ADVERTISEMENT

ವ್ಯಂಗ್ಯಕ್ಕೆ ಗುರಿಯಾದ ಐಫೋನ್‌ ಎಕ್ಸ್

ಮಂಜುನಾಥ ರಾಠೋಡ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ವ್ಯಂಗ್ಯಕ್ಕೆ ಗುರಿಯಾದ ಐಫೋನ್‌ ಎಕ್ಸ್
ವ್ಯಂಗ್ಯಕ್ಕೆ ಗುರಿಯಾದ ಐಫೋನ್‌ ಎಕ್ಸ್   

ಐಫೋನ್‍ಗಳು ತಮ್ಮ ಕಾರ್ಯಕ್ಷಮತೆ, ವಿಶಿಷ್ಟತೆ, ವಿನ್ಯಾಸ, ವಿಭಿನ್ನತೆಯಿಂದ ಬಹು ಜನಪ್ರಿಯ ಸ್ಮಾರ್ಟ್‌ಫೋನ್‌ಗಳೆನಿಸಿಕೊಂಡಿವೆ. ಇದರ ಜೊತೆಗೆ ಐಫೋನ್ ತನ್ನ ದುಬಾರಿ ಬೆಲೆ, ವಿನ್ಯಾಸದಲ್ಲಿನ ಏಕರೂಪತೆಯಿಂದ ವ್ಯಂಗ್ಯಕ್ಕೂ ಆಹಾರವಾಗಿದೆ. ಈಗ ಐಫೋನ್ 8, 8 ಪ್ಲಸ್ ಮತ್ತು x ಬಿಡುಗಡೆ ಹಿನ್ನೆಲೆಯಲ್ಲಿ ಹಲವು ಜೋಕ್‍ಗಳು, ವ್ಯಂಗ್ಯದ ವಿಡಿಯೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.

ಅದರಲ್ಲಿಯೂ ಐಫೋನ್‌ x ಅತಿಹೆಚ್ಚು ವ್ಯಂಗ್ಯಕ್ಕೆ ಈಡಾಗಿದೆ. ಐಫೋನ್x ಖರೀದಿಸಲು ಭಾರತೀಯ ನೀಡಬೇಕಾದ ಹಣ ₹ 89000. (ಪ್ರಾರಂಭಿಕ ಮಾದರಿ) ಐಫೋನ್ ಕೊಳ್ಳುವ ಹಣದಲ್ಲಿ ಏನೇನು ಕೊಳ್ಳಬಹುದು ಎಂಬುದು ಸಹ ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಗಿದೆ.

ಐಫೋನ್ ಕೊಳ್ಳುವ ಹಣದಲ್ಲಿ ಎರಡು ಒನ್ ಪ್ಲಸ್ 5 ಮತ್ತು ಎರಡು ಎಂ.ಐ ನೋಟ್ 3 ಕೊಂಡು ಅವಕ್ಕೆ ವಿಮೆ ಸಹ ಮಾಡಿಸಬಹುದು. ಸೆಕೆಂಡ್ ಹ್ಯಾಂಡ್ ಮಾರುತಿ ಒಮಿನಿ ಅಥವಾ ಆಲ್ಟೊ ಕೊಳ್ಳಬಹುದು. ಮಡದಿಗೆ ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಕೊಳ್ಳಬಹುದು. ಮಗನಿಗೆ ಪಲ್ಸರ್ 150 ಬೈಕ್ ಕೊಡಿಸಬಹುದು. ಹೀಗೆ ಪಟ್ಟಿ ಉದ್ದ ಸಾಗುತ್ತದೆ. ಐಫೋನ್‌ಗೆ ನೀಡುವ ಬೆಲೆಯಲ್ಲಿ ಎರಡು ವರ್ಷಗಳ ಕಾಲ ಪ್ರತಿ ದಿನ ಬಿಯರ್ ಕುಡಿಯಬಹುದು ಎನ್ನುತ್ತಾನೆ ಒಬ್ಬ ಬಿಯರ್ ಪ್ರೇಮಿ.

ADVERTISEMENT

ಐಫೋನ್‌ ಕೊಳ್ಳಲು ಕಿಡ್ನಿ ಮಾರಿದ, ಮನೆ ಮಾರಿದ, ಕಾರು ಮಾರಿದ ತಮಾಷೆ ವಿಡಿಯೊಗಳು, ಮೀಮ್‍ಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ತುಂಬಿಕೊಂಡಿವೆ. ‘ಐಫೋನ್ 7 ಕೊಳ್ಳಲು ಕಿಡ್ನಿ ಮಾರಿದ್ದೆ, ಈಗ ಕಣ್ಣಿನ ಸರದಿ’ ಎಂಬ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ವ್ಯಕ್ತಿಯ ಚಿತ್ರ ನಗು ತರಿಸುತ್ತದೆ.

ಐಫೋನ್ xನ ದುಬಾರಿ ಬೆಲೆಯ ಜೊತೆಗೆ ಅದರ ಫೇಸ್ ರೆಕಗ್ನಿಷನ್ ತಂತ್ರಜ್ಞಾನವೂ ತಮಾಷೆಗೆ ಗುರಿಯಾಗಿದೆ. ಪ್ರತಿ ಬಾರಿ ಕಟಿಂಗ್, ಶೇವಿಂಗ್ ಮಾಡಿಸಿದಾಗಲೂ ಐಫೋನ್‌ನ ಫೇಸ್ ರೆಕಗ್ನಿಷನ್ ಐಡಿ ಬದಲಾಯಿಸಬೇಕಾಗಬಹುದು ಎಂದು ಕೆಲವರು ಕುಹುಕವಾಡಿದರೆ. ‘ನನ್ನ ಹೆಂಡತಿ ಐಫೋನ್ 10 ಬಳಸಲಾರಳು, ಮೇಕಪ್ ಇಲ್ಲದೆ ನಾನೇ ಅವಳನ್ನು ಗುರುತಿಸಲಾರೆ ಇನ್ನು ಫೋನ್ ಹೇಗೆ ಗುರುತಿಸುತ್ತದೆ’ ಎಂದು ಮೇಕಪ್ ಪ್ರಿಯ ಮಹಿಳೆಯರ ಬಗ್ಗೆ ಕುಹುಕವಾಡಿದ್ದಾನೆ ಒಬ್ಬ ಆಸಾಮಿ.

ಜಗಳದಲ್ಲಿ ಮುಖಕ್ಕೆ ಹೊಡೆತ ತಿಂದ ವ್ಯಕ್ತಿ ‘ನಾನೀಗ ಪೊಲೀಸರಿಗೂ ಕರೆ ಮಾಡುವಂತಿಲ್ಲ, ಐಫೋನ್ ನನ್ನ ಮುಖ ಗುರುತು ಹಿಡಿಯುತ್ತಿಲ್ಲ’ ಎನ್ನುವ ಮೀಮ್ ನಗು ಉಕ್ಕಿಸದೇ ಇರದು.

ಐಫೋನ್‌ನಲ್ಲಿನ ಮತ್ತೊಂದು ವಿಶೇಷಣೆ ಅನಿಮೋಜಿ (ಬಳಕೆದಾರರ ಮುಖದ ಭಾವನೆಗಳನ್ನು ವ್ಯಕ್ತಪಡಿಸುವ ಪ್ರಾಣಿಗಳ ಕಾರ್ಟೂನ್‍ಗಳು) ಕೂಡ ಸಾಕಷ್ಟು ವ್ಯಂಗ್ಯಕ್ಕೆ ಗುರಿ ಆಗಿದೆ. ಕೋಟ್ಯಂತರ ರೂಪಾಯಿ ಹಣ ಖರ್ಚುಮಾಡಿ ಮನುಷ್ಯರು ಕತ್ತೆ, ನಾಯಿ, ಹಂದಿಗಳಂತೆ ಕಾಣುವಂತೆ ಮಾಡಲಾಗಿದೆ ಎಂದು ವ್ಯಂಗ್ಯದ ಬಾಣ ಎಸೆದಿದ್ದಾರೆ.

ಐಫೋನ್‌ನ ಮಾರುಕಟ್ಟೆ ತಂತ್ರಗಳ ಬಗ್ಗೆಯೂ ನೆಟ್ಟಿಗರು ಕಾಲೆಳೆದಿದ್ದಾರೆ. ಆ್ಯಪಲ್ ಮೊದಲು ಐಫೋನ್‌ನ ಬಿಡುಗಡೆ ದಿನಾಂಕವನ್ನು ನಿಗದಿಗೊಳಿಸಿಕೊಳ್ಳುತ್ತದೆ. ಬಿಡುಗಡೆ ಕಾರ್ಯಕ್ರಮದ ಭಾಷಣ ರೆಡಿ ಮಾಡುತ್ತದೆ. ಸ್ಟೇಜ್‌ನ ಬೆಳಕು ಮತ್ತು ಧ್ವನಿಗಳನ್ನು ಸರಿಪಡಿಸಿಕೊಳ್ಳುತ್ತದೆ. ನಿರೂಪಕರು ಸೂಟ್‍ಗಳನ್ನು ಹೊಲಿಸಿಕೊಳ್ಳುತ್ತಾರೆ. ನಂತರ ಐಫೋನ್ ತಯಾರಿಕೆ ಪ್ರಾರಂಭಿಸುತ್ತದೆ ಎಂದು ಸದಾ ಅದ್ದೂರಿಯಾಗಿ ನಡೆಯುವ ಐಫೋನ್ ಬಿಡುಗಡೆ ಕಾರ್ಯಕ್ರಮವನ್ನು ಟೀಕಿಸಿದ್ದಾರೆ ಕೆಲವು ನೆಟ್ಟಿಗರು.

ಏನೇ ಆಗಲಿ ಐಫೋನ್‍ಗಳು ಪ್ರಪಂಚದ ಅತಿ ಜನಪ್ರಿಯ ಮೊಬೈಲ್‌ಗಳೆಂಬ ಖ್ಯಾತಿ ಗಳಿಸಿವೆ. ಎಷ್ಟೇ ವ್ಯಂಗ್ಯಕ್ಕೆ ಗುರಿಯಾದರೂ, ಟೀಕೆಗಳಿಗೆ ಒಳಪಟ್ಟರೂ ಆ್ಯಪಲ್ ಹಿಂದೆ ಸರಿದಿಲ್ಲ ಎನ್ನುವುದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.