಲ್ಲಿ ಇರುವ ಪ್ರಿಯಾಮಣಿ ಅವರು ಸಿನಿಮಾ ಸಂಘದಲ್ಲಿ ಸಕ್ರಿಯವಾಗಿರುವ ತಾರೆ. ಸದ್ಯ ‘ಡಾನ್ಸಿಂಗ್ ಸ್ಟಾರ್‌ 2’ನೇ ರಿಯಾಲಿಟಿ ಷೋನಲ್ಲಿ ತೀರ್ಪುಗಾರರ ಸಾಲಿನಲ್ಲಿ ಕುಳಿತಿದ್ದಾರೆ. ‘ಕಾಮಿನಿ’ ಸೇರಿದಂತೆ ಕನ್ನಡದ ಎರಡು ಮೂರು ಚಿತ್ರಗಳ ಕಾಲ್‌ಶೀಟ್‌ಗೆ ಸಹಿ ಹಾಕಿದ್ದಾರೆ. ಅಂದಹಾಗೆ ಈ ಬಹುಭಾಷಾ ನಟಿಯೊಂದಿಗಿನ ಚುಟುಕು ಸಂಭಾಷಣೆ ಇಲ್ಲಿದೆ.

* ಸಿನಿಮಾದಲ್ಲಿ ಮಸ್ತ್ ಮಸ್ತ್ ಡಾನ್ಸ್ ಮಾಡಿದ್ದಾಯ್ತು, ಈಗ ಬೇರೆಯವರನ್ನು ಕುಣಿಸಿ ತೀರ್ಪು ನೀಡುವ ಆಸೆನೂ ಹುಟ್ಟಿಕೊಳ್ತಾ?
ಹ್ಹ ಹ್ಹ ಹ್ಹ... ನನಗೆ ಡಾನ್ಸ್ ಅಂದರೆ ಪಂಚಪ್ರಾಣ. ಈ ನೃತ್ಯದಲ್ಲಿ ಅದೇನು ಶಕ್ತಿ ಇದೆಯೋ ಬಲ್ಲವರೇ ಬಲ್ಲರು... ನನಗಂತೂ ಅದರ ಗುಟ್ಟು ಇನ್ನೂ ಅರ್ಥವಾಗಿಲ್ಲ. ಕುಣಿಯುತ್ತಾ ಕುಣಿಯುತ್ತಾ ಲೋಕವನ್ನೇ ಮರೆತುಬಿಡಬಹುದು. ಅಷ್ಟೇ ಏಕೆ ನಮ್ಮನ್ನೇ ನಾವು ಮರೆಯಲೂಬಹುದು.

‘ಡಾನ್ಸಿಂಗ್ ಸ್ಟಾರ್ 2’ಗೆ  ತೀರ್ಪುಗಾರರಾಗಿ ನನ್ನನ್ನೂ ಕರೆದರು. ಖುಷಿಯಿಂದ ಒಪ್ಪಿಕೊಂಡೆ. ಸ್ಪರ್ಧಿಗಳು ತುಂಬಾ ಉತ್ಸಾಹದಿಂದ ಕುಣಿಯುತ್ತಿದ್ದಾರೆ. ಅವರು ಕುಣಿಯುವುದನ್ನು ನಾನು ಚೆನ್ನಾಗಿಯೇ ಕಣ್ತುಂಬಿಕೊಳ್ಳುತ್ತಿದ್ದೇನೆ. ಇಲ್ಲಿ ಇರುವವರೆಲ್ಲರೂ ಪ್ರತಿಭಾವಂತರು. ಎಲ್ಲರೊಂದಿಗೆ ಕುಣಿಯುವುದು ನನಗೆ ಇನ್ನೂ ಖುಷಿ...

* ನಿಮ್ಮ ಕಂಠಪೆಟ್ಟಿಗೆ ತುಂಬಾ ಖಡಕ್ ಎಂದು ಗಾಂಧಿನಗರದ ಮಂದಿ ಮಾತಾಡಿ ಕೊಳ್ಳುತ್ತಾರಲ್ಲ... ಏನು ಅವಾಜ್ ಏನಾದ್ರೂ ಸಿಕ್ಕಾಪಟ್ಟೆ ಹಾಕಿದ್ದರಾ?
ಹಾಗೇನೂ ಇಲ್ಲಪ್ಪ... ನಾನು ಖಡಕ್ ಆಗಿರೋದು ನಿಜ. ಅಲ್ಲಲ್ಲ, ನನ್ನ ವಾಯ್ಸ್ ಖಡಕ್ ಆಗಿರೋದು ನಿಜ. ನಟಿಗೆ ಸಹಜವಾಗಿ ಇರಬೇಕಾದ ದನಿ ಅಲ್ಲ, ಭಿನ್ನವಾಗಿದೆ ಅನ್ನೋದು ನಿಜವೇ. ಈ ದನಿಯೇ ಕೆಲವೊಮ್ಮೆ ಪ್ಲಸ್ ಪಾಯಿಂಟ್. ಬೋಲ್ಡ್ ಪಾತ್ರಗಳಿಗೆ ನನ್ನ ದನಿ ಪಕ್ಕಾ ಆಗಿದೆ. ಅದರಿಂದಲೇ ಒಂದು ಹವಾ ಕ್ರಿಯೇಟ್ ಆಗುತ್ತದೆ ಅಲ್ಲವೇ!

ADVERTISEMENT

* ಮಲೆಯಾಳಂ, ತೆಲುಗು, ತಮಿಳು ಅಂದುಕೊಂಡಿದ್ದವರು ನೀವು. ಕನ್ನಡದ ಹುಡುಗೀನ ಕನ್ನಡಿಗರೇ ತಡವಾಗಿ ಗುರುತಿಸಿದ್ರಾ?
ಹಾಗೇನಿಲ್ಲ. ಎಲ್ಲ ಸರೀಗೇ ನಡೀತಿದೆ ಬಿಡಿ...

* ಕಾಲೇಜಲ್ಲಿ ಹೇಗಿತ್ತು ನಿಮ್ಮ ಹವಾ?. ಕಾಲೇಜಿಗೆ ಚಕ್ಕರ್ ಹೊಡೆವ ಕೆಲಸವನ್ನೂ ಮಾಡಿದ್ರಾ?
ಆಗೆಲ್ಲಾ ಇಷ್ಟೊಂದು ಹವಾ ಇರಲಿಲ್ಲ. ಹೆಚ್ಚು ಕ್ಲಾಸ್ ಅಟೆಂಡ್ ಮಾಡ್ತಿರಲಿಲ್ಲ. ಆದ್ರೂ 80 ಪರ್ಸೆಂಟ್ ಹಾಜರಾತಿ ಇದ್ದದ್ದೇ ಆಶ್ಚರ್ಯ. ಆದರೆ ಈಗ ಇದ್ದಂತೇ ಆಗಲೂ ಬೋಲ್ಡ್ ಆಗೇ ಇದ್ದೆ. ಆ ಬೋಲ್ಡ್‌ನೆಸ್ ಕೆಲವೊಂದಿಷ್ಟು ಜನರನ್ನು ಸೆಳೆದಿದ್ದರೂ ಸೆಳೆದಿರಬಹುದು.

* ಕಾಲೇಜು ಡೇಸಲ್ಲಿ ಈ ಹೀರೋಯಿನ್‌ಗೆ ಕಾಳಾಕಿದ ಕುವರರು ಯಾರಾದ್ರೂ ಇದ್ದಾರ ರೀ?
ಇಲ್ಲವೇ ಇಲ್ಲ! ನನ್ನ ಡ್ರೆಸಿಂಗ್ ರೀತಿ, ನಾನು ಮಾತಾಡ್ತಿದ್ದ ರೀತಿನೇ ಬೇರೆ ಥರ ಇತ್ತು. ಅಂದರೆ ಟಾಮ್ ಬಾಯ್ ಥರ ಇದ್ದೆ. ಅದಕ್ಕೇ ಯಾರೂ ಹತ್ತಿರ ಬರೋ ಧೈರ್ಯ ಮಾಡಲಿಲ್ಲ ಅನ್ನಿಸುತ್ತೆ. ಇಲ್ಲ ಅಂದಿದ್ದರೆ ಪ್ರಪೋಸಲ್ ಲೆಟರುಗಳು ಬರುತ್ತಿದ್ದವೇನೋ ಗೊತ್ತಿಲ್ಲ.

* ಡಾನ್ಸ್‌ ಡಾನ್ಸ್ ಅಂತ ಐಟಂ ಹಾಡಿಗೂ ಹೆಜ್ಜೆ ಹಾಕಿದ್ದೀರಿ; ಮುಂದೆಯೂ ಈ ಆಲೋಚನೆ ಇದೆಯೇ?
‘ಚೆನ್ನೈ ಎಕ್ಸ್‌ಪ್ರೆಸ್‌’ ಚಿತ್ರದಲ್ಲಿ ನಾನು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದೆ. ಮುಂದೆ ಮಾಡಲೂಬಹುದು. ಡಾನ್ಸ್‌ ಅಂದರೆ ಯಾವುದಾದರೇನು, ಆಯ್ಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಒಟ್ಟಿನಲ್ಲಿ ನೃತ್ಯ ಚೆನ್ನಾಗಿರಬೇಕು ಅಷ್ಟೇ.

* ‘ಕಾಮಿನಿ’ ಚಿತ್ರದಲ್ಲಿ ದೆವ್ವದ ಪಾತ್ರನಾ; ಹಾಗಿದ್ದರೆ ಜನರನ್ನು ಬೆಚ್ಚಿ ಬೀಳಿಸುತ್ತೀರ?
ಸದ್ಯಕ್ಕೆ ಈ ಪಾತ್ರದ ಬಗ್ಗೆ ಏನೂ ಹೇಳುವುದಿಲ್ಲ. ಬಾಯಿ ಬಂದ್ ಮಾಡಿಕೊಳ್ಳುವೆ. ಏಕೆಂದರೆ ಚಿತ್ರಕ್ಕೆ ಒಪ್ಪಂದವೂ ಆಗಿಲ್ಲ. ಆದರೆ ಇದೊಂದು ಹಾರರ್– ಕಾಮಿಡಿ ಚಿತ್ರ. ಹೆದರಿಸ್ತೀನೋ ನಗಿಸ್ತೀನೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. 

* ಒಂದು ವೇಳೆ ಲೇಡಿ ಡಾನ್ ಪಾತ್ರ ಸಿಕ್ಕರೆ, ಮಸ್ತ್ ದೂಳ್ ಎಬ್ಬಿಸುತ್ತೀರಿ?
ಹ್ಹ ಹ್ಹ ಹ್ಹ... ಸಿಕ್ಕರೆ ಖಂಡಿತ ಸಖತ್ತಾಗಿರುತ್ತೆ. ‘ಡಾನ್ ವಿಲನಿಷ್’ ಪಾತ್ರ ಮಾಡಬೇಕು ಅನ್ನೋ ಆಸೆ ತುಂಬಾ ಇದೆ. ನೋಡೋಣ ಯಾವ ನಿರ್ದೇಶಕರು–ನಿರ್ಮಾಪಕರು ಕೊಡುವರು ಎಂದು. ಆದರೆ ಒಂದು ಮಾತ್ರ ನಿಜ. ಆ ಪಾತ್ರ ಸಿಕ್ಕರೆ ಡಾನ್ ದುನಿಯಾದಲ್ಲಿ ಪುಡಿ ರೌಡಿಗಳನ್ನೆಲ್ಲ ನಡುಗಿಸಿಬಿಡುವೆ!

* ‘ಚಾರುಲತಾ’ ರೀತಿ ನಿಜ ಜೀವನದಲ್ಲೂ ಇದ್ದಿದ್ದರೆ? ಏನು ಮಾಡ್ತಿದ್ರಿ...
ಗೊತ್ತಿಲ್ಲಪ್ಪ. ಥ್ಯಾಂಕ್ ಗಾಡ್. ಆಗೋದೂ ಬೇಡ.

* ನಿಮ್ಮ ಕನಸಿನ ಪಾತ್ರ...
ನೆಗಟಿವ್ ಪಾತ್ರ ಇಷ್ಟ. ‘ಪಡಿಯಪ್ಪನ್‌’ ಚಿತ್ರದಲ್ಲಿ ರಮ್ಯಾಕೃಷ್ಣ ಮಾಡಿದ್ದಾರಲ್ಲ, ಆ ರೀತಿ ರೋಲ್ ಇಷ್ಟ. ಆ ರೀತಿ ಪಾತ್ರಗಳ ಮೂಲಕ ಚಿತ್ರವನ್ನೂ ಆವರಿಸಿಕೊಳ್ಳಬಹುದು, ಜನರಲ್ಲೂ ಗುರ್ತಾಗಬಹುದು.

* ­ನಿಮ್ಮ ಡ್ರೀಮ್ ಬಾಯ್ ಬಗ್ಗೆ...
ಅಯ್ಯೋ ಅದೆಲ್ಲಾ ಯೋಚಿಸೋಕೆ ಟೈಮ್ ಬೇಕಾದಷ್ಟಿದೆ. ಈಗ ಸದ್ಯ ಆ ಯೋಚನೆ ತಲೆಯಲ್ಲಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸೋಣ, ಸದ್ಯಕ್ಕೆ ಇದೆಲ್ಲ ಬೇಡ ಬಿಡಿ.

ಫೋರ್ಜರಿ ತಂದ ಪೂಜೆ
ಸ್ಕೂಲ್ ಲೈಫ್‌ನಲ್ಲಿ ಒಂದಿಷ್ಟು ತರ್ಲೆ ಕೆಲಸಗಳನ್ನು ಮಾಡಿದ್ದೇನೆ. ರಿಪೋರ್ಟ್ ಕಾರ್ಡ್‌ಗೆ ಅಮ್ಮನ ಸಿಗ್ನೇಚರ್‌ನ ನಾನೇ ಫೋರ್ಜರಿ ಮಾಡಿಕೊಂಡು ಹೋಗ್ತಿದ್ದೆ. ಹೀಗೇ ಮಾಡುತ್ತಾ ಒಂದು ಸಾರಿ ಸಿಕ್ಕಿ ಬಿದ್ದೆ. ಮನೆಯಲ್ಲೂ, ಕ್ಲಾಸಲ್ಲೂ ಗೊತ್ತಾಯ್ತು. ಒಳ್ಳೆ ಪೂಜೆ ಆಯ್ತು. ಪೂಜೆ ಅಲ್ಲ ಮಹಾಮಂಗಳಾರತಿ. ಜತೆಗೆ ಸರಿಯಾಗಿ ಏಟನ್ನೂ ತಿಂದೆ. ಈಗ ಅದನ್ನು ನೆನೆಸಿಕೊಂಡರೆ ಸಖತ್ ನಗು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.