ADVERTISEMENT

ಲಾಸ್ಟ್ ಬಸ್‌ ಎಂಬ ರಂಗಮಂದಿರದಿಂದ

ಒಡಲಾಳ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ಲಾಸ್ಟ್ ಬಸ್‌ ಎಂಬ ರಂಗಮಂದಿರದಿಂದ
ಲಾಸ್ಟ್ ಬಸ್‌ ಎಂಬ ರಂಗಮಂದಿರದಿಂದ   

-ಡಾ.ಮಹೇಂದ್ರ ಎಸ್ ತೆಲಗರಹಳ್ಳಿ

ಮಧ್ಯಮ ವರ್ಗದವರ ಬದುಕಿನ ತುಡಿತಗಳೇ ಬೇರೆ. ಹಣ ಉಳಿತಾಯವೇ ಅವರ ಪರಮ ಧ್ಯೇಯ. ಈ ನಿಟ್ಟಿನಲ್ಲಿ ಸಾಧ್ಯವಾದ ಮಟ್ಟಿಗೆ ಅವಕಾಶ ಸಿಕ್ಕಾಗಲೆಲ್ಲ ಉಳಿತಾಯದ ಮೊರೆ ಹೋಗುವ ಉದಾಹರಣೆಗಳ ಪಟ್ಟಿಗೆ ಸೇರುವ ಮತ್ತೊಂದು ಅಂಶ ಸರಕಾರಿ ಬಸ್ಸಿನ ಪ್ರಯಾಣ. ಓಲಾ, ಊಬರ್, ಹಾಳು-ಮೂಳುಗಳ ತಂಟೆಗೆ ಅವರು ಹೋಗುವುದಿಲ್ಲ.

ಈ ನಡುವೆ ಬಸ್ಸಿನಲ್ಲಿ ಸಂಚರಿಸುವುದು ಕೂಡ ತುಟ್ಟಿಯಾಗಿದೆ ಅನ್ನುವುದು ಗಮನಾರ್ಹ ಸಂಗತಿ. ಈ ಎಲ್ಲಾ ಆಗು ಹೋಗುಗಳ ಹಂಗಿನಾಚೆಗೂ ಬಸ್ಸೆಂದರೆ ಒಂದು ಹೊಸ ಲೋಕದ ಸಂಕೇತ. ಅಲ್ಲಿ ಸಿಗುವ ಜೀವನಾನುಭವಗಳಿಗೇನು ದಾರಿದ್ರ್ಯವಿಲ್ಲ. ಅದರಲ್ಲೂ ಲಾಸ್ಟ್ ಬಸ್ಸೆಂಬುದು ರಂಗಮಂದಿರವಿದ್ದಂತೆ. ಅಲ್ಲಿ ಜರುಗುವ ವಿದ್ಯಮಾನಗಳನ್ನೆಲ್ಲಾ ಕುತೂಹಲದಿಂದ ಗಮನಿಸಿದರೆ ಸಾಕು, ಮಜಬೂತಾದ ಮಜದ ಜೊತೆಗೆ ಒಂದಷ್ಟು ಜೀವನ ಪಾಠದ ತಿರುಳು ಸಿಕ್ಕೀತು.

ಬದುಕಿನ ನೂರೆಂಟು ಪಾತ್ರಗಳು ಅನಾವರಣಗೊಳ್ಳುವ ಸಾಮಾನ್ಯ ವೇದಿಕೆಯೆಂದರೆ ಅದು ‘ಲಾಸ್ಟ್ ಬಸ್’. ಇಲ್ಲಿ ಎಲ್ಲವೂ ಉಂಟು. ಇಲ್ಲಿನ ಪಾತ್ರಧಾರಿಗಳು ಏನೇನು ಮಾಡುತ್ತಾರೆಂದರೆ, ನೀವೇ ನೋಡಿ. ವಯಸ್ಸಾದ ರಸ್ತೆ, ಬಸ್ಸಿನ ಸಲುವಾಗಿ ಇಡೀ ಸಚಿವ ಸಂಪುಟದವರ ವಂಶವೃಕ್ಷದ ಪಳೆಯುಳಿಕೆಗಳನ್ನೆಲ್ಲಾ ಬಸ್ಸಿನ ಕ್ಯಾಬಿನಿನ್ನೊಳಕ್ಕೆ ತಂದು ನಿಲ್ಲಿಸಿ ಬಿಡುತ್ತಾರೆ.

ಮಹಿಳೆಯರಿಗೆ ಮೀಸಲಿರಿದ ಆಸನವನ್ನು ಅತಿಕ್ರಮಿಸಿಕೊಳ್ಳುವ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ, ಅಂತಹ ಹೊತ್ತಿನಲ್ಲೇ ಮಹಿಳಾ ಸಮಾನತೆ ಕುರಿತಾದ ಕಾರ್ಯಾಗಾರ, ಸೆಮಿನಾರುಗಳ ಸೆಷನ್ನು ಕೂಡ ಇದ್ದಕ್ಕಿದ್ದಂತೆ ಬಸ್ಸಿನೊಳಗೆ ಆಯೋಜಿಸಲ್ಪಡುತ್ತದೆ. ವಾದ -ಪ್ರತಿವಾದ, ಪ್ರಶ್ನೋತ್ತರಗಳ ತರುವಾಯ ಸಾಮಾಜಿಕ ಸುಧಾರಕರ ಧ್ವನಿಯ ತರಂಗಗಳು ಕಿಟಕಿಗಳಿಂದಾಚೆಗೂ ಪಸರಿಸುತ್ತಲೇ ಇರುತ್ತವೆ.

ಜಗದ ಕವಿಯನ್ನು ಓದದೆಯೂ ‘ಸರ್ವರಿಗೂ ಸಮಪಾಲು,  ಸರ್ವರಿಗೂ ಸಮಬಾಳು’ ಎನ್ನುವ ಮಾತನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ, ನಿರ್ವಾಹಕನು ಗಿಜಿಗುಡುವ ಬಸ್ಸಿನಲ್ಲೇ ಎಲ್ಲರಿಗೂ ಟಿಕೇಟು ನೀಡಿಯೇ ತೀರುತ್ತಾನೆ. ಇಡೀ ದುನಿಯಾ ಇಷ್ಟೊಂದು ತ್ವರಿತವಾಗಿ ಸಾಗುತ್ತಿದ್ದರೂ ನಿಧಾನವಾಗಿಯೇ ಸ್ಟೇರಿಂಗಿನ ಕತ್ತನ್ನು ತಿರುಗಿಸುವ ಅಹಿಂಸಾ ಪ್ರತಿಪಾದಕ ಚಾಲಕನ ಜವಾಬ್ದಾರಿಯನ್ನು ಅನ್ಯತಾ ಭಾವಿಸಿಕೊಂಡು, ಗೂಡು ಸೇರುವ ಧಾವಂತದಲ್ಲಿರುವ ಪ್ರತಿಭಟನಾ ಮನೋಭಾವದ ಪ್ರಯಾಣಿಕರು ರೊಚ್ಚಿಗೆದ್ದು, ಸೀಟು ಕಳೆದುಕೊಳ್ಳುವ ಭಯದಲ್ಲಿ ಸ್ವಸ್ಥಾನದಿಂದಲೇ ತರಾಟೆಗೆ ತೆಗೆದುಕೊಂಡುಬಿಡುತ್ತಾರೆ.

ತನ್ನ ಮಡದಿ-ಮಕ್ಕಳು ಉಪವಾಸವಿದ್ದರೂ ಪರವಾಗಿಲ್ಲ,  ಬಾರು ಮಾಲೀಕರ ಕುಟುಂಬವು ಮಾತ್ರ ನೆಮ್ಮದಿಯಿಂದಿರಬೇಕು ಎನ್ನುವ ಪರಹಿತಾರ್ಥ ಚಿಂತಕರ ಉಸಿರು, ಎಣ್ಣೆಯ ಘಮಲನ್ನು  ಇಡೀ ಬಸ್ಸಿನ ನಿರ್ವಾತದೊಳಗೆ ಬೀರಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿ, ಕುಡಿದವನ ಬಾಯಿಂದಲೇ ಬಹುಪರಾಕ್ ಹೇಳಿಸಿಕೊಳ್ಳುತ್ತದೆ.

ಸರಿಯಾಗಿ ನಿಲ್ಲಲು ಜಾಗವಿಲ್ಲದ ಬಸ್ಸಿನ ಡೋರಿನ ತುತ್ತ ತುದಿಯಲ್ಲಿ ನಿಂತುಕೊಂಡಿದ್ದರೂ, ಟೈಟಾನಿಕ್ ಸಿನಿಮಾದಲ್ಲಿ ಹಡಗಿನ ಚಾವಣಿಯ ಮುಂಭಾಗದಲ್ಲಿ ನಿಂತು ತೋಳುಗಳನ್ನು ವಿಸ್ತರಿಸಿ ಪ್ರೀತಿಯ ಪರಕಾಯ ಪ್ರವೇಶ ಮಾಡುವ ನಾಯಕ-ನಾಯಕಿಯರ ಸ್ಥಾನದಲ್ಲಿ ಬಿಟ್ಟಿಯಾಗಿ ತಮ್ಮನ್ನು ಕಲ್ಪಿಸಿಕೊಂಡು, ಇಲ್ಲಿಂದಲೇ ತನ್ನ ಗೆಳತಿಯೊಡನೆ ಮೊಬೈಲಿನಲ್ಲಿ ಸಂದೇಶ ವಿಲೇವಾರಿ ಮಾಡಿಕೊಳ್ಳುವ ಪ್ರೇಮಮಯಿ ಹುಡುಗರು ಕಾಳಿದಾಸನ ಪಡಿಯಚ್ಚುಗಳಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾ, ಪ್ರತಿ ಸ್ಟಾಪಿನಲ್ಲಿ ಇಳಿದು ಬೇರೆಯವರು ಹತ್ತಲು- ಇಳಿಯಲು ಅನುಕೂಲ ಮಾಡಿಕೊಡುತ್ತಾ, ಜೊತೆ ಜೊತೆಗೆ ಸಿಳ್ಳೆ ಹಾಕಿ, ‘ರಯ್ಯಾ-ರಯ್ಯಾ’ ಎನ್ನುತ್ತಾ, ಕಂಡಕ್ಟರಿನ ಕೆಲಸದ ಹೊರೆಯನ್ನು ಕಮ್ಮಿ ಮಾಡುತ್ತಾರೆ. 

ಫುಟ್‌ಪಾತಿನ ಪುಷ್ಕಳ ಭೋಜನದ ಬಗ್ಗೆ ಬ್ಯಾಚುಲರ್ ಹುಡುಗರ ನಾಲಗೆಗಳು ಧ್ಯಾನದ ಸ್ಥಿತಿಯಲ್ಲಿರುತ್ತವೆ. ಹೆಣ್ಮಕ್ಕಳು ಮೈಯಲ್ಲಾ ಕಣ್ಣಾಗಿ ಜಾಗೃತಗೊಂಡಿರುತ್ತಾರೆ. ಬೆಳಿಗ್ಗೆ ಮನೆಯಿಂದ ಹೊರಡುವಾಗ ಬಾಗಿಲಲ್ಲಿ ನಿಂತು ಆಸೆಗಣ್ಣಿನಿಂದ ಕೇಳಿದ್ದ ಮಗುವಿನ ನೆಚ್ಚಿನ ತಿಂಡಿಯ ಆತ್ಮ ಪ್ಲಾಸ್ಟೀಕು ಚೀಲದೊಳಗೆ ಸಿಕ್ಕಿ ಹಾಕಿಕೊಂಡು ಉಸಿರುಗಟ್ಟಿ ಒದ್ದಾಡುತ್ತಿರುತ್ತದೆ.

ಆಫೀಸಿನ ಫ್ಯಾನು, ಏ.ಸಿಗಳ ಮುಂದೆ ತಮ್ಮ ಭುಜಬಲದ ಪರಾಕ್ರಮವನ್ನು ತೋರದೆ ತೆಪ್ಪಗಿದ್ದ ಪ್ರತಿಯೋರ್ವರ ದೇಹದ ಬೆವರಿನ ಗ್ರಂಥಿಗಳು ಈಗ ಮಾತ್ರ ಬಸ್ಸೊಳಗೆ ಕಾವೇರುವ ತಾಪದ ಸಹಯೋಗದೊಂದಿಗೆ ಸ್ಪರ್ಧೆಗೆ ಬಿದ್ದು ತೊಡೆ ತಟ್ಟಿ, ದುರ್ವಾಸನೆಯನ್ನು ಸೃಷ್ಟಿಸಿ, ಎದುರು ನಿಂತವನು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಮಾಡಿ ಮುಸಿ ಮುಸಿ ನಗುತ್ತವೆ.

ಅದಾಗಲಷ್ಟೇ ನೋಡಿಕೊಂಡು ಬಂದ ಸೆಕೆಂಡ್ ಷೋ ಸಿನಿಮಾದ ಸಾಧಕ-ಬಾಧಕಗಳ ವಿಮರ್ಶೆ, ಇದೆಲ್ಲದರ ಬಗ್ಗೆ ಗೆಳೆಯರ ಬಳಗ ಉಸ್ತುವಾರಿ ವಹಿಸಿಕೊಂಡು ಸಹ ಪ್ರಯಾಣಿಕರ ಕಿವಿಯ ಗಮನವನ್ನು ಸೆಳೆದುಕೊಳ್ಳುತ್ತದೆ. 

ಅಪ್ಪಿ-ತಪ್ಪಿ ಹಿಂದಿಯಲ್ಲೋ ಅಥವಾ ಇಂಗ್ಲಿಷಿನಲ್ಲೋ ಆವಾಜು ಹಾಕುವ ಸೋ ಕಾಲ್ಡ್ ನಾಗರಿಕರ ಮೇಲೆ, ದಣಿದ ಕನ್ನಡದ ಜನರ ಭಾಷಾ ಪ್ರೇಮ ಜಾಗೃತಗೊಂಡು ತರಾಟೆಗೆ ತೆಗೆದುಕೊಳ್ಳಲು ಅಣಿಯಾಗಿ ದಬಾಯಿಸುವ ಪ್ರಸಂಗಗಳಿಗೇನು ಕೊರತೆಯಿರುವುದಿಲ್ಲ. ಅಕಸ್ಮಾತ್ತಾಗಿ ಸರಿಯಾಗಿ ಚಿಲ್ಲರೆ ಹಣವನ್ನು ಕೊಡದೇ ಹೋದ ಪಕ್ಷದಲ್ಲಿ ಬಡಪಾಯಿ ನಿರ್ವಾಹಕನ ಕಥೆ ಮುಗಿಯಿತು ಅಂತಲೇ ಅರ್ಥ.

ಇಂತಹ ಇನ್ನೂ ಅಪರಿಮಿತ ಪ್ರಸಂಗಗಳು ಬಸ್ಸಿನೊಳಗೆ ನಡೆಯುತ್ತಲೇ ಇರುತ್ತವೆ.  ಗಮನವಿಟ್ಟು ನೋಡುವ ಸೂಕ್ಷ್ಮತೆ, ಒಂದಷ್ಟು ತಾಳ್ಮೆಯಿದ್ದರೆ ಆನಂದ, ಕೊಂಚ ಪಾಠ, ಮತ್ತೂ ಇನ್ನೇನನ್ನೋ ಕಲಿಯುವ ಅವಕಾಶ ಲಾಸ್ಟ್ ಬಸ್ಸಿನ ಪ್ರಯಾಣದಲ್ಲಿ ಬೇಜಾನಾಗಿ ದೊರೆಯುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.