ADVERTISEMENT

ಲಕ್ಕಿ ಸ್ಟಾರ್ ನಿಕ್ಕಿ ಹುಡುಗಾಟ

ಡಿ.ಎಂ.ಕುರ್ಕೆ ಪ್ರಶಾಂತ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಮಲೆಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ನಿಗಿ ನಿಗಿ ಮಿನುಗುತ್ತಿರುವವರು ಬೆಂಗಳೂರು ಹುಡುಗಿ ನಿಕ್ಕಿ ಗರ್ಲಾನಿ. ತನ್ನ ಅಕ್ಕ ಸಂಜನಾ ಅವರಿಂದ ಒಂದಿಷ್ಟು ಸಿನಿಮಾ ಟಿಪ್ಸ್‌ ತೆಗೆದುಕೊಂಡು ಕನ್ನಡ ಚಿತ್ರರಂಗಕ್ಕೆ ಬಂದವರು. ‘ಜಂಬೂ ಸವಾರಿ’, ‘ಅಜಿತ್’ ಮತ್ತಿತರ ಚಿತ್ರಗಳಲ್ಲಿ ನಟಿಸಿರುವ ಈ ಗ್ಲಾಮರ್ ಕನ್ಯೆ ಸದ್ಯ ‘ಪರವಶನಾದೆನು’ ಸಿನಿಮಾ ಸಖ್ಯದಲ್ಲಿದ್ದಾರೆ. ಇನ್ನು ತಮಿಳು–ಮಲಯಾಳಂನಲ್ಲಿ ಅವರ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ತುದಿಗಾಲಲ್ಲಿವೆ. ಲಕ್ಕಿ ಸ್ಟಾರ್ ನಿಕ್ಕಿಯ ಕಾಲೇಜು ದಿನಗಳ ಆಟ–ಹುಡುಗಾಟ ಈ ಸಂದರ್ಶನಲ್ಲಿದೆ.

* ನಿಮ್ಮಲ್ಲಿ ಪ್ರೇಮ ನಿವೇದಿಸಿಕೊಳ್ಳಲು ಕಾಲೇಜು ಗೇಟಲ್ಲಿ ಬೇಕಾದಷ್ಟು ರೋಮಿಯೊಗಳು ಕಾಯುತ್ತಿದ್ದರಂತೆ?
ನಾನು ಟಾಮ್‌ಬಾಯ್ ರೀತಿ ಇದ್ದವಳು. ಪ್ರಪೋಸ್ ಮಾಡುವ ಧೈರ್ಯ ಯಾರು ಮಾಡುತ್ತಾರೆ! ನಿಕ್ಕಿ ಅಂದರೆ ಹುಡುಗರೆಲ್ಲರೂ ಭಯ ಬೀಳುತ್ತಿದ್ದರು. ಅಂಥದ್ದೊಂದು ಹವಾ ಕ್ರಿಯೇಟ್ ಮಾಡಿದ್ದೆ. ನನ್ನ ವರ್ತನೆಯೇ ಹಾಗಿತ್ತು. ಈ ಹುಡುಗಿ ಜಗಳ ಮಾಡುವುದಕ್ಕೆ ಬರುತ್ತಾಳೆ ಅಂದುಕೊಳ್ಳುತ್ತಿದ್ದರು. ಮೊದಲನೇ ಪಿಯು ತರಗತಿಯಲ್ಲಿದ್ದೆ. ನಾನು ಮತ್ತು ಮೂವರು ಸ್ನೇಹಿತೆಯರು ಕಾಲೇಜಿಗೆ ಹೋಗುತ್ತಿದ್ದೆವು.

ಹುಡುಗರ ಗುಂಪು ನಮ್ಮನ್ನು ಚುಡಾಯಿಸಿತು. ಅಸಭ್ಯವಾಗಿ ವರ್ತಿಸಿತು. ನೇರಾನೇರ ಹೋಗಿ ತರಾಟೆಗೆ ತೆಗೆದುಕೊಂಡು ಮಾತಿಗೆ ಮಾತು ಬೆಳೆದು ಚೆನ್ನಾಗಿ ಒದೆ ಕೊಟ್ಟಿದ್ದೆ.

* ಹಾಗಿದ್ದರೆ ಕಾಲೇಜಿನಲ್ಲಿ ಬೇಜಾನ್ ಹವಾ ಇಟ್ಟಿದ್ರಿ?
ಹ್ಹಹ್ಹಹ್ಹ. ಹಾಗೇನೂ ಇಲ್ಲ. ನಾನು ಬಾಲ್ಯ ದಿಂದಲೂ ಓದಿದ್ದು ಗರ್ಲ್ಸ್ ಸ್ಕೂಲು–ಕಾಲೇಜಿನಲ್ಲಿ. ಆ ಕಾರಣಕ್ಕೆ ಹುಡುಗರು ಪ್ರಪೋಸ್ ಮಾಡಿದ್ದು ಕಡಿಮೆ. ತರಗತಿಗಳಿಗೆ ಹಾಜರಿ ಹಾಕುತ್ತಿರಲಿಲ್ಲ. ಕಾಲೇಜ್‌ಗೆ ಚಕ್ಕರ್ ಹೊಡೆದು ಸಿನಿಮಾಕ್ಕೆ ಹೋಗುತ್ತಿದ್ದೆವು. ಯಾವಾಗಲಾದರೂ ಮನಸ್ಸಿಗೆ ಬಂದಾಗ ಮಾತ್ರ ಪಾಠಕ್ಕೆ ಹಾಜರು. ಹಾಜರಿ ಹಾಕಿಸಿಕೊಂಡು ನಮಗೆ ಹುಷಾರಿಲ್ಲ ಎಂದು ಹೇಳಿ ವಿಶ್ರಾಂತಿ ಕೊಠಡಿ ಸೇರುತ್ತಿದ್ದೆವು. ಅದಾಗಲೇ ನನ್ನಂತೆ ಸುಳ್ಳು ಹೇಳಿದ್ದ ಹಲವರು ಅಲ್ಲಿ ಇರುತ್ತಿದ್ದರು. ತಿಂದು–ಹರಟೆ ಹೊಡೆದುಕೊಂಡು ಮಜಾ ಮಾಡುತ್ತಿದ್ದೆವು.

*  ನಿಕ್ಕಿ ಯಾವ ಯಾವ ವಿಚಾರದಲ್ಲಿ ಲಕ್ಕಿ?
ದೇವರ ಆಶೀರ್ವಾದ ನನ್ನ ಮೇಲೆ ತುಂಬಾ ಇದೆ. ನಾನು ಮಾಡುವ ಕೆಲಸಗಳೆಲ್ಲವೂ ಕೈ ಹಿಡಿದಿದೆ. ದೇವರನ್ನು ಹೆಚ್ಚು ನಂಬುತ್ತೇನೆ. ಅದೇ ಲಕ್ಕಿ ನನಗೆ. ನಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುತ್ತೇವೆ. ನಾನು ಚಿಕ್ಕಂದಿನಲ್ಲಿ ಓದಿದ್ದು ಕ್ರಿಶ್ಚಿಯನ್ ಸ್ಕೂಲ್‌ನಲ್ಲಿ. ಚರ್ಚಿಗೂ ಹೋಗುವೆ, ಅಮ್ಮನ ಜತೆ ದರ್ಗಾಕ್ಕೂ ಭೇಟಿ ಕೊಡುವೆ. ಎಲ್ಲ ವಿಷಯಗಳಲ್ಲೂ ನಾನು ಲಕ್ಕಿ. ನಿರ್ದಿಷ್ಟ ವಾಗಿ ಇಂಥದ್ದೇ ಎಂದು ಹೇಳಲು ಸಾಧ್ಯವಿಲ್ಲ.

* ನಿಮ್ಮ ಅಕ್ಕ ಸಂಜನಾ ಅವರ ಮೇಲೆ ನಿಮಗೆ ಅಪಾರ ಪ್ರೀತಿಯಂತೆ. ಕಿತ್ತಾಟ–ಕಿರಿಕ್ಕು ಆಗಿಲ್ಲವೇ?
ನನಗೆ ಕನ್ನಡದಲ್ಲಿ ಸಿಕ್ಕಿರುವ ಕ್ರೆಡಿಟ್ ಎಲ್ಲವೂ ನನ್ನ ಅಕ್ಕನಿಗೆ ಹೋಗಬೇಕು. ಆಕೆಯಿಂದಲೇ ಕನ್ನಡ ಸಿನಿಮಾರಂಗಕ್ಕೆ ಬರಲು ಸಾಧ್ಯವಾಗಿದ್ದು. ಅವಳೇ ನನಗೆ ಗೈಡು. ಸಹಜವಾಗಿ ಎಲ್ಲ ಮನೆ ಯಲ್ಲಿದ್ದಂತೆ ನಾನು ಮತ್ತು ಅಕ್ಕ ಕೆಲವು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಿತ್ತಾಟ ಮಾಡಿಕೊಂಡಿದ್ದೇವೆ. ಆದರೆ ಅದೆಲ್ಲಕ್ಕಿಂತಲೂ ಪ್ರೀತಿ ಹೆಚ್ಚು. ಒಂದು ಪ್ರಸಂಗ ನನಗೆ ಚೆನ್ನಾಗಿ ನೆನಪಿದೆ. ನೆನಪಾದರೆ ನಗು ಬರುತ್ತದೆ. ಅಕ್ಕನಿಗೆ ಜಿರಲೆ ಕಂಡರೆ ಭಯ. ನನಗೆ ಇಲಿ ಕಂಡರೆ ಭಯ. ಚಿಕ್ಕಂದಿನಲ್ಲಿ ಒಂದು ದಿನ ಇಬ್ಬರ ನಡುವೆ ಕಿತ್ತಾಟವಾಯಿತು. ನಮ್ಮ ತಂದೆ ನನಗೆ ಜಿರಲೆಯನ್ನು ಹಿಡಿಯುವ ಟ್ರಿಕ್ ಹೇಳಿಕೊಟ್ಟಿದ್ದರು. ನಾನು ಅದರ ಮೀಸೆ ಯನ್ನು ಹಿಡಿದು ಅಕ್ಕನ ಮೇಲೆ ಎಸೆದುಬಿಟ್ಟೆ. ಅವಳದ್ದು ಕಿರುಚಾಟ–ಚೀರಾಟ. ಅಪ್ಪ ಸುಮಾರು ದೂರ ಓಡಿಸಿಕೊಂಡು ಬಂದರು. ತಪ್ಪಿಸಿಕೊಂಡು ಓಡಿದೆ. ‘ಬಾ ಮನೆಗೆ ಎಲ್ಲಿ ಹೋಗುತ್ತೀಯಾ ನೋಡಿಕೊಳ್ಳುತ್ತೇನೆ’ ಎಂದರು.

* ನಾಯಕಿಯಾದ ನಂತರ ನಿಮ್ಮ ಟಾಮ್‌ಬಾಯ್ ಅವತಾರ ಕಡಿಮೆಯಾದಂತೆ ಕಾಣಿಸುತ್ತದೆ?
ಹೌದು. ಈಗಲಾದರೂ ಹುಡುಗಿ ರೀತಿ ಇರಬೇಕು ಎಂದುಕೊಂಡ ಕಾರಣ ಈ ಬದಲಾವಣೆ. ಕಾಲೇಜಿನಲ್ಲಿ ಟಾಮ್‌ಬಾಯ್. ಈಗ ಹೀರೋಯಿನ್. 

* ಮದುವೆ– ಡ್ರೀಮ್ ಬಾಯ್ ಕನಸು ಬೀಳುತ್ತಿದ್ದಿಯೇ?
ನನಗೆ ಅರೇಂಜ್ ಮ್ಯಾರೇಜ್‌ಗಿಂತ ಪ್ರೇಮ ವಿವಾಹ ಇಷ್ಟ. ಅದರ ಮೇಲೆ ನಂಬಿಕೆ. ನನ್ನ ಡ್ರೀಮ್ ಬಾಯ್ ಹೇಗಾದರೂ ಕಾಣಲಿ. ಒಳ್ಳೆಯ ಮನುಷ್ಯನಾಗಿದ್ದು ನಂಬಿಕೆ–ವಿಶ್ವಾಸದವ ನಾಗಿದ್ದರೆ ಸಾಕು. 

* ಕನ್ನಡದಲ್ಲಿ ಸದ್ಯ ‘ಪರವಶನಾದೆನು’ ಎಂದು ಹೇಳುತ್ತಿದ್ದೀರಿ. ಏನನ್ನು ನೋಡಿ ಪರವಶ ಆಗಿದ್ದೀರಿ?
ಆ ಸಿನಿಮಾದಲ್ಲಿನ ಕಥೆ. ಆ ಸಿನಿಮಾ ಬದುಕು–ಸಂಬಂಧಗಳಿಗೆ ಪ್ರಾಮುಖ್ಯವಾಗುತ್ತದೆ. ಯುವ ಸಮುದಾಯಕ್ಕೆ ಉತ್ತಮವಾಗಿ ಕನೆಕ್ಟ್ ಆಗುತ್ತದೆ. ಕನ್ನಡದ ಜತೆಗೆ ತಮಿಳಿನಲ್ಲಿ ‘ಯಾಗವರಾಯನಂ ಕಾಕಾ’, ‘ko2’, ‘ಕವಲೈವೆಂಡಾಂ’ ಇತ್ಯಾದಿ ಸಿನಿಮಾಗಳು ಇವೆ.

* ಗಾಸಿಪ್‌ಗಳಿಂದ ದೂರವೇ ಇದ್ದೀರಿ. ನಿಮಗೆ ಗಾಸಿಪ್‌  ಅಂದ್ರೆ ಭಯವೋ, ಇಲ್ಲ ಗಾಸಿಪ್‌ಗೆ ನಿಮ್ಮನ್ನು ಕಂಡರೆ ಭಯವೋ?
ನನ್ನ ಕಡೆಯಿಂದ ಗಾಸಿಪ್‌ಗಳಿಗೆ ಅವಕಾಶವೇ ಇಲ್ಲ. ಅದಕ್ಕೆ ನಾನೂ ಚಾನ್ಸ್ ಕೊಡುವುದಿಲ್ಲ. ನನ್ನ ಪಾಲಿನ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತೇನೆ ಅಷ್ಟೆ. ಆ ಕಾರಣಕ್ಕೆ ಬಹಳ ನಿರ್ಮಾಪಕ–ನಿರ್ದೇಶಕರಿಗೆ ಮೆಚ್ಚುಗೆಯಾಗುತ್ತೇನೆ.

* ಬೆಂಗಳೂರಿನ ಹುಡುಗಿಯನ್ನು ಚೆನ್ನೈ ಮಂದಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರಲ್ಲ?
ನನ್ನನ್ನು ಮಲಯಾಳಂ ಮತ್ತು ತಮಿಳು ಸಿನಿಮಾ ಪ್ರಿಯರು ದೊಡ್ಡ ಬೀಗದಲ್ಲಿ ಲಾಕ್ ಮಾಡಿದ್ದಾರೆ. ಅಲ್ಲಿ ಈ ನಿಕ್ಕಿ ಲಕ್ಕಿ ಸ್ಟಾರ್. ಕನ್ನಡದಲ್ಲೂ ಸಿನಿಮಾ ಮಾಡುತ್ತೇನೆ. ಎಲ್ಲಿಗೇ ಹೋದರೂ ವಾಪಸು ಮನೆಗೆ ಬರಲೇಬೇಕು ಅಲ್ಲವೇ! ಕನ್ನಡದಲ್ಲಿಯೂ ಒಳ್ಳೆಯ ಅವಕಾಶಗಳು ಸಿಕ್ಕುತ್ತಿವೆ.

ಬಾಂಬ್ ಸ್ಫೋಟ...
10ನೇ ತರಗತಿಯಲ್ಲಿದ್ದೆ. ಒಬ್ಬ ಟೀಚರ್ ಪಾಠ ಸ್ವಲ್ಪವೂ ಇಷ್ಟ ಇರಲಿಲ್ಲ. ಆ ಕ್ಲಾಸಿನಿಂದ ತಪ್ಪಿಸಿಕೊಂಡರೆ ಸಾಕು ಎನಿಸುತ್ತಿತ್ತು. ಒಂದು ದಿನ ಸ್ನೇಹಿತರೆಲ್ಲರೂ  ಪ್ಲಾನ್ ಮಾಡಿಕೊಂಡು ತರಗತಿಯಲ್ಲಿ ಫಾಸ್ಟ್ ಬಾಂಬ್‌ (ಹೂಸು ಬಿಡುವ ಬಾಂಬ್‌) ಸ್ಫೋಟಿಸಲು ತೀರ್ಮಾನಿಸಿದೆವು. ನನ್ನದೇ ಮುಂದಾಳತ್ವ. ‘ಈ ಬಾಂಬ್ ಸಣ್ಣದಾಗಿ ಸೌಂಡ್ ಆಗುತ್ತದೆ. ತುಂಬಾ ಗಬ್ಬು ವಾಸನೆ ಬರುತ್ತದೆ. ಆ ಸ್ಥಳದಲ್ಲಿ ಯಾರೂ ಇರುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಅಂಗಡಿಯವನು ಹೇಳಿದ. ಆ ಬಾಂಬ್‌ ಅನ್ನು ಕಾಲಿನಿಂದ ತುಳಿಯಬೇಕು. ನಾನು ಕಾಲಿನಿಂದ ತುಳಿದ ತಕ್ಷಣ ದೊಡ್ಡ ಶಬ್ದವಾಯಿತು. ಇಡೀ ತರಗತಿ ಸ್ತಬ್ಧ. ವಿಪರೀತ ವಾಸನೆ. ಶಾಲೆಯಲ್ಲಿ ಇಂಥ ತರಲೆಗಳನ್ನು ನಾನೇ ಮಾಡುತ್ತಿದ್ದರಿಂದ ಟೀಚರ್‌ಗೆ ಗೊತ್ತಾಯಿತು. ನನ್ನ ಸಸ್ಪೆಂಡ್ ಮಾಡುವ ಹಂತಕ್ಕೆ ಈ ವಿಷಯ ಮುಟ್ಟಿತು. ಆದರೆ ಬಚಾವಾದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.