ADVERTISEMENT

ಯುವಕರಷ್ಟೇ ತ್ಯಾಗ ಮಾಡಬೇಕೆ?

ಕೆ.ಎಸ್‌.ಮೀನಾರಾಮ್‌, ಬೆಂಗಳೂರು
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಹಿರಿಯರೇ ಭ್ರಷ್ಟಾಚಾರ, ಪರಿಸರ ವಿನಾಶ, ಜಾತಿ- ಧರ್ಮ, ವರ್ಗ - ವೈಷಮ್ಯಗಳಿಗೆ ಬೇಕಿರುವ ಭೂಮಿಕೆ ಸೃಷ್ಟಿಸಿದವರು ಎಂಬ ಹೇಳಿಕೆ ಎಷ್ಟು ಸರಿ? ಹಿಂದಿನವರು, ದೊಡ್ಡವರು ಮಾಡಿದ್ದೆಲ್ಲಾ ತಪ್ಪು ಎಂದರೆ, ಈಗಿನ ಯುವಜನರು, ತಿಳಿದವರೂ, ನಾವೆಲ್ಲಾ ತಪ್ಪೇ ಮಾಡುತ್ತಿಲ್ಲವೆ?

ವಿದ್ಯಾವಂತರಾದ ಯುವಕರೇ ಸಮಾಜದಲ್ಲಿ ಕೆಟ್ಟ ಪರಿಸರ ಸೃಷ್ಟಿಸುತ್ತಿಲ್ಲವೇ? ಹಿರಿಯರು ಮಾಡಿರುವುದನ್ನು ಹೇಳುವುದರಲ್ಲಿ, ಕೆಟ್ಟದ್ದನ್ನು ದೂರ ತಳ್ಳಿ, ಒಳ್ಳೆಯದನ್ನು ಮಾತ್ರ ಯುವಜನಾಂಗ ಅಳವಡಿಸಿಕೊಳ್ಳಬೇಕು. ಯುವಕರೇ ನಾಡನ್ನು, ದೇಶವನ್ನು  ರಕ್ಷಿಸಬೇಕೆಂದೇನಿಲ್ಲವಲ್ಲ, ಎಲ್ಲರಿಗೂ ನಮ್ಮ ದೇಶ, ನಮ್ಮ ನಾಡು ಎಂಬ ಅಭಿಮಾನ, ಕರ್ತವ್ಯ ಇದ್ದೇ ಇರುತ್ತದೆ. ಯುವಜನಾಂಗಕ್ಕೆ ಹೆಚ್ಚು ಜವಾಬ್ದಾರಿಯಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅವರಿಗೆ ಒಳ್ಳೆ ಮಾರ್ಗದರ್ಶನ, ಸಂಸ್ಕಾರವನ್ನು ಹಿರಿಯರು ಕೊಟ್ಟಾಗಲೇ ಕಿರಿಯರು ಉತ್ತಮ ಪ್ರಜೆಗಳಾಗಲು ಸಾಧ್ಯ.

ಯುವಕರು ದುಡ್ಡಿನ ಆಮಿಷಕ್ಕೆ ಬಲಿಯಾಗಿ, ಸಮಾಜಘಾತುಕ ಕೆಲಸಗಳನ್ನು ಮಾಡುತ್ತಾರೆ. ರಾಜಕೀಯ ವ್ಯಕ್ತಿಗಳು ಯುವಕರನ್ನು ಹೇಗೆ ಬಳಸಿಕೊಳ್ಳುತ್ತಾರೆಂದು ಎಲ್ಲರಿಗೂ ತಿಳಿದ ವಿಷಯ. ಸಮಾಜವನ್ನು ಉದ್ಧಾರ ಮಾಡಬೇಕಾಗಿರುವವರೇ ಯುವಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯುವಕರು ಇವೆಲ್ಲದರಿಂದ ಎಚ್ಚೆತ್ತು ಬರಬೇಕು. ನಮ್ಮ ಕರ್ತವ್ಯವೇನು, ಉತ್ತಮ ದೇಶವನ್ನು ಹೇಗೆ ರಚಿಸಬೇಕು ಎಂಬ ನಿಲುವುಗಳಿಂದ ಮುಂದುವರೆದಿದ್ದೇ ಆದರೆ ಖಂಡಿತ ಒಳ್ಳೆ ರಾಜ್ಯವನ್ನೇ ಸೃಷ್ಟಿಸಬಹುದು.

ಸುತ್ತಮುತ್ತ ನಡೆಯುವ ಒಳಿತು–ಕೆಡಕುಗಳಿಗೆ ಸ್ಪಂದಿಸಿದ್ದಲ್ಲೇ ಆದರೆ ಎಷ್ಟೋ ಸಮಸ್ಯೆಗಳು ತಳಮಟ್ಟದಲ್ಲೇ ಬಗೆಹರಿಯುತ್ತವೆ. ಯುವಕರೇ ಮುಂದೆ ಬಂದರೆ ಎಲ್ಲರ ಬೆಂಬಲವೂ ದೊರೆಯುತ್ತದೆ. ದುರದೃಷ್ಟವಶಾತ್‌ ನಮ್ಮ ಯುವಜನಾಂಗ ತಪ್ಪುದಾರಿ ಹಿಡಿದಿದೆ. ವಿದ್ಯಾವಂತರಾದಷ್ಟೂ ವಿದೇಶಿ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದಾರೆ. ಯುವಕರೇ ಈ ನಿಟ್ಟಿನಲ್ಲಿ ಹೋರಾಡಿ, ಸಮಾಜ ತಿದ್ದಲು ಸ್ವಲ್ಪ ಆಸೆ ಆಮಿಷಗಳನ್ನು ತ್ಯಾಗ ಮಾಡಿದರೂ ಸಾಕು, ಸಮಾಜದ ತೊಡಕುಗಳನ್ನು ಬಗೆಹರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.