ADVERTISEMENT

ಸ್ಪರ್ಧೆ ಒಲ್ಲದ ಗ್ಲ್ಯಾಮರ್ ಗೊಂಬೆ

ಅಮಿತ್ ಎಂ.ಎಸ್.
Published 21 ಆಗಸ್ಟ್ 2014, 5:15 IST
Last Updated 21 ಆಗಸ್ಟ್ 2014, 5:15 IST

ಬಲು ಜಾಣೆ, ಗಂಭೀರೆ– ಇದು ನಟಿ ಅಮೂಲ್ಯರಿಗೆಂದೇ ಸೃಷ್ಟಿಯಾದಂತಿರುವ ವಿಶೇಷಣಗಳು. ‘ಚೆಲುವಿನ ಚಿತ್ತಾರ’ದ ಶಾಲಾ ಹುಡುಗಿ ಈಗ ‘ಗಜಕೇಸರಿ’ಯಲ್ಲಿ ಗ್ಲ್ಯಾಮರಸ್‌ ಆಗಿ ಕಾಣಿಸಿ ಕೊಂಡು ಬೆರಗು ಮೂಡಿಸಿದ್ದಾರೆ. ಮಾತಿಗೆ ಕುಳಿತಾಗ ದನಿಯಲ್ಲಿ ಅದೇ ಹೈಸ್ಕೂಲು ಹುಡುಗಿಯಂಥ ಸ್ವರ. ಆದರೆ ಅಳೆದು ತೂಗಿದಂತೆ ಇಳಿಸುವ ಪದಗಳು. ತಮಾಷೆ ಎಂದರೂ ನಾನು ಗಂಭೀರವಾಗಿಯೇ ಉತ್ತರಿಸುವುದು ಎಂದು ಪಟ್ಟು ಹಿಡಿದವರಂತೆ ಕಂಡರು ಅಮೂಲ್ಯ.

*ಹೈಸ್ಕೂಲು ಹುಡುಗಿ, ಗ್ಲ್ಯಾಮರ್‌ ಯುವತಿ, ಯಾರು ಹಿತ?
ಇಬ್ಬರ ವಿಚಾರದಲ್ಲೂ ತಕರಾರಿಲ್ಲ. ನಿಜ ಹೇಳಬೇಕೆಂದರೆ ನನಗೆ ಹೆಚ್ಚಾಗಿ ಬಂದಿದ್ದೇ ಹೈಸ್ಕೂಲು ವಿದ್ಯಾರ್ಥಿನಿಯ ಪಾತ್ರಗಳು. ಅದನ್ನೂ ಮಾಡುತ್ತೇನೆ. ಬದಲಾವಣೆ ಇರಲಿ ಎಂದು ಗ್ಲ್ಯಾಮರ್‌ಗೂ ಜೈ ಎನ್ನುತ್ತೇನೆ. ಜನ ನನ್ನನ್ನು ಹೈಸ್ಕೂಲು ಹುಡುಗಿಯಾಗಿ ಇಷ್ಟಪಡದಿದ್ದರೆ ‘ಗಜಕೇಸರಿ’ಯಲ್ಲಿ ನಾನು ಇರುತ್ತಿರಲಿಲ್ಲ.

*ಗ್ಲ್ಯಾಮರಸ್‌ ಆದರೂ ಮಗುವಿನಂತೆಯೇ ಇದ್ದೀರಿ ಎನ್ನುತ್ತಾರಲ್ಲ?
ಹಾಗೆ ಅಭಿಪ್ರಾಯ ಇರುವುದು ಒಳ್ಳೆಯದೇ. ಜನರ ಭಾವನೆ ಬದಲಾಗಬಾರದು. ತುಂಬಾ ಡೀಸೆಂಟ್‌ ಹುಡುಗಿಯಂತೆಯೇ ಕಾಣಿಸಿಕೊಳ್ಳುವುದು ಒಳ್ಳೆಯದೇ ಅಲ್ಲವೇ?

*ಆ್ಯಕ್ಷನ್‌ ಸಿನಿಮಾಕ್ಕೆ ಅವಕಾಶ ಬಂದರೆ?
ಹ್ಹ ಹ್ಹ ಹ್ಹ. ಒಪ್ಪಿಕೊಳ್ಳುವುದು ಅನುಮಾನ ಬಿಡಿ. ಕೆಲವು ಪಾತ್ರಗಳನ್ನು ಪ್ರಯತ್ನಿಸಬೇಕು ಎನಿಸುತ್ತದೆ. ಇನ್ನು ಕೆಲವನ್ನು ನನ್ನಿಂದ ಸಾಧ್ಯವಿಲ್ಲ ಎಂದು ತೀರ್ಮಾನ ತೆಗೆದುಕೊಂಡು ಬಿಡುತ್ತೇನೆ. ಆದರೆ ನಾನು ಐದನೇ ತರಗತಿಯಲ್ಲಿದ್ದಾಗಲೇ ಕರಾಟೆ ಕಲಿತಿದ್ದೆ. ಸಿನಿಮಾಕ್ಕಾಗಿ ಅಲ್ಲ, ಸುಮ್ಮನೆ. ಇದುವರೆಗೂ ಉಪಯೋಗಕ್ಕೆ ಬಂದಿಲ್ಲ. ಮುಂದೆ ಬಂದರೂ ಬರಬಹುದು!

*ಈಗಲೂ ಐಶೂ ಎಂದು ಫಾಲೋ ಮಾಡೋರು ಇದ್ದಾರಾ?
ಸ್ವಲ್ಪ ಜನ ಇದ್ದಾರೆ. ನಾನು ಹೊರಗೆ ಹೋಗುವುದೇ ಕಡಿಮೆ. ಚಿತ್ರೀಕರಣದಲ್ಲಿ ಸಿಕ್ಕಾಗ ಜನರನ್ನು ಮಾತನಾಡಿಸುತ್ತೇನೆ. ಕೆಲವೊಮ್ಮೆ ಯಾವ ಹೋಟೆಲ್‌ನಲ್ಲಿದ್ದಾರೆ ಎಂದು ಹುಡುಕಿಕೊಂಡು ಬರುತ್ತಾರೆ. ‘ಚೆಲುವಿನ ಚಿತ್ತಾರ’ ಮಾಡಿದಾಗ ಹುಡುಕಿಕೊಂಡು ಮನೆವರೆಗೂ ಬರುತ್ತಿದ್ದರು. ಒಮ್ಮೆ ಮನೆ ಮೇಲೆ ‘ಐ ಲವ್‌ ಯೂ’ ಎಂದೆಲ್ಲಾ ಬರೆದು, ಫೋನ್‌ ಮಾಡಿ ಹೆದರಿಸುವುದು ಮಾಡುವುದು ಮಾಡಿದ್ದರು. ಆಗ ಹೆದರಿಕೆ ಆಗಿತ್ತು. ಇಂದಿಗೂ ಬೇರೆ ಬೇರೆ ಊರುಗಳಿಗೆ ಹೋದಾಗ ಐಶೂ ಎಂದೇ ಕರೆಯುತ್ತಾರೆ. ಆಗ ಹೈಸ್ಕೂಲಿನಲ್ಲಿ ಇದ್ದವರು ಈಗ ನನ್ನಂತೆ ಡಿಗ್ರಿ ಮುಗಿಸಿದ್ದಾರೆ. ಅವರೇ ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಇಷ್ಟಪಟ್ಟವರು. ಅಂಥ ಅಭಿಮಾನಿಗಳು ಸಿಗುವುದು ಬಲು ಕಷ್ಟ. ಅವರನ್ನು ಉಳಿಸಿಕೊಳ್ಳುತ್ತೇನೆ.

*ಎದುರಿಗೆ ಮಾತ್ರ ಸೈಲೆಂಟ್‌, ಒಳಗೆ ವೈಲೆಂಟ್‌ ಎಂಬ ಮಾತಿದೆ. ಹೌದಾ?
ಹಾಗೇನಿಲ್ಲ. ನಾನು ಸೈಲೆಂಟ್‌ ಹೌದು. ಕೆಲವೊಮ್ಮೆ ಇಷ್ಟವಾಗದ ಕೆಲಸ ಮಾಡಿದರೆ ಬೇಗ ಕೋಪ ಬರುತ್ತದೆ. ಅದನ್ನು ತೋರಿಸಿಕೊಳ್ಳುವುದು ಅಮ್ಮನ ಮೇಲೆ. ಸಿಗೋದೇ ಅಮ್ಮ ಮಾತ್ರ. ಉಳಿದಂತೆ ನನ್ನಷ್ಟಕ್ಕೆ ನಾನು ಇರುತ್ತೇನಷ್ಟೇ.

*ಸಿನಿಮಾದಿಂದ ನಿವೃತ್ತಿ ಘೋಷಿಸಿ ಹೋಗಿದ್ದಿರಲ್ಲ?
‘ಮನಸಾಲಜಿ’ ಸೋತಾಗ ಕೆಲವು ಕಾರಣಕ್ಕೆ ಹಾಗೆ ಹೇಳಬೇಕಾಗಿತ್ತು. ಅದಾದ ಆರೇ ತಿಂಗಳಿಗೆ ‘ಶ್ರಾವಣಿ ಸುಬ್ರಮಣ್ಯ’ ಒಪ್ಪಿಕೊಂಡಿದ್ದೆ. ಆದರೆ ಅದು ಒಂದೂವರೆ ವರ್ಷ ತಡವಾಯಿತು. ನನ್ನ ಹೇಳಿಕೆಗೂ ನಟಿಸದೇ ಇರುವುದಕ್ಕೂ ತಾಳ ಮೇಳ ಕೂಡಿ ಬಂದಂತೆ ಆಗಿತ್ತು.

*ಗೋಲ್ಡನ್‌ ಕ್ವೀನ್‌ ಎಂಬ ಬಿರುದು ಸಿಕ್ಕಿದೆ. ರಾಜ್ಯಭಾರ ಮಾಡುತ್ತೀರಾ ಹೇಗೆ?
ಅದು ಜನರು ಪ್ರೀತಿಯಿಂದ ಕೊಟ್ಟಿದ್ದು. ಪ್ರೀತಿಯಿಂದ ಉಳಿಸಿಕೊಳ್ಳುತ್ತೇನೆ. ಈ ರಾಜ್ಯಭಾರದ ಹೊಣೆಯೆಲ್ಲ ನನಗೆ ಬೇಡ. ನಂಬರ್‌ ಒನ್‌ ನಟಿಯಾಗಬೇಕು, ಹೀಗೆ ಬೆಳೆಯಬೇಕು ಎಂಬ ಗುರಿಯೆಲ್ಲಾ ಇಲ್ಲ. ಯಾರು ಬೆಳೆದರೂ ಉದ್ಯಮ ಬೆಳೆಯುತ್ತದೆ.   

*ಹಾಗಾದರೆ ನಟಿಯರ ನಡುವೆ ಪೈಪೋಟಿ ಬೇಡ ಎನ್ನುತ್ತೀರಾ?
ಸ್ಪರ್ಧೆ ಏಕಿರಬೇಕು? ಒಂದು ಸಿನಿಮಾ ಗೆದ್ದರೆ ಉದ್ಯಮಕ್ಕೆ ಒಳ್ಳೆಯದಾಗುತ್ತದೆ. ನಟಿಯರು ಹೆಚ್ಚೆಂದರೆ ಏಳೆಂಟು ವರ್ಷ ಉಳಿದಿರುತ್ತೇವೆ. ಅಷ್ಟರ ನಡುವೆ ಏಕೆ ಈ ಸ್ಪರ್ಧೆ? ಎಲ್ಲರೂ ಚೆನ್ನಾಗಿ ಇದ್ದರೆ ಸಾಕು. ನಾನಂತೂ ಎಲ್ಲರೊಂದಿಗೂ ಫ್ರೆಂಡ್ಲಿಯಾಗಿ ಇರುತ್ತೇನೆ.

*ನೀವು ಎತ್ತರ ಕಡಿಮೆ. ಹೀಗಾಗಿ ಕೆಲವು ನಟರಿಗೆ ನಿಮ್ಮ ಜೋಡಿ ಸರಿಹೊಂದುವುದಿಲ್ಲ ಎನ್ನುತ್ತಾರೆ. ನಿಮಗೆ ಹಾಗೆ ಅನಿಸಿದೆಯೇ?
ನನಗೇನೂ ಹಾಗೆ ಅನಿಸುತ್ತಿಲ್ಲ. ಸಾಮಾನ್ಯವಾಗಿ ಎಲ್ಲಾ ನಾಯಕಿಯರೂ ನನ್ನಷ್ಟೇ ಎತ್ತರ ಇದ್ದಾರೆ. ನನಗಿಂತ ಕುಳ್ಳಗೆ ಇರುವವರೂ ಇದ್ದಾರೆ. ಬಹುಶಃ ನನ್ನ ಮುಖದಲ್ಲಿ ಪ್ರೌಢಿಮೆಗಿಂತ ಮುಗ್ಧತೆಯೇ ಅಧಿಕವಾಗಿ ತೋರುವುದರಿಂದ ಆ ಭಾವನೆ ಬರಲು ಕಾರಣವಿರಬೇಕು.

ADVERTISEMENT

*ಗಣೇಶ್‌ ಜೊತೆ ನಟಿಸಿದ್ದೆಲ್ಲಾ ಹಿಟ್‌ ಆಗಬಹುದೇ?
ನೋಡೋಣ. ಜನ ಎರಡು ಸಿನಿಮಾ ಹಿಟ್‌ ಮಾಡಿದ್ದಾರೆ. ನಾನೂ ಅದನ್ನು ನಿರೀಕ್ಷೆ ಮಾಡಿರಲಿಲ್ಲ. ಈಗ ‘ಖುಷಿ ಖುಷಿಯಲಿ’ ಮೂಲಕ ಹ್ಯಾಟ್ರಿಕ್‌ಗೆ ಸಿದ್ಧವಾಗುತ್ತಿದ್ದೇವೆ.

*ಎಲ್ಲಾ ನಟಿಯರೂ ಬೇರೆ ಭಾಷೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ನಿಮ್ಮಲ್ಲಿ ಯೋಚನೆ ಇಲ್ಲವೇ?
ಯೋಚನೆ ಏನೋ ಇದೆ. ಆದರೆ ನನಗೆ ಕನ್ನಡ ಮುಖ್ಯ. ಕೆಲವರು ಇಲ್ಲಿ ಅವಕಾಶ ಸಿಗುವುದಿಲ್ಲ ಎನ್ನುತ್ತಾರೆ. ಆದರೆ ನನಗೆ ಒಳ್ಳೆ ಅವಕಾಶ ಸಿಗುತ್ತಿದೆ.  ಬಾಲ ಕಲಾವಿದೆಯಾಗಿ ಬಂದಿದ್ದರಿಂದ ಉದ್ಯಮದಲ್ಲಿ ಪ್ರತಿಯೊಬ್ಬರೂ ನನಗೆ ಗೊತ್ತು. ಅವಕಾಶಗಳಿಗೇನೂ ಕೊರತೆಯಿಲ್ಲ. ಇನ್ನೂ ಬೆಳೆಯಬೇಕು. ಮುಂದೆ ನೋಡೋಣ.

*ಓದು ಮುಗಿಯಿತಲ್ಲವೇ, ಮುಂದೆ?
ಬಿ.ಕಾಂ ಮುಗಿಯಿತು. ದೂರಶಿಕ್ಷಣದಲ್ಲಿ ಎಂಬಿಎ ಮಾಡುವ ಗುರಿ. ಸಿನಿಮಾ ಹೇಗೂ ಇದ್ದೇ ಇರುತ್ತದೆ. ಅದರ ಜತೆಯಲ್ಲಿ ಒಂದೆರಡು ಡಿಗ್ರಿಯೂ ಇರಲಿ.

*ನೀವು ಕಾಲೇಜಿನಲ್ಲಿಯೂ ಹೀರೊಯಿನ್ನಾ?
ಇಲ್ಲ. ಕಾಲೇಜಿನಲ್ಲಿ ನಾನು ಸಾಮಾನ್ಯ ವಿದ್ಯಾರ್ಥಿನಿ. ಯಾರೊಂದಿಗೂ ನನ್ನ ಬಗ್ಗೆ ನಾನು ಹೇಳಿಕೊಂಡಿಲ್ಲ. ನನ್ನ ಸ್ನೇಹಿತೆಯರೂ ಆ ಭಾವನೆಯಿಂದ ನೋಡುತ್ತಿರಲಿಲ್ಲ. ತಪ್ಪು ಮಾಡಿದಾಗ ಬೈಗುಳ ತಿನ್ನುತ್ತಿದ್ದೆ. ಮನಸ್ಸಿಗೆ ಹಚ್ಚಿಕೊಂಡವಳಲ್ಲ.

*ವಿವಾದಗಳೊಂದಿಗೆ ನಂಟು ಇದೆಯಲ್ಲ?
ಉದ್ಯಮದಲ್ಲಿದ್ದಾಗ ವಿವಾದ, ಗಾಸಿಪ್ ಸಹಜ. ಬೆಳೆಯಬೇಕು ಎಂದಾಗ ಅದು ಜಾಸ್ತಿಯಾಗುತ್ತದೆ. ಮುಂಚೆ ಅದರ ಬಗ್ಗೆ ಭಯ ಇತ್ತು. ಈಗ ನಾನು, ಮನೆಯಲ್ಲಿ ಎಲ್ಲರೂ ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತೇವೆ. ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಟ್ಟುಬಿಡುವುದು ಸಲೀಸು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.